ಉಡುಗೊರೆಯ ಆಯ್ಕೆ.

ಉಡುಗೊರೆಯ ಆಯ್ಕೆ.

ಶುಭ ದಿನಗಳಲ್ಲಿ ಉಡುಗೊರೆ ವಿನಿಮಯ ಮಾಡಿಕೊಳ್ಳವುದು ಸಂತಸದ ವಿಚಾರ ಹಾಗೆಯೇ ಪ್ರಾಚೀನದಿಂದಲೂ ನಡೆದುಕೊಂಡು ಬರುತ್ತಿರುವ ಪದ್ದತಿ ಕೂಡಾ. ಇತ್ತೀಚೆಗಂತೂ ಇದು ಫ್ಯಾಶನ್‌, ಸ್ಟೇಟಸ್ ಇತ್ಯಾದಿ ಹೆಸರುಗಳನ್ನು ಪಡೆದುಕೊಂಡಿದೆ. ನಾವು ನಮ್ಮ ಪ್ರೀತಿ ಪಾತ್ರರರಿಗೆ ಅವರ ಜೀವನದ ಶುಭ ಘಳಿಗೆ, ಶುಭ ದಿನಗಳಲ್ಲಿ ನಮ್ಮ ನೆನಪಿನ ಕಾಣಿಕೆಯಾಗಿ ಅವರಿಗಿಷ್ಟವಾಗಿರುವ ಒಂದು ವಸ್ತುವನ್ನು ನೀಡುವುದು. ನಾವು ನೀಡುವ ಉಡುಗೊರೆ ಇಬ್ಬರ ನಡುವಿನ ಸ್ನೇಹ, ಪ್ರೀತಿ, ವಿಶ್ವಾಸ, ನಂಬಿಕೆಗಳ ದ್ಯೋತಕವಾಗಿರುತ್ತದೆ.
ಉಡುಗೊರೆಯ ಆಯ್ಕೆ:
* ನಾವು ಆಯ್ಕೆ ಮಾಡಿಕೊಳ್ಳುವ ಉಡುಗೊರೆಗಳು ಕೊಡುವ ವ್ಯಕ್ತಿಗಳಿಗೆ ಪ್ರಿಯವಾಗುವಂತಿರಬೇಕು.
* ಉಡುಗೊರೆಗಳು ದೀರ್ಘಕಾಲ ಬಾಳಿಕೆ ಬರುವಂತವಾದರೆ ಪಡೆದುಕೊಂಡ ವ್ಯಕ್ತಿಗೆ ಹೆಚ್ಚು ಸಂತೋಷವನ್ನು ಉಂಟುಮಾಡುತ್ತವೆ.
* ಮಕ್ಕಳು ತಮ್ಮ ಪೋಷಕರಿಗೆ ನೀಡುವುದಾದರೆ, ವಸ್ತ್ರ, ದೇವತಾರಾಧನೆಯ ವಸ್ತುಗಳು, ಮನೆಬಳಕೆಯ ವಸ್ತುಗಳು ಅವರಿಗೆ ಇಷ್ಟವಾದವುಗಳು, ಸ್ಥಿತಿವಂತರಾದರೆ ವಾಹನಗಳ ಉಡುಗೊರೆಯನ್ನೂ ಕೊಡಬಹುದು. ಆದರೆ ಮಕ್ಕಳು ಪ್ರೀತಿಯಿಂದ ಏನನ್ನು ನೀಡಿದರೂ ಅದನ್ನು ಸಂತೋಷದಿಂದ ಸ್ವೀಕರಿಸುವ ಮನಸ್ಸು ಪೋಷಕರದ್ದು.
* ಸ್ನೇಹಿತರಿಗೆ ಕೊಡುವ ಉಡುಗೊರೆಗಳಾದರೆ ಅವರವರ ಅಭಿರುಚಿಗೆ ತಕ್ಕಂತೆ ಇದ್ದರೆ ಒಳ್ಳೆಯದು. ದಿನಬಳಕೆಯ ವಸ್ತುವಾಗಿದ್ದರೆ ಅದರಿಂದಾಗುವ ಸಂತೋಷವೇ ಬೇರೆ. ಏಕೆಂದರೆ ನಾವು ಕೊಡುವ ಉಡುಗೊರೆಗಳು ನಮ್ಮ ಪ್ರತಿಬಿಂಬಗಳಾಗಿರುತ್ತವೆ.
* ಕಲಾತ್ಮಕ ಉಡುಗೊರೆಗಳು ಹೆಚ್ಚಾಗಿ ಎಲ್ಲರಿಗೂ ಪ್ರಿಯವಾದಂತವುಗಳು.
* ಮದುವೆ ಸಮಾರಂಭಗಳಲ್ಲಾದರೆ ವಸ್ತ್ರ ಅಥವಾ ಮನೆಬಳಕೆಯ ವಸ್ತುಗಳು ಹೆಚ್ಚಾಗಿ ಸೂಕ್ತ.
* ಪುಟ್ಟ ಮಕ್ಕಳಿಗಾದರೆ ಆಟದ ವಸ್ತುಗಳು ಹೆಚ್ಚು ಪ್ರಿಯವಾಗುತ್ತವೆ.
        ಉಡುಗೊರೆಗಳು ಇಂದಿನ ದಿನಗಳಲ್ಲಿ ಪ್ರತಿಷ್ಠೆಯ ವಿಷಯವಾಗಿಯೂ ಗೋಚರಿಸುತ್ತಿರುವುದನ್ನು ನಾವು ಕಾಣಬಹುದು. ವ್ಯಕ್ತಿಯ ಸಾಮಾಜಿಕ ಅಂತಸ್ತು, ಘನತೆ, ಗೌರವಗಳ ಸಂಕೇತವಾಗಿ ದುಬಾರಿ ಬೆಲೆಯ ವಸ್ತುಗಳನ್ನೇ ಹೆಚ್ಚಾಗಿ ಆಯ್ಕೆಮಾಡಿಕೊಳ್ಳುವವರೂ ಇದ್ದಾರೆ. ಆದರೆ ಸಂಬಂಧಗಳು ಚೆನ್ನಾಗಿದ್ದು ಪ್ರೀತಿಯಿಂದ ಒಂದು ಪುಟ್ಟ ಪೆನ್‌, ದೇವರ ವಿಗ್ರಹವೋ ಕೊಟ್ಟರೂ ಅತ್ಯಂತ ಸಂತೋಷವಾಗುತ್ತದೆ. ಕೊಡುವ ಮನಸ್ಸಿನ ಭಾವನೆ ನಿಷ್ಕಲ್ಮಷವಾಗಿದ್ದಾಗ ಮಾತ್ರ.
     ನಾವು ಉಡುಗೊರೆ ಕೊಡಬೇಕಾಗಿರುವ ವ್ಯಕ್ತಿಗಳು ಪರಿಸರ ಪ್ರೇಮಿಗಳಾಗಿದ್ದರೆ ಅವರಿಗೆ ಒಂದು ಪುಟ್ಟ ಸಸಿಯನ್ನು ನೀಡಿ, ಅವರಿಗದು ತುಂಬಾ ಪ್ರಿಯವಾಗಿರುತ್ತದೆ. ಓದಿನಲ್ಲಿ ಹೆಚ್ಚು ಆಸಕ್ತಿ ಇರುವವರಾದರೆ ಅಥವಾ ವಿದ್ಯಾರ್ಥಿಗಳಾದರೆ ಒಂದು ಪುಸ್ತಕವನ್ನು ನೀಡಬೇಕು. ಅವರಿಗಾಗುವ ಆನಂದವನ್ನು ಹೇಳಲಸಾಧ್ಯ. ಒಂದು ಸಸಿಯನ್ನು ಉಡುಗೊರೆ ನೀಡಿದರೆ ಅದನ್ನು ಪಡೆದುಕೊಂಡ ವ್ಯಕ್ತಿಗೆ ಮಾತ್ರವಲ್ಲದೆ ಆ ಪರಿಸರಕ್ಕೂ ಉಪಕಾರಿಯಾದಂತಾಗುತ್ತದೆ. ತಾತ್ಕಾಲಿಕ ಉಡುಗೊರೆಗಳಿಗಿಂತ ಸಸಿಯನ್ನು ಕೊಟ್ಟರೆ ಶಾಶ್ವತ ಹಾಗೂ ಪರಿಸರವನ್ನೂ ಉಳಿಸಿ, ಬೆಳೆಸಿದಂತಾಗುತ್ತದೆ.

Comments

Submitted by venkatb83 Sun, 12/02/2012 - 16:56

ನಾವ್ ಕೊಟ್ಟ ಉಡುಗೊರೆಯೇ ನಮಗೆ ವಾಪಾಸ್ಸು ಬಂದರೆ ಹೇಗಾದೀತು?? ಈ ತರಹದ ಹಲವು ಅನುಭವ ಈಗಾಗ್ಲೇ ಕೆಲವು ಸಂದರ್ಭಗಳಲಿ ನಮಗೆ ಆಗಿದೆ..!! ನೀವು ಕೊನೆಯಲಿ ಹೇಳಿದ ಹಾಗೆ ಸಸಿ ಕೊಡುವುದು ಒಳ್ಳೆಯ ಸಂಪ್ರದಾಯ-ಹಾಗೆ ಜರೂರತ್ತು ಕೂಡ. ಆದರೆ ಅದನ್ನು ಪಡೆದವರು ನೀರು ಗೊಬ್ಬರ ಹಾಕಿ ಹೆಮ್ಮರ ಮಾಡಬೇಕಲ್ಲ.! ಉತ್ತಮ ಬರಹ. ಶುಭವಾಗಲಿ.. \|