ಸ್ಟೇಟಸ್ ಕತೆಗಳು (ಭಾಗ ೯೨೧)- ಮರ

ಸ್ಟೇಟಸ್ ಕತೆಗಳು (ಭಾಗ ೯೨೧)- ಮರ

ಅದೆಷ್ಟು ಅಂತ ತಾಳಿ ಕೊಳ್ಳುವುದು. ನೋವನ್ನು ಸಹಿಸಿ ಒಂದಲ್ಲ ಒಂದು ದಿನ ಸಿಡಿಯಲೇ ಬೇಕಲ್ವಾ? ಆದರೆ ಅನಗತ್ಯ  ಸಿಡಿಯುವ ಜಾಯಮಾನ ನನ್ನದಲ್ಲ. ಆದರೆ ನಿಮಗಾದರೂ ಅರ್ಥವಾಗಬೇಕಲ್ಲ. ನೀವು ಇಳಿಸದೇ ಇದ್ದರೂ ಬೀಜ ನೆಲಕ್ಕೆ ಬಿದ್ದು ಹದವಾದ ಮಣ್ಣಿದ್ದ ಕಾರಣ ನನ್ನ ಬೇರುಗಳನ್ನು ಇನ್ನೊಂದಷ್ಟು ಆಳಕ್ಕೆ ಇಳಿಸಿ ಎತ್ತರಕೇರಿ ನಿಲ್ಲುವ ಕನಸು ಕಂಡವ ನಾನು. ನೀರು ಸಿಗದೇ ಇದ್ದರೂ ಬೇರನ್ನ ಕಳುಹಿಸಿ ನೀರನ್ನು ಪಡೆದುಕೊಂಡು ದಷ್ಟಪುಷ್ಟವಾದವ. ನನ್ನ ಸುತ್ತಮುತ್ತ ಓಡಾಡೋರಿಗೆ ಒಂದಷ್ಟು ನೆರಳು ನೀಡಬೇಕು, ಪ್ರಾಣಿ ಪಕ್ಷಿಗಳಿಗೆ ಮತ್ತು ನಿಮ್ಮಂತ ಮಾನವರಿಗೆ ಒಂದಷ್ಟು ಹಣ್ಣು ಹೂಗಳನ್ನು ನಿಮಗೆ ಉಪಯೋಗವಾಗುವುದನ್ನ ಏನನ್ನಾದರೂ ನೀಡಬೇಕು ಅಂತ ಆಸೆ ಹೊತ್ತವ. ನನಗೆ ನಿಮ್ಮ ತರಹ ಅಲೆದು ಗೊತ್ತಿಲ್ಲ. ಇನ್ನೊಂದು ಊರಲ್ಲಿ ಏನಾಗುತ್ತಿದೆ ಅನ್ನೋದು ಗೊತ್ತಿಲ್ಲ. ಆದರೆ ಇದ್ದ ಸ್ಥಳದಲ್ಲಿ ಬೇರೆ ಬೇರೆ ರೀತಿಯ ವ್ಯಕ್ತಿತ್ವಗಳನ್ನು ಭೇಟಿಯಾಗಿದ್ದೇನೆ. ಹಣ್ಣೆಲೆಗಳನ್ನು ಉದುರಿಸಿ ಹೊಸ ಎಲೆಗಳಿಗೆ ಆಶ್ರಯ ನೀಡಿದ್ದೇನೆ. ನನಗೆ ಇತ್ತೀಚೆಗೆ ನೋವಾಗ್ತಾ ಇರೋದು ನನ್ನನ್ನು ನೀನು ಯಾವುದೆಲ್ಲ ರೀತಿಯಲ್ಲಿ ಬಳಸಿಕೊಳ್ಳಬಹುದಕ್ಕೆ ಸಾಧ್ಯ ಇದೆಯೋ ಎಲ್ಲಾ ರೀತಿಯಲ್ಲಿ ವಿಪರೀತವಾಗಿ ಉಪಯೋಗಿಸಿಕೊಳ್ಳುತ್ತಿದ್ದೀಯಾ? ಯಾವುದೋ ಒಂದು ನಿನ್ನ ಕಾರ್ಯಕ್ರಮಕ್ಕೆ ನನ್ನ ಮೇಲೆ ವಿವಿಧ ರೀತಿಯ ಬೆಳಕಿನ ತೋರಣಗಳನ್ನ ಕಟ್ಟಿ ನೀನು ಸಂಭ್ರಮ ಪಡುತ್ತೀಯ? ಆದರೆ ಒಂದೊಂದು ಮೊಳೆಗಳನ್ನ ನನ್ನ ದೇಹದೊಳಕ್ಕೆ ಇಳಿಸುವಾಗ ನನ್ನ ನೋವಿನ ಕೂಗು ನಿನ್ನ ಸಂಭ್ರಮದ ನಡುವೆ ಯಾರಿಗೂ ಕೇಳಲೇ ಇಲ್ಲ. ಅದರಲ್ಲಿ ಹರಿಯುತ್ತಿರುವ ವಿದ್ಯುತ್ತು ನನ್ನ ಮೈಯಲ್ಲಿ ಸಂಚಾರವಾದ ಹಾಗೆ ನನ್ನೊಳಗಾಗುವ ಕಂಪನದ ತೀವ್ರತೆ ಅರಿವು ನಿನಗಿಲ್ಲ. ಹಾಗಿದ್ದರೂ ಕೂಡ ನಾನು ಮೌನವಾಗಿ ಎಲ್ಲವನ್ನು ಅನುಭವಿಸುವವನಾಗಬೇಕು. ನೀನಾಗಿಯೇ ಅರ್ಥ ಮಾಡ್ಕೊ, ನನಗೆ ಈ ನೆಲದ ಮೇಲೆ ಬದುಕೋದೇ ಬೇಡ ಅಂತ ಅನ್ನಿಸಿಬಿಟ್ಟರೆ ನಿನ್ನ ಬದುಕು ಕೊನೆಯಾಗುತ್ತದೆ. ಒಂದಷ್ಟು ಎಚ್ಚರವಹಿಸುವುದು ಅಗತ್ಯ ಅಂದುಕೊಳ್ಳುತ್ತೇನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ