ಸ್ಟೇಟಸ್ ಕತೆಗಳು (ಭಾಗ ೨೧೭) - ಮನೆ-ಮನ

ಸ್ಟೇಟಸ್ ಕತೆಗಳು (ಭಾಗ ೨೧೭) - ಮನೆ-ಮನ

ಕನಸುಗಳನ್ನು ಹೊತ್ತು ಆತನೊಂದಿಗೆ ಏಳು ಹೆಜ್ಜೆಯಿರಿಸಿದವಳು. ಮಾಂಗಲ್ಯಧಾರಣೆ ಆಗುವಾಗ ಆಕೆಯ ಕಣ್ಣಲ್ಲಿ ಹನಿ ನೀರು ಇಣುಕುತ್ತಿತ್ತು. ಜೀವನ ಬದಲಾವಣೆಯ ಹಂತವೆಂದು ಆಕೆಗೆ ಅನಿಸಿತು. ಕನಸಿನ ಗೋಪುರವನ್ನು ಹೊತ್ತು ಆತನೊಂದಿಗೆ ತವರು ಮನೆಯ ತೊರೆದು ಹೊರಟುಬಂದ ಆಕೆಗೆ ಅವನ  ಸಾಮಿಪ್ಯದ ಖುಷಿ ಬೇಕಿತ್ತು. ಪ್ರೀತಿಯ ಮಾತು, ಅಕ್ಕರೆಯ ಮತ್ತು, ಎಲ್ಲವೂ ಅವಳ ಕನಸುಗಳು. ಅವನಿಗೆ ಜೀವನವನ್ನು ಇನ್ನೂ ಎತ್ತರಕ್ಕೇರಿಸುವ ಆಸೆ. ಹಾಗಾಗಿ ಕೆಲಸದ ಕಡೆಗೆ ಸ್ವಲ್ಪ ಜಾಸ್ತಿಯೇ ಮುಖಮಾಡಿದ. ದುಡ್ಡು ಇರುವವನಿಗೆ ಇನ್ನೂ ಬೇಕೆನ್ನುವ ಆಸೆ. ಹಾಗಾಗಿ ಕಟ್ಟಿದ ದೊಡ್ಡ ಮನೆಯನ್ನು ಬಾಡಿಗೆ ನೀಡಿ ಸಣ್ಣ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಸಣ್ಣ ಗೋಡೆಗಳ ನಡುವೆ ಬದುಕಾರಂಭಿಸಿದ ಆಕೆಯ ದೊಡ್ಡ ಕನಸುಗಳು ಸಣ್ಣ ಗೋಡೆಯೊಳಗೆ ಬಂದಿಯಾಗಿದ್ದವು. ಆತನ ಸಾಮಿಪ್ಯವನ್ನು ಆಕೆ ಬಯಸಿದ್ದಳು. ಆತನಿಗೆ ದುಡ್ಡಿನ ಕಟ್ಟುಗಳು ಸಾಕಾಗುತ್ತಿರಲಿಲ್ಲ. ಮುದ್ದಿನ ಮಡದಿಯನ್ನು ಆಕೆಯ ತವರಿಗೆ ಕಳುಹಿಸಿ ಮತ್ತೊಂದಷ್ಟು ಮನೆ ಕಟ್ಟಿ ಬಾಡಿಗೆ ನೀಡಲು ಆರಂಭಿಸಿದ. ಆಕೆಗೆ ಆತನ ಸಾಮಿಪ್ಯ ಸಿಗಲಿಲ್ಲ. ಆತನ ದುಡ್ಡಿನ ಹಸಿವು ನೀಗಲಿಲ್ಲ. ಆಕೆಯ ಕನಸು ಆಸೆಗಳು ತವರು ಮನೆಯಲ್ಲಿ ನೆಲ ಒರೆಸುತ್ತಾ, ನೀರೊಳಗೆ ಬೆರೆತು ಕರಗಿಹೋದವು. ವಯಸ್ಸು ಮಾಗಿ ಹೋಯಿತು. ಯಾವುದೂ ಬೇಡವಾಯಿತು. ದೂರದಲ್ಲಿ ಆಸ್ತಿಗಳನ್ನು ಏರಿಸುತ್ತಿದ್ದವನಿಗೆ ಪುಟ್ಟ ಹೃದಯದ ಕೂಗು ಕೇಳಿಸಲಿಲ್ಲ. ಹಣ ಹೃದಯವನ್ನು ಬಂಧಿಸಿತ್ತು. ಆಕೆ ಒರಗಿದ್ದಳು ಮೂಲೆಗೆ. ಕನಸುಗಳನ್ನು ಎನಿಸುತ್ತಲೇ ದಕ್ಕದ ಆಸೆಗೆ ಕೈ ಚಾಚಿದಳು. ಮನೆ ಕಟ್ಟುವವನಿಗೆ ಮನಸು ಕಟ್ಟುವುದು ತಿಳಿದಿರಲಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ