‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೧) - ಪಾಂಡೇಶ್ವರ ಗಣಪತಿರಾವ್

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೧) - ಪಾಂಡೇಶ್ವರ ಗಣಪತಿರಾವ್

ಪಾಂಡೇಶ್ವರ ಗಣಪತಿರಾವ್ ಇವರು ದಕ್ಷಿಣ ಕನ್ನಡ ಜಿಲ್ಲೆಯವರು. ಇವರ ಪ್ರಥಮ ಕಾವ್ಯಕೃತಿ “ವಿವೇಕಾನಂದ ಚರಿತಂ” ೧೯೨೫ರಲ್ಲಿ ಪ್ರಕಟವಾಯಿತು. ಅಂದಿನಿಂದಲೂ ಇವರು ಅನೇಕ ಕೃತಿಗಳನ್ನು ರಚಿಸುತ್ತಾ ಬಂದರು. “ಚೆಂಗಲವೆ", “ಸುಪಂಥಾ” ಎಂಬ ಕೃತಿಗಳು ಇವರಿಗೆ ಹೊಸಗನ್ನಡ ಕಾವ್ಯಲೋಕದಲ್ಲಿ ಹೆಸರು ತಂದುಕೊಟ್ಟವು. ಅನೇಕ ದಿನಪತ್ರಿಕೆ, ವಾರ, ಮಾಸ ಪತ್ರಿಕೆಗಳಲ್ಲಿ ಸಂಪಾದಕತ್ವ ಮಾಡಿದ ಪತ್ರಿಕೋದ್ಯಮಿಗಳು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕ ಪ್ರಿಯವಾಗಿ ಮೆರೆದಾಡುತ್ತಿರುವ “ಯಕ್ಷಗಾನ" ನೃತ್ಯನಾಟಕದಲ್ಲೂ ಇವರು “ಮಾರಾವತಾರ" ಎಂಬ ಏಕಪಾತ್ರ ಪ್ರಸಂಗವನ್ನು ರಚಿಸಿದ್ದಾರೆ. “Fragrant Bud” ಎಂಬ ಇಂಗ್ಲಿಷ್ ಕವನಗಳ ಒಂದು ಕೃತಿಯನ್ನು ಅವರು ೧೯೨೯ರಲ್ಲಿ ಪ್ರಕಟಿಸಿದ್ದರು. ಅನೇಕ ರೇಡಿಯೋ ರೂಪಕಗಳನ್ನೂ, ನೂರಾರು ಪ್ರಬಂಧಗಳನ್ನೂ ಇವರು ಪ್ರಕಟಿಸಿದ್ದಾರೆ. ಇವರು ೧೯೪೯ರಲ್ಲಿ “ಪ್ರಥಮ ಕರ್ನಾಟಕ ಯಕ್ಷಗಾನ" ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ೧೯೫೫ರಲ್ಲಿ ದಕ್ಷಿಣ ಕನ್ನಡದಲ್ಲಿ ಜರುಗಿದ ಯಕ್ಷಗಾನ ಸಾಹಿತ್ಯ ಸಮ್ಮೇಳನಕ್ಕೂ ಅಧ್ಯಕ್ಷರಾಗಿದ್ದರು.

ಇವರ ಎರಡು ಕವನಗಳು ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿದೆ. ಅರ್ಚಕರಿಬ್ಬರು ಮತ್ತು ಕೀರ್ತಿ. ಈ ಕವನಗಳಿಂದ ಒಂದನ್ನು ಆರಿಸಿ ಪ್ರಕಟ ಮಾಡಿದ್ದೇವೆ.

ಅರ್ಚಕರಿಬ್ಬರು

೧.

ನ್ಯಾಯ ಪೀಠದ ಮೇಲೆ ಸತ್ಯ ಕೂತಿತ್ತು,

ಮುಂದೆ ಸೌಂದರ್ಯ ಕೈಕಟ್ಟಿ ನಿಂತಿತ್ತು.

ನೂರಾರು ಹೊತ್ತಗೆಯ ಹೊತ್ತು ತಂದವನೊಬ್ಬ

ಏದುತೇದುತ ಹೊರೆಯನಿಳಿಸಿ ಕೂತಿದ್ದ -

ಮುಡಿಯಿಂದಲಡಿಯವರೆಗೆ ಬೆವರು ಹರಿಸಿದ್ದ,

ನಡೆಯಸದಿನಾತ ಬಹಳ ಹಸಿದಿದ್ದ!

“ಆಲಸದೆಯೆ ದಿನವಿಡೀ ದುಡಿದುಡಿದು ಬಂದೆ,

ಎನಿತೆನಿತೊ ಭಾರಗಳನಿದೊ ಹೊತ್ತು ತಂದೆ !

ಶತಸಂಖ್ಯೆಯಲಿ ಪುಟದ ಹೊಟ್ಟೆ ತುಂಬಿಸಿದೆ !

ಸತ್ಯಕೆನ್ನೊಳಗಿನಿಸು ಕರುಣೆ ಬಿಂಬಿಸದೆ?”

ಎಂದೆನಿತೊ ಮಾತುಗಳ ಮಳೆಗರೆದು ಸೋತ,

ಹಸಿವೆ ನೀರಡಿಕೆಯಿಂ ಕಂಗೆಟ್ಟು ಕೂತ!

ಸತ್ಯ, ತುಟಿದೆರೆಯದೆಯೆ, ಮೌನವಾಗಿತ್ತು,

ಸೌಂದರ್ಯ ಕಡೆಗಣ್ಣಿನಿಂದ ನೋಡಿತ್ತು !

೨.

ಗಾಳಿ ಹೂವಿಂದ ಪರಿಮಳವ ತರುವಂತೆ,

ಕಿರುತಂತಿ ಗಾನಶರಧಿಯ ಧರಿಸದಂತೆ,

ಮೋಡ ಮಿಂಚೆಸೆದಂತೆ, ಚಿಂತೆ ನಕ್ಕಂತೆ,

ಬಂದ ಬರಿಗೈಲೊಬ್ಬ ಭಾರ ಹೊತ್ತಂತೆ !

ದಾರಿನಡೆದಾಯಸದ ಮಾತೆತ್ತಲಿಲ್ಲ

ಬಾಯಾರಲಿಲ್ಲವಗೆ ಹಸಿವಡಸಲಿಲ್ಲ.

ಅವನ ಕಣ್ಣೊಳೆ ಸರ್ವಸೃಷ್ಟಿ ಕಂಡಿತ್ತು

ಸರ್ವಜೀವಂಗಳವನೆದೆಯನಪ್ಪಿತ್ತು-

ಅದರು ರಾಶಿಯ ಮುಂದೆ ಸ್ವರ್ಣಕಣವಿತ್ತು !

ಸೌಂದರ್ಯ ಮಿಡಿದಿತ್ತು, ಸತ್ಯ ಹಾಡಿತ್ತು -

“ಸತ್ಯ ಸೂತ್ರದ ಗಾತ್ರ ಎಂದಿಗೂ ಕೆರಿದಂತೆ,

ಪಂಚಭೂತಗಳೆಂತೊ ಪಂಚಲೋಹಗಳಂತೆ,

ಯುಗಯುಗಂಗಳ ಚಕ್ರಪರಿವರ್ತನವನಳೆದು,

ಜಡಜಲಾಗ್ನಿರ್ವಾಯು ರೂಪಂಗಳಂ ಕಳೆದು,

ದಿಕ್ಕಾಲಗಳನೆ ಧಿಕ್ಕರಿಸಿ ನಿಂದಿಹ ತತ್ವ-

ಭೂಗರ್ಭದಲಿ ಕೋಟವತ್ಸರ ತಪಂಗೆಯ್ದು

ತಾಮ್ರ ಕಬ್ಬಿಣ ಬೆಳ್ಳಿ ಬಂಗಾರಗಳ ತೆಯ್ದು

ಹುಟ್ಟುವೊಡೆದಿದೆ ವಜ್ರಪಿಂಡ, ವಿದ್ಯುತ್ಸತ್ವ !”

೩.

ಕತ್ತಲೆಯ ಕೊಡಕೆ ಬೆಳಕಿನ ತೂತು ಹೊಳೆದಂತೆ

ಹೊತ್ತಗೆಯ ಗಿರಿಗೆ ವಜ್ರಸ್ಪರ್ಶವಾದಂತೆ,

ಮಾತಿಲ್ಲದೆಯೆ ಭಾವದೊಳಗಿಳಿದನೊಬ್ಬ !

ಮೌನ ಮಂದಸ್ಮಿತವ ತಳೆದನಿನ್ನೊಬ್ಬ !

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)