ಹಳೆ ಅಡಿಕೆ- ಹೊಸ ಅಡಿಕೆ ಬೆಲೆ ವ್ಯತ್ಯಾಸ ಯಾಕೆ?

ಹಳೆ ಅಡಿಕೆ- ಹೊಸ ಅಡಿಕೆ ಬೆಲೆ ವ್ಯತ್ಯಾಸ ಯಾಕೆ?

ಅಡಿಕೆ ಹಳೆಯದಾದರೆ ಅದಕ್ಕೆ ವಾರ್ಷಿಕ ಶೇ.೨೫ರ ಬಡ್ಡಿ ಬರುತ್ತದೆ ಎಂಬುದು ಈ ವರ್ಷದ ಧಾರಣೆಯಲ್ಲಿ ಮನವರಿಯಾಗಿದೆ. ದರ ಹೀಗೇ ಉಳಿದರೆ ಮುಂದೆ ಬೆಳೆಗಾರರು ಯಾವುದಾದರೂ ಬ್ಯಾಂಕ್ ನಲ್ಲಿ ಸಾಲ ಮಾಡಿ ಅದರ ಬಡ್ಡಿ ಕಟ್ಟಿದರೂ ಹೊಸ ಅಡಿಕೆ ಮಾರಾಟ ಮಾಡಬೇಕಾಗಿಲ್ಲ. ಹೊಸ ಅಡಿಕೆ ಮುಂದಿನ ಫಸಲು ಬರುವವರೆಗೆ ಉಳಿಸಿಕೊಂಡರೆ ಅದಕ್ಕೆ ಕಿಲೋ ಮೇಲೆ ೧೦೦ ರೂ. ಹೆಚ್ಚು ಸಿಗುತ್ತದೆ.

ಈ ತನಕ ಹಳೆ ಅಡಿಕೆಗೂ ಹೊಸ ಅಡಿಕೆಗೂ ವ್ಯತ್ಯಾಸ ರೂ. ೩೦-೪೦ ಇರುತ್ತಿತ್ತು.  ಆದರೆ ಈ ವರ್ಷ ಮಾತ್ರ ಯಾರು ದಾಸ್ತಾನು ಇಟ್ಟಿದ್ದಾರೆಯೋ ಅವರಿಗೆಲ್ಲಾ ಮೀಟರ್ ಬಡ್ಡಿಯ ಲಾಭ ಸಿಕ್ಕಿದೆ. ಇದನ್ನು ಯಾವ ಅಡಿಕೆ ಬೆಳೆಗಾರನೂ ನಿರೀಕ್ಷಿಸಿರಲಿಕ್ಕಿಲ್ಲ. ಈಗ ಹಳೆ ಅಡಿಕೆಗೆ ೫೪,೫೦೦ - ೫೫,೦೦೦ ತನಕ ಏರಿತ್ತು. ಹೊಸತು ಕಳೆದ ೨-೩ ತಿಂಗಳುಗಳಿಂದ ಹೇಗಿತ್ತೋ ಹಾಗೆಯೇ ಇದೆ. ಹೊಸ ಅಡಿಕೆಯ ದರ ಏನು ಮಾಡಿದರೂ ಏರುತ್ತಿಲ್ಲ. ಸರಾಸರಿ ೩೫೦ – ಗರಿಷ್ಟ ೩೭೦ ದರ ಖಾಯಂ ಆದಂತಿದೆ. ಯಾಕೆ ಈ ವ್ಯತ್ಯಾಸ. ಹೊಸ ಅಡಿಕೆ ಬೇಡವೇ? ಜನ ಹಳೇ ಅಡಿಕೆಯನ್ನೇ ತಿನ್ನಲು ಪ್ರಾರಂಭಿಸಿದ್ದಾರೆಯೇ? ಹಾಗೇನೂ ಇಲ್ಲ. ಅದೆಲ್ಲಾ ಬೇಡಿಕೆ ಮೇಲೆ ಒಮ್ಮೊಮ್ಮೆ ಹೀಗೆ ಆಗುತ್ತದೆ.

ಹಳೆಯ (Single chole) ಅತೀ ಹಳೆಯ (Dubble chole) ಇವು ಹಣ ಉಳ್ಳವರು ತಿಂದು ಉಗುಳುವ ಚಟಕ್ಕಾಗಿ  ವ್ಯಯಿಸುವ ದುಡ್ಡು. ಕೆಲವರ ಇಚ್ಚೆ (like) ಆಗಿರುತ್ತದೆ. ಸಾಮಾನ್ಯವಾಗಿ  ಸಿಹಿಯನ್ನೇ ಹೆಚ್ಚು ಬಯಸುವ ಗುಜರಾತ್ ನ ಜನ (ಇವರ ಹೆಚ್ಚಿನೆಲ್ಲಾ ಅಡಿಗೆ ತಿಂಡಿ ತಿನಸು ಸಿಹಿ ಪದಾರ್ಥವೇ ಆಗಿರುತ್ತದೆ) ಇಂತಹ ಅಡಿಕೆಯನ್ನು ಹೆಚ್ಚು ಆಯ್ಕೆ ಮಾಡುತ್ತಾರೆ.

ಹಳೆ ಅಡಿಕೆಗೂ ಹೊಸತಕ್ಕೂ ಏನು ವ್ಯತ್ಯಾಸ: ಅಡಿಕೆ ಹಳೆಯದಾದಂತೆ ಅದರ ಒಳಗಿನ ತಿರುಳು ಮೃದುವಾಗುತ್ತಾ ಬರುತ್ತದೆ. ಚೊಗರಿನ ಅಂಶ ಕಡಿಮೆಯಾಗುತ್ತಾ ಬರುತ್ತದೆ. ಕತ್ತರಿಸುವಾಗ ಕತ್ತರಿಗೆ ಹಿತ ಕೊಡುತ್ತದೆ. ತಿನ್ನುವವರಿಗೂ ಸಹ ಇದರ ರುಚಿ ಹಿತ ಕೊಡುತ್ತದೆ. ಹಳೆಯದಾದಂತೆ ಅದರ ಸುವಾಸನೆಯೂ ಸಹ ಭಿನ್ನವಾಗಿರುತ್ತದೆ. ಕತ್ತರಿಸಿ, ಮೂಸಿ ನೊಡಿ ಅದರ ಗುಣಮಟ್ಟ ನಿರ್ಧರಿಸುತ್ತಾರೆ. ಅಡಿಕೆ ವ್ಯಾಪಾರದಲ್ಲಿ ತೊಡಗಿದವರಿಗೆ ಹಳೆ ಅಡಿಕೆ ಯಾವುದು, ಹೊಸತು ಯಾವುದು ಎಂಬುದು ಗೊತ್ತಾಗುತ್ತದೆ. ಹಳೆ ಅಡಿಕೆ ಎಂದು ಹೊಸತನ್ನು ದಾಟಿಸಲಿಕ್ಕೆ ಆಗುವುದಿಲ್ಲ.

ಹಳೆ ಅಡಿಕೆಯ ತಿರುಳಿನ ಬಣ್ಣ ಬಿಳಿ ಹೋಗಿ ಸ್ವಲ್ಪ ಹಾಲಿನ ಕೆನೆ ಬಣ್ಣ ಬರುವುದೂ ಇದೆ. ಡಬ್ಬಲ್ ಚೋಲ್ ಆದರೆ ತಿರುಳು ಸ್ವಲ್ಪ ಮಟ್ಟಿಗೆ ಚಾಕಲೇಟಿನ ಬಣ್ಣ ಬರುವುದೂ ಇದೆ. ತೇವಾಂಶ ಸ್ವಲ್ಪವೂ ಇರುವುದಿಲ್ಲ. ಮುಖ್ಯವಾಗಿ ಹಳೆಯ ಅಡಿಕೆ ದಾಸ್ತಾನು ಸರಿಯಾಗಿ ಇಟ್ಟಿದ್ದರೆ ಅದರಲ್ಲಿ ಸ್ವಲ್ಪವೂ ಶಿಲೀಂದ್ರ ಸೋಂಕು ಇರುವುದಿಲ್ಲ. ಹಾಗೆಂದು ಕೆಲವು ಸಂಸ್ಕರಣೆ, ದಾಸ್ತಾನು ಸರಿಯಾಗಿರದೆ ಇದ್ದರೆ ಹಾಳಾಗದೆ ಇರುವುದಿಲ್ಲ. ಹಾಳಾದ ಅಡಿಕೆಗೆ ಬೆಲೆಯೂ, ಬೇಡಿಕೆಯೂ  ಕಡಿಮೆ ಇರುತ್ತದೆ. ಚೆನ್ನಾಗಿ ಒಣಗಿ ಸಮರ್ಪಕವಾಗಿ ದಾಸ್ತಾನು ಇಟ್ಟ ಅಡಿಕೆ ಮಾತ್ರ ಹಳೆಯದಾದರೆ ಗುಣಮಟ್ಟ ಕಳೆದುಕೊಳ್ಳುವುದಿಲ್ಲ.

ಹಳೆ ಅಡಿಕೆಗೆ ಯಾಕೆ ಬೇಡಿಕೆ?: ಹಳೆ ಅಡಿಕೆ ಎಂದರೆ ಅದು ತಾಜಾ ಅಡಿಕೆಯಾಗಿ ಮತ್ತು ಸಿಹಿ ಬೀಡಾ ಹಾಗೂ ಕೆಲವು ವೈಭವೋಪೇತ ಸಮಾರಂಭಗಳಲ್ಲಿ ಬೆಳ್ಳಿ ಸಹಿತವಾದ, ಚಾಕಲೇಟು ತರಹದ ಪಾನ್ ಬೀಡಾಗಳಿಗೆ ಬಳಕೆಯಾಗುತ್ತದೆ. ಹೆಚ್ಚಾಗಿ ಇಂತಹ ಬಳಕೆಗೆ ಮಹಾರಾಷ್ಟ್ರದ ರತ್ನಗಿರಿ ಸುತ್ತಮುತ್ತ ಬೆಳೆಯುವ ಸೇವರ್ಧನ್ ಅಡಿಕೆ (ಬೋರ್ಲಿ ಅಡಿಕೆ) ಬಳಕೆಯಾಗುತ್ತದೆ. ಆದರೆ ಈ  ಅಡಿಕೆಯ ಉತ್ಪಾದನೆ ತುಂಬಾ ಕಡಿಮೆ. ಇಲ್ಲಿನ ಬೆಳೆ ಪ್ರದೇಶ ನಮ್ಮಲ್ಲಿನ ಒಂದು ಹಳ್ಳಿಯ ಉತ್ಪಾದನೆಗೆ ಸಮ. ರತ್ನಗಿರಿ ಅಡಿಕೆಗೆ ನಮ್ಮಲ್ಲಿನ ಅಡಿಕೆಗಿಂತ ಕಿಲೋಗೆ ರೂ.೧೦೦-೧೫೦ ಹೆಚ್ಚು ಇರುತ್ತದೆ. ಇಲ್ಲಿನ (ಕರಾವಳಿಯ) ಒಳ್ಳೆಯ ಅಡಿಕೆ ಅಲ್ಲಿನ ಪಟೋರಾಕ್ಕೆ ಸಮ ಎನ್ನುತ್ತಾರೆ ವರ್ತಕರು. ಆ ಅಡಿಕೆ ಸಿಗದೆ ಇದ್ದಾಗ ಅಥವಾ ತೀರಾ ಕೊರತೆ ಆದಾಗ ಕರಾವಳಿಯ ಜಿಲ್ಲೆಗಳ ಚೋಲ್, ಡಬ್ಬಲ್ ಚೋಲ್ ಅಡಿಕೆಯನ್ನು ಅದಕ್ಕೆ ಸಮನಾದ ಗುಣಮಟ್ಟ ಇರುವ ಕಾರಣ  ಬಳಕೆ ಮಾಡುತ್ತಾರೆ. ಹಾಗಾಗಿ ಒಮ್ಮೊಮ್ಮೆ ಇದಕ್ಕೆ ಬೇಡಿಕೆ ಆಗುತ್ತದೆ. ಆ ಬೇಡಿಕೆ ಆದಾಗ ಚೋಲ್ ಡಬ್ಬಲ್ ಚೊಲ್ ದರ ಭಾರೀ ಏರಿಕೆಯಾಗುತದೆ. ಅಲ್ಪ ಸಲ್ಪ ಪ್ರಮಾಣದಲ್ಲಿ ಅಡಿಕೆ ರಪ್ತು ಆಗುತ್ತದೆ. ಅದಕ್ಕೂ ಬೇಕಾಗುವುದು ರತ್ನಗಿರಿ ಅಡಿಕೆ ಅಥವಾ ಅದಕ್ಕೆ ಸಮನಾದ ಚೋಲ್ ಡಬ್ಬಲ್ ಚೋಲ್ ಅಡಿಕೆ ಈ ಕಾರಣದಿಂದ  ಹಳೆ ಅಡಿಕೆಗೆ ಬೆಲೆ ಹೆಚ್ಚಾಗುತ್ತದೆ. ಕೆಲವು ಮೂಲಗಳ ಪ್ರಕಾರ ಈ ವರ್ಷ ಇಂತಹ ಸನ್ನಿವೇಶ ಉಂಟಾಗಿದೆ.

ಕರಾವಳಿಯ ಅಡಿಕೆಗೆ ಮಾತ್ರ ಯಾಕೆ?: ಕರಾವಳಿಯಲ್ಲಿ ಮಾತ್ರ ಚಾಲಿ ಅಡಿಕೆ ಮಾಡುವುದಲ್ಲ. ಮಲೆನಾಡಿನ ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ, ಹೊಸನಗರ, ಬೀರೂರು ಇಲ್ಲಿಯೂ ಚಾಲಿ ಮಾಡುತ್ತಾರೆ. ಆದರೆ ಅಲ್ಲಿ ಹೊಸ ಅಡಿಕೆಗೂ ಹಳೆ ಅಡಿಕೆಗೂ ಭಾರೀ ದರ ವ್ಯತ್ಯಾಸ ಇರುವುದಿಲ್ಲ. ಕಾರಣ ಇಲ್ಲಿ ಅಡಿಕೆ ಸುಲಿಯುವವರು ಒಣಗಿದ ಗೋಟಿನ ಸಿಪ್ಪೆಗೆ ನೀರು ಹಾಕಿ ನೆನೆಸಿ ಸುಲಿಯುತ್ತಾರೆ. (ಕೈಗೆ ಮೆತ್ತಗೆ ಆಗಲೆಂದು) ಸುಲಿದ ನಂತರ ಆದನ್ನು ಒಂದು ಬಿಸಿಲು ಒಣಗಿಸುತ್ತಾರೆಯಾದರೂ ಸ್ವಲ್ಪ ತೇವಾಂಶ ಉಳಿಯುತ್ತದೆ. ಹಾಗಾಗಿ ಅಲ್ಲಿ ಭಾರೀ ಕಡಿಮೆ ಜನ ಹಳೆ ಅಡಿಕೆಗೆ ಇಡುತ್ತಾರೆ. ಇಟ್ಟ ಅಡಿಕೆಯೂ ಅಷ್ಟು ಗುಣಮಟ್ಟದಲ್ಲಿರುವುದಿಲ್ಲ. ಅಲ್ಪ ಸ್ವಲ್ಪ ಜನ ಗುಣಮಟ್ಟ ಕಾಯ್ದುಕೊಳ್ಳುತ್ತಾರೆ. ಯಲ್ಲಾಪುರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಹಳೆ ಚಾಲಿ ಅಡಿಕೆ ಇರುತ್ತದೆ. ಇಲ್ಲಿಯ ಚಾಲಿ ದೊಡ್ಡದಿರುತ್ತದೆ ಮತ್ತು ಚಪ್ಪಟೆಯಾಗಿರುತ್ತದೆ. ಮಲೆನಾಡಿನ ಬಹುತೇಕ ಚಾಲಿ ಅಡಿಕೆ ಪಾನ್ ಮಸಾಲ ಕ್ಕೆ ಬಳಕೆಯಾಗುವ ಕಾರಣ ಅದಕ್ಕೆ ಬೆಲೆ ಕರಾವಳಿಯ ಅಡಿಕೆಗಿಂತ ಕಡಿಮೆ ಇರುತ್ತದೆ. 

ಬೆಲೆ ತಾರತಮ್ಯದ ಬಗ್ಗೆ: ಈ ವರ್ಷ ಹಳೆ ಅಡಿಕೆ- ಡಬ್ಬಲ್ ಚೋಲ್ ಗಳಿಗೆ ಬೆಲೆ ಹೊಸ ಚಾಲಿಗಿಂತ ೮೦–೧೨೦ ರೂ ಗಳಷ್ಟು ಹೆಚ್ಚು ಇರುವುದಕ್ಕೆ ಕೆಲವರು ಕೆಲವು ಅಭಿಪ್ರಾಯಗಳನ್ನು ವಕ್ತಪಡಿಸುತ್ತಾರೆ. ಸಣ್ಣ ಬೆಳೆಗಾರರಿಗೆ ದ್ರೋಹ ಮಾಡಲು ಈ ರೀತಿ ಬೆಲೆ ತಾರತಮ್ಯ ಮಾಡಲಾಗುತ್ತದೆ ಎಂಬ ಅಭಿಪ್ರಾಯವೂ ಇದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.ಆದರೆ ಸಾಂಸ್ಥಿಕ ಖರೀದಿದಾರಲ್ಲಿ ಮಾತ್ರ ಈ ಬೆಲೆ ವ್ಯತ್ಯಾಸ ಅಲ್ಲ. ಖಾಸಗಿಯವರಲ್ಲಿಯೂ ಸಾಂಸ್ಥಿಕರ ದರಕ್ಕಿಂತಲೂ ೫-೧೦ ರೂ. ಹೆಚ್ಚು ಇದೆ. ಹಾಗಾಗಿ ಇದು ಯಾರದ್ದೋ ಪೋಷಣೆಗೆ ಮಾಡಿದ ಆಟ ಅಲ್ಲ ಎನ್ನಬಹುದು. ಅಲ್ಪ ಸ್ವಲ್ಪ ಮಟ್ಟಿಗೆ ಇದು ಇರಬಹುದಾದರೂ ಅದು ಸಾಗರದಲ್ಲಿ ಒಂದು ಬಿಂದುವಿನಷ್ಟೇ  ಎನ್ನಬಹುದು. 

ಬೆಲೆ ಹೆಚ್ಚಾಗಲು ಒಂದು ಕಾರಣ ಹಳೆ ಅಡಿಕೆ, ಡಬ್ಬಲ್ ಚೋಲ್ ಅಡಿಕೆ ದಾಸ್ತಾನು ಇಟ್ಟವರು ದರ ಸುಮಾರು ೫೩೦ ಕ್ಕೆ ತಲುಪುವಾಗ ಮಾರಾಟ ಮಾಡಿದ್ದಾರೆ. ಆದ ಕಾರಣ ದಿನಕ್ಕೆ ಒಂದೊಂದು ವ್ಯಾಪಾರಿಗೆ ಹೆಚ್ಚೆಂದರೆ ಒಂದು ಎರಡು ಚೀಲ ಮಾತ್ರ ಅಡಿಕೆ ಸಿಗುವ ಪರಿಸ್ಥಿತಿ ಉಂಟಾಗಿದೆ. ಒಂದೆಡೆ ಕೊರತೆ ಇದೆ, ಬೇಡಿಕೆಯೂ ಇದೆ. ಕೆಲವೇ ಕೆಲವು  ಜನ ರೈತರಲ್ಲಿ ಅಡಿಕೆ ಇದೆ. ಅದನ್ನು ತರಿಸಿ ಬೇಡಿಕೆ ತೀರಿಸಲು ದರ ಏರಿಸಲಾಗಿದೆ.

ಹಳೆ ಅಡಿಕೆಗೆ ಬೇಡಿಕೆ ಬಂದರೆ ಸಧ್ಯವೇ ಹೊಸತಕ್ಕೂ ಬೇಡಿಕೆ ಬರಲಿದೆ: ಹಳೆ ಅಡಿಕೆ ಈಗ ಇದ್ದರೆ ಅದು ಕೇವಲ ೧೦-೧೫% ಮಾತ್ರ ಎಂಬ ಸುದ್ದಿ ಇದೆ. ಅದನ್ನು ಇನ್ನೂ ಇನ್ನೂ ಇಟ್ಟುಕೊಳ್ಳಲು  ರೈತರು ಹಿಂದೇಟು ಹಾಕುತ್ತಾರೆ. ಕಾರಣ ದಾಸ್ತಾನು ಇಡುವುದು ಅಷ್ಟು ಸುಲಭದ ಕೆಲಸ ಅಲ್ಲ. ಇದ್ದು ಕೆಂಡವನ್ನು ಕಂಕುಳಲ್ಲಿ ಇಟ್ಟುಕೊಂಡಂತೆ. ಯಾವುದೇ ಸಮಯದಲ್ಲಿ ಅದು ಹಾಳಾಗಲೂ ಬಹುದು. ಹಾಗಾಗಿ ಅದನ್ನು ಕೊಟ್ಟು ಮುಗಿಸುವ ಎನ್ನುವವರೇ ಜಾಸ್ತಿ. ಅದು ಮುಗಿದ ತರುವಾಯ ಹೊಸ ಅಡಿಕೆಯದ್ದೇ ಸರದಿ. ಹೆಚ್ಚಾಗಿ  ಜೂನ್ ತಿಂಗಳ  ನಂತರ ಹೊಸತು ಹಳೆಯದರ ಅಂತರ ಕಡಿಮೆಯಾಗುತ್ತಾ ಬರುತ್ತದೆ. ಅದು ಚೌತಿ ಸುಮಾರಿಗೆ ಬಹಳ ಹತ್ತಿರ ಬರುತ್ತದೆ. 

ಈಗ ಬರುವ ಅಡಿಕೆ ಬಹುತೇಕ ಸೆಕೆಂಡ್: ಕಳೆದ ಎರಡು ವರ್ಷಗಳ ಬೆಲೆ ಏರಿಕೆ ಬೆಳೆಗಾರರಿಗೆ ಅಡಿಕೆಗೆ ಬೇಡಿಕೆ ಉತ್ತಮವಾಗಿದೆ.  ಬೆಲೆಯೂ ಬರುತ್ತದೆ ಎಂದು ಗೊತ್ತಾಗಿದೆ. ಹಾಗಾಗಿ ಸಾಧ್ಯವಾದಷ್ಟು ಕಾದು ಮಾರಾಟ ಮಾಡುವ ಮನೋಸ್ಥಿತಿಗೆ ಮುಟ್ಟಿದ್ದಾರೆ.  ಹಿಂದಿನಂತೆ ಈಗ ಅಡಿಕೆ ಬೆಳೆಗಾರರಿಗೆ ಕೈ ಖಾಲಿ ಎಂದಾಗಿಲ್ಲ. ಹಾಗಾಗಿ ಈಗ ಮಾರುಕಟ್ಟೆಗೆ ಮಳೆಗಾಲದಲ್ಲಿ ಬಿದ್ದ ಅಡಿಕೆಯನ್ನು ಮತ್ತು ಒದ್ದೆಯಾದ ಅಡಿಕೆಯನ್ನು  ಮಾತ್ರ ತರುತ್ತಿದ್ದಾರೆ. ಇದು ತಾಜಾ ಅಡಿಕೆಯಾಗಿ ಬಳಕೆಗೆ ಯೋಗ್ಯವಲ್ಲದ ಕಾರಣ ಇದನ್ನು ಹುಡಿ ಮಾಡಿ ಪಾನ್ ಮಸಾಲಾಗೆ  ಬಳಕೆ ಮಾಡುತ್ತಾರೆ. ಕರಾವಳಿಯ ಅಡಿಕೆ ಎಂಬ ಕಾರಣಕ್ಕೆ ಮಲೆನಾಡಿನ ಅಡಿಕೆಗಿಂತ ಸ್ವಲ್ಪ ಹೆಚ್ಚಿನ ದರ ಇದೆ ಅಷ್ಟೇ.

ನಿರೀಕ್ಷೆ ಇಟ್ಟುಕೊಳ್ಳಿ; ಬೆಲೆ ಬರುತ್ತದೆ: ಕೆಂಪಡಿಕೆಗೆ ಬೆಲೆ ಹೆಚ್ಚಾದಂತೆ ಚಾಲಿಗೂ ಬೆಲೆ ಹೆಚ್ಚಾಗಲಾರಂಭಿಸುತ್ತದೆ.ಈಗ ಕೆಂಪಡಿಕೆ ಬೆಲೆ ಹೆಚ್ಚಾಳಕ್ಕೆ ಪ್ರಾರಂಭವಾಗಿದೆ. ಹಾಗಾಗಿ ಚಾಲಿ ದರವೂ ಸ್ವಲ್ಪ ಸ್ವಲ್ಪವೇ ಏರಿಕೆ ಆಗುತ್ತದೆ. ಬಹುಷಃ ಯಾವುದೇ ಆಮದು ಆಗದೆ ಇದ್ದರೆ ಜುಲೈ ಅಗಸ್ಟ್ ಸುಮಾರಿಗೆ ಹೊಸ ಚಾಲಿಗೂ 500 ತನಕ ಏರಿಕೆಯಾಗುವ ಸಾಧ್ಯತೆ ಇದೆ. 

ಅಡಿಕೆ ಎಂದಾಕ್ಷಣ ಎಲ್ಲವೂ ಒಳ್ಳೆಯ ಅಡಿಕೆ ಆಗಿರುವುದಿಲ್ಲ. ನಾವು ಮಾರಾಟ ಮಾಡುವ ಅಡಿಕೆಯಲ್ಲಿ ದೊಡ್ದದು, ಸಾಧಾರಣ,ಅತೀ ಸಣ್ಣದು (ಮೋರಾ, ಮೋಟಿ, ಚಿಕಣಿ) ಹೀಗೆಲ್ಲಾ ಇರುತ್ತದೆ. ದೊಡ್ದದು ಮತ್ತು ಮಧ್ಯಮ ಗಾತ್ರದ್ದಕ್ಕೆ ಬೇಡಿಕೆ ಜಾಸ್ತಿ. ಬೆಲೆ ಜಾಸ್ತಿ. ವರ್ತಕರು ಇದನ್ನು ಪ್ರತ್ಯೇಕಿಸಿ ಮಾರಾಟ ಮಾಡುತ್ತಾರೆ. (ಗಾರ್ಬಲ್) ಅಡಿಕೆ ದೊಡ್ಡದಾದರೆ ಅದನ್ನು ಕತ್ತರಿಸಲು ಸುಲಭ. ಅಡಿಕೆಯನ್ನು ಬರೇ ಕತ್ತರಿಯಲ್ಲಿ ಕತ್ತರಿಸಿ ತುಂಡು ಮಾಡುವುದು ಮಾತ್ರವಲ್ಲ. ಶಾವಿಗೆ, ಆವಲಕ್ಕಿ ತರಹವೂ ಕತ್ತರಿಸುತ್ತಾರೆ. ಅದು ಯಾಂತ್ರಿಕವಾಗಿಯಾಗಲಿ ಅಥವಾ ಕೈಯಲ್ಲೇ  ಮಾಡುವುದಾದರೂ ಅದಕ್ಕೆ ನಿರ್ದಿಷ್ಟ ಗಾತ್ರದ ಅಡಿಕೆ ಬೇಕು. ಹಾಗಾಗಿ ಅಡಿಕೆ ದೊಡ್ಡಗಾತ್ರದಲ್ಲಿದ್ದಷ್ಟು ಅದಕ್ಕೆ ಒಳ್ಳೆಯ ಬೆಲೆ ಸಿಗುತ್ತದೆ. ಸಣ್ಣ ಸಣ್ಣ ಅಡಿಕೆ ಇದ್ದರೆ ಅದು ಪಾನ್ ಮಸಾಲಾಗೆ ಹೋಗುವ ಕಾರಣ ಬೆಲೆ ಕಡಿಮೆಯಾಗುತ್ತದೆ. ದೊಡ್ಡ  ಅಡಿಕೆಯನ್ನೇ ಕತ್ತರಿಸಿ ನೋಡುವುದು ಯಾಕೆಂದರೆ ಅದು ಸರಿಯಾಗಿ ಒಣಗಿದ್ದರೆ ಉಳಿದವು ಒಣಗಿದೆ ಎಂಬುದು ಖಾತ್ರಿ. 

ಮಾಹಿತಿ ಮತ್ತು ಚಿತ್ರ: ರಾಧಾಕೃಷ್ಣ ಹೊಳ್ಳ