ಸ್ಟೇಟಸ್ ಕತೆಗಳು (ಭಾಗ ೬೪೬) - ಅಲ್ಪ ವಿರಾಮ

ಸ್ಟೇಟಸ್ ಕತೆಗಳು (ಭಾಗ ೬೪೬) - ಅಲ್ಪ ವಿರಾಮ

ತಾಳಗಳನ್ನು ಕೇಳಿದರೆ ಸಾಕು ಆತನ ಕಾಲು ನಿಧಾನವಾಗಿ ಹೆಜ್ಜೆ ಹಾಕುವುದಕ್ಕೆ ಆರಂಭ ಮಾಡುತ್ತೆ. ಸಣ್ಣಂದಿನಿಂದಲೂ ಆತನಿಗೆ ನೃತ್ಯ ಅಂದ್ರೆ ತುಂಬಾ ಇಷ್ಟ, ಅದಕ್ಕಾಗಿ ಒಂದೆರಡು ಕಡೆ ಅಭ್ಯಾಸವನ್ನು ಮಾಡಿದ್ದ. ಮುಂದೆ ಅದಕ್ಕೆ ಕೊಡುವುದಕ್ಕೆ ಬೇಕಾದಷ್ಟು ಹಣ ಇಲ್ಲದ ಕಾರಣ ಮನಬಂದಂತೆ ಕುಣಿದು ಹೆಜ್ಜೆಗಳನ್ನು ಕಲಿತ. ಒಂದೆರಡು ಕಡೆ ವೇದಿಕೆಗಳು ಸಿಕ್ಕವು, ಅಲ್ಲಿ ಪ್ರದರ್ಶನ ಮಾಡಿದ ಜನ ಚಪ್ಪಾಳೆ ಹೊಡೆದರು. ಅದರಿಂದ ಹೊಟ್ಟೆ ತುಂಬಲಿಲ್ಲ, ಜೀವನ ಸಾಗಲಿಲ್ಲ. ಮನೆಯವರ ಹಸಿವು ನೀಗಲಿಲ್ಲ. ಹಾಗಾಗಿ ಕೆಲಸವನ್ನರಸಿ ಊರನ್ನ ಸುತ್ತುತ್ತಾ ಶಹರದೊಳಕ್ಕೆ ಕಾಲಿಟ್ಟ. ಅಲ್ಲಿ ದೊಡ್ಡ ನೃತ್ಯಗಳು ವೇದಿಕೆಯಲ್ಲಿ ಘಟಿಸುತ್ತಿರುವಾಗ ಆತ ಬಣ್ಣ ಬಣ್ಣದ ಬೆಳಕನ್ನ ನೀಡಬೇಕು, ಬೆಂಕಿಯ ಕಿಡಿಗಳನ್ನ ಹಾರಿಸಬೇಕು, ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ನಾನಾವರಿ ಪ್ರಯತ್ನಗಳನ್ನ ಪಡಬೇಕು. ಅದಕ್ಕಾಗಿ ಆತನಿಗೆ ತಿಂಗಳಿಗಿಂತ ಇಂತಿಷ್ಟು ಹಣ ನಿಗದಿಯಾಗಿರುತ್ತದೆ. ಅದರಿಂದಾಗಿ ಆತನ ಮನೆ ಈಗ ಸದ್ಯ ನೆಮ್ಮದಿಯಲ್ಲಿದೆ. ಪ್ರತಿದಿನವೂ ಎಲ್ಲರ ಹೆಜ್ಜೆಗಳನ್ನ ನೋಡುತ್ತಲೇ ಇದ್ದಾನೆ ವಿನಃ ಆತನಿಗೆ ವೇದಿಕೆಗೆ ಏರುವ ಯಾವ ಅವಕಾಶವೂ ಸಿಗಲಿಲ್ಲ. ದೊಡ್ಡ ದೊಡ್ಡ ನೃತ್ಯಗಳನ್ನು ಕೂಡ ಆತ ಇನ್ನಷ್ಟು ಮೆರುಗು ಹೆಚ್ಚಿಸಿ ಎಲ್ಲರಿಂದಲೂ ಪ್ರಶಂಸೆಯನ್ನು ಪಡೆದುಕೊಳ್ಳುವಂತೆ ಮಾಡುತ್ತಾನೆ. ಆದರೆ ಆತ ಯಾರಿಗೂ ಪರಿಚಯವಾಗಲಿಲ್ಲ, ಆತನಿಗೆ  ನೃತ್ಯ ತಿಳಿದಿದೆ ಅನ್ನುವುದು ಕೂಡ ಯಾರಿಗೂ ಗೊತ್ತಿಲ್ಲ. ಆತನ ಬದುಕು ಕಣ್ಣಿನಲ್ಲಿ ಕುಣಿಯುವುದು, ಕಾಲಿನಲ್ಲಲ್ಲ. ಅವನೊಬ್ಬನು ಅಂತಲ್ಲ ಅಂತಹ ಹಲವಾರು ಜನ ಪ್ರತಿಭೆಯನ್ನ ಒಳಗಿಟ್ಟುಕೊಂಡು ಬದುಕಿನ ಅನಿವಾರ್ಯತೆಗೋಸ್ಕರ ದುಡಿಯುತ್ತಿದ್ದಾರೆ... ಅವರಲ್ಲಿ ಈತನು ಒಬ್ಬ. ಆತನಿಗೂ ಒಂದು ಆಸೆ ತಾನೊಂದು ದಿನ ಅದ್ಭುತ ನೃತ್ಯಗಾರ ಅನ್ನಿಸಿಕೊಳ್ಳಬೇಕು ಅಂತ. ಆದರೆ ಪರಿಸ್ಥಿತಿಗಳು ಸದ್ಯಕ್ಕೆ ಅಲ್ಪವಿರಾಮ ಹಾಕಿ ನಿಲ್ಲಿಸಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ