ಸ್ಟೇಟಸ್ ಕತೆಗಳು (ಭಾಗ ೫೨೪) - ಅಂಕ

ಸ್ಟೇಟಸ್ ಕತೆಗಳು (ಭಾಗ ೫೨೪) - ಅಂಕ

ದೊಡ್ಡ ವೇದಿಕೆಯಲ್ಲಿ ಒಬ್ಬರು ನಿಂತು ಮಾತನಾಡುತ್ತಿದ್ದರು. ಮಕ್ಕಳೇ ಅಂಕಗಳು ಮುಖ್ಯವಲ್ಲ, ನೀವು ಮಾಡ್ತಾ ಇರುವಂತಹ ಹವ್ಯಾಸಗಳು ನಿಮ್ಮ ಇಷ್ಟಗಳು ಅವುಗಳನ್ನು ಶ್ರದ್ಧೆ ಇಟ್ಟು ಮಾಡಿದಾಗ ಜೀವನದಲ್ಲಿ ಅತ್ಯುತ್ತಮವಾದ ಗುರಿಯನ್ನು ಸಾಧಿಸಬಹುದು. ಅವುಗಳು ನಿಮ್ಮ ಜೀವನದ ಕೊನೆಯವರೆಗೂ ಕೈ ಹಿಡಿತವೇ. ಈ ಅಂಕಗಳು ಅಂಕಪಟ್ಟಿ ಇವೆಲ್ಲವೂ ಬರಿಯ ಕಾಗದ ತುಂಡುಗಳು. ಇವನ್ನ ತೊರೆದು ನೀವು ಮುಂದುವರೆದಾಗ ಮಾತ್ರ ಬದುಕು ಅದ್ಭುತವಾಗಿರುತ್ತದೆ ಎಂದಾಗ ಶಿಳ್ಳೆ ಚಪ್ಪಾಳೆಗಳ ಸುರಿಮಳೆ. ಕಾರ್ಯಕ್ರಮ ಮುಗಿಸಿ ಹೊರ ಬಂದಾಗ ಅಲ್ಲಿ ದೊಡ್ಡದಾಗಿ ಆ ವರ್ಷ ಆ ಶಾಲೆಗೆ ಬಂದಾಗ ರಾಂಕುಗಳನ್ನು, ಆ ವರ್ಷ ವಿದ್ಯಾರ್ಥಿಗಳ ಅತ್ಯುತ್ತಮವಾದ ಸಾಧನೆಗಳೆಂಬಂತೆ  ದೊಡ್ಡ ದೊಡ್ಡದಾಗಿ ಚಿತ್ರಿಸಿ ಮುಂದಿನ ವರ್ಷದ ದಾಖಲಾತಿಯ ಜಾಹೀರಾತನ್ನ ಅಳವಡಿಸಿದ್ದರು. ಅದೇ ಶಾಲೆಯಲ್ಲಿ ಖೋಖೋ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದದ್ದು, ಹಾಡಿನ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದದ್ದು ನೋಟಿಸ್ ಬೋರ್ಡ್‌ನ ಮೂಲೆಯಲ್ಲಿ ಒಂದೆರಡು ಕಡೆ ಕಾಣಿಸುವುದಕ್ಕೆ ಆರಂಭವಾಯಿತು... ವಿಪರ್ಯಾಸವು ನಗುತ್ತಾ ಮುಂದುವರಿಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ