ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು

ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು

ಡಿ ಎಸ್ ನಾಗಭೂಷಣ್ ರವರ ಲೇಖನ (ಪ್ರ ವಾ ಜುಲೈ16) ತುಂಬಾ ಸಮಯೋಚಿತ ಮತ್ತು ಸೂಕ್ತ ವಾಗಿದೆ. ಲೇಖಕರು ತಿಳಿಸಿದಂತೆ ಬಿ ಎಸ್ ಆರ್ ಬಿ ಮೂಲಕ 1980 ರಲ್ಲಿ ಸುಮಾರು 250 ಕೃಷಿ ಅಧಿಕಾರಿಗಳಾಗಿ ಆಗಿನ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಗೆ ನೇಮಕಗೊಂಡಿದ್ದೆವು.
ಎಲ್ಲರೂ ಕರ್ನಾಟಕದಿಂದ ಮತ್ತು ಕರ್ನಾಟಕದಲ್ಲೇ ಉದ್ಯೋಗಕ್ಕೆ ಸೇರಿದ್ದೆವು. ಎಲ್ಲರೂ ಈಗ 2015 ಮತ್ತು 2016 ರಲ್ಲಿ ನಿವೃತ್ತಿಯಾದೆವು. ನಂತರ 1982, 84,  86 ವರ್ಷಗಳಲ್ಲೂ ಇದೇ ರೀತಿಯ ನೇಮಕಾತಿಗಳು ಆಗಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ದಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ನೇಮಕಾತಿಗಳು ಆಗದೆ ಉತ್ತರ ಪ್ರದೇಶ , ಬಿಹಾರ್, ಆಂಧ್ರ, ಕೇರಳ ರಾಜ್ಯಗಳಿಂದ ಅಧಿಕಾರಿ ವರ್ಗಕ್ಕೆ ನೇಮಕರಾಗಿ ನಮ್ಮ ರಾಜ್ಯಕ್ಕೆ ಅದರಲ್ಲೂ ಗ್ರಾಮೀಣ ಶಾಖೆಗಳಿಗೆ ನಿಯುಕ್ತರಾಗುತ್ತಿದ್ದಾರೆ. ಆದ್ದರಿಂದ ಗ್ರಾಹಕರ ಜೊತೆ ವ್ಯವಹರಿಸುವಾಗ ಭಾಷೆಯ ಸಮಸ್ಯೆ ಬರುತ್ತದೆ. ಅವರು ಕಷ್ಟಪಟ್ಟೋ ಅಥವಾ ಇಷ್ಟಪಟ್ಟೋ ಕನ್ನಡ ಕಲಿಯುವಷ್ಟರಲ್ಲಿ 2-3 ವರ್ಷ ಆಗಿ ಅವರೆಲ್ಲರೂ ತಮ್ಮ ತಮ್ಮ ಸ್ವರಾಜ್ಯಗಳಿಗೆ ಹೋಗುತ್ತಾರೆ. ಮತ್ತೆ ಹೊಸಬರು ಬಂದರೆ ಇದೇ ಪುನರಾವರ್ತನೆಯಾಗುತ್ತದೆ.
ಆದ್ದರಿಂದ ಲೇಖಕರು ತಮ್ಮ ಲೇಖನದಲ್ಲಿ ತಿಳಿಸಿದಂತೆ ಸಾರ್ವಜನಿಕ ಸೇವಾ ವಲಯಗಳಲ್ಲಿ ನೇಮಕಾತಿ ಮಾಡುವಾಗ ಆಯಾ ರಾಜ್ಯವಾರು ಪರೀಕ್ಷೆಗಳನ್ನು ಮಾಡಿ ಆಯ್ಕೆ ಮಾಡುವುದು ಒಂದು ಪರಿಹಾರ.
ಎರಡನೆಯದಾಗಿ ನಮ್ಮ ರಾಜ್ಯದ ಯುವಕರು
ಐ ಟಿ   ಬಿ ಟಿ ಕಡೆಗೇ ಒಲವನ್ನು ತೋರಿಸುವುದು ಇನ್ನೊಂದು  ಸಮಸ್ಯೆ. ಬಿ ಎ, ಬಿ ಎಸ್ಸಿ, ಬಿ ಕಾಂ ಪದವೀಧರರೂ ಸಹ  ಕಡಿಮೆ ವೇತನವಾದರೂ ಸರಿ ಐ ಟಿ / ಬಿ ಟಿ ಗೆ ಸೇರಲು ಬಯಸುತ್ತಾರೆ ಮತ್ತು ಬೆಂಗಳೂರು ಮೈಸೂರು ನಗರದಲ್ಲೇ ಇರ ಬಯಸುತ್ತಾರೆ.
ಈ ಪ್ರವೃತ್ತಿ ಬದಲಾಯಿಸಿ ಒಳ್ಳೆಯ ತರಬೇತಿ ಮತ್ತು ತಯಾರಿ ನಡೆಸಿ ಪರೀಕ್ಷೆ ಎದುರಿಸಿದರೆ ನಮ್ಮ ಹುಡುಗರೂ ಈ ಕ್ಷೇತ್ರಗಳಲ್ಲಿ ನೌಕರಿಗೆ ಸೇರಬಹುದು. ನಮ್ಮ ಹುಡುಗರು ಬೇರೆ ರಾಜ್ಯದ ಯುವಕರಿಗಿಂತ ಕಡಿಮೆ ಏನಿಲ್ಲ. ಅಲ್ಲದೆ ಈ ಕ್ಷೇತ್ರಗಳಲ್ಲಿ ಯಶಸ್ವಿ ಆಗಲು ಬುದ್ಧಿವಂತಿಕೆಗಿಂತಲೂ ಶ್ರದ್ದೆ ನಿಷ್ಠೆ ಮತ್ತು ಆಸಕ್ತಿಯ ಅಗತ್ಯವಿದೆ.

Rating
Average: 4 (2 votes)