ಪುರಾವೆಗಳಿಲ್ಲದ ರಾತ್ರಿಯಲ್ಲಿ..!.

ಪುರಾವೆಗಳಿಲ್ಲದ ರಾತ್ರಿಯಲ್ಲಿ..!.


ಕಾಡು ಕಣಿವೆ ಹಾದಿಯಲ್ಲಿ
ಬೆಳದಿಂಗಳನ್ನು ಜೊತೆಯಾಗಿಟ್ಟುಕೊಂಡು
ನಿನ್ನ ಸೇರಲೆಂದು ನಾ ಬಂದೆ...!
ನೀನಿಲ್ಲದ ಮನೆಯಲ್ಲಿ ನಿನ್ನ ನೆನಪುಗಳು ಮಾತ್ರ
ಮೌನವಾಗಿ ವೇದನೆ ಪಡುತ್ತಿದ್ದವು.

ಅವುಗಳನ್ನೆ ಓದಲು ಕುಳಿತೆ..
ಒದ್ದೆಯಾಗಿದ್ದ ಕಣ್ಣೀರೊಂದು
ನಿಲ್ಲು ನಿಲ್ಲು ಎಂಬಂತೆ ತಡವರಿಸಿದಂತ್ತಿತ್ತು...

ಅನಾಥವಾಗಿ...!  ಒಡೆದು ಹೋಳಾಗಿ ಬಿದ್ದಿದ್ದ
ಹೃದಯದ ಚೂರೊಂದಕ್ಕೆ
ಘಳಿಗೆಯೊಂದು ಸಮಾಧಾನ ಪಡಿಸುತ್ತಾ
ಮುಟ್ಟಿ ಮುಟ್ಟಿ ಸಂತೈಸುತ್ತಿತ್ತು..!

ಬಿಸಿಯುಸಿರ ಬಿಕ್ಕಳಿಕೆಯೊಂದು
ಕಳೆದುಹೋದ ಸಮಯವನ್ನು
ಲೆಕ್ಕಾಚಾರ ಮಾಡಿಕೊಂಡು ಸಾಗುತ್ತಿತ್ತು...

ಜೇಡರ ಬಲೆಗಳು ಇಲಿ ಹೆಗ್ಗಣಗಳು
ಅಲ್ಲಿದ್ದ ಎಲ್ಲಾ ವಿವರಗಳನ್ನು
ದಾಖಲು ಪಡಿಸಿಕೊಂಡು ಹೋಗುತ್ತಿದ್ದವು...

ದೂರದಲ್ಲಿದ್ದ ಕನ್ನಡಿಯೊಳಗಿಂದ
ಮಸುಕಾದ ಆಕೃತಿಯೊಂದು
ತನ್ನ ವೇದನೆಯನ್ನು ಹೇಳಲೆತ್ನಿಸುತ್ತಿತ್ತು...

ಅನಾಥವಾಗಿ ಬಿದ್ದಿದ್ದ ಬಾಚಣಿಗೆಯೊಂದಕ್ಕೆ
ಒರಟುಗಟ್ಟಿ ಸುತ್ತಿದ್ದ  ಕೂದಲನ್ನು ಬಿಡಿಸಲಾಗದೆ
ಒಂದೇ ಸಮನೆ ವೇದನೆ ಪಡುತ್ತಿತ್ತು...

ಬಣ್ಣ ಕಳೆದುಕೊಂಡಿದ್ದ ಬಿಂದಿಗಳು
ಒಡೆದು ಚೂರಾಗಿದ್ದ ಬಳೆಯ ಚೂರುಗಳು
ಯಾವುದೋ ಕಥೆಯನ್ನು ಹೇಳುತ್ತಿದ್ದವು...

ಪಕ್ಕದಲ್ಲಿದ್ದ ಮಂಚದಿಂದ
ಮುಲುಗುವಿಕೆಯೊಂದು ಕೇಳಿಬರುತ್ತಿತ್ತು...

ಪ್ರತಿಯೊಂದು ಪುರಾವೆಗಳು
ಅರ್ಧ ಸತ್ಯ ಇನ್ನರ್ಧ ಸುಳ್ಳನ್ನು ಹೇಳುತ್ತಿದ್ದವು...

ಭಾರವಾದ ಹೃದಯದಿಂದ
ನನ್ನ ಬಯಕೆಗಳನ್ನು ಬೆಳದಿಂಗಳಿಗೆ ತಿಳಿಸಿ
ಕತ್ತಲಲ್ಲಿ ಕನಸಾಗಿ ಕರಗಿ ಹೋಗುತ್ತೇನೆ....!.
                                                                      ವಸಂತ್

Rating
No votes yet

Comments