ಹಲ್ಲೆ ಪ್ರಕರಣ ಸಹಿಸುವಂಥದ್ದಲ್ಲ

ಹಲ್ಲೆ ಪ್ರಕರಣ ಸಹಿಸುವಂಥದ್ದಲ್ಲ

ಪ್ರೀತಿ ವಿಚಾರದಲ್ಲಿ ಮತ್ತೊಬ್ಬ ಮಹಿಳೆ ಮೇಲೆ ಹಲ್ಲೆಯಾಗಿದೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಅರೆಮಲ್ಲಾಪುರ ಎಂಬ ಗ್ರಾಮದಲ್ಲಿ ಯುವಕನೊಬ್ಬ ಯುವತಿ ಜತೆಗೆ ಹೋಗಿದ್ದಾನೆ ಎಂಬ ಕಾರಣಕ್ಕೆ ಯುವಕನ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿದೆ. ಬೆಳಗಾವಿಯ ವಂಟಮೂರಿಯಲ್ಲೂ ಇಂಥದ್ದೇ ಘಟನೆ ನಡೆದು, ದೇಶದಾದ್ಯಂತ ಸುದ್ದಿಯಾಗಿತ್ತು. ಸದ್ಯಕ್ಕೆ ಪೋಲೀಸರು ಮೂವರನ್ನು ಬಂಧಿಸಿದ್ದರೂ, ನಾಗರಿಕ ಸಮಾಜದಲ್ಲಿ ಇಂಥ ಘಟನೆಗಳು ಶೋಭೆ ತರುವಂತದ್ದಲ್ಲ, ಪ್ರೀತಿ ಎಂಬುದು ಜಾತಿ, ಧರ್ಮಕ್ಕೆ ಮೀರಿದ್ದು ಎಂಬ ಸಂಗತಿ ಬಹಳಷ್ಟು ಜನರಿಗೆ ಅರ್ಥವಾಗಿಲ್ಲ. ಅಷ್ಟೇ ಅಲ್ಲ, ಒಮ್ಮೆ ಯುವಕ ಮತ್ತು ಯುವತಿ ವಿವಾಹದ ವಯಸ್ಸಿಗೆ ಬಂದ ಮೇಲೆ ವಿವಾಹವೆಂಬುದೂ ಅವರಿಷ್ಟದ್ದು ಎಂಬುದು ಗೊತ್ತಾಗಬೇಕು. ಪ್ರೀತಿ ಕಾರಣಕ್ಕಾಗಿ ಈ ರೀತಿ ಅವರ ಪೋಷಕರ ಮೇಲೆ ಹಲ್ಲೆ ನಡೆಸುವಂಥ ಕಾರ್ಯಗಳು ಖಂಡಿತವಾಗಿಯೂ ಯಾರೂ ಒಪ್ಪುವಂಥದ್ದಲ್ಲ. 

ಹಾವೇರಿಯಲ್ಲಿ ಮಂಜುನಾಥ ಎಂಬ ಯುವಕ ಅದೇ ಗ್ರಾಮದ ಅನ್ಯಜಾತಿಯ ಯುವತಿಯನ್ನು ಪ್ರೀತಿಸಿ ಕರೆದುಕೊಂಡು ಹೋಗಿದ್ದಾನೆ. ಇಲ್ಲಿ ಯುವತಿಯ ಕುಟುಂಬಸ್ಥರು ಗ್ರಾಮದಲ್ಲೇ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಊರ ಜನ ನಿಂತು ಈ ಘಟನೆಯನ್ನು ನೋಡಿದ್ದಾರೆ. ಅಷ್ಟೇ ಅಲ್ಲ, ಓಡಿಸಿಕೊಂಡು ಹೋಗಿ ಥಳಿಸುತ್ತಿರುವ ದೃಶ್ಯಗಳೂ ಮಾಧ್ಯಮಗಳಲ್ಲಿ ವರದಿಯಾಗಿವೆ. ಬೆಳಗಾವಿಯ ವಂಟಮೂರಿ ಗ್ರಾಮದಲ್ಲೂ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿತ್ತು. ಇತೀಚೆಗಷ್ಟೇ ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು, ಇವರನ್ನು ಗ್ರಾಮದಲ್ಲಿ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗಿದೆ. ಇಂಥ ಘಟನೆಗಳು ಇವರು ಮಾಡಿದ್ದೇ ಸರಿ ಎಂಬ ಧೋರಣೆಯನ್ನು ತೋರ್ಪಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಲ್ಲದೆ, ವ್ಯವಸ್ಥೆಯ ಮೇಲೆ ಜನರಿಗೆ ಸಂದೇಹ ಬಾರದೇ ಇರದು. ಈ ರೀತಿ ಘಟನೆಗಳು ಆದ ಬಳಿಕ ಒಂದಷ್ಟು ದಿನ ಜೈಲಿನಲ್ಲಿದ್ದು ವಾಪಾಸ್ ಬರಬಹುದು ಎಂಬುದು ಹಲ್ಲೆ ನಡೆಸುವವರ ಮನಸ್ಸಿನಲ್ಲಿ ಕುಳಿತರೆ ಕಷ್ಟಕರವಾಗುವುದು ಖಚಿತ. ಪ್ರೀತಿ ವಿಚಾರದಲ್ಲಿ ಹಲ್ಲೆಯಂಥ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕಾದದ್ದು ಪೋಲೀಸ್ ಇಲಾಖೆಯ ಕರ್ತವ್ಯ. ಯಾರೋ ಮಾಡಿದ ತಪ್ಪಿಗೆ ಮತ್ತೆ ಇನ್ಯಾರಿಗೋ ಶಿಕ್ಷೆಯಾಗುವಂತೆ ಆಗಬಾರದು. ಇಂಥ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಜತೆಗೆ, ಈ ರೀತಿ ಹಲ್ಲೆ ನಡೆಸಿದವರಿಗೆ ಕಠಿಣ ಶಿಕ್ಷೆಯಾಗಬೇಕು.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೪-೦೫-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ