ಲೆಕ್ಕಾಚಾರ

ಲೆಕ್ಕಾಚಾರ

 

ಚೆನ್ನೆ ನಿನ್ನಯ ಮನದೊಳೆನ್ನ ಮೇಲಿರೆ ಮುನಿಸು

ಇನ್ನು ಮಾಡುವುದೇನು? ಇರಲಿ ನಿನ್ನಿಷ್ಟ;

ಮುನ್ನ ಕೊಟ್ಟದ್ದೆಲ್ಲ  ಮರಳಿ ಕೊಟ್ಟುಬಿಡೆನಗೆ    

ನನ್ನ ಮುತ್ತನು ಮತ್ತೆ ಬಿಗಿವಪ್ಪುಗೆಯನು!

 

                     ****

 

ಚಿತ್ತದಲಿ ನಿನಗೆನ್ನ ಮೇಲಾಗಿರಲು ಮುನಿಸು

ಉತ್ತರವ ನಾನಿನ್ನು ಕೊಡುವುದೇನು?

ಮತ್ತೆ ಕೇಳೆನು ಬೇರೆ ಕೊಟ್ಟುಬಿಡು ನಾನು ಮೊದ-

ಲಿತ್ತ ಮುತ್ತುಗಳನ್ನು ಬಿಗಿವಪ್ಪುಗೆಯನು!

 

 

ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕ- ೧೩೩):

 

ಕೋಪಸ್ತಯಾ ಹೃದಿ ಕೃತೋ ಯದಿ ಪಂಕಜಾಕ್ಷಿ

ಸೋಽಸ್ತು ಪ್ರಿಯಸ್ತವ ಕಿಮತ್ರ ವಿಧೇಯಮನ್ಯತ್ |

ಆಶ್ಲೇಷಮರ್ಪಯ ಮದರ್ಪಿತ ಪೂರ್ವಮುಚ್ಚೈಃ  

ಮಹ್ಯಂ ಸಮರ್ಪಯ ಮದರ್ಪಿತ ಚುಂಬನಂ ಚ ||

 

-ಹಂಸಾನಂದಿ

 

ಕೊ: ಇದೇನಿದು, ಮೂಲ ಒಂದೇ ಪದ್ಯ ಇದೆ, ಎರಡು ಕನ್ನಡ ಪದ್ಯಗಳಿವೆ ಎಂದಿರಾ? ಎರಡೂ ಅನುವಾದಗಳೂ ಒಂದೇ ಮೂಲಕ್ಕೇ, ಸುಮ್ಮನೆ ಸ್ವಲ್ಪ  ಬೇರೆ ರೀತಿಯ ಎರಡು ಅನುವಾದಗಳು. ಅಷ್ಟೇ.

 

ಕೊ.ಕೊ: ಸಾಮಾನ್ಯವಾಗಿ ಮೂಲದಲ್ಲಿಲ್ಲದ ಪದಗಳನ್ನೂ, ಅಭಿಪ್ರಾಯಗಳನ್ನೂ ಅನುವಾದದಲ್ಲಿ ಬಳಸಬಾರದೆಂದೂ, ಅಲ್ಲಿರುವುದನ್ನು ಬಿಡಬಾರದೆಂದೂ ಒಂದು ಕಟ್ಟಳೆ. ಈ ಪದ್ಯದಲ್ಲಿ ಮೂಲದಲ್ಲಿದ್ದ "ಪಂಕಜಾಕ್ಷಿ" ಒಂದು ಅನುವಾದದಲ್ಲಿ ಚೆನ್ನೆಯಾಗಿ ಬದಲಾಗಿದ್ದರೆ, ಇನ್ನೊಂದರಲ್ಲಿ ಆ ಸಂಬೋಧನೆಯೇ ಮಾಯವಾಗಿದೆ. ನಾನು ಮೂಲದ ಅಭಿಪ್ರಾಯವನ್ನು ಬದಲಾಯಿಸದಿರುವುದರಿಂದ  ಓದುಗರಿಗೆ ಒಪ್ಪಿಗೆಯಾಗಬಹುದೆಂದು ಎದುರುನೋಡುವೆ.

 

ಕೊ.ಕೊ.ಕೊ: ಅಮರು ಶತಕವೆಂದರೆ ೧೦೦ ಪದ್ಯಗಳಿರಬೇಕು - ಹಾಗಾದರೆ ೧೩೩ ನೇ ಪದ್ಯ ಅನ್ನುವ ಪ್ರಶ್ನೆ ನಿಮಗೆ ಬಂದಿರಬಹುದು. ಅಮರು ಶತಕದ ಬೇರೆ ಬೇರೆ ಹಸ್ತಪ್ರತಿಗಳನ್ನೆಲ್ಲಾ ನೋಡಿದಾಗ ಸುಮಾರು ೫೦ರಷ್ಟು ಶ್ಲೋಕಕಳು ಮಾತ್ರ ಎಲ್ಲ ಪ್ರತಿಗಳಲ್ಲಿ ಇವೆಯಂತೆ. ಒಟ್ಟು ಎಲ್ಲ ಪ್ರತಿಗಳಲ್ಲಿರುವ ಪದ್ಯಗಳನ್ನು ಸೇರಿಸಿದರೆ ಸುಮಾರು ೧೪೦ ಪದ್ಯಗಳಿವೆಯಂತೆ. ನಿರ್ಣಯ ಸಾಗರ ಪ್ರೆಸ್ ನವರು ಸಂಪಾದಿಸಿ ಪ್ರಕಟಿಸಿರುವ ಅಮರು ಶತಕದಲ್ಲಿ ಇದು ೧೩೩ನೇ ಪದ್ಯ.

Rating
No votes yet