’ಭಕ್ತಾಷ್ಟಕ'- ಪರಮಪೂಜ್ಯ, ಶ್ರೀ. ವಿರಜಾನಂದ ಸರಸ್ವತಿ ಮಹರಾಜ್ ರವರ, ಭಗವದ್ಗೀತಾ-ಉಪನ್ಯಾಸಮಾಲೆಯ ಸಂಪಾದಿತ ಗ್ರಂಥ !

’ಭಕ್ತಾಷ್ಟಕ'- ಪರಮಪೂಜ್ಯ, ಶ್ರೀ. ವಿರಜಾನಂದ ಸರಸ್ವತಿ ಮಹರಾಜ್ ರವರ, ಭಗವದ್ಗೀತಾ-ಉಪನ್ಯಾಸಮಾಲೆಯ ಸಂಪಾದಿತ ಗ್ರಂಥ !

ಬರಹ

"ಭಕ್ತಾಷ್ಟಕ," ಪುಸ್ತಕದ ಸಂಪಾದಕ ಕರ್ತೃ, ಡಾ. ಶ್ರೀಪಾದ್ ರವರು, ಒಬ್ಬ ಭೌತಶಾಸ್ತ್ರದ ವಿದ್ಯಾರ್ಥಿ. ತಮ್ಮ ಪ್ರಮುಖ ಕೃಷಿ, ವಿಜ್ಞಾನವಾದಾಗ್ಯೂ ಪಾರಮಾರ್ಥದಲ್ಲಿ ವಿಶೇಷವಾದ ಆಸಕ್ತಿ, ಗೌರವ, ಹಾಗೂ ಒಲವುಳ್ಳವರು. ಇದಕ್ಕೆ ಅವರ ಮನೆತನದ ಪರಿಸರವೇ ಪ್ರಮುಖಕಾರಣ. ವಿಚಾರವಂತ ತಂದೆತಾಯಿ, ಅಜ್ಜ ಅಜ್ಜಿ, ಚಿಕ್ಕಪ್ಪ ಇವರುಗಳ ಆಶೀರ್ವಾದ ಹಾಗೂ ಜೀವನಶೈಲಿ, ಲೇಖಕರ ಹೃದಯದಲ್ಲಿ ಎಲ್ಲೋ ಒಂದು ಕಡೆ ಅಚ್ಚಾಗಿರುವ ಕಾರಣದಿಂದಲೇ, ಶ್ರೀಯವರ ಉಪನ್ಯಾಸಗಳನ್ನು ಆಲಿಸುತ್ತಿದ್ದಂತೆಯೇ ಆ ಸಂಸ್ಕಾರ ಅವರಲ್ಲಿ ಜಾಗೃತವಾಗಿ, ಈ ಒಂದು ಸತ್ಕಾರ್ಯಕ್ಕೆ ಎಡೆಮಾಡಿ ಕೊಟ್ಟಿರುವುದು, ಅವರನ್ನು ತೀರಾ ಹತ್ತಿರದಿಂದ ಗಮನಿಸುತ್ತಿರುವ ನನ್ನ ಗಮನಕ್ಕೆ ಬರುತ್ತಿದೆ. ನನಗೆ ಅತ್ಯಂತ ಸಂತೋಷವೆಂದರೆ, ಇಂದಿನ ನವಯುವಕರು, ಅಧ್ಯಾತ್ಮದಲ್ಲಿ ಆಸಕ್ತಿಯನ್ನು ಹೊಂದಿ ಅದನ್ನು ತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕೆನ್ನುವ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಿರುವುದು, ಒಂದು ಶುಭಸಂಕೇತ. ಸದ್ಯಕ್ಕೆ ನಮ್ಮ ಸಮಾಜ ಇನ್ನೂ ಹೆಚ್ಚಾಗಿ ಕೆಟ್ಟಿಲ್ಲ, ಎನ್ನುವ ಭರವಸೆ ಮೂಡಿಸುತ್ತಿದೆ. ಪರಮಪೂಜ್ಯ, ಶ್ರೀ. ವಿರಜಾನಂದ ಸರಸ್ವತಿಯವರು, ಹೊಳೆನರಸೀಪುರದ, ’ ಅಧ್ಯಾತ್ಮಪ್ರಕಾಶ ಕಾರ್ಯಾಲಯ ’ ದಲ್ಲಿ ೨೦೦೫ ರಲ್ಲಿ, ಚಾತುರ್ಮಾಸ್ಯವ್ರತದಲ್ಲಿ ನೆಲೆನಿಂತ ಸಂದರ್ಭದಲ್ಲಿ ಭಗವದ್ಗೀತೆಯ ೧೨ ನೇ ಅಧ್ಯಾಯವನ್ನು ಕುರಿತು ನೀಡಿದ ಪ್ರವಚನಗಳು ಅಲ್ಲಿ ನೆರೆದಿದ್ದ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿದ್ದವು. ಶ್ರೀಗಳವರ ವಿಷಯ ಪ್ರತಿಪಾದನಾ-ಶೈಲಿ, ಸರಳವಾದ ನಿರೂಪಣೆಗಳು, ಭಕ್ತವೃಂದದ ಹೃದಯಗಳನ್ನುತಟ್ಟಿ, ಅವರೆಲ್ಲಾ ಆನಂದದಿಂದ ಪ್ರತಿನಿತ್ಯವೂ ಪ್ರವಚನದಲ್ಲಿ ಭಾಗಿಗಳಾಗುತ್ತಿದ್ದರು. ಅಂತಹವರಲ್ಲಿ, ಹೊಳೆನರಸೀಪುರದ ಕಾಲೇಜಿನಲ್ಲಿ, ಭೌತಶಾಸ್ತ್ರದ ಉಪನ್ಯಾಸಕರಾಗಿ ದುಡಿಯುತ್ತಿರುವ, ಡಾ. ಶ್ರೀಪಾದ್ ಕೂಡಾ ಒಬ್ಬರು. ಪ್ರವಚನಮಾಲಿಕೆಯಲ್ಲಿ ಶ್ರೀಗಳು ಪ್ರಸ್ತುತಪಡಿಸಿದ, ಕೊನೆಯ ೮ ಶ್ಲೋಕಗಳಮೇಲೆ ನೀಡಿದ ವಿವರಣೆಗಳು, ಅತ್ಯಂತ ಪ್ರಭಾವಿಯಾಗಿದ್ದು, ಅದರ ಸ್ಫೂರ್ತಿಯಿಂದ, ಶ್ರೀಪಾದರ ಹೃದಯದಿಂದ ಒಮ್ಮೆಯೇ, ಒಂದು ಕವನವೂ ಹೊರಹೊಮ್ಮಿಬಂತು. ಇದನ್ನು ಅವರು ಶ್ರೀ.ಗಳಿಗೆ ತೋರಿಸಿದಾಗ ಬಹಳ ಸಂತೋಷಪಟ್ಟರಂತೆ. ಸಹಸ್ರಾರು ವರ್ಷಗಳಿಂದ ಮಹಾಭಾರತ, ರಾಮಾಯಣ ಭಾಗವತದಂತಹ ಮಹಾಕಾವ್ಯಗಳು, ಭಾರತದಲ್ಲಿ ಹಾಗೂ ವಿಶ್ವದಲ್ಲೆಲ್ಲಾ ಸಾಹಿತ್ಯಾಸಕ್ತರನ್ನು ಸೂಜಿಗಲ್ಲಿನಂತೆ ಆಕರ್ಷಿಸಿ, ಭಗವದ್ ಚಿಂತನೆಗೆ ಎಡೆಮಾಡಿಕೊಟ್ಟಿವೆ. ಇಂದಿಗೂ ಈ ಮಹಾಕಾವ್ಯಗಳು ಭಾರತದಾದ್ಯಂತ ಆಸ್ತಿಕಜನರ ತನು-ಮನಗಳಲ್ಲಿ ವಿಜೃಂಬಿಸುತ್ತಿವೆ. ತಮ್ಮ ಪ್ರವಚನವೂ ಅದೇ ಜನಜಾಗೃತಿಯ ಕೆಲಸವನ್ನು ಸಮರ್ಥವಾಗಿಮಾಡಿ, ಆಧುನಿಕ ವಿಜ್ಞಾನದ ಪರಿಚಾರಕರನ್ನೂ ಸಮರ್ಥವಾಗಿ ಆಕರ್ಶಿಸಿರುವುದು, ಶ್ರೀಗಳವರ ಗಮನಕ್ಕೆ ತಂದಾಗ, ಅವರು, ಸಂತೋಷಗೊಂಡು, 'ಅಧ್ಯಾತ್ಮಪ್ರಕಾಶ' ಪತ್ರಿಕೆಯಲ್ಲಿ ಪ್ರಕಟಿಸಲು ಸೂಚಿಸಿದ್ದರು. ಅದನ್ನು 'ಭಕ್ತಿಯೋಗ,' ವೆಂಬ ಹೆಸರಿನಲ್ಲಿ ಪ್ರಕಟಿಸುವುದಲ್ಲದೆ, ಶ್ರೀಪಾದರ ರಚನೆಗೆಗಳನ್ನೂ ಅದರಜೊತೆಯಲ್ಲಿ ಸೇರಿಸಲು ಹೇಳಿದರು. ಭಗವದ್ಗೀತೆಯಮೇಲಿನ ಲೇಖನಸರಣಿ ಶುರುವಾಗಿ, ನಡೆದುಬರುತ್ತಿರುವುದೇ ಹೀಗೆ. ಪೂಜ್ಯಶ್ರೀಗಳವರು, ಗೀತೆಯ ದ್ವಿತೀಯ ಅಧ್ಯಾಯದ ಹಲವಾರು ಶ್ಲೋಕಗಳನ್ನು ಆಧರಿಸಿ, ಮಾಡಿದ ಪ್ರವಚನಗಳನ್ನು ಲೇಖನ ರೂಪಕ್ಕೆತಂದು ಪ್ರಕಟಿಸಿದ ಲೇಖನಮಾಲೆ ಹಾಸನದ 'ವಿಪ್ರವಾಹಿನಿ,' (ಪಾಕ್ಷಿಕ) ಗಾಗೂ ಮೈಸೂರಿನ 'ಹೊಸಆಯಾಮ,' ವೆಂಬ ಮಾಸಿಕ ಪತ್ರಿಕೆಯಲ್ಲಿ ಪ್ರಕಟವಾಯಿತು. ಈ ದಿಶೆಯಲ್ಲಿ ನಡೆಯುತ್ತಿರುವಾಗಲೇ, ಪೂಜ್ಯರು ಶ್ರೀಕ್ಷೇತ್ರ, ಅಶ್ವತ್ಥಪುರದಲ್ಲಿ ನಡೆಸಿದ ಆಧ್ಯಾತ್ಮಕ ಶಿಬಿರದಲ್ಲಿ ಪಾಲ್ಗೊಳ್ಳುವ ಶುಭಸಂದರ್ಭವನ್ನು ಶ್ರೀಪಾದರು, ಉಪಯೋಗಿಸಿಕೊಂಡು, ಅಲ್ಲಿ ನೀಡಿದ ಪ್ರವಚನದ ೧೨ ನೇ ಅಧ್ಯಾಯದ ಕೊನೆಯ ೮ ಶ್ಲೋಕಗಳಬಗ್ಗೆ ಸ್ಪೂರ್ತಿಪಡೆದು, ಶ್ರೀಗಳ ಅನುಮತಿಯಮೇರೆಗೆ, ಬರದುಕೊಟ್ಟ ಬರಹಗಳನ್ನು , ಹಾಸನಜಿಲ್ಲೆಯೆ 'ವಿಪ್ರವಾಹಿನಿ', ಪತ್ರಿಕೆಯಲ್ಲಿ ಶ್ರೀನಾಗರಾಜ, ಶ್ರೀಮತಿ. ಗಿರಿಜಾಂಬದಂಪತಿಗಳು ಪ್ರಕಟಿಸಿದರು. ಅದರಲ್ಲಿ, 'ಸತ್ಸಂಗಿ' ಎಂಬ ಲೇಖನಾಮದಲ್ಲಿ 'ಸದ್ಗುರು ವಚನಾಮೃತ' ಎಂಬ ಮಾಲಿಕೆಯ ಅಡಿಯಲ್ಲಿ ಬರೆಯುತ್ತಾ ಬಂದಿದ್ದಾರೆ. ಶ್ರೀಪಾದರಿಗೆ ಅರಿವಿಲ್ಲದಂತೆಯೇ ಒಳಮನಸ್ಸಿನಿಂದ ಹೊರಬಂದ ವಚನಗಳು ಶ್ರೀಗಳವರನ್ನು ಪ್ರಭಾವಿತರನ್ನಾಗಿ ಮಾಡಿತ್ತು. ಇದನ್ನು ಗಮನಿಸಿದ ಗುರುಗಳು, ಭಗವದ್ಭಕ್ತಿಯನ್ನು ಇಂದಿನ ಯುವಪೀಳಿಗೆಯ ಅಂತರಂಗದಲ್ಲಿ ಬಿತ್ತಲು ಸಹಾಯವಾಗಲೆಂದು, ತಾವಿದುವರೆವಿಗೆ ಮಾಡಿರುವ ಉಪನ್ಯಾಸಗಳ ಮಾಲಿಕೆಯನ್ನೂ, ಹಾಗೂ ಮುಂದಿನ ತಮ್ಮ ಪ್ರವಚನಗಳನ್ನೂ "ಭಕ್ತಾಷ್ಟಕ," ವೆಂಬ (ಭಗವದ್ಗೀತೆಯಲ್ಲಿ ಭಕ್ತನ ಲಕ್ಷಣಗಳು) ಎನ್ನುವ ಹೆಸರಿನಲ್ಲಿ, ಪ್ರಸ್ತುತಿಪಡಿಸಲು, ಅನುಜ್ಞೆಮಾಡಿದ್ದರಿಂದ, ಪುಸ್ತಕವೊಂದು ಹೊರಬಂದಿದೆ. ಈ ಹೊತ್ತಿಗೆಯನ್ನು, ವಿಚಾರವಂತರೂ, ಪಾರಮಾರ್ಥದಲ್ಲಿ ವಿಶ್ವಾಸವುಳ್ಳ ಸಹೃದಯರೂ, ಪ್ರಾಜ್ಞರೂ, ಅನುಷ್ಠಾನಮಾಡಿ, ಉಪಕೃತರಾಗಬೇಕೆನ್ನುವುದೇ, ಶ್ರೀಗಳವರ ಹಾಗೂ ಪ್ರಕಾಶಕರ ಕಳಕಳಿ ಮನವಿಯಾಗಿದೆ. ಇದನ್ನು ಓದುವುದೆಂದರೆ, ನಮ್ಮ ಪುರಾತನ ಸಂಸ್ಕೃತಿಗೆ ಪ್ರೋತ್ಸಾಹವನ್ನು ಕೊಟ್ಟಂತೆ. ಇಂತಹ ಉತ್ತಮ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ. ಗ್ರಂಥ ಕರ್ತೃಗಳ ವಿಳಾಸ : ಡಾ. ಹೊ. ರಾ. ಶ್ರೀಪಾದ್, ಆಯ್ಕೆ ಶ್ರೇಣಿ ಭೌತಶಾಸ್ತ್ರ ಪ್ರಾಧ್ಯಾಪಕರು, ಸ. ಪ್ರ. ದ. ಸರಕಾರಿ ಬಾಲಕರ ಕಾಲೇಜು, (ಮಂಡ್ಯಜಿಲ್ಲೆ) ಹೊಳೆನರಸೀಪುರ. ೧೦, ನವೆಂಬರ್, ೨೦೦೮ (ಸೋಮವಾರ), 'ಉತ್ಥಾನ ದ್ವಾದಶಿ,' ಯ ಶುಭದಿನದಂದು ಪ್ರಕಟಿತವಾಯಿತು.