ವಸಂತಾಗಮನ

ವಸಂತಾಗಮನ

ಬರಹ

ಮಹಾಕಾವ್ಯದಲ್ಲಿ ಹದಿನೆಂಟು ರೀತಿಯ ವರ್ಣನೆಗಳಿರಬೇಕೆಂದು ಲಾಕ್ಷಣಿಕರ ಮತ. ಆ ವರ್ಣನೆಗಳು ಯಾವವೆಂದರೆ

ವಾರಿಧಿ ಪರ್ವತಂ ಪುರನಧೀಶ್ವರನುದ್ವಹನಂ ಕುಮಾರನಂ
ಭೋರುಹವೈರಿಮಿತ್ರರುದಯಂ ಋತುನಂದನಬುಕೇಳಿ ಕಾಂ
ತಾರತಿ ಚಿಂತೆ ಮಂತ್ರ ಚರ ಯಾನ ವಿರೋಧಿಜಯಂಗಳೆಂಬಿವಂ
ಸೂರಿಗಳಂಗಮೆಂದು ಕೃತಿಯೊಳ್ ಪದಿನೆಂಟಮನೆಯ್ದೆ ಬಣ್ಣಿಪರ್
(ಸೂಕ್ತಿ ಸುಧಾರ್ಣವಂ ೧-೭೬)

ಪುರವಾರಾಸಿ ನಗರ್ತು ಚಂದ್ರ ತಪನೋದ್ಯಾನಾಂಬುಕೇಳೀ ಸುರಾ
ಸುರತಕ್ರೀಡ ವಿಪ್ರಲಂಭ ಲಲನಾ ಕಲ್ಯಾಣ ಪುತ್ರೋದಯಂ
ಸ್ಫುರಿತಾಳೋಚನ ಮಂತ್ರ ದೂತ ಗಮನಾಜಿ ಸ್ತ್ರೀಸುಖವ್ಯಾಪ್ತಿಗಳ್
ದೊರೆಕೊಳ್ಗುಂ ಕವಿವರ್ಣನಕ್ಕೆ ಪದಿನೆಂಟಂಗಂ ಮಹಾಕಾವ್ಯದೊಳ್
(ಸೂಕ್ತಿ ಸುಧಾರ್ಣವಂ ೧-೭೭)

ಉದಧಿಪುರಾಧಿಪ ಸುತ ಮಂ
ತ್ರದೂತ ಗಮನಾಜಿ ವಿರಹ ಪರಿಣಯ ಸುರತ
ರ್ತುದಿನೇಶ ಚಂದ್ರ ಮಧು ಕುಭೃ
ದುದಕ ವನಸ್ಪತಿಯೆ ಕೃತಿಗೆ ಪದಿನೆಂಟಂಗಂ
(ಸೂಕ್ತಿ ಸುಧಾರ್ಣವಂ ೧-೭೮)

ಲಾಕ್ಷಣಿಕರಲ್ಲಿ ಎಲ್ಲ ಹದಿನೆಂಟು ಬಗೆಗಳ ಬಗೆಗೂ ಒಮ್ಮತವಿಲ್ಲದಿದ್ದರೂ, ಕೆಲವನ್ನು ಎಲ್ಲರೂ ಅಂಗೀಕರಿಸಿರುವುದು ವ್ಯಕ್ತವಾಗಿಯೆ ಇದೆ. ಋತು ವರ್ಣನೆ ಇಂತಹುದು ಒಂದು. ಲಾಕ್ಷಣಿಕ ಋತು ಎಂದಷ್ಟೆ ಹೇಳಿ - ಕವಿಯ ಸ್ವಭಾವ, ಕಾವ್ಯ ಸಂದರ್ಭಗಳಿಗೆ ಅನುಸಾರಾವಾಗಿ ಯಾವುದಾದರೊಂದನ್ನು ವರ್ಣಿಸಲಿ ಎಂದಿರಬೇಕು - ಯಾವ ಋತು ಎಂದು ನಿಗದಿಸದೆ ಹೋದರೂ ಕವಿಗಳು ಮಾತ್ರ ವಸಂತನನ್ನು ಬಲವಾಗಿ ಹಿಡಿದಿದ್ದಾರೆ. ಬರೆಯ ವಸಂತರಾಜನನ್ನು ಹೊಗಳಿದರೆ ಸಾಕೆ? ಕೋಗಿಲೆ, ಮಾವು, ಚಿಗುರು ಇತ್ಯಾದಿ ಪರಿವಾರಕ್ಕೂ ಯಥೋಚಿತ ಮರ್ಯಾದೆಗಳನ್ನು ಸಲ್ಲಿಸಿದ್ದಾರೆ. ವಸಂತನನ್ನು ಬಿಟ್ಟು ಕೋಗಿಲೆ ಎಲ್ಲಿ ಎನ್ನುವಷ್ಟು ಅವಿನಾಭಾವದ ಸಂಬಂಧವನ್ನು ಕಲ್ಪಿಸಿದ್ದಾರೆ. ಕಾಗೆಯ ಕಪ್ಪಿಗೂ ಕೋಗಿಲೆಯ ಕಪ್ಪಿಗೂ ವ್ಯತ್ಯಾಸವನ್ನು ಕಾಣಬೇಕಾದರೆ ವಸಂತದವರೆಗೆ ಕಾಯಬೇಕಂತೆ. ವಸಂತನಿಲ್ಲದೆ ಕೋಗಿಲೆಗೆ ಪ್ರತ್ಯೇಕವಾದ ಸ್ಥಾನವಿಲ್ಲ. ಇನ್ನು ಮಾಮರ; ಪಂಪ ಕರ್ನಾಟಕವಿಚೂತವನಚೈತ್ರ, ಅಷ್ಟು ಸಾಕು ಮಾಮರ ವಸಂತಗಳ ನಂಟನ್ನು ಹೇಳುವುದಕ್ಕೆ.

ವಸಂತ ಕೇವಲ ಪಂಪಾದಿ ಪ್ರಾಚೀನರಿಗೆ ಮಾತ್ರ ಪ್ರಿಯನೆಂದು ತಿಳಿಯಬೇಡಿ. ಪಂಪನಂತೆಯೆ ಇತ್ತೀಚಿನ, ನವೋದಯಾನಂತರದ, ಕವಿಗಳೂ ಪಲ್ಲವಗಳ ಪಲ್ಲವಿಯಲಿ ಗರಿಗೆದರಿದ ಗೀತವನ್ನು ಎದೆ ತುಂಬಿ ಹಾಡಿ ವಸಂತನನ್ನು ಹೊಗಳಿ ಬಾರೋ ವಸಂತ ಎಂದು ಕರೆದಿದ್ದಾರೆ. ವಸಂತ ಬಂದ. ಋತುಗಳ ರಾಜನಲ್ಲವೆ? ದುಂಬಿ ತಳಿರು ಹೂ ಕೋಗಿಲೆಗಳ ಪರಿವಾರಸಮೇತನಾಗಿಯೆ ಬಂದ. ಹೊಸ ಭಾವನೆಗಳನ್ನು ಹೊಸ ಕಾಮನೆಗಳನ್ನು ಬಡಿದೆಬ್ಬಿಸಿದ. ವಸಂತ ಎಷ್ಟಾದರೂ ಹೊಸ ಚೇತನವನ್ನು ತರುವನಲ್ಲವೆ? ಕವಿಗಳು ವಸಂತಗಾನಕ್ಕೆ ಆರಂಭಿಸಿದ್ದೆ ತಡ, ಹಿಂದಿನ ಕವಿಗಳು ಹೇಳಿದ್ದನ್ನೆ ಆಗಲಿ, ಹೊಸ ಹುರುಪಿನಿಂದ ಹೇಳತೊಡಗುತ್ತಾರೆ.

ವಸಂತಾಗಮನದಿಂದ ಎಲ್ಲರಿಗೂ ಸಂತೋಷಾಗಮನವೆನ್ನೋಣವೆ? ಅಲ್ಲಿ ನೊಡಿ, ವಸಂತನಿಂದ ಹೊಸಚಿಗುರುಗಳನ್ನು ಪಡೆದುಕೊಂಡ ಅಶೋಕದ ಮುಂದೆ ರಾಮ ನಿಂತಿದ್ದಾನೆ. 'ಎಲೆ ಅಶೋಕನೆ, ನೀನು ಹೊಸದಳಿರುಗಳಿಂದ ರಕ್ತನಾಗಿದ್ದೀಯೆ, ನಾನು ಪ್ರಿಯೆಯ ಶ್ಲಾಘ್ಯವಾದ ಗುಣಗಳಲ್ಲಿ ಅನುರಕ್ತನಾಗಿದ್ದೇನೆ; ನಿನ್ನನ್ನು ದುಂಬಿಗಳು ಮುತ್ತುತ್ತವೆ, ಕಾಮನ ಬಿಲ್ಲಿನಿಂದ ಹೊರಟ ಕೂರ್ಪುಕಣೆಗಳು ನನ್ನನ್ನು ಮುತ್ತುತ್ತವೆ; ಕನ್ನೆಯ ಪಾದಾಘಾತ ನಿನಗೆ ಬಹು ಪ್ರಿಯ, ಕಾಂತೆಯ ಹೆಜ್ಜೆಯ ಸಪ್ಪಳವೆಂದರೆ ನನಗೂ ಆನಂದವೆ. ನೋಡು, ನಾವಿಬ್ಬರೂ ಅದೆಷ್ಟು ಸಮರಾಗಿದ್ದೇವೆ. ಆದರೆ ನೀನು ಅಶೋಕ. ನಾನು ಸೀತೆಯನ್ನು ಕಳೆದುಕೊಂಡು ಸಶೋಕ' ಎನ್ನುತ್ತಿದ್ದಾನೆ. ವಿರಹಿಗಳಿಗೆ ವಸಂತರಾಜ ಸಿಂಹದಂತೆ ಭೀಕರನಂತೆ. ಹಸ್ತಿನಾವತಿಯ ತೋಟಗಳಿಗೆ ವಸಂತನೊಡನೆ ಚಿಗುರು ಕೋಗಿಲೆಗಳೊಡನೆ ವಿರಹಿಗಳೂ ಬಂದರೆನ್ನುತ್ತಾನೆ ಪಂಪ. ಇತ್ತ ಮರಗಳಿಂದ ತಂಗಾಳಿ ಬೀಸಿದರೆ ಅತ್ತಲಿಂದ ವಿರಹಿಗಳ ಬಿಸುಸುಯ್ಗೆ ಬೀಸುತ್ತದೆ. ಮರಗಳ ಎಲೆಗಳ ದಟ್ಟಣೆಯಲ್ಲಿ ಕಾಣದ ಹಾಗೆ ಕೋಗಿಲೆ ಕುಳಿತರೆ, ಯಾರೂ ಸುಳಿಯದೆಡೆ ಕುಳಿತು ಯಾರ ಕಣ್ಣಿಗೂ ಬೀಳದೆ ವಿರಹಿಗಳು ಕುಳಿತಿರುತ್ತಾರೆ. ಕೋಗಿಲೆಯದು ಕಪ್ಪು ಬಣ್ಣ ಕೆಂಪು ಕಣ್ಗಳು, ಬಾಡಿ ಕಪ್ಪಿಟ್ಟ ಮುಖ ಅತ್ತು ಕೆಂಪಾದ ಕಣ್ಣು ವಿರಹಿಯದು. ಅಂತಲೆ ಕೋಗಿಲೆಯಂತೆ ವಿರಹಿಯೂ ವಸಂತನ ಲಾಂಛನವೆನ್ನಬೇಕು. ಆದರೆ ಗಂಡು ಕೋಗಿಲೆ ಹೆಣುಕೋಗಿಲೆಯನ್ನು ಮಧುರವಾಗಿ ಕೂಗಿ ಕರೆದರೆ, ದೂರದ ಇನಿಯನನ್ನೊ ಇನಿಯಳನ್ನೊ ನೆನೆದು ದುಃಖಾರ್ತನಾದವನ್ನು ಹೊಮ್ಮಿಸುವುದು ವಿರಹಿಯ ಪಾಡು. ಇದೊಂದೆ ವಿರಹಿಗೂ ಕೋಗಿಲೆಗೂ ಇರುವ ವ್ಯತ್ಯಾಸ.

ವೆಂ.

[ ಸುಮಾರು ಆರು ವರ್ಷಗಳ ಹಿಂದೆ ಬರೆದದ್ದು ಈಗ ಬೆಳಕಿಗೆ ಬರುತ್ತಿದೆ - ವೆಂ. ]