ಸಾವು ಬದುಕಿನ ನಡುವೆ…

ಸಾವು ಬದುಕಿನ ನಡುವೆ…

41 ಕಾರ್ಮಿಕರು, 16 ನೆಯ ದಿನ, ಕುಸಿದ ಮಣ್ಣಿನೊಳಗೆ, ಸಾವು ಬದುಕಿನ ನಡುವೆ ಈಗಲೂ ಹೋರಾಡುತ್ತಲೇ  ಇದ್ದಾರೆ. ಸುಮಾರು 384 ಗಂಟೆಗಳು ಕಳೆದಿದೆ. ಪ್ರಾರಂಭದಲ್ಲಿ ಹೊರ ಜಗತ್ತಿನೊಂದಿಗೆ ಯಾವುದೇ ಸಂಪರ್ಕ ಇರಲಿಲ್ಲ. ನಂತರ ಪರಿಹಾರ ತಂಡದವರು ನಿರಂತರ ಸಂಪರ್ಕ ಸಾಧಿಸಿ ಅಗತ್ಯ ವಸ್ತುಗಳನ್ನು ಪೂರೈಸುತ್ತಾ ಧೈರ್ಯ ತುಂಬುತ್ತಿದ್ದಾರೆ. ಹೊಟ್ಟೆ ಪಾಡಿನ ಹುಡುಕಾಟದಲ್ಲಿ ಈ ಸಂಘರ್ಷದ ಬದುಕು ಎಷ್ಟೊಂದು ಸವಾಲುಗಳನ್ನು ಒಡ್ಡುತ್ತದೆ. ಎಷ್ಟು ಅನಿರೀಕ್ಷಿತ ಘಟನೆಗಳು ನಡೆಯುತ್ತವೆ.

ಭೂ ಕುಸಿದ ತಕ್ಷಣದಲ್ಲಿ ಅವರಿಗೆ ಆಗಿರಬಹುದಾದ ಮಾನಸಿಕ ಶಾಕ್ ಎಷ್ಟಿರಬಹುದು ಮತ್ತು ಹೇಗಿರಬಹುದು ಎಂಬುದನ್ನು ವರ್ಣಿಸಲು ಸಾಧ್ಯವಿಲ್ಲ. ಒಬ್ಬೊಬ್ಬರ ಮನೋ ದೃಢತೆ ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿರುತ್ತದೆ. ಒಂದು ವೇಳೆ ಜೀವ ಹೋದರೆ ಅಲ್ಲಿಗೆ ಭಾವನೆಗಳು ಮುಕ್ತಾಯವಾಗುತ್ತದೆ. ಬದುಕಿದ್ದರೆ ಆ ಭಾವನೆಗಳ ಪ್ರವಾಹವನ್ನು ತಡೆಯುವುದು ಬಹುದೊಡ್ಡ ಸವಾಲಾಗುತ್ತದೆ. ಅಲ್ಲಿ ವಿವಿಧ ವಯೋಮಾನದ, ವಿವಾಹಿತ ಮತ್ತು ಅವಿವಾಹಿತ ವ್ಯಕ್ತಿಗಳು ಇದ್ದಾರೆ. ಅದೃಷ್ಟವಶಾತ್ ಆ ಕಾರ್ಮಿಕರಲ್ಲಿ ಮಹಿಳೆಯರು ಇಲ್ಲ ಎಂಬುದೇ ಒಂದು ಸಮಾಧಾನ. ( ಸುದ್ದಿ ಮಾಧ್ಯಮಗಳ ಮಾಹಿತಿಯ ಪ್ರಕಾರ ಮಹಿಳೆಯರು ಸಿಲುಕಿರುವ ಬಗ್ಗೆ ಯಾವುದೇ ಸುದ್ದಿ ಇಲ್ಲ ) ಅವರು ಈ 16 ದಿನಗಳಲ್ಲಿ ಏನೇನು ಯೋಚಿಸಿರಬಹುದು. ಯಾವ ರೀತಿ ಅವರ ಮನಸ್ಥಿತಿ ಚಲಿಸುತ್ತಿರಬಹುದು. ಅವರಿಗೆ ಈ ಘಟನೆ ಯಾವ ಪಾಠ ಕಲಿಸಿರಬಹುದು. ಇನ್ನೂ ಅವರು ಸಂಪೂರ್ಣ ಸುರಕ್ಷಿತವಾಗಿ ಮರಳಿಲ್ಲ. ಪ್ರಯತ್ನಗಳು ಸಾಗುತ್ತಿದೆ.

ತಮ್ಮ ಮಕ್ಕಳು, ಹೆಂಡತಿ, ತಂದೆ ತಾಯಿ, ಇತರೆ ಪ್ರೀತಿ ಪಾತ್ರರ ನೆನಪು ಒಂದು ಕಡೆ, ಸಾವಿನ ಭಯ ಮತ್ತು ಸಾವಿನ ನಂತರ ತಮ್ಮ ಕುಟುಂಬದವರಿಗೆ ಆಗಬಹುದಾದ ನೋವಿನ ಕಲ್ಪನೆ ಇನ್ನೊಂದು ಕಡೆ, ತಮ್ಮ ಈಗಿನ ಪರಿಸ್ಥಿತಿಗೆ ದೂಡಿದ ಬಡತನದ ದುರಾದೃಷ್ಟದ ಬಗ್ಗೆ ಮತ್ತೊಂದು ಕಡೆ ಪಶ್ಚಾತ್ತಾಪ ಮತ್ತು ಅಸಹಾಯಕತೆ, ಮಗದೊಂದು ಕಡೆ ಮತ್ತೆ ಬದುಕಬಹುದು ಎಂಬ ಆತ್ಮವಿಶ್ವಾಸ, ಒಂದು ವೇಳೆ ಬದುಕಿದರೆ ಮುಂದಿನ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬ ಕನಸುಗಳು, ಈ ದುರ್ಘಟನೆಯಿಂದ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪಾಠ ಹೀಗೆ ಮನಸ್ಸಿನ ನಿರಂತರ ಚಲನೆ.

ಅವರು ಶ್ರಮಜೀವಿ ಕಾರ್ಮಿಕರಾದ್ದರಿಂದ ದೈಹಿಕ ಆರೋಗ್ಯ ಬಹುತೇಕ ಉತ್ತಮ ಗುಣಮಟ್ಟವನ್ನು ಹೊಂದಿರುತ್ತದೆ. ಅದರಿಂದಾಗಿಯೇ ಅವರು 16 ದಿನಗಳ ನಂತರವೂ ಇನ್ನೂ ಬದುಕುಳಿದಿದ್ದಾರೆ. ಒಂದು ವೇಳೆ ನಮ್ಮಂತ ನಗರೀಕರಣದ ಪ್ರಭಾವಕ್ಕೆ ಒಳಗಾದ ಸಾಪ್ಟ್ ವೇರ್ ಉದ್ಯೋಗಿಗಳೋ ಅಥವಾ ಇತರೆ ಸಾಮಾನ್ಯ ಜನರಾಗಿದ್ದರೆ ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಿ ಎಲ್ಲಾ ಭರವಸೆಗಳನ್ನು ಕಳೆದುಕೊಂಡು ಕುಸಿಯುವ ಸಾಧ್ಯತೆ ಇರುತ್ತಿತ್ತು.‌ ಬದುಕಿನ ಬಗೆಗಿನ ಆಸೆ ನಮ್ಮನ್ನು ಬೇಗ ಶಿಥಿಲವಾಗುವಂತೆ ಮಾಡುತ್ತಿತ್ತು.

ಆದರು ಈ ಘಟನೆಗಳು ನಮ್ಮನ್ನು ಕಾಡಬೇಕು. ಬದುಕಿನ ನಶ್ವರತೆಯ ಬಗ್ಗೆ ನಾವು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮೊಳಗಿನ ದುರಾಸೆ, ಅಹಂಕಾರ, ಮಿತಿಯಿಲ್ಲದ ಬಯಕೆಗಳನ್ನು ಪೂರೈಸಿಕೊಳ್ಳಲು ನಾವು ಮಾಡುತ್ತಿರುವ ಕೆಲಸಗಳನ್ನು ಮತ್ತೊಮ್ಮೆ ಪುನರ್ ವಿಮರ್ಶೆ ಮಾಡಿಕೊಳ್ಳಬೇಕು. ಜೀವನದ ಸವಿಯನ್ನು ಅನುಭವಿಸಲು ಉತ್ತಮ ಮಾರ್ಗಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಯೋಚಿಸಬೇಕು. ಏಕೆಂದರೆ ಇದೇ ರೀತಿಯ ಬೇರೆ ರೂಪದ ಘಟನೆಗಳು ನಮ್ಮ ಜೀವನದಲ್ಲಿಯೂ ನಡೆಯಬಹುದು. ಅದನ್ನು ಯಾವುದೇ ಸಂದರ್ಭದಲ್ಲಿ ಧೃತಿಗೆಡದ ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಬೇಕು.

ಹಾಗೆಯೇ ದೇಶದ ಆಡಳಿತ, ಜನತೆ ಮತ್ತು ಮಾಧ್ಯಮಗಳು ಕ್ರಿಕೆಟ್ ಸೋಲಿಗೆ ಮರುಗುವುದಕ್ಕಿಂತ, ಐದು ರಾಜ್ಯಗಳ ಚುನಾವಣೆಯ ಫಲಿತಾಂಶಕ್ಕಿಂತ, ರಾಜಕಾರಣಿಗಳ ಹುಚ್ಚು ಮಾತುಗಳಿಗಿಂತ ಈ ನತದೃಷ್ಟರ  ಬಗ್ಗೆ ಹೆಚ್ಚು ಗಮನಹರಿಸಬೇಕು. ಅವರು ಬದುಕಿ ಮೇಲೆ ಬಂದಾಗ ಇಡೀ ದೇಶ ಅವರ ಬರುವಿಕೆಗಾಗಿ ಮಿಡಿದ ವಿಷಯ ತಿಳಿದು ಅವರು ಈ ನೆಲದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುವಂತಿರಬೇಕು. ಅವರ ಎಲ್ಲಾ ನೋವುಗಳನ್ನು ಮರೆಯುವಂತಿರಬೇಕು. ಆಕಸ್ಮಿಕವಾಗಿ ಸಾವಿನ ಬಾಗಿಲಿಗೆ ಹೋಗಿ ಮರಳುವ ಪುನರ್ ಜನ್ಮ ಪಡೆದ ಜೀವ ಬಯಸುವುದೇ ಈ ಪ್ರೀತಿಯ ಅಪ್ಪಗೆಯನ್ನ. ಪ್ರೀತಿ, ಕರುಣೆ, ತ್ಯಾಗ, ಆತ್ಮೀಯ ಸಂಬಂಧಗಳ ನಿಜವಾದ ಪರೀಕ್ಷೆ ಎದುರಾಗುವುದೇ ಬದುಕಿನ ಈ ಹಂತದಲ್ಲಿ… ದ್ವೇಷ, ಅಸೂಯೆ, ದುರಾಸೆ, ದುರಹಂಕಾರಗಳಿಗಿಂತ ನಿಜವಾದ ಮಾನವೀಯ ಮೌಲ್ಯಗಳು ಈ ಸಮಾಜದ ಆತ್ಮದಲ್ಲಿ ತುಂಬಿ ತುಳುಕಲಿ, ಆ ಕಾರ್ಮಿಕರು ಆದಷ್ಟು ಬೇಗ ಆರೋಗ್ಯವಾಗಿ ಮರಳಲಿ, ಇದು ನಮಗೊಂದು ಬದುಕಿನ ಪಾಠವಾಗಲಿ ಎಂದು ಅಪೇಕ್ಷಿಸುತ್ತಾ...

-ವಿವೇಕಾನಂದ ಎಚ್ ಕೆ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ