‘ವಾರಿಸ್ ಪಂಜಾಬ್ ದೇ’ ಈಗಲೇ ಚಿವುಟಿ ಹಾಕಿ

‘ವಾರಿಸ್ ಪಂಜಾಬ್ ದೇ’ ಈಗಲೇ ಚಿವುಟಿ ಹಾಕಿ

ಸ್ವಯಂಘೋಷಿತ ಧರ್ಮಬೋಧಕ ಮತ್ತು ಪ್ರತ್ಯೇಕ ಖಲಿಸ್ಥಾನ ರಾಷ್ಟ್ರದ ಪ್ರತಿಪಾದಕ ಅಮೃತ್ ಪಾಲ್ ಸಿಂಗ್ ಪತ್ತೆಗಾಗಿ ಪೋಲೀಸರು ತೀವ್ರ ಹುಡುಕಾಟ ನಡೆಸುತ್ತಿರುವಾಗಲೇ ಬುಧವಾರ ವಿಡಿಯೋವೊಂದನ್ನು ಹರಿಬಿಟ್ಟಿರುವ ಅಮೃತ್ ಪಾಲ್ ಸಿಂಗ್ “ಪಂಜಾಬ್ ಸರಕಾರವು ತಮ್ಮನ್ನು ಬಂಧಿಸುವ ಉದ್ದೇಶ ಹೊಂದಿದ್ದರೆ ನನ್ನ ಮನೆಗೆ ಬರಬಹುದಿತ್ತು. ನಾನು ಶರಣಾಗುತ್ತಿದ್ದೆ" ಎಂದು ಹೇಳಿದ್ದಾನೆ. ಈ ಹೇಳಿಕೆಯು ಪಂಜಾಬ್ ಸರಕಾರ ಮತ್ತು ಅಲ್ಲಿನ ಪೋಲೀಸರ ಮೇಲೆಯೇ ಅನುಮಾನ ಹುಟ್ಟುವಂತೆ ಮಾಡಿದೆ. “ಅಲ್ಲಿನ ಸರಕಾರ ಮತ್ತು ಪೋಲೀಸರೇ ಅಮೃತ್ ಪಾಲ್ ಸಿಂಗ್ ಗೆ ಬೆಂಬಲ ನೀಡುತ್ತಿದ್ದಾರೆ" ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪುಷ್ಟಿ ಸಿಕ್ಕಂತಾಗಿದೆ. ಈ ಹಿಂದೆ ವಾರಿಸ್ ಪಂಜಾಬ್ ದೇ ಸಂಘಟನೆಯ ಕೆಲವರನ್ನು ಬಂಧಿಸುವಾಗ ಅಮೃತ್ ಪಾಲ್ ಸಿಂಗ್ ಅಚ್ಚರಿಯ ರೀತಿಯಲ್ಲಿ ಪೋಲೀಸರಿಂದ ತಪ್ಪಿಸಿಕೊಂಡಿದ್ದು ಕೂಡ ಹಲವು ಅನುಮಾನಗಳಿಗೆ ಎಡ ಮಾಡಿಕೊಟ್ಟಿತ್ತು. ಇದೀಗ ಈ ಹೊಸ ವಿಡಿಯೋ ಸರಕಾರವನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ. ಪಂಜಾಬ್ ನಲ್ಲಿ ಖಲಿಸ್ಥಾನ ಪರಿಕಲ್ಪನೆಯನ್ನು ಒಪ್ಪುವ ಜನರು ವಿರಳ ಸಂಖ್ಯೆಯಲ್ಲಿದ್ದರೂ ಆಡಳಿತದ ಆಯಕಟ್ಟಿನ ಸ್ಥಳಗಳಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಲ್ಲಿನ ಹಲವು ರಾಜಕಾರಣಿಗಳು, ಪೋಲೀಸರೇ ಪ್ರತ್ಯೇಕ ಖಲಿಸ್ಥಾನ ಪರಿಕಲ್ಪನೆ ಪೋಷಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ನಿಜವೇ ಆದಲ್ಲಿ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಪಂಜಾಬ್ ಪಾಕಿಸ್ತಾನದ ಜತೆಗೆ ಗಡಿಯನ್ನು ಹಂಚಿಕೊಂಡಿರುವುದರಿಂದ ಗಡಿಯಾಚೆಯಿಂದ ಉಗ್ರರು ಒಳನುಸುಳುವ ಅಪಾಯ ಇದೆ. ಅಮೃತ್ ಪಾಲ್ ಮತ್ತು ಅವರ ಜತೆಗಾರರು ಪಾಕಿಸ್ತಾನದಲ್ಲಿ ಆಶ್ರಯ ಕೋರುವ ಸಾಧ್ಯತೆಯೂ ಇದೆ. ಪಾಕಿಸ್ತಾನ ಮತ್ತು ಇತರೆ ದೇಶಗಳಲ್ಲಿ ಇರುವ ಖಲಿಸ್ಥಾನ ಬೆಂಬಲಿಗರು ಶಸ್ತ್ರಾಸ್ತ್ರ ಮಾದಕ ಪದಾರ್ಥಗಳನ್ನು ವ್ಯಾಪಾರ ಜಾಲವನ್ನು ಬಳಸಿಕೊಂಡು ಉಗ್ರವಾದಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ. ಆದ್ದರಿಂದ ಕೇಂದ್ರ ಸರಕಾರವೇ ಇದರಲ್ಲಿ ಮುತುವರ್ಜಿ ವಹಿಸಬೇಕಾದ ಅಗತ್ಯವಿದೆ. ‘ವಾರಿಸ್ ಪಂಜಾಬ್ ದೇ’ ಸಂಘಟನೆಯೊಂದಿಗೆ ನಂಟು ಹೊಂದಿರುವ ರಾಜಕಾರಣಿಗಳು ಮತ್ತು ಪೋಲೀಸರನ್ನು ಗುರುತಿಸಬೇಕಾಗಿದೆ. ಆ ಮೂಲಕ ಬೆಳೆದು ಹೆಮ್ಮರವಾಗುವ ಮೊದಲೇ ಉಗ್ರ ಸಂಘಟನೆಯನ್ನು ಚಿವುಟಿ ಹಾಕಬೇಕಿದೆ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೩೧-೦೩-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ