ಚಿತ್ರಗಳಿಗೆ ಸೂಕ್ತ ಕ್ರೆಡಿಟ್ಸ್ ಕೊಡುವುದು ಹೇಗೆ?

ಚಿತ್ರಗಳಿಗೆ ಸೂಕ್ತ ಕ್ರೆಡಿಟ್ಸ್ ಕೊಡುವುದು ಹೇಗೆ?

'ಸಂಪದ'ದಲ್ಲಿ ನೀವು ಸೇರಿಸ ಹೊರಟಿರುವ ಚಿತ್ರ ನಿಮ್ಮದಲ್ಲದಿದ್ದಲ್ಲಿ, 

  • ಆ ಚಿತ್ರ ಬಳಸಲು ಅನುಮತಿ ನಿಮಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. 
    • ಅನುಮತಿ ಪಡೆಯಬೇಕಾದಲ್ಲಿ ಚಿತ್ರ ತೆಗೆದವರನ್ನು ಸಂಪರ್ಕಿಸಿ ಅನುಮತಿ ಪಡೆದುಕೊಳ್ಳಿ.
  • ಚಿತ್ರ ಯಾರದ್ದೆಂಬುದರ ಕುರಿತು ಚಿತ್ರ ಅಪ್ಲೋಡ್ ಮಾಡುವಾಗ ಒಂದು ಸಾಲು ಸೇರಿಸಿ. 
  • ಸಾಧ್ಯವಾದಲ್ಲಿ ಚಿತ್ರ ಎಲ್ಲಿಂದ ತೆಗೆದುಕೊಂಡಿರಿ ಎಂಬುದರ ಕುರಿತು ಮಾಹಿತಿಯನ್ನೂ ಸೇರಿಸಿ. ಅಂತರ್ಜಾಲದ ಲಿಂಕ್ ಇದ್ದರೆ ಅದಕ್ಕೊಂದು ಲಿಂಕ್ ಕೊಡಿ.

ಟಿಪ್ಪಣಿ:
ಲೇಖನ, ಕವಿತೆ ಇತ್ಯಾದಿಗಳನ್ನು ಬರೆಯುವಾಗ ಯಾವುದಾದರೊಂದು ಸಾಲನ್ನು ಯಾವುದೇ ಪುಸ್ತಕ, ಪತ್ರಿಕೆ ಇತ್ಯಾದಿಗಳಿಂದ ಪಡೆದಿದ್ದಲ್ಲಿ, ಅಥವಾ ಆ ವಾಕ್ಯ ಬೇರೆಯವರು ಹೇಳಿರುವ ಮಾತು ಆಗಿದ್ದಲ್ಲಿ, ಅದನ್ನು ನಮ್ಮ ಬರಹಗಳಲ್ಲಿ ನಮೂದಿಸುವುದು/ಉಲ್ಲೇಖಿಸುವುದು ವಾಡಿಕೆ. ಇದೇ ಅಭ್ಯಾಸ ಚಿತ್ರಗಳನ್ನು ಬೇರೆಯವರಿಂದ ಎರವಲು ಪಡೆದಾಗ ರೂಡಿಸಿಕೊಳ್ಳಬೇಕು.

ಚಿತ್ರಗಳನ್ನು ನಿಮ್ಮ ಬರಹಗಳಲ್ಲಿ ಬಳಸುಕೊಳ್ಳುವ ಮುನ್ನ, ಅದರ ಮೂಲ ನೆಲೆಯ "Terms and Conditions" ನೋಡಿಕೊಳ್ಳಿ. ನಿಮಗೆ ಚಿತ್ರಗಳನ್ನು ಮುಕ್ತವಾಗಿ ಉಪಯೋಗಿಸಿಕೊಳ್ಳುವ ಸ್ವಾತಂತ್ರ್ಯ ಇಲ್ಲದಿದ್ದಲ್ಲಿ, ಅಂತಹ ಚಿತ್ರಗಳನ್ನು ಉಪಯೋಗಿಸದಿರುವುದು ಉತ್ತಮ.

ಒಂದು ವೇಳೆ ಒಂದು ಚಿತ್ರ ನಿಮ್ಮ ಲೇಖನಕ್ಕೆ ಪೂರಕವಾಗಿದೆ ಎಂದೊ, ಇತರರಿಗೆ ಅದು ಹೆಚ್ಚಿನ ಮಾಹಿತಿ ಕೊಡುತ್ತದೆ ಎಂದೊ ಪತ್ರಿಕೆಗಳ ತಾಣಗಳಿಂದ, ಇತರೆ ಅಂತರ್ಜಾಲ ತಾಣಗಳಿಂದ ಹಾಕಿಕೊಂಡಿದ್ದರೆ ಅದು "fair use' ಬಳಕೆ ಎಂದು ಪರಿಗಣಿಸಲಾಗುವುದು. ಆದರೆ ಆ ರೀತಿಯಲ್ಲಿ  ಬಳಸಿಕೊಂಡಿದ್ದರೂ, ಅದನ್ನು ತೆಗೆದು ಹಾಕಿ ಎಂಬ ಸೂಚನೆ ಚಿತ್ರದ ಹಕ್ಕು ಹೊಂದಿದವರಿಂದ ಬಂದಲ್ಲಿ ಅದನ್ನು ತಕ್ಷಣ ತೆಗೆಯುವುದು ಸೂಕ್ತ.

ಇವೆಲ್ಲದರ ಜೊತೆಗೆ, ಹಾಕಿದ ಚಿತ್ರ ಎಲ್ಲಿಂದ ತೆಗೆದುಕೊಂಡದ್ದು ಎಂದು ಬರೆಯದಿದ್ದರೆ, ನೀವು ಹಾಕಿದ ಚಿತ್ರವನ್ನು ಮತ್ತೆಲ್ಲೋ, ಮತ್ಯಾರೋ ಉಪಯೋಗಿಸಿದರೆ ಅವರನ್ನು ದಾರಿತಪ್ಪಿಸಿದಂತಾಗಬಹುದು, ಸರಿಯಾದ ಮಾಹಿತಿ ನೀಡದೆ ಅವರಿಗೂ ತೊಂದರೆಯುಂಟು ಮಾಡಿದಂತಾಗಬಹುದು.

ಸಂಪದ ಸಂಹಿತೆಯಲ್ಲಿ ಅಥವ ಚಿತ್ರದ ಮೂಲ ತಾಣದಲ್ಲಿ ಪಟ್ಟಿ ಮಾಡಿರುವ ಬಳಕೆಯ ಗೈಡ್ಲೈನ್ಸ್ ಚಿತ್ರ ಇತ್ಯಾದಿಗಳ ಉಪಯೋಗದ ಬಗ್ಗೆ ಏನನ್ನು ನಮೂದಿಸಿರದಿದ್ದರೂ ಸಂಪದದಲ್ಲಿ ಮರೆಯದೆ, ಚಿತ್ರ, ಉಲ್ಲೇಖಿಸಿದ ಬರಹದ ತುಣುಕುಗಳ ಮೂಲದ ಉಲ್ಲೇಖ ಮಾಡುವುದ ಮರೆಯಬೇಡಿ. ಚಿತ್ರದ ಕೆಳಗೆ ಇಲ್ಲಿ ಕಂಡಂತೆ ಒಂದು ಸಾಲನ್ನು ಸೇರಿಸಿದರಾಯಿತು.

ಚಿತ್ರದ ಮೂಲ/ಸಂಗ್ರಹ : <ವೆಬ್ ಸೈಟ್ ಲಿಂಕ್>

ಈ ರೂಡಿ, ಚಿತ್ರ ತೆಗೆದವರನ್ನು ಪ್ರೊತ್ಸಾಹಿಸುವುದಲ್ಲದೇ, ಅವರ ಕೆಲಸಕ್ಕೆ ಸಿಗಬೇಕಾದ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ. ಇದನ್ನು ಮರೆಯಬೇಡಿ. ಈ ಪುಟಕ್ಕೆ ಮಾಹಿತಿ ಸೇರಿಸುವಲ್ಲಿ ಪಾಲ್ಗೊಂಡವರು: ಓಂಶಿವಪ್ರಕಾಶ್. ಹರಿ ಪ್ರಸಾದ್ ನಾಡಿಗ್.