ಸೂಕ್ತರಿಗೆ ಸಲ್ಲಲಿ ರಾಜ್ಯೋತ್ಸವ ಪ್ರಶಸ್ತಿ

ಸೂಕ್ತರಿಗೆ ಸಲ್ಲಲಿ ರಾಜ್ಯೋತ್ಸವ ಪ್ರಶಸ್ತಿ

ಇನ್ನು ಮೂರು ದಿನಗಳ ನಂತರ ಕರ್ನಾಟಕ ರಾಜ್ಯೋತ್ಸವ ಆಚರಣೆ ನಡೆಯಲಿದೆ. ಹೀಗಾಗಿ ರಾಜ್ಯೋತ್ಸವ ಪ್ರಶಸ್ತಿ ಕುರಿತಾದ ಚರ್ಚೆಗಳು ಮುನ್ನಲೆಗೆ ಬಂದಿವೆ. ಕರ್ನಾಟಕ ಸರಕಾರ ಕೊಡುವ ಪ್ರತಿಷ್ಟಿತ ಪುರಸ್ಕಾರಗಳ ಸಾಲಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದೆ. ಕರ್ನಾಟಕ ಏಕೀಕರಣವಾಗಿ ಎಷ್ಟು ವರ್ಷಗಳಾಗುತ್ತದೋ ಅಷ್ಟು ಪ್ರಶಸ್ತಿಗಳನ್ನು ಆಯಾ ವರ್ಷ ನೀಡಲು ಈ ಹಿಂದೆಯೇ ಸರಕಾರ ತೀರ್ಮಾನ ಕೈಗೊಂಡಿತ್ತು. ಅದರಂತೆಯೇ ಈ ವರ್ಷ ೬೮ ಪ್ರಶಸ್ತಿಗಳನ್ನು ನೀಡಲು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ನಿರ್ಧರಿಸಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಲಾಬಿಗಳೂ ಜೋರಾಗಿಯೇ ನಡೆದಿದೆ. ಹೀಗಾಗಿ ಸಹಜವಾಗಿಯೇ ನಿಜವಾದ ಕಲಾವಿದರು ಹಾಗೂ ಸಾಧಕರಿಗೆ ಪ್ರಶಸ್ತಿ, ಪುರಸ್ಕಾರಗಳ ಬಗ್ಗೆ ನಿರಾಶೆ, ಜುಗುಪ್ಸೆ ಉಂಟಾಗಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ೨೫ ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು, ಪ್ರತಿ ಅರ್ಜಿಗೆ ೧೫ ಮಂದಿ ಶಿಫಾರಸು ಮಾಡಿದ್ದಾರೆ. ಈ ಮಧ್ಯೆ ಅವಧಿ ಮುಗಿದ ಮೇಲೂ ಶಾಸಕರು ಹಾಗೂ ಸಚಿವರ ಬಳಿ ಹೋಗಿ ಶಿಫಾರಸು ಪತ್ರ ಪಡೆಯುವುದು ಅಸಾಧ್ಯದ ಸಂಗತಿ. ಜತೆಗೆ ಇಂದಿನ ಎಷ್ಟು ಮಂದಿ ಶಾಸಕರಿಗೆ ಹಾಗೂ ಸಚಿವರಿಗೆ ಕನಿಷ್ಟ ತಮ್ಮ ಕ್ಷೇತ್ರದಲ್ಲಿರುವ ಕಲಾವಿದರು, ಸಾಹಿತಿಗಳು,ಉತ್ತಮ ಶಿಕ್ಷಕರ ಹೆಸರು ತಿಳಿದಿದೆ? ಶಿಫಾರಸು ಪತ್ರ ಕೊಡಿಸುವುದಾಗಿ ಕಲಾವಿದರಿಂದ ಹಣ ಪೀಕಿಸುವ ಜನಪ್ರತಿನಿಧಿಗಳ ಬೆಂಬಲಿಗರೂ ಇದ್ದಾರೆ. ಹಾಗಾಗಿ, ಅರ್ಹ ಕಲಾವಿದರು ಮತ್ತು ಸಾಹಿತಿಗಳಿಗೆ ಪ್ರಶಸ್ತಿ ಎಂಬುದು ಬಹುತೇಕ ಸಂದರ್ಭಗಳಲ್ಲಿ ಗಗನಕುಸುಮವಾಗಿದೆ. ಪ್ರಶಸ್ತಿ ಆಯ್ಕೆ ಸಮಿತಿಯವರು ಇಂಥವರ ಬಗ್ಗೆ ಎಚ್ಚರ ವಹಿಸಲೇ ಬೇಕು. ಕಲೆ, ಸಂಸ್ಕೃತಿ, ಸಾಹಿತ್ಯದ ಕೆಲಸ ಮಾಡುತ್ತಿರುವವರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಸೂಕ್ತ ನ್ಯಾಯ ಒದಗಿಸಬೇಕು. ಈ ಮೂಲಕ, ಅರ್ಹ ಕಲಾವಿದರು ಮತ್ತು ಸಾಹಿತಿಗಳಿಗೆ ಗೌರವ ಸಲ್ಲಿಸುವಂತೆ ನೋಡಿಕೊಳ್ಳಬೇಕು. ಆ ಮೂಲಕ ಪ್ರಶಸ್ತಿಯ ಮೌಲ್ಯವನ್ನೂ ಹೆಚ್ಚಿಸಬೇಕು. 

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ.: ೨೮-೧೦-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ