ಸ್ಟೇಟಸ್ ಕತೆಗಳು (ಭಾಗ ೬೭೮) - ಕಾಲ

ಸ್ಟೇಟಸ್ ಕತೆಗಳು (ಭಾಗ ೬೭೮) - ಕಾಲ

ಅವರಿಗೆ ಮರೆತು ಹೋಗಿತ್ತು. ತಾವು ಬೆಳೆಯೋದಕ್ಕೆ ತಾಯಿ ಕೊಡಿಸಿದ ಎದೆ ಹಾಲು, ಪ್ರೀತಿಯಿಂದ ತುತ್ತು ತಿನ್ನಿಸಿದ ಕೈ ನಡೆವಾಗ ಕೈ ಹಿಡಿದು ನಿಲ್ಲಿಸಿದ ಅಕ್ಕಂದಿರು, ಸುತ್ತಮುತ್ತಲು ಒಳ್ಳೆ ವಿಚಾರಗಳನ್ನ ಕಲಿಸುತ್ತಾ ಇದ್ದ ಅಕ್ಕಪಕ್ಕದ ಮನೆಯ ಬಂಧುಗಳು, ಶಾಲೆಯಲ್ಲಿ ತಪ್ಪುಗಳನ್ನು ತಿದ್ದಿ ಹೇಳಿಕೊಟ್ಟ ಟೀಚರ್ ಇವರೆಲ್ಲರೂ ಹೆಣ್ಣು ಅನ್ನೋದು ಮರೆತು ಹೋಗಿತ್ತು. ವಯಸ್ಸು ಹೆಚ್ಚಾದಂತೆಲ್ಲ ನೋಡುವವರೆಲ್ಲ ತಮಗೆ ಬೇಕು ಅನ್ನುವಂತಹ ಕೆಟ್ಟ ಚಟ ಕಣ್ಣುಗಳಲ್ಲಿ ತುಂಬಿಕೊಳ್ಳಲಾರಂಸಿತು. ಮನಸ್ಸನ್ನ ಅರ್ಥೈಸಿಕೊಳ್ಳದೆ ದೇಹದ ಯೋಚನೆಗಳಿಗೆ ಎಲ್ಲ ಭಾವಗಳನ್ನು ತುಂಬಿ ಅವಳನ್ನ ತಮ್ಮ ತೆಕ್ಕಿಯೊಳಗೆ ತೀರಿಸಿಕೊಳ್ಳಬೇಕು ಅನ್ನುವ ಕಾರಣಕ್ಕೆ ಅವರು ಎಳೆದೊಯ್ದಿದ್ದರು. ಆಕೆಯ ಕಣ್ಣೀರು ನೋವು ಕಿರುಚಾಟ ಯಾತನೆ ಇಲ್ಲೆಲ್ಲಿಯೂ ಕೂಡ ಅವರಿಗೆ ತಮ್ಮ ಸ್ವಂತದವರ ಒಂದು ಸಣ್ಣ ಯೋಚನೆಯು ಬರಲಿಲ್ಲ. ತಮ್ಮ ಸ್ವಂತದವರನ್ನೇ ಬೇರೆ ಯಾರು ಹೀಗೆ ಮಾಡಿದ್ದರೆ ಅವರ ಸ್ಥಿತಿ ಏನಿರಬಹುದು ಅನ್ನುವ ಯೋಚನೆ ಕೂಡ ಅವರಲ್ಲಿರಲಿಲ್ಲ. ಆಕೆಯ ಉಸಿರು ನಿಲ್ಲಿಸಿ ತಮ್ಮ ಹೆಸರು ಎಲ್ಲಿಯೂ ಹೊರಗೆ ಬರದ ಹಾಗೆ ಮಾಡಿ ನಿಟ್ಟುಸಿರು ಬಿಟ್ಟರು. ಆದರೆ ನಿರಾಕಾರವಾದ ಶಕ್ತಿ ಒಂದು ಸಮಯಕ್ಕಾಗಿ ಕಾಯುತ್ತಿದೆ. ಆ ನಿರಾಕಾರನಿಗೆ ಅಲ್ಲಲ್ಲಿ ಇಂತಹ ಘಟನೆಗಳು ಕಣ್ಣ ಮುಂದೆ ಕಾಣುತ್ತಲೇ ಹೋಗುತ್ತಿದೆ. ಆತ ಮನಸ್ಸುಗಳಿಗೆ ಸೌಮ್ಯ ಸ್ವಭಾವ ಪ್ರೀತಿ ಎಲ್ಲವನ್ನು ತುಂಬಿಸಿ ಕಳುಹಿಸಿದರೂ ಇಲ್ಲಿ ಬಂದಮೇಲೆ ಹೊಸ ಭಾವಗಳನ್ನ ಸೃಷ್ಟಿಸಿ ಅವರು ರಾಕ್ಷಸರಾಗುತ್ತಿರುವುದನ್ನು ಕಂಡು ಮರುಗಿದ್ದಾನೆ. ಕಾಯುತ್ತಾನೆ ಇಲ್ಲದಿದ್ದರೆ ಒಂದು ದಿನ ಮಸಣದಲ್ಲಿ ಹೂಳಲು, ಸುಡಲು ನಮ್ಮನ್ನ ಕಾಯಿಸುತ್ತಾನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ