ಶಬ್ದದ ಲಜ್ಜೆಯ ನೋಡಾ....

ಶಬ್ದದ ಲಜ್ಜೆಯ ನೋಡಾ....

ಅಮ್ಮ ಮಗುವಿಗೆ ತೋರು ಬೆರಳಿನಿಂದ ಚಂದ್ರನನ್ನು ತೋರಿಸುತ್ತಾಳೆ. ಮಗುವಿಗೆ ಏನನ್ನು ನೋಡಬೇಕೆಂದು ಗೊತ್ತಿಲ್ಲ. ಅದು ತನ್ನ ತಾಯಿಯ ತೋರು ಬೆರಳನಷ್ಟೇ ನೋಡುತ್ತಿರುತ್ತದೆ. ತಾಯಿ ಮಗುವಿನ ಕೆನ್ನೆಯನ್ನು ಮೃದುವಾಗಿ ತಟ್ಟಿ ಚಂದ್ರನನ್ನು ತೋರಿಸುತ್ತಾಳೆ. ಹಲವು ಪ್ರಯತ್ನಗಳ ನಂತರ ಮಗು ಚಂದ್ರನನ್ನು ನೋಡಲು ತೊಡಗುತ್ತದೆ. ಚಂದ್ರನನ್ನ ನೋಡುತ್ತ ನೋಡುತ್ತಾ ಬೆರಳನ್ನು ಮರೆಯುತ್ತದೆ. ಸ್ಪಷ್ಟವಾಗಿ ಹೇಳಬೇಕೆಂದರೆ ಆ ವರ್ತಮಾನಕ್ಕೆ ಆ ಬೆರಳು ಇರುವುದಿಲ್ಲ. ಚಂದ್ರನಷ್ಟೇ ಇರುತ್ತಾನೆ.


 ಓಶೋ ತನ್ನ ಶಿಷ್ಯರಿಗೆ ಉದಾಹರಣೆಗಳನ್ನು ಕೊಡುವಾಗ ತನ್ನ ಸಮಕಾಲೀನ ಹತ್ತು ಹಲವು ಸಂಗತಿಗಳನ್ನು ಹೇಳುತ್ತಿದ್ದರು. ಕೆಲವರು ಉದಾಹರಣೆಯನ್ನೇ ಪ್ರವಚನ ಎಂದುಕೊಂಡದ್ದು ಇದೆ. ಓಶೋ ಅವರಿಗೆ ಒಮ್ಮೆ ಸಮಾಧಿ ಸ್ಥಿತಿ ಎಂದರೇನು? ಅದರ ಸವಿ ಹೇಗಿರುತ್ತದೆ ಎಂದು ತಿಳಿಸುವ ಅಗತ್ಯವಿತ್ತು. ಅದಕ್ಕಾಗಿ ಉದಾಹರಣೆಯೊಂದರ ಅಗತ್ಯ ಇತ್ತು. (ಯಾಕೆಂದರೆ ಭಾಷೆಯು ಹೇಳಬೇಕೆಂಬ ಎಲ್ಲ ವಿಷಯವನ್ನು ಸಂವಹಿನಿಸಲಾರದು. ಅದಕ್ಕೆ ತನ್ನದೇ ಆದ ಮಿತಿ ಇದೆ. ಇದಕ್ಕಾಗಿಯೇ ಕೆಲವು ನಿದರ್ಶನ, ಕಥೆ, ಉದಾಹರಣೆಗಳ ಅಗತ್ಯ ಉಪನ್ಯಾಸದ ಸಂದರ್ಭದಲ್ಲಿ ಇರುತ್ತಿತ್ತು.) ಅದು ಎಲ್ಲ ಸಾಮಾನ್ಯ ಮನುಷ್ಯರು ಅನುಭವಿಸಿದ ಸಂಗತಿಯಾಗಿರಬೇಕು. ಸಮಾಧಿಯಲ್ಲಿನ ಸ್ಥಿತಿಗೆ ಸಮನಾವಾಗಿರಬೇಕು. ಓಶೋ ನೋ ಮೈಂಡ್ ಸ್ಥಿತಿಗೆ ಸಮಾಧಿ ಎಂದು ಕರೆಯುತ್ತಿದ್ದರು. ಹಾಗಾದರೆ ಮನಸ್ಸೇ ಇರದ ಸಮಯ ಯಾವುದು? ಮಲಗಿರುವಾಗಲು ಮನಸ್ಸು ಜಾಗೃತವಾಗಿರುತ್ತದೆ. ಸಮಾಧಿ ಸ್ಥಿತಿಯ ವಿವರಣೆಗಾಗಿ ಓಶೋ ಅವರು ಹೆಕ್ಕಿ ತೆಗೆದ ಉದಾಹರಣೆಯೇ ಸಂಭೋಗ. (ಇದಕ್ಕಾಗಿ ಅವರು ಪುರಾಣಗಳಿಂದಲೂ ಹತ್ತು ಹಲವು ಉದಾಹರಣೆಗಳನ್ನು ತೆಗೆದು ಹೇಳುತ್ತಾರೆ). ಈ ಕಾರ್ಯದ ತುತ್ತ ತುದಿಯ ಸ್ಥಿತಿಯನ್ನು ಓಶೋ, ನೋ ಮೈಂಡ್ ಎಂದು ಕರೆಯುತ್ತಾರೆ. ಆ ಸಮಯದಲ್ಲಿ ಮನುಷ್ಯನಿರುವುದಿಲ್ಲ, ಗಂಡು ಹೆಣ್ಣು ಇರುವುದಿಲ್ಲ, ಭೂತ ಭವಿಷ್ಯತ್ ಗಳು ಇರುವುದಿಲ್ಲ. ಬದಲಾಗಿ "ಇರುತ್ತಾನೆ/ಳೆ". ಬಹುಶ: ಓಶೋ ಅವರಿಗೆ ಸಮಾಧಿ ಸ್ಥಿತಿಯನ್ನು ಹೇಳಲು ಇದಕ್ಕಿಂತ ಸುಂದರ ಉದಾಹರಣೆ ಸಿಕ್ಕಿರಲಿಕ್ಕಿಲ್ಲ.


ಆದರೆ ಇದೇ ಸಂಗತಿಯ ಕಾರಣಕ್ಕೆ ಅವರನ್ನು ತಪ್ಪಾಗಿ ಅರ್ಥೈಸುವ ಪ್ರಯತ್ನಗಳು ನಡೆದವು. ನಡೆಯುತ್ತಿವೆ. ಇಲ್ಲಿ ಅವರನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡದ ಹೊರತು ಅವರ ವಿಚಾರಗಳು ದಕ್ಕುವುದಿಲ್ಲ. ಕೇವಲ ಸುಖ ಭೋಗಗಳ ಕಾರಣಕ್ಕಾಗಿ ಅವರ ಶಿಷ್ಯರಾಗಿದ್ದರೆಂದು ಹೇಳುವುದು ಬಹುಶ: ತೀರಾ ವಿಷಾದನೀಯ. ವಿಶ್ವದ ಮಹಾನ್ ನಾಯಕರು, ವಿಜ್ಞಾನಿಗಳು, ಕಲಾವಿದರು, ಸಂಗೀತಕಾರರು, ಲಾಯರ್ ಗಳು ಅವರ ಶಿಷ್ಯಗಣದಲ್ಲಿ ಸೇರಿದ್ದರು. ಅವರ ಪುಸ್ತಕ ಮಾರಾಟದಿಂದ ಇಂದಿಗೂ ಕೋಟ್ಯಂತರ ರೂಪಾಯಿ ಹಣ ಅವರ ಕಮ್ಯೂನ್ಯೂ ಗೆ ಬರುತ್ತಿದೆ. ಎಲ್ಲರೂ ಏಕಕಾಲಕ್ಕೆ ಮೂರ್ಖರಾಗಲು ಸಾಧ್ಯವಿಲ್ಲ.


ವೈಚಾರಿಕತೆಗೆ ಯಾವತ್ತೂ ವಿರೋಧ ಮಾಮೂಲು. ಅವುಗಳಿಗೆ ಪ್ರತಿರೋಧ ಇದ್ದೆ ಇರುತ್ತದೆ. ಗಂಡುಹೆಣ್ಣಿನ ನಡುವಿನ ವಿಚಾರಗಳಲ್ಲಿ ಓಶೋ ಅವರ ವಿಚಾರವೂ ತುಂಬಾ ಸ್ಪಷ್ಟವಾಗಿತ್ತು. ಆದುದರಿಂದ ಅವರು ಮಾಡಹೊರಡುವ ಪ್ರತಿಯೊಂದು ಪ್ರಯೋಗವೂ ಏನೋ ತಂತ್ರದಂತೆ ಕಂಡಿರಲೂ ಸಾಕು. ಹೀಗೆ ನಾವು ಅವರ ವಿಚಾರಗಳನ್ನು ಸ್ವಲ್ಪವಾದರೂ ತಿಳಿಯದೇ ಯಾವುದೋ ಒಂದು ಉದಾರಹಣೆಯನ್ನು ಹಿಡಿದು ಹೊರಟರೆ, ರೋಗವಿರುವ ಮರದ ಬೇರಿಗೆ ಮದ್ದು ಕೊಡುವ ಬದಲು ಎಲೆಗಳಿಗೆ ಮದ್ದು ಮಾಡಿದ ಹಾಗೆ. ಅದು ಶ್ರಮದಾಯಕ ಮತ್ತು ವ್ಯರ್ಥ. ಅಲ್ಲದೇ ತೋರು ಬೆರಳನಷ್ಟೇ ನೋಡುತ್ತಾ, ಚಂದ್ರನನ್ನು ನೋಡುವ ಯೋಗದಿಂದ ದೂರವುಳಿಯುತ್ತೇವೆ.

Rating
No votes yet