ಕಾಯ ಮರೆತಳಯ್ಯ ಮರುಳಿಗೆ ವಶವಾಗಿ!

ಕಾಯ ಮರೆತಳಯ್ಯ ಮರುಳಿಗೆ ವಶವಾಗಿ!



’ಆಡ ಹೋದ ಕೃಷ್ಣ ಈಗ ಮಣ್ಣು ತಿಂದನಮ್ಮ’! ’ಕೃಷ್ಣ, ಇದು ನಿಜವೇನು’?
’ಹೇಳಿದ್ಯಾರು’? ’ಇವನೇ, ಬಲರಾಮ’ ’ಬರೀ ಸುಳ್ಳು, ನೋಡು ಬಾಯಲಿ ’
ಎನ್ನುತಾವ ಮಗು ಬಾಯ ತೆರೆದಿರಲು ತಾಯಿ ಕಂಡು ಮೂರೂ ಜಗವನು
ಮೈಯನೇ ಮರೆತು ತಾ ತೇಲಿ ಹೋದಳೋ ಆ ಕೇಶವನು ನಮ್ಮ ಕಾಯಲಿ

ಸಂಸ್ಕೃತ ಮೂಲ: (ಲೀಲಾಶುಕನ ಕೃಷ್ಣ ಕರ್ಣಾಮೃತದಿಂದ)

ಕೃಷ್ಣೇನಾಂಬ ಗತೇನ ರಂತುಮಧುನಾ ಮೃದ್ಭಕ್ಷಿತಾ ಸ್ವೇಚ್ಛಯಾ
ತಥ್ಯಂ ಕೃಷ್ಣ ಕ ಏವಮಾಹ ಮುಸಲೀ ಮಿಥ್ಯಾಂಬ ಪಶ್ಯಾನನಮ್ |
ವಾದೇಹೀತಿ ವಿದಾರಿತೇ ಶಿಶುಮುಖೇ ದೃಷ್ಟ್ವಾ ಸಮಸ್ತಂ ಜಗ-
ನ್ಮಾತಾ ಯಸ್ಯ ಜಗಾಮ ವಿಸ್ಮಯಪದಂ ಪಾಯಾತ್ಸ ನಃ ಕೇಶವಃ ||

-ಹಂಸಾನಂದಿ

ಕೊ:
ಮಗುವೆ ಬಾ ಬಾ ಎಂದು ಬಣ್ಣಿಸಿ ಕರೆದಳು
ಮಗುವಿನ ಬಾಯ ಶೋಧಿಸಿದಳು ಬೇಗ
ಬಾಯಲಿ ಕಂಡಳು ಹದಿನಾಲ್ಕು ಲೋಕವ
ಕಾಯ ಮರೆತಳಯ್ಯ ಮರುಳಿಗೆ ವಶವಾಗಿ

ಪುರಂದರ ದಾಸರ "ಕಂದಾ ಬೇಡವೊ ಮಣ್ಣಾಟ ಬೇಡವೋ" ಎನ್ನುವ ಪದದ , ಈ ಮೇಲಿನ ಚರಣವೊಂದರ ಸಾಲಿನಿಂದ ತಲೆಬರಹವನ್ನು ತೆಗೆದುಕೊಂಡಿದ್ದೇನೆ. ಏಳೆಂಟು ಚರಣಗಳಲ್ಲಿ ಪುರಂದರ ದಾಸರು ಈ ಪ್ರಸಂಗವನ್ನು ಬಹಳ ಸೊಗಸಾಗಿ ಬಣ್ಣಿಸಿದ್ದಾರೆ.

ಕೊ.ಕೊ: ಮೂಲದಲ್ಲಿಲ್ಲದ ಕೆಲವು ಪದಗಳನ್ನು (ಉ:ಮೂರು ಜಗ, ತೇಲಿಹೋದಳೋ) ಬಳಸಿರುವೆನಾದರೂ, ಮೂಲದಲ್ಲಿರುವ ಭಾವನೆ ಉಳಿದುಕೊಂಡಿದೆ ಎಂದುಕೊಂಡಿದ್ದೇನೆ!

ಕೊ.ಕೊ.ಕೊ: ಇಲ್ಲಿ ಬಳಸಿರುವ ಚಿತ್ರದ ಕಾಪಿರೈಟ್ ವಿಚಾರ ಗೊತ್ತಾಗುತ್ತಿಲ್ಲ. ಅಂತರ್ಜಾಲದಲ್ಲಿ ಎಲ್ಲೆಲ್ಲೂ ತೇಲಾಡುತ್ತಿದೆ ಈ ಚಿತ್ರ. ಬಳಕೆ ತಪ್ಪೆಂದು ಯಾರಾದರೂ ಹೇಳಿದಲ್ಲಿ ತೆಗೆದುಬಿಡುವೆ.

Rating
No votes yet