ತಾಯಿ ಕೌಸಲ್ಯೆಯ......ಸ್ವಗತ

ತಾಯಿ ಕೌಸಲ್ಯೆಯ......ಸ್ವಗತ

 

  ಪ್ರಿಯ ತನುಜ ರಾಮಾ..

  ಪಿತೃವಾಕ್ಯ ಪರಿಪಾಲಕನಾಗಿ

  ಅಮ್ಮನ ಹೃದಯದ ಮಾತು ಕೇಳದೇ

  ನೀನಂದು ಹೊರಟು ಬಿಟ್ಟೆ...

 

  ನಿನಗಲ್ಲಿ  ವನವಾಸ

  ಸೀತೆಯು ಓಲೈಸುವಳೆ ನಿನಗೆ ನನ್ನಂತೆ..?

  ನನಗದೇ ಇಲ್ಲಿ ಚಿಂತೆ

 

  ಇಲ್ಲಿ ಅರಮನೆ,  ಸೆರೆಮನೆಯಾಗಿಹುದು ನನಗೆ

  ಹೆಜ್ಜೆ ಹೆಜ್ಜೆಗೆ ಇದ್ದರೂ ಆಳುಕಾಳು

 ಪ್ರತಿದಿನವ ಕಳೆಯುತಿಹೆ  ನಿನ್ನ ನೆನಪಿನಲ್ಲೆ

 

  ಉಳಿದ ಸೊಸೆಯಂದಿರು....

  ಇಲ್ಲಿ ಚಡಪಡಿಸುವ ನನ್ನ ಕಂಡು

  ಒಳಗೊಳಗೆ  ನಸುನಗುವರು.

  ಕಾಟಾಚಾರಕ್ಕೆ ಅವರದು  ಔಪಚಾರಿಕ ಮಾತು.

 

   ಬಿಡುತ್ತಿಲ್ಲ  ಹೊರಗೆಲ್ಲೂ ಓಡಾಡಲು

   ಹೋದರೆ ಬಿದ್ದು  ಪೆಟ್ಟಾದರೆ ಎಂಬ ಸಬೂಬು

 

  ಸೀತೆಯ ತವರಿನ ಆಪ್ತಬಂಧುಗಳೊಡನೆ

   ಏಕಾಂತದಲಿ ಹರಟಿದರೆ ....

   ಚಾಡಿ ಹೇಳುವೆನೆಂಬ  ಭಯ ಅವರಿಗೆ

 

  ಇವರೇಕೆ ಕಟ್ಟಬೇಕು ಅನುಮಾನದ ಹುತ್ತ

  ಸಾಚಾ ಇದ್ದರೆ ಇವರದೇಕೆ ಸಂಶಯ ನನ್ನತ್ತ

 

 ಇಷ್ಟು ವರುಷ ನಿನ್ನಪ್ಪ ದಶರಥ

 ನನಗೆ ಮಾತಾಡಗೊಡದೇ ಬಾಯಿ ಮುಚ್ಚಿಸಿದ

  ಈವಯದ  ನೋವನ್ನು ಅರಿಯುವ ಕಾಲ

 ನಿನಗೂ....ಬರಬಹುದು   ಕಂದಾ !

 

 "ಇಳಿವಯದಿ ಮನುಜರು ಮಕ್ಕಳಂತಾಗುವರು

  ಮಕ್ಕಳಂತೆಯೇ ಅವರ ಕಾಪಾಡಿರಿ'

  ವಸಿಷ್ಟರು ರಾಜಸಭೆಯಲಿ ಅಂದು ನುಡಿದ

   ಮಾತು  ಮರೆತೆಯಾ ..?

 

   ಭರತ ಪಾದುಕೆ ಹೊತ್ತು ನಿನ್ನ ಬಳಿ ಬಂದಾಗ

   ನನ್ನ ದೂರೇನಾದರೂ ಹೇಳಿರುವನೇ?

   ನನಗೇಕೊ ಅನುಮಾನ !

 

   ಏಕೆಂದರೆ ನಿನ್ನ  ಪತ್ರದ ಶೈಲಿ ಬದಲಾಗಿದೆ...!

 

 

( ಭರತನು ರಾಮನನ್ನು ಭೇಟಿಯಾಗಿ ಅವನು ಬರೆದಿತ್ತ  ತಾಳೆಗರಿಪತ್ರವನು ಕೌಸಲ್ಯೆಯ ಕೈಗಿತ್ತಾಗ  ಅವಳ ಮನದ   ಸ್ವಗತವಿದು.ಈ ಕಾಲ್ಪನಿಕ ಕವನದಲ್ಲಿ ತಪ್ಪಿದ್ದರೆ ತಿದ್ದುವ ಹಕ್ಕು ಸಂಪದದ  ಗೆಳೆಯರಿಗಿದೆ. ಸರಿಪಡಿಸಿಕೊಳ್ಳುವೆ. ಮೆಚ್ಚಿಕೆಯಾದರೆ ತಿಳಿಸಿ )

 

           -ಮಧು

 

 

 

 

 

 

Rating
No votes yet

Comments