“ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೩) - ರಾಮಚಂದ್ರ ವಿನೀತ

“ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೩) - ರಾಮಚಂದ್ರ ವಿನೀತ

ರಾಮಚಂದ್ರ ವಿನೀತ ಇವರು ೧೯೨೭ರಿಂದಲೂ ಕವಿತೆಗಳನ್ನು ರಚಿಸುತ್ತಾ ಬಂದವರು. ಸುಪ್ರಸಿದ್ಧವಾದ ‘ಜಯಕರ್ನಾಟಕ' ಮಾಸ ಪತ್ರಿಕೆ ಮತ್ತು ಗ್ರಂಥಮಾಲೆಗಳ ಸಂಪಾದಕರಾಗಿಯೂ, ಏಕೀಕರಣ ಸಮಿತಿಯ ಕಾರ್ಯದರ್ಶಿಗಳಾಗಿಯೂ ಹೊಸಗನ್ನಡಕ್ಕೆ ವಿಶೇಷ ಸೇವೆ ಸಲ್ಲಿಸಿದವರು. ‘ಕಳೆದುಹೋದ ಪುಟಗಳು' ಎಂಬ ಕವನ ಸಂಗ್ರಹದ ಲೇಖಕರು. ಧಾರವಾಡದಿಂದ ಹೊರಬರುತ್ತಿದ್ದ ‘ಪ್ರದೀಪ' ಎಂಬ ಮಾಸಪತ್ರಿಕೆಯ ಸಂಪಾದಕರಾಗಿ ನಾಡು-ನುಡಿಯ ಸೇವೆ ಮಾಡಿದ್ದಾರೆ. ಇವರು ಉತ್ತಮ ಕಲಾ ವಿಮರ್ಶಕರೂ, ಚಿತ್ರ ಕಲಾವಿದರೂ ಆಗಿದ್ದರು. 

ಇವರ ಒಂದು ಕವನ ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿದೆ. ಉಳಿದಂತೆ ಇವರ ಭಾವಚಿತ್ರವಾಗಲೀ, ಇವರ ಬಗ್ಗೆ ಹೆಚ್ಚಿನ ಮಾಹಿತಿಯಾಗಲೀ ಲಭ್ಯವಿಲ್ಲ. 

ಭಾವದೇವಿ

ಹೊಮ್ಮುತಿಹ ನಿನ್ನ ಕಂಬನಿ ಕಂಡು ಅನಿಸಿತಾ

ರೋಮರೋಮದಿ ನೇತ್ರವರಳುವಂತೆ !

ಬಿರಿದು ಬಿರ್ರನೆ ಹೃದಯ ಧರಿಸಬೇಕೆಂದಿತಾ

ತೆರದಿ ಬಾಯ್ಬಿಡುತಿಹ ಸಿಂಪಿನಂತೆ !

ಮನ್ಮಥನ ಮಾನವನು ತೂಗುತಿಹ ತುಲೆಯೆಂದು 

ಹೆಣ್ಣ ಕಣ್ಗಳನು ತಿಳಿದಂಥ ನಾನು

ಸೌಂದರ್ಯ ಲೋಕಕ್ಕೆ ದಿವ್ಯದ್ವಾರಗಳೆಂಬ

ಎಂದು ಕಾಣದ ಕಣೆಯೆನದೆ ಕಂಡೆನು !

ಈ ಮಧುರ ಭಾವಲೋಕವ ಹೊಕ್ಕು ನೋಡಿದೆನು

ರಾಮಣೀಯಕ ರೂಪರಾಶಿಯನ್ನು !

(-ಅರರೆ ! ನೇಸರ ನಿಲ್ಲದಾರನರ ಸುತ್ತಿಹನೊ!-)

ಇರುಳು ಪೆಣ್ಣಿನ ರಾಣಿವಾಸವನ್ನು !

ಅಕ್ಷಯ್ಯವಾಗಿರ್ದ ನೂತ್ನ ನಕ್ಷತ್ರಗಳ

ಲಕ್ಷ ನಂದಾದೀಪಗಳನು ಇಟ್ಟು

ಆ ಕ್ಷೀಣ ಶಾಂತಿಯಿಂ ಕಲ್ಪಕಲ್ಪಗಳಿಂದ

ಲಕ್ಷ್ಮಿ ಕಾದಿಹಳಲ್ಲಿ ನೋಮ್ಪಿ ತೊಟ್ಟು !

ಆ ಮೌನದಲ್ಲಿಹುದು ಮುನಿಯ ಮೌನದಮಟ್ಟು

ಮಾಯೆಯೆ ಮಾಡುತಿಹ ಕಣ್ಣು ಕಟ್ಟು !

ಭೂತಮಾತ್ರಗಳನ್ನು ಉದ್ಧರಿಸಲವತರಿಪ

ಪ್ರೀತಿ ಮಂದಾಕಿನಿಯ ತೊರೆಯ ಹುಟ್ಟು !

ಹರಳಿಗಿಂತಲೂ ಬಿರುಸು ಹೂವಿಗಿಂತಲೂ ಸರಸು

ಕರುಳು ನಿನ್ನದು, ಕಲ್ಪತರು ಕಲಿಕೆಯೇ !

ಎಂಟನೆಯ ಬಂಟತನ ಮೆಲ್ಲೆದೆಯ ಮೆಲ್ಲತನ

ಉಂಟು ನಿನಗುಂಟೆನ್ನ ಚೆಂಗಳಿಕೆಯೇ !

ಸತ್ಯಸತ್ಯದಿ ಜೀವಸರ್ವಸ್ವವನು ತೊರೆದಿ !

-ನಿತ್ಯವಿದು ನನ್ನ ಮಾನಸದ ನೆಚ್ಚು 

ದಕ್ಷಯಾಗಾಗ್ನಿಯೊಳು ಮೈಯ ಮುಡುಪನ್ನೊಗೆದ

ದಕ್ಷಸುತೆ ಸತಿಗಿಂತ ನೀನೆ ಹೆಚ್ಚು !

***

ಭಾವ ನಿಮಿಷಗಳಲ್ಲಿ ಮಿಂಚಿಮಿನುಗುವ ನಿನ್ನ 

ಭಾವಮೂರ್ತಿಯ ಜೀವಮೂರ್ತಿಯಾಗಿ

ನನ್ನ ಕಣ್ಣಾಲಿಯೊಳ ಹೊರಗು ಕುಣಿಕುಣಿಯಲಾ

ಜನ್ಮ ಜನ್ಮದ ಜೀವಧಾತ್ರಿಯಾಗಿ !

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)