ಸ್ಟೇಟಸ್ ಕತೆಗಳು (ಭಾಗ ೯೫೪)- ಕಾರ್ಮಿಕರ ದಿನ

ಸ್ಟೇಟಸ್ ಕತೆಗಳು (ಭಾಗ ೯೫೪)- ಕಾರ್ಮಿಕರ ದಿನ

ದೊಡ್ಡ ಕಟ್ಟಡದ ಒಳಗೆ ಕುಳಿತುಕೊಳ್ಳುವುದಕ್ಕೆ ಸಾವಕಾಶ ವ್ಯವಸ್ಥೆ ಇದೆ. ದಿನದ ಎಲ್ಲಾ ಹೊತ್ತು ತಿರುಗುವ ಫ್ಯಾನುಗಳಿದ್ದಾವೆ, ದೇಹವನ್ನು ತಂಪುಗೊಳಿಸುವುದಕ್ಕೆ ಎಸಿಗಳು ಕೆಲಸ ಮಾಡ್ತಾ ಇದ್ದಾವೆ. ಇವೆಲ್ಲವೂ ಆ ಕೊಠಡಿಯ ಒಳಗೆ ಬದುಕುತ್ತಿರುವವರಿಗೆ. ಇನ್ನೊಂದಷ್ಟು ಹೆಚ್ಚು ಹೊತ್ತು ಕೆಲಸ ಮಾಡುವುದಕ್ಕೆ ಪ್ರೇರಣೆಯನ್ನು ನೀಡುತ್ತಿದ್ದಾವೆ. ಮೊನ್ನೆ ಆ ಕಟ್ಟಡದ ಒಳಗೆ ಕೆಲಸ ಮಾಡುವ ಎಲ್ಲರಿಗೂ ರಜೆಯನ್ನು ಸಾರಲಾಗಿತ್ತು. ಆ ದಿನ ಕಾರ್ಮಿಕರ ದಿನವಂತೆ. ದುಡಿಮೆಯನ್ನು ನಂಬಿದವರು ಆ ದಿನ ತಮ್ಮ ಸಮಾನತೆಗಾಗಿ ಹೋರಾಟ ಮಾಡಿದ ಕಾರಣಕ್ಕೆ ಅದೊಂದು ಅದ್ಭುತ ದಿನವೆಂದು ಘೋಷಣೆಯಾಗಿತ್ತು. ಅದೇ ಕಟ್ಟಡದ ಹೊರಗಡೆ ಹೊಸ ಕಟ್ಟಡದ ಕೆಲಸವೊಂದು ನಡೆದಿತ್ತು. ಅಲ್ಲಿ ಎಲ್ಲರೂ ಕೆಲಸವನ್ನು ನಿರ್ವಹಿಸುತ್ತಾನೇ ಇದ್ದರು. ಕಲ್ಲು ಜಲ್ಲಿ ಸಿಮೆಂಟ್ ಗಳ ಮಿಶ್ರಣ ನಡೆದಿತ್ತು. ಕಟ್ಟಡಗಳ ಕೆಲಸ ಜೋರಾಗಿತ್ತು. ಹೊಸ ಕಟ್ಟಡವೊಂದು ನೆಲದಿಂದ ಮೇಲೆ ನಿಲ್ತಾನೆ ಹೋಯ್ತು. ಬಿಸಿಲಿನ ಪ್ರಖರತೆ ಹೆಚ್ಚಾದ್ರೂ ಕೂಡ ಕೆಲಸ ಮಾಡುವವರು ಯಾರು ಕಡಿಮೆಯಾಗಲೇ ಇಲ್ಲ. ದೇಹವನ್ನು ನಂಬಿ ಕೆಲಸ ಮಾಡುವವರು ಯಾರು ಕೂಡ ಆ ದಿನ ರಜೆಯನ್ನು ಘೋಷಿಸಿಕೊಂಡಿಲ್ಲ. ಆ ದಿನದ ರಜೆ ಅವರ ದಿನದ ಊಟವನ್ನು ಕಡಿಮೆ ಮಾಡುತ್ತೆ ಅನ್ನುವ ಭಯ ಅವರಿಗಿತ್ತು. ಮತ್ತೆ ಅವ್ರ್ಯಾರಿಗೂ ಗೊತ್ತಿಲ್ಲ ಕಾರ್ಮಿಕರ ದಿನ ಒಂದು ಇದೆ ಅನ್ನೋದು ಕೂಡ. ದೊಡ್ಡ ಕಟ್ಟಡದ ಒಳಗೆ ಕುಳಿತವರು ಆ ದಿನವನ್ನು ಹೊರಗಡೆ ಸುತ್ತಾಡುವುದಕ್ಕೆ ತಮ್ಮ ಮನಸ್ಸಿನ ಸಂತೋಷವನ್ನು ಅನುಭವಿಸುವುದಕ್ಕೆ ಉಪಯೋಗಿಸಿಕೊಂಡರೆ ದೇಹವನ್ನು ದಂಡಿಸುವವರು ಮಾತ್ರ ದಿನದ ಒಪ್ಪೊತ್ತಿನ ಊಟಕ್ಕೆ ಬಿಸಿಲಿಗೆ ದೇಹವನ್ನು ಗಟ್ಟಿಸಿಕೊಂಡಿದ್ದರು.ಕಾರ್ಮಿಕರ ದಿನವನ್ನ ಘೋಷಿಸಿದ್ಯಾಕೋ ಅದರ ಫಲವನ್ನು ಅನುಭವಿಸುತ್ತಿರುವವರು ಯಾರೊ ಒಂದಕ್ಕೊಂದು ಹೊಂದಾಣಿಕೆ ಕಾಣ್ತಾ ಇಲ್ಲ. ಕಾರ್ಮಿಕರ ದಿನವನ್ನ ಘೋಷಿಸಿದ ನಾಯಕನು ಮೇಲೆ ನಿಂತು ಮೌನವಾಗಿ ಬಿಟ್ಟ ಪರಿಸ್ಥಿತಿಯ ನೆನೆದು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ