‘ಮಯೂರ' ಹಾಸ್ಯ - ಭಾಗ ೬೯

‘ಮಯೂರ' ಹಾಸ್ಯ - ಭಾಗ ೬೯

ಕಾರ್ಡ್ ಸಾಕು

ನನ್ನ ತಮ್ಮ ಮತ್ತು ತಮ್ಮನ ಹೆಂಡತಿ ಇಬ್ಬರೂ ಬ್ಯಾಂಕ್ ಉದ್ಯೋಗಿಗಳು. ಅವರ ಮಗಳು ಸ್ತುತಿ ತುಂಬಾ ಚೂಟಿ. ಏನೇ ಖರೀದಿಸಿದರೂ ಅಮ್ಮ ಅಪ್ಪ ಕಾರ್ಡ್ ಉಜ್ಜಿ ಹಣ ಪಾವತಿಸುವುದನ್ನು ಅವಳು ನೋಡಿದ್ದಳು. ಒಮ್ಮೆ ಅವರು ರಜೆಗೆಂದು ಎರಡು ದಿನ ನಮ್ಮ ಮನೆಗೆ ಬಂದಿದ್ದರು. ಲೋಕಾಭಿರಾಮ ಮಾತನಾಡುತ್ತ ಕುಳಿತಿದ್ದಾಗ ಮಕ್ಕಳ ಶಿಕ್ಷಣದ ಬಗ್ಗೆ ಮಾತು ಬಂತು. ನಾನು ‘ಅಯ್ಯೋ, ಈಗಿನ ಶಿಕ್ಷಣ ತುಂಬಾ ದುಬಾರಿ. ಮಗನಿಗೆ ಇಂಜಿನಿಯರಿಂಗೋ, ಮೆಡಿಕಲ್ಲೊ ಅಂತ ಓದಿಸಲು ಲಕ್ಷಾಂತರ ಹಣ ಬೇಕು' ಎಂದು ಹೇಳುತ್ತಿದ್ದೆ. ಸ್ತುತಿ, ‘ದೊಡ್ಡಪ್ಪ, ಅದಕ್ಕೆ ಯಾಕೆ ಚಿಂತೆ ಮಾಡ್ತೀರಿ? ಈಗ ಯಾವುದಕ್ಕೂ ದುಡ್ಡು ಬೇಕಿಲ್ಲ. ಕಾರ್ಡ್ ಇದ್ರೆ ಮುಗೀತು; ಎಂದಳು.

-ಮಹೇಶ ಭರಡಿ

***

ಮತಾಂತರ

ನನ್ನ ಮೊಮ್ಮಕ್ಕಳು ಸಾಫ್ಟ್ ವೇರ್ ಇಂಜಿನಿಯರ್. ವರ್ಕ್ ಫ್ರಂ ಹೋಮ್ ಎಂದು ಮನೆಯಲ್ಲೇ ಕೆಲಸ ಮಾಡುತ್ತಿದ್ದಳು. ಒಬ್ಬಳಿಗೇ ಬೇಜಾರು ಎಂದು, ತನ್ನ ಗೆಳತಿಯ ಮನೆಯಲ್ಲಿ ಒಂದು ನಾಯಿಮರಿ ಇದೆ ಅದನ್ನು ತೆಗೆದುಕೊಳ್ಳುತ್ತೇನೆ ಎಂದಳು. ಬೇಡ ಎಂದರೂ ೨೫ ಸಾವಿರ ರೂಪಾಯಿ ಕೊಟ್ಟು ನಾಯಿಮರಿ ತಂದಳು. ಮಾರನೇ ದಿನ ಬೀದಿನಾಯಿಗಳ ಗಲಾಟೆ ಕೇಳಿದ ನಾಯಿಮರಿ ತಾನೂ ಹೊರಗೆ ಹೋಗಬೇಕೆಂದು ಓಡಲು ನೋಡುತ್ತಿತ್ತು. ಅದಕ್ಕೆ ನಮ್ಮ ಮಗ, ‘ಬೇಡ ಕಣೋ, ಅವರು ಸರಿ ಇಲ್ಲ, ನಿನ್ನನ್ನ ತಮ್ಮ ಧರ್ಮಕ್ಕೆ ಸೇರಿಸಿಕೊಂಡು ಮತಾಂತರ ಮಾಡಿ ಬಿಡ್ತಾರೆ' ಎಂದ.

-ಎಚ್ ಜಿ ಕಮಲಮ್ಮ

***

ಹೊಸ ವೈಫ್

ದಿನಪತ್ರಿಕೆ ಓದುತ್ತಿದ್ದೆ. ಅದರಲ್ಲಿನ ಒಂದು ಪುಟ್ಟ ಲೇಖನದ ಒಂದು ಸಾಲು ಗಮನ ಸೆಳೆಯಿತು. ಅದರಲ್ಲಿ ‘ಒಂದೇ wife ನ್ನು ಹೆಚ್ಚು ದಿನ ಬಳಸಬಾರದು ಆಗಾಗ ಬದಲಿಸುತ್ತಿರಬೇಕು' ಅಂತ ಇತ್ತು. ಇದನ್ನು ಎರಡೆರಡು ಬಾರಿ ಜೋರಾಗಿ ಓದಿದೆ. ಅದನ್ನು ಕೇಳಿಸಿಕೊಂಡ ನನ್ನ ಹೆಂಡತಿ ಅಡುಗೆಮನೆಯಿಂದ ಬಂದು, ಪೇಪರ್ ತೆಗೆದುಕೊಂಡು ಓದಿದಳು. ಆನಂತರ ಒಳಗೆ ಹೋಗಿ, ಕನ್ನಡಕ ತಂದು ನನ್ನ ಕಣ್ಣಿಗೆ ಸಿಕ್ಕಿಸಿ, ‘ಈಗ ಓದಿ’ ಎಂದಳು. ಮತ್ತೊಮ್ಮೆ ಓದಿದೆ. ‘ಒಂದೇ knife ಅನ್ನು ಹೆಚ್ಚು ದಿನ ಬಳಸಬಾರದು. ಆಗಾಗ ಬದಲಿಸುತ್ತಿರಬೇಕು' ಅಂತ ಬರೆದಿತ್ತು.

-ವಿ. ಹೇಮಂತ ಕುಮಾರ್

***

ಅದನ್ನೇನು ನೋಡುವುದು?

ಅಂದು ಭಾನುವಾರ ಉಪಾಹಾರ ಮುಗಿಸಿ, ಟೀವಿ ನೋಡುತ್ತ ಕುಳಿತಿದ್ದೆ. ಅಪರೂಪಕ್ಕೆ ನನ್ನ ಸೋದರಮಾವನ ಮಗ ನಾಗಭೂಷಣ ಬಂದ. ಆತನಿಗೆ ಮಾತು ಮಾತಿಗೆ ತಮಾಷೆ ಮಾಡುವ ಸ್ವಭಾವ. ಟೀವಿಯಲ್ಲಿ ‘ಹೆಂಡ್ತೀರ ದರ್ಬಾರ್' ಸಿನೆಮಾ ಓದುತ್ತಿತ್ತು. ನಾನು ‘ಈ ಸಿನೆಮಾ ನೋಡಿದ್ದೀಯಾ?’ ಎಂದು ಕೇಳಿದೆ. ಅದಕ್ಕವನು ‘ಮದುವೆಯಾಗಿ ೨೦ ವರ್ಷ ಆಯ್ತು, ಅನುಭವಿಸುತ್ತಿದ್ದೇನಲ್ಲ? ಮತ್ತೆ ಅದನ್ನೇನು ಟೀವಿಯಲ್ಲಿ ನೋಡುವುದು?’ ಎಂದ. ನಾನು ನಕ್ಕೂ ನಕ್ಕೂ ಸುಸ್ತಾದೆ.

-ಎಂ ಕೆ ಮಂಜುನಾಥ

***

(‘ಮಯೂರ' ಫೆಬ್ರವರಿ ೨೦೨೨ರ ಸಂಚಿಕೆಯಿಂದ ಸಂಗ್ರಹಿತ)