ಸ್ಟೇಟಸ್ ಕತೆಗಳು (ಭಾಗ ೬೪೫) - ಅಮ್ಮನ ಅಳು

ಸ್ಟೇಟಸ್ ಕತೆಗಳು (ಭಾಗ ೬೪೫) - ಅಮ್ಮನ ಅಳು

ಅಮ್ಮ ಆ ದಿನ ರಾತ್ರಿ ತುಂಬಾ ಅತ್ತಳಂತೆ. ಅವಳ ಅಳು ನೋವಿನಿಂದ ಕೂಡಿತ್ತು. ಆದರೆ ಅದು ಸಂಭ್ರಮದ ನೋವು. ಮನೆ ಬೆಳಗುವ ಮನಸ್ಸಿಗೆ ಸಂತೋಷ ನೀಡುವ ಮಗುವೊಂದರ ಸ್ವಾಗತಕ್ಕಾಗಿ ಅಮ್ಮ ಕಾಯುತ್ತಿದ್ದಳು. ಮುಂಜಾನೆ ಐದು ಆರು ಆದಾಗ ಹೊಟ್ಟೆ ನೋವು ಸ್ವಲ್ಪ ಜಾಸ್ತಿ ಆಯ್ತು, ತಾನು ಒಂಬತ್ತು ತಿಂಗಳವರೆಗೆ ಜತನದಿಂದ ಕಾಯ್ದುಕೊಂಡಿದ್ದ ಆ ಪುಟ್ಟ ಮಗುವನ್ನು ಜಗತ್ತಿನ ಬೆಳಕಿಗೆ ನೀಡುವ ಆ ಶುಭ ಗಳಿಗೆ. ನೋವನುಭವಿಸಿ ಭೂಮಿಗೆ ಅರ್ಪಿಸಿದಳು ಅವನನ್ನ. ಆತ ಕಣ್ಣುಬಿಟ್ಟು ನೋಡಿದ ಸುತ್ತ ವೈಚಿತ್ರಗಳು, ಇಷ್ಟರವರೆಗೂ ಕಾಣದೆ ಇದ್ದದ್ದೆಲ್ಲ ಕಾಣುತ್ತಿದೆ. ಯಾರೋ ನಿಂತಿದ್ದಾರೆ, ಮಾತನಾಡಿದ್ದಾರೆ, ಹತ್ತಿರ ಒಂದು ಮುದ್ದಿಸಿದ್ದಾರೆ, ಹಾಲು ಕೊಡಿಸಿದ್ದಾರೆ, ಇವರೆಲ್ಲರೂ ನನ್ನವರು ಅನ್ನುವುದು ಅವನಿಗೆ ಖಾತ್ರಿಯಾಯಿತು. ಅವನ ಮುಂದಿನ ಬದುಕು, ಅವನ ಆಸೆ ಅವನ ಕನಸುಗಳ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ, ಅವನಿಗೂ ಗೊತ್ತಿರಲಿಲ್ಲ. ಅಂದಿನಿಂದ ಹೆಜ್ಜೆಗಳನ್ನಿಡುತ್ತಾ ಬದುಕುವುದಕ್ಕೆ ಆರಂಭ ಮಾಡಿದ, ಹೊಸ ಹೊಸ ಹೆಜ್ಜೆಗಳು ಹೋಗುವ ದಾರಿಗಳು ಅಮ್ಮ ಅಪ್ಪ ದೊಡ್ಡವರು ಸಣ್ಣವರು ಪ್ರತಿಯೊಬ್ಬರು ಹೇಳಿಕೊಟ್ಟದ್ದನ್ನು ಕಲಿಯುತ್ತಾ ಮುಂದೆ ಬಂದ. ಅಂದು ಅತ್ತ ಅಮ್ಮನಿಗೆ ಇಂದು ನೆಮ್ಮದಿಯ ಖುಷಿಯ ಬದುಕನ ನೀಡಿದ್ದಾನೆ. ಕಿವಿಯಲ್ಲಿ ಹೇಳಿದ ಆ ಹೆಸರನ್ನ ಇಂದು ಊರಲ್ಲಿ ಒಂದಷ್ಟು ಕಡೆ ಗರ್ವದಿಂದ ಹೇಳುವಂತೆ ಮಾಡಿದ್ದಾನೆ. ಅಮ್ಮನೇ ಎದೆ ತಟ್ಟಿ ತನ್ನ ಮಗನೆಂದು ಸಾರುವಂತೆ ಮಾಡಿದ್ದಾನೆ. ಹೀಗೆ ಅವನ ಇನ್ನೊಂದಷ್ಟು ಕನಸುಗಳನ್ನು ಹೊತ್ತುಕೊಂಡು ಸಾಗುತ್ತಿದ್ದಾನೆ.. ಅಮ್ಮ ಈಗಲೂ ಆತನ ಪುಟ್ಟ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಸಂಭ್ರಮಿಸುತ್ತಾಳೆ. ಆತ ಬೆಳೆದು ನಿಂತ ಆ ತನುವನ್ನು ನೋಡಿ ಕಣ್ಮುಚ್ಚಿ ಸಂಭ್ರಮಿಸುತ್ತಾಳೆ‌. ಆ ದಿನ ಅತ್ತಮ್ಮ ಮತ್ಯಾವತ್ತು ಅಳೋದಿಲ್ಲ ಅಂತ ತೀರ್ಮಾನ ಮಾಡಿದ್ದಾರೆ, ಅವರಿಗೆ ಅವರ ಮಗನ ಮೇಲೆ ದೃಢವಾದ ನಂಬಿಕೆ ಇದೆ ಆತನಿದ್ದಾನೆ... ಕೊನೆಯವರೆಗೂ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ