ಪಾಪ ಶೇಷ

ಪಾಪ ಶೇಷ

ಬರಹ

ಪಾಪ ಶೇಷ 


     ದೇವಸ್ಥಾನದ ಅರ್ಚಕನಾಗಿದ್ದ ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿ ಬಾಗಿಲು ತೆಗೆದು ದೇವಸ್ಥಾನ ಶುಚಿಗೊಳಿಸುವ ಕಾರ್ಯ ಮಾಡುತ್ತಿದ್ದ. ಮೂಢನ ಗೆಳೆಯ ಮಂಕ ದೇವಸ್ಥಾನದ ಮಾರ್ಗವಾಗಿ ಹೋಗುತ್ತಿದ್ದವನು ದೇವಸ್ಥಾನದ ಒಳಗೆ ದೇವರಿಗೆ ನಮಸ್ಕರಿಸಿ ಹೋಗಲು ಬಂದ.ಆಳೆತ್ತರದ ದೇವರ ವಿಗ್ರಹದ ಹಿಂದೆ ಇದ್ದ ಮೂಢನನ್ನು ಮಂಕ ಗಮನಿಸಲಿಲ್ಲ. ದೇವಸ್ಥಾನದಲ್ಲಿ ಯಾರೂ ಇಲ್ಲವೆಂದುಕೊಂಡ ಮಂಕ ಕಣ್ಣು ಮುಚ್ಚಿ ಕೈಮುಗಿದು ಗಟ್ಟಿಯಾಗಿ ನಿವೇದನೆ ಮಾಡಿಕೊಂಡ:


     "ದೇವರೇ, ನನಗೆ ಜೀವನವೇ ಬೇಸರವಾಗಿದೆ. ಎಲ್ಲಾ ವಿಷಯದಲ್ಲೂ ನನ್ನ ಹೆಂಡತಿ ನನ್ನನ್ನು ತಪ್ಪು ಹುಡುಕಿ ಮೂದಲಿಸುತ್ತಿರುತ್ತಾಳೆ. ನಾನು ಎಷ್ಟು ಹೊಂದಿಕೊಂಡು ಹೋದರೂ ಅವಳ ಸ್ವಭಾವದಲ್ಲಿ ಬದಲಾವಣೆಯಾಗುತ್ತಿಲ್ಲ. ಯಾವಾಗಲೂ ಅವರಿವರ ಎದುರಿಗೆ, ಮಕ್ಕಳ ಎದುರಿಗೆ ಚುಚ್ಚಿ ಮಾತನಾಡುವುದು, ಪರೋಕ್ಷವಾಗಿ ಹಂಗಿಸುವುದು ಮಾಡುತ್ತಿರುತ್ತಾಳೆ. ನಾನು ಏನಾದರೂ ಹೇಳಹೋದರೆ ರಂಪ ರಾಮಾಯಣ ಮಾಡುತ್ತಾಳೆ.ನೀನೇ ಅವಳಿಗೆ ಒಳ್ಳೆಯ ಬುದ್ಧಿ ಕೊಡಬೇಕು."


     ವಿಗ್ರಹದ ಹಿಂದಿದ್ದ ಮೂಢನಿಗೆ ನಗು ಬಂತು. ಅಲ್ಲಿಂದಲೇ "ವತ್ಸಾ" ಎಂದ. ಮಂಕ ಗಾಬರಿಯಿಂದ ಕಣ್ಣು ಬಿಟ್ಟು ನೋಡಿದರೆ ಯಾರೂ ಕಾಣಲಿಲ್ಲ. ದೇವರೇ ಮಾತನಾಡಿದನೇ ಎಂದುಕೊಂಡು ಬಾಯಿ ಬಿಟ್ಟುಕೊಂಡು ನಿಂತಿದ್ದ. ಅಶರೀರವಾಣಿ ಮುಂದುವರೆಯಿತು:


     "ಇದಕ್ಕೆ ನಿನ್ನ ಪೂರ್ವಜನ್ಮದ ಕರ್ಮವೇ ಕಾರಣ. ನೀನು ತಿರುಗಿ ಮಾತನಾಡುತ್ತಲೇ ಇದ್ದರೆ ಪಾಪಶೇಷ ಹೋಗುವುದಿಲ್ಲ. ಹಿಂದಿನ ಜನ್ಮದ ದೋಷ ಹೋಗುವವರೆಗೆ ಸುಮ್ಮನಿದ್ದರೆ ನಿನಗೆ ಒಳ್ಳೆಯದಾಗುತ್ತದೆ. ಚಿಂತಿಸಬೇಡ."


     ಕಣ್ಣು ಕಣ್ಣು ಬಾಯಿ ಬಾಯಿ ಬಿಟ್ಟುಕೊಂಡಿದ್ದ ಮಂಕ ಮತ್ತೊಮ್ಮೆ ದೇವರಿಗೆ ಅಡ್ಡಬಿದ್ದ. ತಿರುಗಿ ನೋಡುತ್ತಾ ಹೊರಬಿದ್ದ.


     ಮನೆಗೆ ಕಾಲಿಡುತ್ತಿದ್ದಂತೆ ಹೆಂಡತಿ ಶುರು ಮಾಡಿದಳು: "ಹಾಲು ತರಲು ಹೋದವರು ಬರಿಕೈಲಿ ಬಂದಿದೀರಲ್ರೀ. ಏನು ಹೇಳೋದು ನಿಮ್ಮ ಮಂಕು ಬುದ್ಧಿಗೆ? . . . . . ."ಗಂಡ ಮರುಮಾತಾಡದೆ ಪುನಃ ಹೋಗಿ ಹಾಲು ತಂದ. ಹೆಂಡತಿ ಏನೇ ಅಂದರೂ ತನಗಲ್ಲವೆಂಬಂತೆ ಸುಮ್ಮನಿರುವುದನ್ನು ಅಭ್ಯಾಸ ಮಾಡಿಕೊಂಡ. ಕೆಲವು ದಿನಗಳಲ್ಲಿ ಗಂಡ ಏನೇ ಅಂದರೂ ಸುಮ್ಮನಿರುವುದನ್ನು ಕಂಡ ಹೆಂಡತಿಗೆ  ಕಸಿವಿಸಿಯಾಗತೊಡಗಿತು. ತನ್ನನ್ನು ಬಯ್ಯಲಿ ಎಂದು ಕಾಲು ಕೆರೆದು ಜಗಳ ಮಾಡಿದರೂ ಸುಮ್ಮನಿರುವುದನ್ನು ಕಂಡು 'ಇಂಥಾ ಒಳ್ಳೆಯ ಗಂಡನಿಗೆ ಅನ್ನುತ್ತಿದ್ದೆನಲ್ಲಾ!' ಅಂದುಕೊಂಡಳು.


     ದೇವರು 'ಅಭಯ' ಕೊಟ್ಟಿದ್ದಂತೆ ಮಂಕನಿಗೆ ಮುಂದೆ ಒಳ್ಳೆಯ ದಿನಗಳು ಬಂದವು!


*********************


-ಕವಿನಾಗರಾಜ್.