ಹೂದೋಟದಲ್ಲಿ ದುರ್ದೈವಿ ಸಂಗ

ಹೂದೋಟದಲ್ಲಿ ದುರ್ದೈವಿ ಸಂಗ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಗಪ್ಪ ನಾಗಲಾಪುರ
ಪ್ರಕಾಶಕರು
ಅಡ್ಲಿಗಿ ಪ್ರಕಾಶನ, ಮಸ್ಕಿ, ರಾಯಚೂರು
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೩

“ಹೂದೋಟದಲ್ಲಿ ದುರ್ದೈವಿ ಸಂಗ’ ಕವಿ ಸಂಗಪ್ಪ ನಾಗಲಾಪುರ ಅವರ ಕವನ ಸಂಕಲನ. ಈ ಪುಸ್ತಕದ ವಿಶೇಷತೆ ಎಂದರೆ ಸುಮಾರು ೫೦ ವರ್ಷಗಳ ಹಿಂದೆ ಬರೆದ ಕವನಗಳನ್ನು ಮಸ್ಕಿಯ ಅಡ್ಲಿಗಿ ಪ್ರಕಾಶನ ೨೦೨೩ ರಲ್ಲಿ ಪ್ರಕಟಿಸಿದೆ. ಈ ಕವನ ಸಂಕಲನದಲ್ಲಿ ೭೨ ಕವಿತೆಗಳಿವೆ. ಚಿಕ್ಕ ಚಿಕ್ಕ ಕವಿತೆಗಳು ಹಿಡಿದು ದೀರ್ಘ ಕವಿತೆಗಳು ಇವೆ.

ಕವಿ ಸಂಗಪ್ಪ ನಾಗಲಾಪುರ ಅವರು ತಮ್ಮ ಯೌವನ ಕಾಲದಲ್ಲಿ ಬರೆದ ಕವಿತೆಗಳು. ಕವಿ ನಾಗಲಾಪುರ ಅವರ ಬದುಕಿನ ಸಿಹಿ ಕಹಿ ದುಃಖ ನೋವು ನಿರಾಸೆ ಪ್ರೇಮ ಸರಸ ವಿರಸ ವಿರಹ ಈ ರೀತಿಯ ಅನೇಕ ಮನೋಭಿತ್ತಿಯ ಸಂಗತಿಗಳನ್ನ ಅವರ ಕವಿ ಮನಸ್ಸು ಕಾವ್ಯದಲ್ಲಿ ಬೆಳದಿಂಗಳಂತೆ ಚೆಲ್ಲಿದೆ ಎಂದಿದ್ದಾರೆ. ಈ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ ಲೇಖಕರಾದ ಡಾ. ಮಹಾಂತೇಶ ಪಾಟೀಲ. ಇವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…

“ಕಾವ್ಯವು ಎಲ್ಲ ಕಾಲದಲ್ಲೂ ಎಲ್ಲ ಸಂವೇದನೆಗಳಿಗೆ ದನಿಯಾಗುತ್ತದೆ. ಆದರೆ ಪ್ರೀತಿ, ಪ್ರೇಮ, ಒಲುಮೆ, ಸಾಂಗತ್ಯ, ಅನುರಾಗ, ಅನುಬಂಧದಂತಹ ಸಂವೇದನೆಗಳು ಕವಿತೆಗಳಲ್ಲಿ ಮುಂಚೂಣಿಯಾಗಿ ಕಾಣಿಸುತ್ತವೆ. ಪ್ರೇಮಕ್ಕೆ ಅನಂತ ಮುಖಗಳಿವೆ. ತಾಯಿ-ತಂದೆ, ಅಣ್ಣ-ತಂಗಿ, ಹೆಂಡತಿ-ಸಖಿ, ಗೆಳತಿ-ಗೆಳೆಯ, ಗುರು-ಶಿಷ್ಯ, ನಾಡು-ನುಡಿ, ಪ್ರಕೃತಿ-ಸೌಂದರ್ಯ; ಇವುಗಳ ಬಗೆಗಿನ ಸಂಬಂಧದಲ್ಲಿ ರೂಪಗೊಂಡ ಅನುರಾಗವು ಪ್ರೇಮವಾಗಿದೆ. ಪ್ರೇಮಕಾವ್ಯದ ವಿಚಾರಕ್ಕೆ ಬಂದಾಗ ಹೆಣ್ಣು ಗಂಡಿನ ವಯೋಸಹಜ ಆಪ್ತತೆ ಭಾವನೆ, ದಾಂಪತ್ಯದ ಮಧುರಾನುಬಂಧಗಳು ಅಭಿವ್ಯಕ್ತಿ ಅನಿಸಿಬಿಟ್ಟಿದೆ. ಪ್ರೇಮಿಸಿದ ಮನುಷ್ಯರು ಹೇಗಿಲ್ಲವೋ, ಪ್ರೇಮದ ಬಗೆಗೆ ಬರೆಯದ ಕವಿ/ ಕವಯತ್ರಿಯಿಲ್ಲ. ಕಾವ್ಯಕ್ಕೂ ಮತ್ತು ಪ್ರೇಮಕ್ಕೂ ಇರುವ ಸಂಬಂಧ ಅನಾದಿ ಕಾಲದ್ದು. ಸಾಹಿತ್ಯದ ಉಳಿದ ಪ್ರಕಾರಗಳಿಗೆ ಈ ಮಾತು ಹೇಳಲಾಗದು.

ಸಂಗಪ್ಪ ನಾಗಲಾಪುರರವರ ಮೊದಲ ಕಾವ್ಯಕುಸುಮ ‘ಹೂದೋಟದಲ್ಲಿ ದುರ್ದೈವಿ ಸಂಗ’. ಸುಮಾರು ಐವತ್ತು ವರ್ಷಗಳ ಹಿಂದೆ ಬರೆದಿರುವ ಈ ಸಂಕಲನದ ಕವಿತೆಗಳಿಗೆ ಲೋಕಾರ್ಪಣೆಯ ಸಡಗರವು ಈಗ ಒದಗಿ ಬಂದಿದೆ. ಮಿಲಿಟರಿಯಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಕವಿಗೆ ಈಗ ಎಂಬತ್ತು ವರ್ಷಗಳ ತುಂಬು ಹರೆಯ. ಈ ಕಾವ್ಯವು ಹರೆಯದ ಮನಸ್ಸಿನ ಸಾಚಾ ಪ್ರೀತಿಯ ಸಂವೇದನೆ, ನಿವೇದನೆ ಮತ್ತು ವೇದನೆಗಳ ನಿರೂಪಣೆಯು ಪ್ರಧಾನವಾಗಿದೆ. ಜೊತೆಗೆ ತಾಯಿ, ತಾಯ್ನಾಡು, ಸಮಾಜ ಮತ್ತು ನೋವಿನ ಬಗೆಗೆ ಕೆಲವಾರು ಕವಿತೆಗಳಿವೆ. ಅವುಗಳ ಪ್ರಮಾಣ ಕಡಿಮೆ. ಜೀವನವನ್ನು ಪ್ರೀತಿಸುವ ಮನುಷ್ಯನೊಬ್ಬನ ಹಲವು ರೀತಿಯ ಅಭಿವ್ಯಕ್ತಿಗಳಂತೆ ಇಲ್ಲಿನ ಕಾವ್ಯವಿದೆ.

ಈ ಸಂಕಲನದ ಆರಂಭದ ಸುಮಾರು ೫೦-೬೦ ಕವಿತೆಗಳಲ್ಲಿ ಪ್ರೇಮಕ್ಕೆ ತುಡಿಯುವ, ಮಿಡಿಯುವ ಯೌವನದ ವಯೋಸಹಜ ಭಾವನೆಗಳಿವೆ. ಹೆಣ್ಣಿನ ಪ್ರೀತಿಯನ್ನು ನಿರೀಕ್ಷಿಸುವ ಗಂಡು ಜೀವವು ಅನುಭವಿಸುವ ಸೆಳೆತ, ಕಂಪನ, ರೋಮಾಂಚನ, ಆಲಿಂಗನ, ಸಲ್ಲಾಪ, ಸಂಭಾಷಣೆಗಳು ಕಾವ್ಯರೂಪವನ್ನು ತಾಳಿವೆ. ಕಾವ್ಯ ನಾಯಕ ಸಂಪ್ರದಾಯವಾದಿ ಆಗಿರುವ ಕಾರಣದಿಂದ ಸಂಪ್ರದಾಯ ಚೌಕಟ್ಟುಗಳ ಒಳಗಿರುವ ‘ಮನದನ್ನೆ’ಯನ್ನು ಬಯಸುತ್ತಾನೆ. ಹಾಗಾಗಿ ನಾರಿ, ಅಬಲೆ, ವನಿತೆ, ಕಾಂತೆ, ನಲ್ಲೆ, ಪ್ರೇಯಸಿ, ಸಂಗಾತಿ, ಪೂಜಾರಿನಿಯಂತಹ ಪದಬಳಕೆಯಿಂದ ಅವಳನ್ನು ಸಂಬೋಧಿಸುತ್ತಾನೆ. ಪಾಶ್ಚಾತ್ಯ ಉಡುಗೆ-ತೊಡುಗೆಯಲ್ಲಿ ಕಾಣಿಸುವ ಹೆಣ್ಣಿನ ಬಗೆಗೆ ಕವಿಗೆ ವಿರೋಧವಿದೆ. ಅದಕ್ಕೆ ನಿದರ್ಶನವಾಗಿ ‘ಭಾರತೀ ಸುತೆ’ ಕಾವ್ಯದ ಸಾಲುಗಳನ್ನು ಗಮನಿಸಬಹುದು.
‘ಬೇಡ ಪ್ರೇಯಸಿ
ನೀನು ಓದಿದವಳೆಂದು ಮಾತ್ರಕ್ಕೆ
ಈ ತುಂಡುಲಂಗ
ಸ್ತನ ಮುಚ್ಚಿಕೊಳ್ಳಲು ರಿಬ್ಬನ್ನಿನಷ್ಟು
ಅರಿವೆ ಬೇಡ’
ಎನ್ನುತ್ತಾನೆ. ‘ಭಾರತೀಯ ನಾರಿ’ಯ ವೇಷಭೂಷಣಗಳಿಂದ ಅಲಂಕೃತಳಾದ ಸಖಿಗಾಗಿ ಹಂಬಲಿಸುತ್ತಾನೆ. ಭಾರತೀಯ ಮತ್ತು ಪಾಶ್ಚಾತ್ಯ ಮಾದರಿಯ ಹೆಣ್ಣುಗಳ ಮುಖಾಮುಖಿಯಾಗಿಸುತ್ತ, ಕವಿ ನೆಲದ ಪ್ರಿಯತಮೆಯನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಅವಳು ಗ್ರಾಮೀಣ ಮತ್ತು ಅನಕ್ಷರಸ್ತ ಸಂಪ್ರದಾಯಕ್ಕೆ ಸೇರಿದವಳೆಂದು ಕವಿತೆಯ ವಿವರಗಳಿಂದ ಗೊತ್ತಾಗುತ್ತದೆ.

ಕವಿಗೆ ಪ್ರೀತಿಯೇ ಸರ್ವಸ್ವ ಅನಿಸಿರುವುದರಿಂದ, ‘ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಕುವೆಂಪು ವಾಣಿಯಂತೆ ‘ಏನಾದರೂ ಆಗು, ಪ್ರೇಮಮಯಿ ಆಗಿರು’ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ. ಅಂತಹ ಸಾಲುಗಳನ್ನು ‘ನಿನ್ನದೆ ಹುಚ್ಚು ಎನಗೆ’ದಲ್ಲಿ ಗಮನಿಸುತ್ತೇವೆ.
‘ನಾನು ಯೋಗಿಯಾದರೇನು? ನಾನು ಜೋಗಿಯಾದರೇನು?
ನಾನು ಸಿದ್ಧನಾದರೇನು? ನಾನು ಬುದ್ಧನಾದರೇನು?
ನಿನ್ನ ಹೃದಯ ಸಾರಿಗಣಾದ ಕಣ ಜೀವಿ ನಾನು.’
ಸಂಕಲನದ ಸುದೀರ್ಘ ಕವಿತೆಯೆಂದರೆ ಗುಲಾಬಿ. ಅದರ ಗುಣ, ಸ್ವರೂಪ, ರೂಪವನ್ನು ಹೆಣ್ಣಿನ ವ್ಯಕ್ತಿತ್ವದೊಂದಿಗೆ ಸಮೀಕರಿಸುವ ಕವಿಗೆ, ಅದನ್ನು ಎಷ್ಟು ವರ್ಣಿಸಿದರೂ ತೃಪ್ತಿಯಿಲ್ಲ. ಬಣ್ಣ ಮತ್ತು ವಾಸನೆಯಿಂದಲೂ ಆಕರ್ಷಕವಾಗಿರುವ ಮಕ್ಕಳಿಂದ ಮುದಿವಯಸ್ಕರಿಗೂ ಇಷ್ಟವಾಗುವ ಹೂವನ್ನು ವಿವರಿಸಲಾಗಿದೆ.

ಭಾರತ ರತ್ನ, ತಾಯಿ, ನಿನ್ನ ಉದರದೊಳು, ಇದೇ ನನ್ನ ದುರ್ಭಾಗ್ಯ, ಧರಣಿ ಜನನಿ- ರಚನೆಗಳಲ್ಲಿ ತಾಯಿ ಮತ್ತು ತಾಯ್ನಾಡಿನ ಮೇಲಿನ ಮಮತೆಯ ವಿವರಗಳಿವೆ. ತಾಯಿಯ ಬಗೆಗೆ ಅಭಿಮಾನ ಮತ್ತು ಜನ್ಮಭೂಮಿಯ ಮೇಲಿನ ಸ್ವಾಭಿಮಾನ- ಎರಡೂ ಸಂವೇದನೆಗಳು ಕವಿತೆಯಲ್ಲಿ ಒಡಮೂಡಿವೆ. ವೃತ್ತಿಯಿಂದ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿರುವ ಕವಿಯ ದೇಶಪ್ರೇಮವು ವ್ಯವಸ್ಥೆಯ ಭ್ರಷ್ಟತೆ, ಜನರ ಅಪ್ರಮಾಣಿಕತೆ, ಅನೈತಿಕತೆಯನ್ನು ಕಂಡು ವ್ಯಥೆಯನ್ನು ವ್ಯಕ್ತಪಡಿಸಿದ್ದಾರೆ. ದೇಶದ ಅನಾಗರಿಕ ಪ್ರಜೆಗಳ ಬೇಜವಾಬ್ದಾರಿಯನ್ನು ನೋಡಿ ಕಳವಳಗೊಂಡ ಮನಸ್ಸಿನ ಅಭಿವ್ಯಕ್ತಿಯಾಗಿ ಕವಿತೆಗಳಿವೆ. ತಾಳಲಾರದ ನೋವು, ನೋವಾನಂದ, ಸಿಹಿವೇದನೆ- ರಚನೆಗಳು ನೋವಿನ ವಿವಿಧ ಮುಖಗಳಿಗೆ ಮುಖವಾಣಿಯಂತಿವೆ. ಊರಕೊಳೆ, ಕಸಬಾರಿಗೆ, ಪಾಪಿ ಭ್ರೂಣ, ಉಪಕಾರಕ್ಕಪಕಾರ ಕವಿತೆಗಳು ಸಾಮಾಜಿಕ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ರಚನೆಯಾಗಿವೆ.
ಕಾವ್ಯದ ಶೈಲಿಯ ಕುರಿತು ಮಾತನಾಡುವುದಾದರೆ ನವೋದಯ ಕಾವ್ಯವನ್ನು ನೆನಪಿಸುವಂತಿವೆ. ಆದರೆ ಕಾವ್ಯತ್ಮಕತೆಗಿಂತ, ಗದ್ಯಗುಣವು ಹೆಚ್ಚಾಗಿದೆ. ನೈತಿಕ ಉಪದೇಶವನ್ನು ಮಾಡುವ ಸಾಲುಗಳು ಕಾವ್ಯದಲ್ಲಿವೆ. ‘ರುಚಿಯೇನೊ ಶುಚಿಯೇನೊ/ ಬಾಳಿನಲಿ ಎಲ್ಲ ಬರಿ ಕ್ಷಣಿಕ’ ಎಂಬ ಮಿಂಚಿನ ಸಾಲುಗಳು ಸಂಕಲನದ ತುಂಬ ಕಾಣಸಿಗುತ್ತವೆ. ಕವಿಯ ಕಾವ್ಯಶಕ್ತಿ ಸಾಮರ್ಥ್ಯವು ಅಂತಹ ಸಾಲುಗಳಿಂದ ಜಾಹೀರುಗೊಂಡಿದೆ. ಅನುಭವದ ನಿರೂಪಣೆಯಲ್ಲಿ ಪ್ರಾಮಾಣಿಕತೆಯಿದೆ. ಈವರೆಗೆ ಕನ್ನಡ ಕಾವ್ಯ ಹಲವು ಕ್ರಮಗಳನ್ನು ದಾಟಿಕೊಂಡು ವಿಕ್ರಮಗೊಂಡಿದೆ. ಸುಮಾರು ಐವತ್ತು ವರ್ಷಗಳ ಹಿಂದೆ ಬರೆದ ಈ ಕವಿತೆಗಳು ಪ್ರಕಟಣೆಗೊಂಡು ಆಗಲೇ ಓದುಗರನ್ನು ತಲುಪಿದ್ದರೆ ಸಂಕಲನಕ್ಕೆ ಬೇರೆಯದೆ ಮಹತ್ವ ಬರುತ್ತಿತ್ತು. ಮೇಲಿನ ಮಾತುಗಳನ್ನು ಕವಿತೆಗಳಿಗೆ ಕಟ್ಟಿದ ಬೆಲೆಯೆಂದು ಭಾವಿಸದೇ, ಕಾವ್ಯ ಓದುಗನೊಬ್ಬನ ಟಿಪ್ಪಣಿಗಳೆಂದು ಭಾವಿಸಿದರೆ ಒಳಿತಾದೀತು.