ಆತ್ಮಹತ್ಯೆ

ಆತ್ಮಹತ್ಯೆ

ಬರಹ

ಅಪ್ಪ, ನೀನೆಷ್ಟು ಬೆವರು ಸುರಿಸಿ
ನೀರು ಹರಿಸಿ ಪೈರು ಬೆಳೆಸಿದೆ,
ಒಂದು ಬಿಲ್ಲೆ ಕಾಸು ಸರಕಾರದಿಂದ
ಸಾಲ ಮಾಡಲಿಲ್ಲ, ನೀ ಶೂಲಕ್ಕೇರಲಿಲ್ಲ!
ಈಗ ಹಾಗಿಲ್ಲ ನೋಡು, ಹೊಲದ ಬೀಜ
ಮೊಳಕೆಯೊಡೆಯುತ್ತಿಲ್ಲ, ಬದುವಿನ ಮರ
ಹಸಿರು ತೋರಣ ಕಟ್ಟಿಲ್ಲ, ಗಿಳಿಗಳು
ಹಾಡೇ ಹೇಳುತ್ತಿಲ್ಲ, ಹಸಿವಿನಿಂದ ಅಣಕಿಸಿವೆ
ಮನೆಯಲ್ಲಿ ಮಕ್ಕಳ ಕಿಲಕಿಲ ನಗುನಿಂತಿದೆ
ಬಡ್ಡಿ ಮಕ್ಕಳು, ದಿಡ್ಡಿ ಬಾಗಿಲು ತೆರೆದು,
ಕತ್ತಲೊಳಗೆ ಸ್ವಾರ್ಥದ ಕಡ್ಡಿಗೀರಿದ್ದಾರೆ
ನೇಣಿನ ಕುಣಿಕೆಯ ಹಗ್ಗವನು ಎಳೆಯುತ್ತಿದ್ದಾರೆ!
ಅಪ್ಪನ ನೇಗಿಲು-ನೊಗ, ಕುಳ ಮೂಲೆಗೆ ಬಿದ್ದಿವೆ
ಹಸಿರು ಮರದ ಗಿಳಿಗಳು ಹಾರಿ, ಬೀದಿಬದಿಗೆ
ಬಂದಿವೆ, ರೈತನ ಬದುಕಿನ ಭವಿಷ್ಯಕ್ಕೆ
ಭಾಷ್ಯ, ಬರೆಯುತ್ತಿವೆ, ಇದ್ದುದೆಲ್ಲವ ಕಿತ್ತು!
ಹೊಲದ ಸಂಬಂಧ ನೆಲಕ್ಕಿಲ್ಲ, ಭುವಿಗೂ-ಬಾನಿಗೂ
ಅಂತರವಿಲ್ಲ, ಮೋಡಗಳು ಮಾತನಾಡುತ್ತಿಲ್ಲ
ನೆಲದ ಮಣ್ಣು, ಬಾನಕಣ್ಣು ಒಂದನ್ನೊಂದು ಬೆಸೆಯುತ್ತಿಲ್ಲ
ಬೆವರು ಸುರಿದು, ರಕ್ತ ಬಸಿದರೂ ಹಸಿರು ಮೂಡಲಿಲ್ಲ
ನಮ್ಮ ಹೆಸರು ನೆಲದ ಮೇಲೆ ಬರೆಯಲಾಗಲಿಲ್ಲ
ವಿಶ್ವಬ್ಯಾಂಕ್, ನಬಾರ್ಡ್, ವಿಶ್ವ ಹಣಕಾಸು ನಿಧಿಯೆ
ನಮ್ಮ ಉಸಿರು ಕಟ್ಟಿಸಿ ವಿಧಿಯ ಬರೆದಿದೆ
ಸಾವಿನ ಕದವ ಪ್ರತಿನಿತ್ಯ ತಟ್ಟಿವೆ