ಸ್ಟೇಟಸ್ ಕತೆಗಳು (ಭಾಗ ೭೦೪) - ಅಂಗಡಿ

ಸ್ಟೇಟಸ್ ಕತೆಗಳು (ಭಾಗ ೭೦೪) - ಅಂಗಡಿ

ಅದೊಂದು ಸಣ್ಣ ಜಾಗ ಮಧ್ಯದಲ್ಲೊಂದು ರಸ್ತೆ ಆ ಕಡೆ ಈ ಕಡೆ ನಡೆದಾಡುವುದಕ್ಕೆ ಅಂಗಡಿಗಳನ್ನು ಇಡುವುದಕ್ಕೆ ಒಂದಷ್ಟು ಸ್ಥಳಾವಕಾಶ ಇತ್ತು. ಇತ್ತು ಅಂದ್ರೆ ಈಗ ಆ ಸ್ಥಳವನ್ನು ಒಂದಷ್ಟು ಅಂಗಡಿಗಳು ಆಕ್ರಮಿಸಿಕೊಂಡುಬಿಟ್ಟಿದ್ದಾವೆ. ಅವರವರ ಬದುಕಿಗೋಸ್ಕರ. ರಸ್ತೆಯ ಬಲಬದಿಯಲ್ಲಿ ಒಂದು ದೊಡ್ಡದಾದ ಹೋಟೆಲ್ ಅಲ್ಲಿ ತಿನ್ನೋದಕ್ಕೆ ಸಿಗುವ ಎಲ್ಲಾ ತರೆವಾರಿ ತಿಂಡಿ ತಿನಿಸುಗಳು ಸಿಗುತ್ತವೆ. ರಸ್ತೆ ಎಡಬದಿಯಲ್ಲೂ ಒಂದು ಸಣ್ಣ ಹೋಟೆಲ್ ಆದ್ರೆ ಅದು ದೊಡ್ಡದಲ್ಲ ಸಣ್ಣದು. ಅದಕ್ಕೆ ಆದ ಒಂದು ಸೂರಿಲ್ಲ. ಸಂಜೆಯಾದರೆ ಅದನ್ನ ಮಡಚಿಟ್ಟು ಮನೆಗೆ ತೆರಳಬೇಕು. ದೊಡ್ಡ ಹೋಟೆಲ್ ನಲ್ಲಿ ಮೊದಲು ನೀವು ದುಡ್ಡು ಕೊಟ್ಟು ಬೇಕಾದ ತಿಂಡಿಯನ್ನು ಹೇಳಿ ತದನಂತರವೇ ನಿಮ್ಮ ಬಳಿ ತಿಂಡಿ ಬರ್ತದೆ. ಆದರೆ ಸಣ್ಣ ಅಂಗಡಿಯಲ್ಲಿ ಹಾಗಲ್ಲ ನಮಗೆ ಏನು ಬೇಕು ಎಲ್ಲವನ್ನ ತೆಗೆದುಕೊಳ್ಳಬಹುದು ಬೇಕಾದಷ್ಟು ಕೊನೆಗೆ ನಾವೇ ಹೋಗಿ ನಾವೇನು ತಿಂದಿದ್ದೇವೆ ಅನ್ನೋದನ್ನ ಹೇಳಿದರೆ ಅವರು ಇಂತಿಷ್ಟು ಅಂತ ದುಡ್ಡು ತೆಗೆದುಕೊಳ್ಳುತ್ತಾರೆ. ಇಲ್ಲಿ ಕುಳಿತುಕೊಳ್ಳುವುದಕ್ಕೆ ವಿಶಾಲವಾದ ಸ್ಥಳಾವಕಾಶವಿಲ್ಲ, ಗಾಳಿ ಬೀಸುವುದಕ್ಕೆ ಅಂತ ತಲೆ ಮೇಲ್ಗಡೆ ಪ್ಯಾನಿಲ್ಲ, ಆದರೆ ಪ್ರೀತಿ ಇದೆ. ಅದಕ್ಕೆಂದೇ ಕೆಲಸ ಮಾಡುವವರು ಅಲ್ಲಿದ್ದಾರೆ. ಪರಿಶ್ರಮವಹಿಸಿ ಬಂದ ಪ್ರತಿಯೊಬ್ಬರನ್ನ ಗಮನಿಸ್ತಾ ಕೆಲಸ ನಿರ್ವಹಿಸುತ್ತಾರೆ. ಪ್ರತಿದಿನ ಸಂಜೆ ಖುಷಿಯಿಂದಲೇ ಮತ್ತೆ ಮನೆ ಕಡೆ ತೆರಳುತ್ತಾರೆ. ಎರಡು ಕಡೆಯ ಕೆಲಸ ಒಂದೇ ಉದ್ದೇಶವೂ ಒಂದೇ. ವಿಧಾನಗಳು ಬೇರೆ ಒಂದು ಕಡೆ ನಂಬಿಕೆ ಕೆಲಸ ಮಾಡಿದರೆ ಇನ್ನೊಂದು ಕಡೆ ದುಡ್ಡು ಕೆಲಸ ಮಾಡುತ್ತಿದೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ