‘ಮಯೂರ' ಹಾಸ್ಯ - ಭಾಗ ೫೧

‘ಮಯೂರ' ಹಾಸ್ಯ - ಭಾಗ ೫೧

ಕನ್ನಡ ಮಾಸ ಪತ್ರಿಕೆಗಳಲ್ಲಿ ‘ಮಯೂರ' ಪತ್ರಿಕೆಗೆ ಅದರದ್ದೇ ಆದ ಸ್ಥಾನವಿದೆ. ಈಗಾಗಲೇ ಐದು ದಶಕಗಳನ್ನು ಕಂಡ ಅಪರೂಪದ ಪತ್ರಿಕೆ ಇದು. ಕಥೆ, ಕಾದಂಬರಿ, ಕವನಗಳನ್ನು ಓದಲು ಬಯಸುವವರ ಸಂಜೀವಿನಿ. ಈ ಪತ್ರಿಕೆಯಲ್ಲಿ ನಿಜ ಜೀವನದ ಹಾಸ್ಯ ತುಣುಕುಗಳನ್ನು ‘ಅಂಗೈಯಲ್ಲಿ ಅರಮನೆ' ಎನ್ನುವ ಶಿರೋನಾಮೆಯಲ್ಲಿ ಪ್ರತೀ ತಿಂಗಳು ಪ್ರಕಟಿಸುತ್ತಾರೆ. ಈ ಕಿರು ಹಾಸ್ಯ ಪ್ರಸಂಗಗಳನ್ನು ಆಯ್ದು ನಾವು ಈ ಹಿಂದೆ ನಿರಂತರ ೫೦ ವಾರಗಳ ಕಾಲ 'ಸಂಪದ' ದಲ್ಲಿ ಪ್ರಕಟ ಮಾಡಿದ್ದೆವು. ಅಂದು ತಾತ್ಕಾಲಿಕವಾಗಿ ನಿಲ್ಲಿಸಿದ್ದ ‘ಮಯೂರ' ಹಾಸ್ಯ ಮತ್ತೆ ಪ್ರಾರಂಭಿಸುತ್ತಿದ್ದೇವೆ. ಇನ್ನಷ್ಟು ವಾರಗಳ ಕಾಲ ಈ ಹಾಸ್ಯ ನಿಮ್ಮ ಮನವನ್ನು ತಣಿಸಲಿದೆ ಎನ್ನುವ ಆಶಾಭಾವನೆ ನಮ್ಮದು. ಓದಿ, ನಕ್ಕು ಹಗುರಾಗಿ…

***

‘ವೋಳಾಕ್ ತಗೋಂಬರ್ರಿ'

೮-೧೦ ವರ್ಷಗಳ ಹಿಂದೆ ನಮ್ಮೂರು ಅಫಜಲಪುರದಿಂದ ಮಾದನಹಿಪ್ಪರಗಾಕ್ಕೆ ಹೋಗಬೇಕಿತ್ತು. ನಡುವೆ ಅಕ್ಕಲಕೋಟೆ ತಾಲೂಕಿನ ಮೈಂದರ್ಗಿಯಲ್ಲಿ ಬಸ್ ಬದಲಿಸಬೇಕಿತ್ತು. ಮೈಂದರ್ಗಿಯಲ್ಲಿ ಇಳಿದಾಗ ಆ ಬಸ್ಸು ಹೊರಟು ಹೋಗಿತ್ತು. ಅಲ್ಲಿ ತಲುಪಲು ಬೇರೆ ವಾಹನಗಳ ವ್ಯವಸ್ಥೆಯು ಇರಲಿಲ್ಲ. ಬಾಡಿಗೆ ಸೈಕಲ್ ಪಡೆದು ಹೋಗಬಹುದಿತ್ತು. ಹತ್ತಿರದ ಬಾಡಿಗೆ ಸೈಕಲ್ ಅಂಗಡಿಗೆ ಹೋಗಿ ಸೈಕಲ್ ಕೇಳಿದೆ. ಅದಕ್ಕೆ ಅವನು ‘ವೋಳಕ್ ತಗೋಂಬರ್ರಿ' ಅಂದ. ಅದನ್ನೆಲ್ಲಿ ಹುಡುಕುವುದು ಎಂದುಕೊಳ್ಳುತ್ತ ದಿನಸಿ ಅಂಗಡಿಗೆ ಹೋಗಿ ‘ವೋಳಕ್ ಕೊಡ್ರಿ' ಎಂದೆ. ಅವನು ನಗುತ್ತ ‘ನಮ್ಮಂಗಡ್ಯಾಗ ಸಿಗಂಗಿಲ್ಲರೀ’ ಅಂದ. ಸಿಟ್ಟಿನಲ್ಲಿ ‘ಯಾಕ್ ರೀ?’ ಎಂದು ಕೇಳಿದಾಗ ‘ವೋಳಾಕ್' ಅಂದ್ರೆ ಮರಾಠಿಯೊಳಗ ‘ಪರಿಚಯ' ಎಂದು ವಿವರಿಸಿದ. ಗುರುತು ಪರಿಚಯ ತಂದರೆ ಸೈಕಲ್ ಕೊಡುತ್ತೇನೆ ಎಂದಷ್ಟೇ ಅವನು ಹೇಳಿದ್ದಾಗಿತ್ತು !

-ಡಿ ಎನ್ ನದಾಫ್

***

ಸಿಜೇರಿಯನ್

ಗೋಕುಲಾಷ್ಟಮಿ ದಿನ ನನ್ನ ಗೆಳೆಯ ಖಾದ್ರಿ ಪಾಚೂ ಮನೆಯಿಂದ ಬೆಳಿಗ್ಗೆ ೭ಕ್ಕೆ ಫೋನ್ ಬಂತು. ‘ರಾಘು, ಮನೆಗೆ ಬಂದು ಕೃಷ್ಣನ ಪ್ರಸಾದ ತಗೊಂಡು ಹೋಗು' ಎಂದ. ನಾನು ೧೧ ರ ಸುಮಾರಿಗೆ ಅವರ ಮನೆಗೆ ಹೋದೆ. ಅವನ ಹೆಂಡತಿ ಶಾಂತಾ ಪ್ರಸಾದವೆಂದು ತಿಂಡಿಯ ಪೊಟ್ಟಣ ಕೊಟ್ಟರು. ‘ಅಲ್ಲಾ ಪಾಚೂ, ಶ್ರೀಕೃಷ್ಣ ರಾತ್ರಿ ಅಲ್ಲವಾ ಹುಟ್ಟೋದು. ನಿಮ್ಮನೆಯಲ್ಲಿ ಬೆಳಿಗ್ಗೆನೇ ಹುಟ್ಟಿಸಿದ ಹಾಗೆ ಕಾಣುತ್ತೆ? ಅಂದೆ. ಅದಕ್ಕೆ ಅವನು ನಗುತ್ತಾ, ‘ಹೌದು ಕಣೋ, ನಾವು ವಯಸ್ಸಾದೋರು, ರಾತ್ರಿವರೆಗೂ ಕಾಯಕ್ಕಾಗಲ್ಲಾಂತ ಬೆಳಿಗ್ಗೆನೇ ಸಿಜರಿಯನ್ ಮಾಡಿಸಿ ಬಿಟ್ಟೆ' ಎಂದ.

-ಗೊಲ್ಲಹಳ್ಳಿ ರಘು

***

ಹರಿದ ಬಟ್ಟೆ ಯಾಕ್ ತಕೊಂಡೆ?

ಕಳೆದ ತಿಂಗಳು ಕುಂದಾಪುರಕ್ಕೆ ಸಂಬಂಧಿಕರ ಮನೆಗೆ ಹೋಗಿದ್ದೆವು. ಮುಂದಿನ ಸಾಲಿನಲ್ಲಿ ಕುಳಿತ ಹಿರಿಯರೊಬ್ಬರನ್ನು ಮಾತನಾಡಿಸಲು ಹೋಗಿ ಅವರ ಪಕ್ಕದಲ್ಲೇ ಕುಳಿತೆವು. 

ಅಲ್ಲಿಗೆ ಅವರ ಮೊಮ್ಮಗಳಂತೆ ಕಾಣುವ ಹೈದರಾಬಾದಿನಲ್ಲಿ ಓದುತ್ತಿದ್ದ ಹುಡುಗಿ ಬಂದು “ಅಜ್ಜಾ, ಹೇಗಿದ್ದೀರಾ?” ಎಂದು ಕೇಳುತ್ತಾ ಎದುರು ನಿಂತಳು. ಮೊಮ್ಮಗಳನ್ನೊಮ್ಮೆ ಮೇಲಿನಿಂದ ಕೆಳಗಿನವರೆಗೆ ನೋಡಿ “ನಾನು ಚೆನ್ನಾಗಿದ್ದೇನೆ ಮಗಾ, ನೀ ಹೇಗಿದ್ದೀಯಾ?” ಎಂದು ಕುಶಲೋಪಚರಿ ವಿಚಾರಿಸಿ “ಈ ಅಂಗಿ ಯಾಕೆ ಹಾಕ್ಕೊಂಡು ಬಂದೆ?” ಎಂದರು. “ಇದು ಹೊಸ ಡ್ರೆಸ್ ಅಜ್ಜಾ, ಈ ಮದುವೆಗಂತಾನೇ ತೆಗೆದುಕೊಂಡಿದ್ದು. ಸೂಪರ್ ಇಲ್ವಾ?” ಎಂದಳು ಹುಡುಗಿ. “ ಅಲ್ಲಾ ಮಗಾ, ಅಷ್ಟೆಲ್ಲಾ ದುಡ್ಡು ಕೊಟ್ಟು ತಗೊಳ್ಳೊ ಬಟ್ಟೆ...ಸ್ವಲ್ಪ ನೋಡಿ ತಗೋಳ್ಳೋದಲ್ಲಾ? ಎಲ್ಲಾ ಹರಿದು ಹೋಗಿದ್ದನ್ನ ತಗೊಂಡಿದ್ದೀಯಾ? ನೀನೇನೊ ಚಿಕ್ಕವಳು. ನಿಮ್ಮಮ್ಮನಿಗಾದ್ರೂ ತಿಳಿಬಾರದಾ?” ಅಜ್ಜ, ಇನ್ನೂ ಹೇಳುತ್ತಿರುವಾಗಲೇ ಮೊಮ್ಮಗಳು ಅಲ್ಲಿಂದ ಪರಾರಿಯಾಗಿದ್ದಳು. 

-ಮಂಜುಳಾ ಎಸ್ ಶಾಸ್ತ್ರಿ

***

ಬಾಬಾರ ನಿದ್ರೆಗೆ ತೊಂದರೆ

ನಮ್ಮ ಮನೆಗೆ ಸಮೀಪದ ಸಾಯಿಬಾಬಾ ಮಂದಿರದಲ್ಲಿ ಪ್ರತಿ ಗುರುವಾರ ವಿಶೇಷ ಪೂಜೆ ಇರುತ್ತದೆ. ಭಜನೆ, ಆರತಿ, ನೈವೇದ್ಯ ಮುಗಿಸಿ ಜೋಗುಳದ ಹಾಡಿನ ಮೂಲಕ ಬಾಬಾರನ್ನು ಶಯನಕ್ಕೆ ಕಳಿಸಲಾಗುತ್ತದೆ. ನಂತರ ಭಕ್ತರು ಪ್ರಸಾದ ತೆಗೆದುಕೊಂಡು ಹಂಚಿಕೊಂಡು ತಿಂದು ಮನೆಗೆ ತೆರಳುತ್ತಾರೆ. ಅಂದು ಪ್ರಸಾದ ಸ್ವೀಕರಿಸುವ ಸಮಯದಲ್ಲಿ ವಿಪರೀತ ಗದ್ದಲ ಆರಂಭವಾಯ್ತು. ಭಕ್ತರ ಕಿರಿಕಿರಿಗೆ ಬೇಸತ್ತ ಸಂಘಟಕರೊಬ್ಬರು ಈ ಗಲಾಟೆ ನಿಲ್ಲಿಸಲು ಉಪಾಯವಾಗಿ ಧ್ವನಿವರ್ಧಕದಲ್ಲಿ “ ಈಗ ತಾನೇ ಜೋಗುಳ ಹಾಡಿ ಬಾಬಾರನ್ನು ಮಲಗಿಸಿದ್ದೀರಿ. ನಿಮ್ಮ ಈ ಗದ್ದಲದಿಂದ ಅವರ ನಿದ್ರೆಗೆ ತೊಂದರೆ ಆಗುವುದಿಲ್ಲವೇ?” ಎಂದು ಹೇಳುತ್ತಿದ್ದಂತೆ ಮಂದಿರ ನಿಶ್ಯಬ್ಧವಾಯಿತು.

-ಸುರೇಶ ಹೆಗಡೆ

ಕೃಪೆ: ಮಯೂರ, ಡಿಸೆಂಬರ್ ೨೦೧೯