ಸ್ಟೇಟಸ್ ಕತೆಗಳು (ಭಾಗ ೩೭) - ಹೀಗೊಬ್ಬ ಅವನು

ಸ್ಟೇಟಸ್ ಕತೆಗಳು (ಭಾಗ ೩೭) - ಹೀಗೊಬ್ಬ ಅವನು

ಅವನಿಂದ ನಾ ಕಲಿಯಬೇಕಿದೆ. ಅವನ ಮನೆಯ ಮುಂದೆ ಒಂದು ದೊಡ್ಡ ಮನೆ ನಿರ್ಮಾಣವಾಗುತ್ತಿದೆ. ವರ್ಷಗಳು ಕಳೆದ ಹಾಗೇ ಮಹಡಿಗಳು ಏರುತ್ತಲೇ ಇದೆ ಆ ಮನೆಯ ಯಜಮಾನನಿಗೆ ತನ್ನ ಮನೆ ಇದು ಎನ್ನುವ ಹಮ್ಮು, ಎಲ್ಲರೂ ನೋಡಬೇಕೆನ್ನುವ ಆಸೆ. ಆದರೆ ನಾ ಹೇಳಿದ "ಅವನು" ಅದು ಯಾವುದನ್ನು ಗಮನಿಸುವುದೇ ಇಲ್ಲ. ಬೇರೆಯವರ ಅಂತಸ್ತು ಅಧಿಕಾರ ವಿದ್ಯೆ ರೂಪ ಸಂಪತ್ತು ಯಾವುದು ಇವನನ್ನ ಸೆಳೆದಿಲ್ಲ. ಮಾನವೀಯತೆ ಹೊಂದಿದ ಮನುಷ್ಯರ ಕಡೆಗೆ ಬೇಗ ಹೃದಯ ವಾಲುತ್ತದೆ.

ಏನೇ ಹಾರಾಟ ಮಾಡಿದರೂ ಬಿದ್ದಾಗ ಹೋಗೋದು ಹೆಗಲೇರಿಯೇ ಅಲ್ವಾ? ಅದಕ್ಕೆ ನನ್ನ ಕೆಲಸ ನನಗೆ ಅವರ ಕೆಲಸ ಅವರಿಗೆ. ಅವನ ಮನೆಗೆ ಒತ್ತಿಕೊಂಡೆ ದನದ ಕೊಟ್ಟಿಗೆ ಸೆಗಣಿ ವಾಸನೆ ದಿನವೂ ಬೀರುತ್ತದೆ. ಗೋಡೆಗಳು ಬಣ್ಣ ಕಳೆದುಕೊಂಡಿದೆ. ಟೀವಿಗೆ ಆ ಮನೆಯಲ್ಲಿ ಜಾಗವಿಲ್ಲ. ಸ್ನಾನದ ಮನೆಯ ಬಾಗಿಲನ್ನು ಕಷ್ಟಪಟ್ಟು ನಿಲ್ಲಿಸಬೇಕು. ಸೆಗಣಿ ಸಾರಿಸಿದ ನೆಲ ಅಲ್ಲಲ್ಲಿ ಒಡೆದಿದೆ. ಒಂದಿನವೂ ಕೀಳರಿಮೆಯೇ ಮೂಡಿಲ್ಲ. ನೆಂಟರ ಮನೆಯ ಅಬ್ಬರ ಹುಚ್ಚೆಬ್ಬಿಸಿಲ್ಲ. ತನ್ನ ಮನೆ ಅವರ ಮನೆಯ ಮುಂದೆ ಸಣ್ಣದು ಅನ್ನಿಸಿಲ್ಲ. ಅವನದೇ ಒಂದೇ ಧ್ಯೇಯ ಬದುಕಿನಲ್ಲಿ ಮಾಡಲು ಸಾವಿರ ಕೆಲಸಗಳು ಇರುವಾಗ ಅವನ್ನೆಲ್ಲ ಗಮನಿಸೋಕೆ ಸಮಯ ಎಲ್ಲಿ ಇರುತ್ತೆ? ಒಲುಮೆ ಮಾತ್ರ ಸತ್ಯ, ಅದೇ ಅಂತಿಮ. ಇದಕ್ಕೆ ಅವನು ಇಷ್ಟವಾಗುವುದು, ಅದಕ್ಕೆ ನಾ ಮೊದಲಲ್ಲಿ ಹೇಳಿದ್ದು ಅವನಿಂದ ಕಲಿಯಬೇಕಿದೆ ಎಂದು.

-ಧೀರಜ್ ಬೆಳ್ಳಾರೆ

ಇಂಟರ್ನೆಟ್ ಚಿತ್ರ ಕೃಪೆ