ರಸ್ತೆಯೆಂದರೆ

ರಸ್ತೆಯೆಂದರೆ

ಕವನ

ರಸ್ತೆಯೆಂದರೆ

ಡಾಂಬರು ಸವೆದ ಕಣ್ಣಿಗೆ ರಾಚುವ ಕಲ್ಲುಮಣ್ಣು
ಕೆಕ್ಕರಿಸಿ ಬಾಯ್ಬಿಡುವ ಸಣ್ಣ ಹಳ್ಳಗಳ ಹುಣ್ಣು
ಕೆನ್ನೆ ಊದಿಸಿಕೊಂಡ ಯಾಮಾರಿ ಉಬ್ಬು
ಗೌನು ಹೊದ್ದು ಬಚ್ಚಿಟ್ಟು ಮಲಗಿದ ಹೆಬ್ಬಾವು

ರಸ್ತೆಯೆಂದರೆ
ಇಕ್ಕೆಲವು ನುಂಗಿರುವ ಪಾದಚಾರಿಗಳ ಮಾರ್ಗ
ಕಾಲೂರೆ ಬೇಕು ಸಕಲಕಲಾ ವಲ್ಲಭರ ವರ್ಗ
ಅಡಿಗಡಿಗೆ ಧ್ವಜವಿಟ್ಟಂತೆ ಫಲಕಗಳೆ ತುಂಬ
ಅಡ್ಡ ಮೂಳೆಯ ಮಧ್ಯೆ ತಲೆಬುರುಡೆ ಬಿಂಬ

ರಸ್ತೆಯೆಂದರೆ
ಅಚಾನಕ ಬರುವ ಚಾಲಾಕು ಬರಸಿಡಿಲ ತಿರುವು
ಚಾಣಾಕ್ಷತೆಗೆ ಸವಾಲಾಗುವ ತಿರುವು ಮುರುವು
ಜನರ ಬೆನ್ನೆಲುಬುಗಳ ಪುಡಿಗುಡುವ ಸರದಾರ
ಜೀವಗಳ ಜೊತೆಯಲ್ಲಾಡುವ ಅತಿ ಮೋಜುಗಾರ

ರಸ್ತೆಯೆಂದರೆ
ಸರ್ಕಾರ ಮಂಡಿಸುವ ಸಕಲ ವೆಚ್ಚದ ವರದಿ
ಕಮಾಯಿಸುವವರಿಗೆ ಹರಣವಾಗದ ಹಣದ ಹಾದಿ
ವಿರೋಧ ಪಕ್ಷಕ್ಕೊದಗುವ ಹೋರಾಟದ ಕೊಂಡಿ
ಸುಲಭ ಹೆರಿಗೆಗೆ ಸಹಾಯ ಇಲ್ಲಿ ಏರಿದರೆ ಬಂಡಿ

ರಸ್ತೆಯೆಂದರೆ
ಮಳೆಗಾಲದಲ್ಲಿ ಉಪನದಿಯಾಗಿಬಿಡುವ ಮಾಯಾವಿ
ಬೇಸಿಗೆ ಬಿರುಬಿಸಿಲಿಗೆ ಕುದಿದು ಕಾಡುವ ಕಡುಕೋಪಿ
ಗುಳೆ ಬಂದ ಜನಗಳಿಗೆ ದಿನಗೂಲಿ ಕೊಡುವ ಕರುಣಿ
ವ್ಯವಸ್ಥೆಯೊಡನೆ ಕಪ್ಪಾಗಿ ಉಳಿವ ನಿಷ್ಕಪಟ ರೂಪಿ

                                                   - ಅನಂತ ರಮೇಶ್

ಚಿತ್ರ್

Comments

Submitted by swara kamath Wed, 09/17/2014 - 16:25

ಹೌದು, ಹಾಗೆನೆ

 ರಸ್ತೆ ಎಂದರೆ ,

 ಬೀಡಾಡಿ ಹಸುಕರುಗಳು ವಿಶ್ರಾಂತಿ ಪಡೆಯುವ ತಾಣ

 ಪಡ್ಡೆ ಯುವಕರು ಹೆಣ್ಣುಮಕ್ಕಳನ್ನು ಚುಡಾಯಿಸಿ ನಗುವ ಜಾಗ

 ಹೀಗೆ ಬರೆಯುತ್ತಾ ಹೋಗಬಹುದು. 

ಅರ್ಥಗರ್ಬಿತವಾದ ಕವನ ಓದಲು ಮುದಕೊಡುತ್ತದೆ ಹಾಗೆಯೆ ನಮ್ಮ ರಸ್ತೆಗಳ ಅವ್ಯವಸ್ತೆಯ ಬಗ್ಗೆ ಹಿಡಿದ  ಕನ್ನಡಿಯಾಗಿದೆ. .... ವಂದನೆಗಳು ಅನಂತ ರಮೇಶರೆ                                                     ರಮೇಶ ಕಾಮತ್

Submitted by Anantha Ramesh Wed, 09/17/2014 - 17:16

ಹೌದು..ರಸ್ತೆಯ ಬಗೆಗೆ ಮುಗಿಯದಷ್ಟು. ಓದಿ ನಿಮ್ಮ ಸದಭಿಪ್ರಾಯ ತಿಳಿಸಿದ್ದಕ್ಕೆ ವಂದನೆಗಳು.