ಸ್ಟೇಟಸ್ ಕತೆಗಳು (ಭಾಗ ೯೫೯)- ಕೂಗು

ಸ್ಟೇಟಸ್ ಕತೆಗಳು (ಭಾಗ ೯೫೯)- ಕೂಗು

ನನ್ನಮ್ಮ ಇತ್ತೀಚಿಗೆ ನನಗೆ ಸರಿಯಾಗಿ ಹಾಲು ಕೊಡ್ತಾ ಇಲ್ಲ. ಹೊಟ್ಟೆಗೇನೂ ತಿನ್ನೋಕೆ ಸಿಗ್ತಾ ಇಲ್ಲ. ಅಮ್ಮನ ಬಳಿ ಕೇಳಿದ್ದಕ್ಕೆ ಸುಮ್ಮನೆ ಮೌನವಾಗಿ ಬಿಟ್ಟಿದ್ದಾಳೆ. ಯಾಕೆ ಅಂತ ಗೊತ್ತಿಲ್ಲ ನನ್ನ ನೋವನ್ನ ಯಾರಲ್ಲಿ ಅಂತ ಹೇಳಿಕೊಳ್ಳೋದು, ಪ್ರತಿದಿನ ಹಸಿದುಕೊಂಡು ಮಲಗ್ತಾ ಇದ್ದೇನೆ. ಹೀಗೊಂದು ದೂರು ನೀಡುವುದಕ್ಕೆ ಆನೆ ಮರಿಯೊಂದು ಅರಣ್ಯ ಅಧಿಕಾರಿ ಬಳಿ ಬಂದಿತ್ತು. ಅರಣ್ಯ ಅಧಿಕಾರಿಯು ಕಾರಣವೇನು ಅಂತ ಹುಡುಕ್ತಾ ಹೋದಾಗ ಅವರಿಗೂ ಭಯ ಹುಟ್ಟಿಸುವ ಘಟನೆ ಕಣ್ಣಮುಂದೆನೇ ಇತ್ತು. ಇಡೀ ಕಾಡು ಒಂದು ಹನಿ ನೀರು ಸಿಗದಂತಹ ಸ್ಥಳವಾಗಿಬಿಟ್ಟಿದೆ. ಹರಿಯುತ್ತಿದ್ದ ನದಿ ಮೌನವಾಗಿಬಿಟ್ಟಿದೆ. ತುಂಬಿಕೊಳ್ಳುತ್ತಿದ್ದ ಹಳ್ಳಗಳೆಲ್ಲವೂ ಬತ್ತಿ ಹೋಗಿದೆ. ಆನೆಗಳಿಗೆ ಸರಿಯಾಗಿ ನೀರು ಸಿಗದೇ ಬಳಲಿ ಬೆಂಡಾಗಿದ್ದಾವೆ. ದೇಹದೊಳಗೆ ನೀರಿಳಿಯದೇ ಪುಟ್ಟ ಮಗುವಿಗೆ ಹಾಲೆಲ್ಲಿ ನೀಡುವುದು, ಆನೆ ಅಂತ ಅಲ್ಲ ಎಲ್ಲಾ ಪ್ರಾಣಿಗಳು ಒಂದು ಹನಿ ನೀರಿಗಾಗಿ ಬೇಡಿಕೊಳ್ಳುತ್ತಿದ್ದಾವೆ. ಆದರೆ ಕೂಗು ಯಾರಿಗೂ ಕೇಳಿಸ್ತಾ ಇಲ್ಲ. ಅರಣ್ಯ ಅಧಿಕಾರಿಗೆ ಬದಲಾವಣೆಯೇನೋ ಮಾಡಬೇಕು ಅಂತ ಅನ್ನಿಸಿತು. ಆದರೆ ಒಬ್ಬನಿಂದ ಇದು ಸಾಧ್ಯವಾಗುವುದಿಲ್ಲ. ಕಾಡಿಗೂ ನೀರು ಉಳಿಸುವಂತಹ ಯೋಜನೆ ಏನಾದ್ರೂ ತರಬೇಕು. ಮನುಷ್ಯರಾದರೆ ನಾಲ್ಕು ಜನರಲ್ಲಿ ಸುದ್ದಿ ಹೇಳಿಕೊಳ್ಳಬಹುದು, ಪ್ರಾಣಿಗಳಾದರೆ ಏನು ಮಾಡೋದು. ಪುಟ್ಟ ಆನೆಮರಿಗೆ ಒಂದಷ್ಟು ನೀರನ್ನು ನೀಡಿ ಬದಲಾವಣೆ ಮಾಡ್ತೇನೆ ಅಂತ ಮಾತುಕೊಟ್ಟ. ಯಾರನ್ನು ನಂಬಿಕೊಂಡು ಅಂತ ಗೊತ್ತಿಲ್ಲ. ಆದರೆ ಮುಂದೆ ಬರುವ ಮಳೆಯಿಂದ ನೀರನ್ನ ಈ ಭೂಮಿಯಲ್ಲಿ ಉಳಿಸಿಕೊಳ್ಳುವ ಯೋಚನೆಯನ್ನು ಮಾಡಿಕೊಂಡುಬಿಟ್ಟ. ನಮ್ಮಲ್ಲೂ ಹಲವಾರು ಪ್ರಾಣಿಗಳು ಬಂದು ನಮ್ಮ ನೋವನ್ನು ಹೇಳಿಕೊಂಡಿರಬಹುದು? ನಮಗೆ ಅವುಗಳನ್ನು ಕೇಳುವ ವ್ಯವಧಾನವೇ ಇಲ್ಲ. ಒಂದಷ್ಟು ಸುತ್ತಮುತ್ತ ಆಲಿಸಿದರೆ ನೋವಿನ ಕೂಗುಗಳು ಖಂಡಿತಾ ಕೇಳುತ್ತೆ. ಈ ಸಲದ ಮಳೆ ನೀರಾದರೂ ಹರಿಯುವುದು ನಿಂತು ಬಿಡಲಿ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ