‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೦) - ಜಿ.ಪಿ.ರಾಜರತ್ನಂ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೦) - ಜಿ.ಪಿ.ರಾಜರತ್ನಂ

ಜಿ.ಪಿ.ರಾಜರತ್ನಂ ಇವರು ಎಂ ಎ ಪದವೀಧರರು. ಇವರು ತಮ್ಮ “ಯಂಡ್ ಕುಡುಕ ರತ್ನ" ಎಂಬ ಕವನ ಸಂಗ್ರಹದಿಂದ ಹೊಸಗನ್ನಡ ಕಾವ್ಯಲೋಕದಲ್ಲೊಂದು ಹೊಸಹಾದಿ ತೆರೆದು ತೋರಿದ ಕವಿಗಳು. ರಾಜರತ್ನಂ ಇವರು ಮಕ್ಕಳ ಸಾಹಿತ್ಯದಲ್ಲಿ ಅನೇಕ ಪೌರಾಣಿಕ, ಪೌರ್ವಾತ್ಯ-ಪಾಶ್ಚಾತ್ಯ ಕತೆಗಳನ್ನು ಪ್ರಕಟಿಸಿ ಶಿಶು ಸಾಹಿತ್ಯ ಕ್ಷೇತ್ರ ಹಿಗ್ಗಿಸಿದ್ದಾರೆ. ಪಾಲಿ ಭಾಷೆಯಲ್ಲಿ ಪಂಡಿತರಾದ ಇವರು ಅನೇಕ ಪಾಲಿ ಗ್ರಂಥಗಳನ್ನು ಕನ್ನಡಿಸಿದ್ದಾರೆ. ಅನೇಕಾನೇಕ ಪ್ರಬಂಧಗಳು, ಹರಟೆ, ವಿಮರ್ಶೆಗಳನ್ನು ಬರೆದಿದ್ದಾರೆ. ಬೆಂಗಳೂರು ಸೆಂಟ್ರಲ್ ಕಾಲೇಜಿನ ಪ್ರಾಧ್ಯಾಪಕರಾಗಿ ನಿವೃತ್ತಿಹೊಂದಿದ್ದಾರೆ. ರಬಕವಿಯಲ್ಲಿ ನಡೆದ ಕವಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇವರ ಎರಡು ಕವನಗಳು ಈ ಕೃತಿಯಲ್ಲಿವೆ. ಯಂಡದ್ ತೊಂದ್ರೆ ಮತ್ತು ನನ್ ಪುಟ್ನಂಜೀ ರೂಪ. ಇದರಿಂದ ಒಂದು ಕವನವನ್ನು ಆರಿಸಿ ಪ್ರಕಟಿಸಿದ್ದೇವೆ.

ಯಂಡದ್ ತೊಂದ್ರೆ

ಬಿಟ್ಟಿದ್ದೆ ಯೆಂಡ ಅಲ್ಲಿ-

ನೆಟ್ನಿ ಬಂದೆ ಇಲ್ಲಿ

ಎಲೇಲೇಲೇ ರಸ್ತೆ !

ಯೇನು ಅವ್ಯವಸ್ಥೆ !

ಮೈಕೈ ಯೆಲ್ಲ ಮುದುರಿ

ಯಾಕೇ ಕುಣೀತಿ ಕುದರಿ ?

ಕೊಟ್ಟೆಯಲ್ಲ ಗಸ್ತು !

ಕುಡುದಿದ್ದೀಯ ರಸ್ತೆ !

ಚಂದ್ರನ್ ಮುಕವೇಕ್ ಸೊಟ್ಟು?

ಅದ್ದು ಬಲಗಣ್ ಭಟ್ಟು !

ಉಳ್ದಿರೋ ಎಡದಾಗಣ್ಣು !

ಏನೋ ಚಂದ್ರ ! ಪೆಂಗೆ !

ನಾಚ್ಕೆ ಇಲ್ವೆ ನಿಂಗೆ !

ಕೆಟ್ಟದರ್ ಕುಡಿತಾರಂದ್ರೆ

ನಿಂಗ್ಯಾಕ್ ಯೆಂಡದ್ ತೊಂದ್ರೆ?

ನೋಡ್ ಅಲ್ಲಿ ಬೀದಿ ದೀಪ-

ಗಿರ್ಕಿ ವೋಡೀತ್ ಪಾಪ !

ತಿರ್ ತಿರ್ ತಿರ್ ತಿರ್ ತಿರ್ಗ್ತಾ

ತೂರಾಡ್ತದೆ ತೂಗ್ತಾ !

ಇಲ್ಲ್ ಇರೋ ಒಂದಕ್ಕಾನ

ಸೋದೀನ್ ಇಲ್ಲ ಗ್ನಾನ !

ಸಾಲಾಗ್ ನಿಂತವೆ ನಟ್ಟು

ಯೆಂಡ ಕುಡುದ್ಬುಟ್ಟು !

ದೊಡ್ದು ಚಿಕ್ದು ಎಲ್ಲಾ - 

ನೋಡ್ದ ಅವಗೋಳ್ ಗುಲ್ಲ !

ಇವರು ಕುಡದೋರ್ ಮದ್ದ

ನಂಗೆ ಮಾತ್ರ ಸುದ್ದ

ಯಂಡ ಕುಡದೋಳ್ ನಡಮೆ

ನಮಗೆ ಮಾನಕ್ಕಡಮೆ !

ಯೆಂಡದ್ ಅಂಗಡೀಗಾನ

ಅದಕೇ ಇಂತಿರಗೋನ !

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)