ಪಶ್ಚಾತ್ತಾಪ

ಪಶ್ಚಾತ್ತಾಪ

ಬರಹ
ತುಂಡ ಅಂತ ರವಿಯ ಮನೆಯಲ್ಲಿ ಎಲ್ಲರೂ ಅವನನ್ನು ಕರೆಯುತ್ತಿದ್ದರು. ಅದಕ್ಕೊಂದು ಹಿನ್ನೆಲೆ ಇದೆ. ಅವನು ಯಾವಾಗಲೂ ಬೌಲಿಂಗ್ ಮಾಡ್ತಾ ಇರ್ತಿದ್ದ. ಅಂಗಡಿಗೆ ಹೋಗಿ ಏನಾದರೂ ತೆಗೆದುಕೊಂಡು ಬಾ ಅಂತ ಅಂದ್ರೆ ಬೌಲಿಂಗ ಮಾಡಿಕೊಂಡೇ ಹೋಗ್ತಿದ್ದ. ಸ್ಕೂಲಿಗೆ ಹೋಗುವಾಗಲೂ ಹಾಗೇ. ನೀನು ದೊಡ್ಡವನಾದ್ಮೇಲೆ ಏನಾಗ್ತೀಯೋ ಅಂತ ಯಾರಾದ್ರೂ ಕೇಳಿದ್ರೆ - ಚಂದ್ರಶೇಖರ್ ಥರ ಬೌಲರ್ ಆಗ್ತೀನಿ ಅಂತಿದ್ದ. ಅದಕ್ಕೇ ಅವರಣ್ಣ ಇವನನ್ನು ರೇಗಿಸಲು ಚಂದ್ರುವಿನ ತುಂಡು ಅಂತ ಕರೆಯುತ್ತಿದ್ದ. ಹಾಗೇ ತುಂಡ ಅನ್ನೋ ಅಡ್ಡ ಹೆಸರು ನಿಂತು ಹೋಯ್ತು. ಇನ್ನು ಅವನು ಎಂದೂ ನಡೆದವನೇ ಅಲ್ಲ. ಅದೇನು ಪೂರ್ವ ಜನ್ಮದ ವಾಸನೇಯೋ ಏನೋ. ನಾಯಿ ಥರಹ ಯಾವಾಗಲೂ ಓಡುತ್ತಲೇ ಇರುತ್ತಿದ್ದ. ಇಂಥಹ ಮೂರನೆಯ ತರಗತಿಯ ಹುಡುಗ ನನ್ನ ಕಥಾವಸ್ತು. ಈ ತುಂಡ ಅಣ್ಣನಿಗೆ ಬಲು ಪ್ರೀತಿಯ ತಮ್ಮ. ಏಕೆ ಗೊತ್ತೇ? ಆ ಅಣ್ಣನಿಗೆ ಗೋಳಾಡಿಸಲು ಬೇರೆ ಇನ್ಯಾರೂ ಸಿಗ್ತಿರ್ಲಿಲ್ಲ. ಇನ್ನು ಅಮ್ಮ ಇವನ ತರ್ಲೆ ಕಡಿಮೆ ಮಾಡೋಕ್ಕೆ ಅಂತ ಅಣ್ಣನ ಸುಪರ್ದಿಗೆ ಬಿಟ್ಟಿದ್ದಳು. ಅಣ್ಣ ಬಿ.ಎಸ್.ಸಿ. ಓದುತ್ತಿದ್ದ. ಅವನ ರೂಮಿನಲ್ಲೇ ಇವನು ಅಭ್ಯಾಸ ಮಾಡ್ಬೇಕು. ಅಣ್ಣನ ತರ್ಲೆ ಅನುಭವಿಸ್ದೇ ಇದ್ರೆ, ಉಳಿಗಾಲವೇ ಇಲ್ಲ ಅನ್ನೋದು ತುಂಡನಿಗೆ ಮನವರಿಕೆಯಾಗಿ ಹೇಗೋ ಸಾವರಿಸಿಕೊಂಡು ಇದ್ದ. ಇಂತಹ ಸನ್ನಿವೇಶದಲ್ಲಿ ನಡೆದ ಒಂದು ಘಟನೆ ನಿಮ್ಮ ಮುಂದೆ ಇಡುತ್ತಿರುವೆ. ತುಂಡ ಓದುತ್ತಿದ್ದದ್ದು ಚಾಮರಾಜನಗರದಿಂದ ೩ ಮೈಲು ದೂರದ ಹರದನಹಳ್ಳಿ ಎಂಬ ಹಳ್ಳಿಯ ಸರಕಾರೀ ಶಾಲೆಯಲ್ಲಿ. ಈ ತುಂಡ ಅಲ್ಲಿ ೩ನೇ ತರಗತಿಯಲ್ಲಿ ವಿದ್ಯಾರ್ಥಿ. ಅಲ್ಲಿ ನಿತ್ಯ ಮಧ್ಯಾಹ್ನದೂಟದ ಏರ್ಪಾಡಾಗಿತ್ತು. ಅದಕ್ಕೆಂದೇ ಬಹಳ ಮಕ್ಕಳು ಶಾಲೆಗೆ ಬರುತ್ತಿದ್ದರು. ತುಂಡನೂ ಒಂದು ಖಾಲೀ ಡಬ್ಬ ತೆಗೆದುಕೊಂಡು ಹೋಗುತ್ತಿದ್ದ. ಶಾಲೆಯಲ್ಲಿ ಕೊಡುವ ತಿಂಡಿಯನ್ನು ಮನೆಗೆ ತಂದು ಎಲ್ಲರೊಂದಿಗೆ ಹಂಚಿ ತಿನ್ನಲು. ಅವನ ತರಗತಿಯಲ್ಲಿ ಎಲ್ಲ ವಿಷಯಗಳನ್ನೂ ಬೋಧಿಸುತ್ತಿದ್ದವರು ಸಣ್ಣಪ್ಪ ಮಾಸ್ತರು. ನೀಳ ಕಾಯದ ಬಿಳಿಯ ಪಂಚೆ ಬಿಳಿ ಅಂಗಿ ತೊಟ್ಟ ಕರಿ ಮನುಷ್ಯ. ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಅವರುಗಳೂ ಇದೇ ಶಾಲೆಯಲ್ಲೇ ಓದುತ್ತಿದ್ದರು. ಗೊತ್ತಾಯ್ತಲ್ಲ? ಸಣ್ಣಪ್ಪ ಮಾಸ್ತರರ ಸಂಸಾರದ ಮಧ್ಯಾಹ್ನ ಊಟ ಶಾಲೆಯಲ್ಲೇ. ಪತ್ನಿಯೊಬ್ಬಳು ತನಗೇನಾದರೂ ಮಾಡಿಕೊಳ್ಳಬೇಕು ಅಷ್ಟೆ. ಬಡ ಮಾಸ್ತರರು ಶಾಲೆಯಲ್ಲಿ ಬಹಳ ಶಿಸ್ತಿನ ಮನುಷ್ಯ. ಅವರ ಬೆತ್ತದ ರುಚಿ ನೋಡಿದ್ದ ಮಕ್ಕಳಿಗೆ ಅವರಿಗೆ ಬಹಳ ಹೆದರುತ್ತಿದ್ದರು. ಈ ಹೆದರಿಕೆಯನ್ನೇ ಬಂಡವಾಳವಾಗಿಸಿಕೊಂಡಿದ್ದ ಆ ಬಡ ಮಾಸ್ತರರು ಮಕ್ಕಳಲ್ಲಿ ಯಾರಾದರೂ ತಿಂಡಿ ತಂದು ಕೊಟ್ಟರೆ ಅವರನ್ನು ಎಲ್ಲರೆದುರಿಗೆ ಪ್ರಶಂಸಿಸುತ್ತಿದ್ದರು. ಆ ತಿಂಡಿ ಅವರ ಕೈ ತಲುಪಿದ ಕೂಡಲೇ ಅದು ಹೇಗೋ ಏನೋ ವಾಸನೆಯಿಂದಲೇ ಇರ್ಬೇಕು ಅವರ ಇಬ್ಬರು ಹೆಣ್ಣುಮಕ್ಕ್ಳೂ ಅವರ ತರಗತಿಗೆ ಬಂದು ಬಿಡುತ್ತಿದ್ದರು. ಕಡು ಬಡತನದ ಮನೆಯ ತುಂಡನಿಗೆ ಎಂದೂ ಮಾಸ್ತರರು ಎಲ್ಲರೆದುರಿಗೆ ಪ್ರಶಂಸಿಸಿರಲಿಲ್ಲ. ಇವನಿಗೆ ಹೇಗಾದರೂ ಅವರ ಪ್ರಶಂಸೆ ಗಿಟ್ಟಿಸಿಕೊಳ್ಳಬೇಕೆಂಬ ಹಂಬಲ. ಎಷ್ಟೇ ಚೆನ್ನಾಗಿ ಓದಿದರೂ ಇವನು ಮಾಸ್ತರರ ಕಣ್ಣಿಗೆ ಬೀಳುತ್ತಿರಲಿಲ್ಲ. ಒಮ್ಮೆ ಅಮ್ಮ ತುಳಸಿ ಪೂಜೆ ಮಾಡಲು ಮನೆಯ ಅಂಗಳದಲ್ಲಿದ್ದಳು. ಅಣ್ಣ ಕಾಲೇಜಿಗೆ ಹೋಗಿದ್ದ. ಮನೆಯ ಒಳಗೆ ಇವನ ಬಿಟ್ಟು ಇನ್ಯಾರೂ ಇರಲಿಲ್ಲ. ಇದೇ ಸುಸಮಯ ಎಂದು ಎಲ್ಲ ಕಡೆಗೆ ಕಣ್ಣು ಹಾಯಿಸಿದ ನಮ್ಮ ಹೀರೋ. ಸಾಸಿವೆ ಡಬ್ಬಿಗೆ ಕೈ ಹಾಕಿದರೆ, ಅಲ್ಲೇನಿದೆ ನುಣುಪಾದ ಮಣ್ಣಿಂದ ಕೂಡಿದ ಸಾಸುವೆಯಷ್ಟೆ. ಅಮ್ಮ ಮನೆಯೊಳಗೆ ಬರುವುದರೊಳಗೆ ಹೇಗಾದ್ರೂ ಮಾಡಿ ಸ್ವಲ್ಪ ಹಣ ಲಪಟಾಯಿಸಬೇಕೆಂಬ ಹಂಬಲ. ಕಡೆಗೆ ಅವನಿಗೆ ತೋರಿದವನು ಮನೆದೇವರಿ ವೆಂಕಟೇಶ್ವರ. ಮನೆದೇವರಿಗೆ ಮುಡುಪು ಎಂದು ನಾಲ್ಕಾಣೆಯನ್ನು ಅವನಮ್ಮ ಸಣ್ಣ ಬಟ್ಟೆಯಲ್ಲಿ ಕಟ್ಟಿ ದೇವರ ಡಬ್ಬಿಯಲ್ಲಿ ಹಾಕಿದ್ದಳು. ಅದು ಈ ತುಂಟನ ಕಣ್ಣಿಗೆ ಬಿದ್ದಿತ್ತು. ಕ್ಷಣಾರ್ಧದಲ್ಲಿ ಲಪಟಾಯಿಸಿ ಹೊರಗೆ ಓಡಿದ. ಅಂದು ಶಾಲೆಗೆ ಹೋಗಲು ಎಂದಿಗಿಂತ ಹೆಚ್ಚಿನ ಮುತುವರ್ಜಿ. ಶಾಲೆಗೆ ಹೋದ ಸ್ವಲ್ಪ ಸಮಯದಲ್ಲೇ ಮಾಸ್ತರರಿಗೆ ಮೊದಲು ಹೇಳಿದ - 'ಸಾರ್, ಸೌತೆಕಾಯಿ ಬೇಕಾ? ಅಥವಾ ಕಡಲೆಕಾಯಿ ಬೇಕಾ?' ಮಾಸ್ತರರು ಎಲ್ಲರಿಗೂ ಕೇಳುವಂತೆ - ' ಏನೋ ನನಗೇ ಲಂಚ ಕೊಡೋಕ್ಕೆ ಬಂದ್ಯಾ?' ಅಂತ ಹೇಳಿ, ಸಣ್ಣ ದನಿಯಲ್ಲಿ ಎರಡನ್ನೂ ತೆಗೆದುಕೊಂಡು ಬಾ, ಹಾಗೇ ಬರ್ತಾ ನನ್ನ ಮಕ್ಕಳನ್ನೂ ಕರೆದು ತಾ ಎಂದರು. ಇವನಿಗೆ ಖುಷಿಯೋ ಖುಷಿ. ಶಾಲೆಯ ಆಚೆಗೆ ಹುಣಿಸೆಮರದ ಕೆಳಗಿದ್ದ ಸೈಯದ್ ಅಂಗಡಿಯಿಂದ ಒಂದಾಣೆಯ ಕಡಲೆಕಾಯಿಯನ್ನೂ ಮತ್ತು ಒಂದಾಣೆಯ ಸೌತೆಕಾಯಿಯನ್ನೂ ತಂದು ಗುರುಕಾಣಿಗೆ ಒಪ್ಪಿಸಿದ. ಅಂದು ಎಲ್ಲರೆದುರಿಗೆ ಸಣ್ಣಪ್ಪ ಮಾಸ್ತರರು ತುಂಡನನ್ನು ಪ್ರಶಂಸಿಸಿದರು. ಇದರಿಂದ ಬಲೂನಿನಂತೆ ಉಬ್ಬಿ ಹೋದ ತುಂಡ. ಅಂದಿನ ಮಧ್ಯಾನ್ಹದ ತಿಂಡಿಯನ್ನೂ ಡಬ್ಬಿಗೆ ಸೇರಿಸಲಿಲ್ಲ. ಅದೇನೋ ಆನಂದ. ಸರಿ, ಮನೆಗೆ ಬಮ್ದ. ನೋಡಿದರೆ ಎಲ್ಲರೂ ಅಲ್ಲಿ ಇಲ್ಲಿ ಹುಡುಕುತ್ತಿದ್ದಾರೆ. ಅಮ್ಮ ಕೇಳಿದಳು, ಏ ತುಂಡ ದೇವರ ಡಬ್ಬಿಯಲ್ಲಿದ್ದ ದುಡ್ಡು ನೋಡಿದ್ಯೇನೋ? ಹಿಂದೆ ಮುಂದೆ ನೋಡದೇ ಇಲ್ಲ ಅಂದ. ಅವ್ರೊಂದಿಗೆ ಇವನೂ ಹುಡುಕಲು ಪ್ರಾರಂಭಿಸಿದ. ಅದು ಹೇಗೆ ಸಿಗಬೇಕು? ಮನೆ ಮಂದಿಯೆಲ್ಲಾ ಹುಡುಕಿ ಹುಡುಕಿ ಸುಸ್ತಾದರು. ಕಡೆಗೆ ಅವರಮ್ಮ ಎಲ್ಲೋ ಇಲಿ ಮುಡುಪಿನ ಬಟ್ಟೆ ಕಚ್ಚಿಕೊಂಡು ಹೋಗಿರಬೇಕು ಅಂದು ಅಲ್ಲಿಗೇ ಹುಡುಕಾಟಕ್ಕೆ ಇತಿಶ್ರೀ ಹಾಡಿದಳು. ಮಾರನೆಯ ದಿನ ಚಾಮರಾಜನಗರದಲ್ಲಿ ಸಂತೆ. ಸರಿ ಎಲ್ಲರೂ ತರಕಾರಿ ತರಲು ಗಾಡಿ ಏರಿ ಹೊರಟರು. ಗಾಡಿಯಲ್ಲಿ ಅವನಮ್ಮ ತುಂಡನನ್ನು ಹತ್ತಿರ ಕರೆದು ತಲೆ ಸವರಿ, ಸುಳ್ಳು ಹೇಳ್ಬೇಡ, ದೇವರು ಕಣ್ಣು ಕಿತ್ತುಹಾಕಿಬಿಡ್ತಾನೆ - ದುಡ್ಡು ನೀನು ತಗೊಂಡ್ಯಾ? ಇವನೇನು ಪೆದ್ದನೇ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು. ಇಲ್ಲಮ್ಮ ನನಗೇನೂ ಗೊತ್ತೇ ಇಲ್ಲ, ಅಂದ. ಆಗ ಅಣ್ಣ ಅವನಿಗೆ ಬೆದರಿಸಿದ. ಲೇ, ನೀನಾಗಿ ನೀನೇ ಒಪ್ಪಿಕೊಳ್ಳದಿದ್ದರೆ ನೋಡು. ಮನೆಗೆ ಬಾ ಸಿಗಿದು ಹಾಕ್ತೀನಿ ಅಂದ. ಅದಕ್ಕೆ ಅಮ್ಮ ತುಂಡನ ವಕಾಲತ್ತು ವಹಿಸಿ, ಹೋಗ್ಲಿ ಬಿಡೋ, ಮಗು ಅಂತಹ ಕೆಲಸ ಮಾಡಿಲ್ಲ ಅಂತಿದ್ದಾನಲ್ಲ, ನೀನ್ಯಾಕೆ ಹೆದರಿಸ್ತೀಯಾ ಅಂದಳು. ಸರಿ ಸಂತೆ ಮುಗಿಸಿ ಮನೆಗೆ ಬಂದ ಮೇಲೆ ಅವರಮ್ಮ ದೇವರನಾಮ ಕೇಳಲು ರೇಡಿಯೋ ಹಾಕಿದಳು. ಅಲ್ಲಿ ಬರುತ್ತಿದ್ದ ದೇವರ ಹಾಡು - ಘಂಟಸಾಲರವರ ' ಏಡುಕೊಂಡಲವಾಡ ಎಕ್ಕಡುನ್ನಾವಯ್ಯ'. ಇವನು ಕುರ್ಚಿಯ ಮೇಲೆ ಉಳ್ಟಾ ಕುಳಿತು ಆ ಹಾಡನ್ನು ಕೆಟ್ಟದಾಗಿ ಆಡಿಕೊಳ್ಳುತ್ತಾ ಕೆಳಗೆ ಬಿದ್ದ. ಮುಂದಿನ ಎರಡು ಹಲ್ಲು ಮುರಿಯಿತು. ತಕ್ಷಣ ಅವರಮ್ಮನ ಮಾತು ನೆನಪಿಗೆ ಬಂತು. ಅಳುತ್ತಾ ಅಮ್ಮನ ಸೆರಗಿನೊಳಗೆ ಅವಿತುಕೊಂಡು 'ಅಮ್ಮಾ ನಾನೇ ದುಡ್ಡು ಕದ್ದದ್ದು - ನೋಡು ದೇವರು ಹಲ್ಲು ಮುರಿದುಹಾಕಿದ' ಎಂದ. ಅವರಮ್ಮ ಅದಕ್ಕೆ ಹೋಗಲಿ ಈಗ ಆ ದುಡ್ಡು ಎಲ್ಲಿ ಅಂದಳು. ಅವನ ಹತ್ತಿರ ಇನ್ನೂ ಉಳಿದಿದ್ದ ಎರಡಾಣೆಯನ್ನು ಅಮ್ಮನ ಕೈಗಿತ್ತ. ಅಮ್ಮ ಅವನ ತಲೆ ಸವರಿ - ಇನ್ಮೇಲೆ ಹೀಗೆ ಮಾಡ್ಬೇಡ, ಈಗ ಕಾಲು ತೊಳೆದು ಬಂದು ಆ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡು ಎಂದಳು. ಅಂದು ಕಲಿತ ಪಾಠ ತುಂಡನ ತಲೆಯೊಳಗೆ ಗಟ್ಟಿಯಾಗಿ ನಿಂತಿತು. ಎಂದಿಗೂ ಸುಳ್ಳನ್ನು ಹೇಳಲಿಲ್ಲ, ಕದಿಯಲಿಲ್ಲ. ಮುಂದೆ ಜೀವನದಲ್ಲಿ ಯಾರು ಊಹಿಸಿರದಂತಹ ಸ್ಥಾನವನೇರಿದ. ಹೊಡೆಯದೆ ಬಡಿಯದೇ ಜೀವನದಲ್ಲಿ ಅಮ್ಮ ಕಲಿಸಿದ ಈ ಪಶ್ಚಾತ್ತಾಪದ ಪಾಠ ಒಳ್ಳೆಯ ಕೆಲಸ ಮಾಡಿತ್ತು.