2024 ರ ಸ್ವಾಗತಕ್ಕೆ ಮಾನಸಿಕ ಸಿದ್ದತೆ...

2024 ರ ಸ್ವಾಗತಕ್ಕೆ ಮಾನಸಿಕ ಸಿದ್ದತೆ...

2023 ರ ಕೊನೆಯ ಡಿಸೆಂಬರ್ ತಿಂಗಳು ಪ್ರವೇಶಿಸುತ್ತಿದ್ದೇವೆ. ಎಷ್ಟು ಬೇಗ ದಿನಗಳು  ಉರುಳುತ್ತಿವೆ ಎಂಬ ಭಾವನೆ ಹಾಗೆ ಸುಮ್ಮನೆ ಮನಸ್ಸಿನ ಮೂಲೆಯಲ್ಲಿ ಹಾದು ಹೋಗುತ್ತದೆ. 2020-21 ರಲ್ಲಿ ನಮ್ಮನ್ನು ಕಾಡಿದ ಕೋವಿಡ್ ವೈರಸ್, ಅನೇಕರಲ್ಲಿ ಅವರ ಆತ್ಮೀಯರು ಮತ್ತು ಪ್ರೀತಿ ಪಾತ್ರರನ್ನು  ಕಳೆದುಕೊಂಡ ನೆನಪು ಇನ್ನೂ ಹಸಿರಾಗಿರುವಾಗಲೇ, ಮತ್ತೆ ಕೆಲವರು ಅದನ್ನು ಮರೆತು ಮೊದಲಿಗಿಂತ ಹೆಚ್ಚು ವೇಗವಾಗಿ ಬದುಕಿನ ಬಂಡಿಯಲ್ಲಿ ಚಲಿಸುತ್ತಿದ್ದಾರೆ.

ಜೀವನ ಪಯಣದಲ್ಲಿ ಯಾರಿಗೆ ಯಾರೂ ಅನಿವಾರ್ಯವಲ್ಲ ಎಂಬುದು ನಿಜ.‌ ಪ್ರತಿಯೊಬ್ಬರು ಪ್ರತ್ಯೇಕ ಅಸ್ತಿತ್ವವನ್ನು ಹೊಂದಿದ್ದಾರೆ. ಆದರೆ ಮನುಷ್ಯ ಸಮಾಜ ಭಾವನಾತ್ಮಕವಾಗಿ ಕೆಲವು ಸಂಬಂಧಗಳನ್ನು ಬೆಸೆದಿದೆ. ಅದರ ಪರಿಣಾಮ ನಾವು ಸಹ ಇಲ್ಲವಾಗಬಹುದು ಎಂಬ ಅರಿವಿದ್ದರು ನಮ್ಮವರ ಶಾಶ್ವತ ಅಗಲಿಕೆ ನಮಗೆ ತುಂಬಲಾರದ ನಷ್ಟ ಎಂಬುದು ವಾಸ್ತವ.

ಅದೇ ಸಮಯದಲ್ಲಿ ಕೇವಲ ಎರಡು ವರ್ಷಗಳ ಹಿಂದೆ ಕಾಡಿದ ಬದುಕಿನ ನಶ್ವರತೆಯ ಭಾವ ನಿಧಾನವಾಗಿ ಕಡಿಮೆಯಾಗಿ ಅನೇಕರಲ್ಲಿ ಮತ್ತೆ ಜೀವನೋತ್ಸಾಹ ಉಕ್ಕಿಸುತ್ತಿದೆ. ವ್ಯಾಪಾರ ವ್ಯವಹಾರಗಳು, ಪ್ರವಾಸಗಳು ಹೆಚ್ಚಾಗುತ್ತಿವೆ. ಮದುವೆ, ಗೃಹ ಪ್ರವೇಶಗಳ ಸಂಭ್ರಮವನ್ನು ಕಾಣಬಹುದು. ಇದನ್ನು ಮೀರಿ ಸಮಾಜದ ದಿನನಿತ್ಯದ ಜೀವನದಲ್ಲಿ ಹೆಚ್ಚು ವೇಗವನ್ನು ಕಾಣಬಹುದಾಗಿದೆ. ಕೊರೋನಾ ಸಮಯದಲ್ಲಿ ಬಹುತೇಕ ಸ್ಥಭ್ದವಾಗಿದ್ದ ಬದುಕು ಕೇವಲ ಎರಡೇ ವರ್ಷಗಳಲ್ಲಿ ತನ್ನ ಹಿಂದಿನ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸುತ್ತಿರುವುದು ಮನುಷ್ಯ ವರ್ತಮಾನದ ಸನ್ನಿವೇಶಕ್ಕೆ ಬೇಗ ಹೊಂದಾಣಿಕೆ ಮಾಡಿಕೊಳ್ಳುವ ಗುಣವನ್ನು ಬೆಳೆಸಿಕೊಂಡಿರುವುದೇ ಕಾರಣವಾಗಿದೆ.

ಬದುಕಿನ ಚಲನಶೀಲತೆ ವಿಸ್ಮಯವನ್ನು ಉಂಟುಮಾಡುತ್ತದೆ. ‌ಮನಸ್ಸಿನ ಚಂಚಲತೆ ಪ್ರತಿ ಕ್ಷಣದ ಪ್ರತಿಕ್ರಿಯೆಗಳನ್ನು ಹೇಗೆ ರೂಪಿಸುತ್ತದೆ ಎಂಬುದು ಅತ್ಯಂತ ಕುತೂಹಲಕಾರಿ ಸಂಗತಿಯಾಗಿದೆ. ಅಪರೂಪದ ಕೆಲವು ಸಾಧಕರ ಸಂಕಲ್ಪವನ್ನು ಹೊರತುಪಡಿಸಿದರೆ ಉಳಿದ ಸಾಮಾನ್ಯ ಜನರು ಬದಲಾಗುವ ಪ್ರಕ್ರಿಯೆ ಮಾನವ ಸಮಾಜ ಇಷ್ಟೊಂದು ದೀರ್ಘ ಮತ್ತು ಬೃಹತ್ ಪ್ರಮಾಣದಲ್ಲಿ ಬೆಳವಣಿಗೆ ಹೊಂದಲು ಕಾರಣವಾಗಿದೆ.

ವೈಯಕ್ತಿಕ ಮಟ್ಟದಲ್ಲಿ ಏಕಾಂತವಾಗಿ ಕಾಡುವ ಅನಾಥ ಪ್ರಜ್ಞೆ ಅಥವಾ ನೋವಿನ ಪ್ರಜ್ಞೆ ಅಥವಾ ಅರಿವಿನ ಪ್ರಜ್ಞೆ ಅಥವಾ ಸಮಾಧಾನ ಪ್ರಜ್ಞೆ ಸಾಮೂಹಿಕ ಸಮುದಾಯದ ಪ್ರಜ್ಞೆಯಾಗಿ ನೋಡಿದಾಗ ಅಲ್ಲಿ ಸಮಾಜದೊಂದಿಗಿನ ಹೋಲಿಕೆ, ಸಂಘರ್ಷ, ಸಮನ್ವಯ, ಅಸಹಾಯಕತೆ ಸ್ವಲ್ಪ ಭಿನ್ನವಾಗಿರುತ್ತದೆ. ಮನಸ್ಸಿನ ಬದಲಾವಣೆಯ ಪ್ರಕ್ರಿಯೆ ನಾವು ವಾಸಿಸುವ ಸಮಾಜದ ಗುಣಲಕ್ಷಣಗಳನ್ನು ಅವಲಂಬಿಸಿರುತ್ತದೆ. ಬದುಕಿದರೆ ಸಾಕು ಎನ್ನುವ ಆ ಕ್ಷಣದ ಅನಿಸಿಕೆ, ಅದರ ನಂತರ ಮತ್ತೊಂದರತ್ತ ಚಲಿಸುವ ಪ್ರಕ್ರಿಯೆಯಲ್ಲಿ ದಿನಗಳು, ವರ್ಷಗಳು ಉರುಳುತ್ತಿವೆ. ವೇಗ ವರವಾದಂತೆ ಶಾಪವೂ ಆಗಿದೆ. ಬದುಕನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ. ಹಾಗೆಯೇ ಬದುಕಿನ ನೋವು ತೀವ್ರವಾಗಿ ಕಾಡದಂತೆ ವೇಗ ಮರೆಮಾಚುತ್ತಿದೆ.

ಇನ್ನೇನು ಕೆಲವೇ ದಿನಗಳಲ್ಲಿ 2023 ಕ್ಕೆ ವಿದಾಯ ಹೇಳಿ 2024 ಕ್ಕೆ ಸ್ವಾಗತ ಕೋರುವ ಸಮಯ. ಈ ವರ್ಷ ಪ್ರಕೃತಿ ಮುನಿಸಿಕೊಂಡು ಅಕಾಲಿಕ ವಾತಾವರಣ ಸೃಷ್ಟಿಸಿದೆ. ಜಗತ್ತಿನ ಸಂಘರ್ಷಗಳು ಹೆಚ್ಚಾಗುತ್ತಿವೆ. ಈ ಮಧ್ಯೆ ಬದುಕಿನ ಗುಣಮಟ್ಟ ಹೆಚ್ಚಿಸಿಕೊಳ್ಳುವ ಮತ್ತು ಮುಂದಿನ ಪೀಳಿಗೆಗೆ ಒಂದಷ್ಟು ಒಳ್ಳೆಯ ವಾತಾವರಣ ಸೃಷ್ಟಿಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. 2024 ರಲ್ಲಿ ಬದುಕಿನ ವೇಗ ಸ್ವಲ್ಪ ಕಡಿಮೆಯಾಗಿ, ನೆಮ್ಮದಿಯ ಗುಣಮಟ್ಟ ಹೆಚ್ಚುವಂತಾಗಲಿ ಎಂದು ಆಶಿಸುತ್ತಾ...

-ವಿವೇಕಾನಂದ ಎಚ್ ಕೆ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ