ಸರ್ಪ್ರೈಸ್ !

ಸರ್ಪ್ರೈಸ್ !

ಅಮ್ಮಾ...ನಾನು ಹೊರಟೆ, ಮುಂದಿನ ಬಾರಿ ಬರುವಾಗ ನಿನಗೊಂದು ಸರ್ಪ್ರೈಸ್ ಇದೆ..
ಏನೋ ಅದು ನನ್ನಲ್ಲೂ ಹೇಳಕ್ಕಾಗದೇ ಇರೋವಂತಹ  ಸರ್ಪ್ರೈಸ್... ಈಗ್ಲೇ ಹೇಳಿದ್ರೆ ಚೆನ್ನಾಗಿರಲ್ಲ ಅಮ್ಮಾ.. ಮುಂದಿನ ಬಾರಿ ಬಂದಾಗ ನೀನೇ ನೋಡುವಿಯಂತೆ.. ಹೀಗಂದಿದ್ದ ಸನತ್ ಅಪ್ಪ ಅಮ್ಮ ಅಕ್ಕನಿಗೆ ಬಾಯ್ ಹೇಳಿ ಅಕ್ಕನ ಪುಟ್ಟ ಪಾಪು ಆತನ ಮುದ್ದಿನ ಕೃಷ್ಣನಿಗೆ ಮುತ್ತಿಕ್ಕಿ ಹೊರಟಿದ್ದ..
(ಹುಷಾರು  ಮಗಾ..ಬೈಕ್‌ನಲ್ಲಿ ಜಾಸ್ತಿ ಓಡಾಡ್ಬೇಡ..ಬರುವಾಗ ಬಸ್ಸಿನಲ್ಲೇ ಬಾ ಎಂದು ಕೂಗಿ ಕೇ ಬೀಸುತ್ತಲೇ ಇದ್ದರು ಅಮ್ಮಾ..)
ಮೂಡಬಿದಿರೆಯ ಪುಟ್ಟ ಹಳ್ಳಿಯ ಚೊಕ್ಕ ಸಂಸಾರ ಆತನದು. ಅಪ್ಪ, ಅಮ್ಮ, ಇಬ್ಬರದೂ ಶಿಕ್ಷಕ ವೃತ್ತಿ. ಊರಿನ ಹತ್ತಿರದ ಎರಡು ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರು. ಆರತಿಗೊಬ್ಬ ಮಗಳು, ಕೀರುತಿಗೊಬ್ಬ ಮಗ ಎಂಬಂತೆ ಇಬ್ಬರು ಮಕ್ಕಳು. ಅಕ್ಕ ತನ್ನ ಎಮ್.ಎಸ್.ಸಿ ಮುಗಿಸಿ, ಮದುವೆಯಾಗಿ, ಕಳೆದ ವರ್ಷವಷ್ಟೆ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಸನತ್ ಆರು ತಿಂಗಳ ಹಿಂದೆಯಷ್ಟೆ ಸ್ನಾತಕೋತ್ತರ ಪದವಿ ಪಡೆದು ರಾಜ್ಯದ ಖಾಸಗಿ ಟಿ.ವಿ.ವಾಹಿನಿಯೊಂದರ ವರದಿಗಾರನಾಗಿ ನೇಮಕಗೊಂಡು ದಾವಣಗೆರೆಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಹೀಗೆ ಯಾವುದೇ ಅಡೆತಡೆಯಿಲ್ಲದೆ ಮಕ್ಕಳ ವಿದ್ಯಾಭ್ಯಾಸವೂ ಮುಗಿದು ಎಲ್ಲವೂ ಒಂದು ಹಂತಕ್ಕೆ ತಲುಪಿತು ಎಂಬ ನಿಟ್ಟುಸಿರಲ್ಲಿ ಆ ಕುಟುಂಬ ಸಂತೋಷವಾಗಿ ಕಾಲಕಳೆಯುತ್ತಿತ್ತು.
ಆರಂಭದಲ್ಲಿ ಸುಲಭ ಎನಿಸಿದ ವರದಿಗಾರಿಕೆ ಕೆಲಸ, ಬರಬರುತ್ತಾ... ಕಷ್ಟ ಎನಿಸತೊಡಗಿತು ಸನತ್‌ಗೆ. ಅಲ್ಲದೆ ದೂರದ ಊರಿನಲ್ಲಿ ಕಾಡುತ್ತಿದ್ದ ಒಂಟಿತನ. ತನ್ನವರು ಅಂತ ಹೇಳಿಕೊಳ್ಳಲು ಯಾರೂ ಇಲ್ಲ. ತಾನಾಯಿತು ತನ್ನ ಕೆಲಸವಾಯಿತು ಇದೇ ಪ್ರಪಂಚ. ಹೀಗಾಗಿ ಆಗಾಗ ಕರೆಮಾಡುತ್ತಿದ್ದ ಸ್ನೇಹಿತರೊಂದಿಗೆ ತನ್ನ ಮನದ ದು:ಖವನ್ನು ಹಂಚಿಕೊಳ್ಳುತ್ತಿದ್ದ. "ಸಾಕು ಮಾರಾಯಾ..ಈ ಕೆಲಸ..ಬೇಜಾರಾದಾಗ ಮಾತಾಡೋರು ಇಲ್ಲಿ ಇಲ್ಲ..ಊರಿಗೆ ಬಂದು ಏನಾದರೂ ಬ್ಯುಸಿನೆಸ್ ಮಾಡಿಕೊಂಡು ಮನೆಯವರ ಜತೆ ಆರಾಮಾಗಿ ಕಾಲ ಕಳೆಯಬೇಕು ಅನ್ನೋ ಪ್ಲಾನ್ ಇದೆ" ಎಂದು ಆಗಾಗ ಹೇಳಿಕೊಳ್ಳುತ್ತಿದ್ದ. ಅಲ್ಲದೆ ನಾವು (27 ಮಂದಿಯ ಒಂದು ಎಂ.ಸಿ.ಜೆ. ಬ್ಯಾಚ್) ತಯಾರಿಸಿದ ಆರು ಬೇರೆ ಬೇರೆ ವಿಷಯಗಳನ್ನಾಧರಿಸಿದ ಸಾಕ್ಷ್ಯ ಚಿತ್ರಗಳು ಇನ್ನೂ ಅಧಿಕೃತವಾಗಿ ಬಿಡುಗಡೆಯಾಗದೆ ಹಾಗೆ ಉಳಿದಿವೆ. ಎಲ್ಲರೂ ಒಟ್ಟಾಗಿ ಅದನ್ನೊಂದು ದಿನ ನಿಗದಿಪಡಿಸಿ ಬಿಡುಗಡೆ ಮಾಡೋಣ, ನಾನೇ ಮುಂದಿನ ಬಾರಿ ಬಂದಾಗ ಸರ್ ಜೊತೆ ಮಾತಾಡಿ ಎಲ್ಲರಿಗೂ ಕಾಲ್ ಮಾಡ್ತೇನೆ ಅಂದಿದ್ದ.
ಹೀಗೆ ಎಂದಿನಂತೆ ದಿನಗಳು ಉರುಳತೊಡಗಿದ್ದವು...
ಅಕ್ಕನ ಮಗನ ಹುಟ್ಟಿದ ಹಬ್ಬ ಫೆಬ್ರವರಿ 22ರಂದು. ಅಮ್ಮ, ಅಕ್ಕ ಎಲ್ಲರೂ ಆ ದಿನ ರಜೆ ಮಾಡಿ ಬಾ ಎಂದು ಹಲವು ಬಾರಿ ಫೋನಾಯಿಸಿದ್ದರು. ಆದರೆ ಆತ
"ಇಲ್ಲಮ್ಮಾ ರಜೆ ಇಲ್ಲ..ಏನ್ಮಾಡ್ಲಿ.. ಅರ್ಜೆಂಟ್ ಕೆಲ್ಸ ಬಂದ್ರೆ ವಾಪಾಸ್ ಬರ್ಬೇಕಾಗತ್ತೆ" ಎಂದೆಲ್ಲ ಹೀಳಿದ್ದ.
ಸರಿ ಕಣೋ ಆಗಲ್ಲ ಅಂದ್ಮೇಲೆ ಏನ್ಮಾಡ್ಲಿ ಪರ್ವಾಗಿಲ್ಲ ರಜೆ ಇರೋವಾಗ್ಲೇ ಬಂದ್ಬಿಡು..ಹುಷಾರು..ಎಂದು ಹೇಳಿದ್ದರು.
ಅದಕ್ಕಾಗಿಯೇ 22ನೇ ತಾರೀಕು ವಾರದ ಮಧ್ಯೆ ಬರುವುದರಿಂದ ಅದೇ ವಾರದ ಕೊನೆ ಶನಿವಾರ ಹಾಗೂ ಭಾನುವಾರ ರಜಾ ಬೇಕೆಂದು ತನ್ನ ಮೇಲಿನ ಅಧಿಕಾರಿಯಲ್ಲಿ ಪರ್ಮಿಷನ್ ಕೇಳಿಯೂ ಇಟ್ಟಿದ್ದ. ಅವರೂ ಅಸ್ತು ಅಂದಿದ್ದರು.
ಆದರೆ ಕಾಲನ ಕರೆ ಆತನಿಗೆ ಮುಂಚೆಯೇ ಗೊತ್ತಾಗಿತ್ತು ಅನ್ನಿಸುತ್ತದೆ. 21ರಂದು ಸಂಜೆ ಮೂರು ಗಂಟೆಗೆ ತನ್ನ ಗೆಳೆಯನಿಗೆ ಕಾಲ್ ಮಾಡಿದವನೆ ಯಾವುದೋ ಒಂದು ವಿಷುವಲ್ ಈಗ್ಲೇ ಕಚೇರಿಗೆ ಕಳಿಸಿ, ನಾನು ಮನೆಗೆ ಹೊರಟಿದ್ದೇನೆ ಬೈಕ್ ಕೊಂಡು ಹೋಗ್ತಾ ಇದ್ದೇನೆ..ನಾಳೆ ಅಕ್ಕನ ಮಗನ ಹುಟ್ಟಿದ ಹಬ್ಬ ಇದೆ ಎಂದು ಹೇಳಿ ಫೋನ್ ಕಟ್ ಮಾಡಿದ್ದ. ಅದೇ ಕೊನೆ ಮತ್ತೆಂದೂ ಆತ ಮಾತನಾಡಲೇ ಇಲ್ಲ.

ಅರ್ಧ ಮೈಲು ಹೋಗಬೇಕಾದರೂ ಹೆಲ್ಮೆಟ್ ಧರಿಸಿ ಹೋಗುತ್ತಿದ್ದ ಸನತ್ ಅಂದು ಬೈಕ್‌ನ ಹಿಂಬದಿಯಲ್ಲಿ ಹೆಲ್ಮೆಟ್ ಲಾಕ್ ಮಾಡಿ ಬೈಕ್ ಹತ್ತಿದ್ದ. ವಿಧಿ ಆತನನ್ನು ಹಿಂಬಾಲಿಸುತ್ತಲೇ ಇತ್ತು. ಚಿಕ್ಕಮಗಳೂರಿನ ಕಡೂರು ಕ್ರಾಸ್ ಬಳಿ ಹಿಂದಿನಿಂದ ಬಂದ ಕಾರ್ ಈತನ ಬೈಕ್‌ಗೆ ಡಿಕ್ಕಿಯಾಗಿ ತಲೆಗೆ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲೇ ಕಣ್ಣುಮುಚ್ಚಿದ. ಹಿಂದೆ ಮನೆಯಿಂದ ಹೊರಟಾಗ
ಅಮ್ಮಾ...ನಾನು ಹೊರಟೆ, ಮುಂದಿನ ಬಾರಿ ಬರುವಾಗ ನಿನಗೊಂದು ಸರ್ಪ್ರೈಸ್! ಇದೆ.. ಎಂದು ಹೇಳಿದ್ದ..ಆದರೆ ಈ ತರಹದ ಸರ್ಪ್ರೈಸ್ ಅಂತ ಅಂದೇ ಗೊತ್ತಿದ್ದರೆ ಆ ಹೆತ್ತ ತಾಯಿ ಆತನನ್ನು ತಡೆಯುತ್ತಿದ್ದಳೋ ಏನೋ.. ಬರೀ ಅಮ್ಮನಿಗಲ್ಲ..ಪ್ರಾಣಸ್ನೇಹಿತರು, ಬಂಧು-ಬಳಗ ಎಲ್ಲರಿಗೂ ಸರ್ಪ್ರೈಸ್! ನೀಡಿದ್ದ. ಮನೆಯಿಂದ ಹೊರಟಾಗ ಕೈಬೀಸಿ ಟಾಟಾ ಹೇಳಿದ್ದ ಕೈಗಳನ್ನು ಪೋಸ್ಟ್ ಮಾರ್ಟಂನಲ್ಲಿ ಬಿಗಿಯಾಗಿ ಕಟ್ಟಿಸಿಕೊಂಡು ಸರ್ಪ್ರೈಸ್! ನೀಡಿದ್ದ. ಆತನ ಸರ್ಪ್ರೈಸ್!ಗೆ ಇಡೀ ಊರೇ ಮೌನವಾಗಿ ರೋದಿಸುತ್ತಿತ್ತು. ಸ್ನೇಹಿತರ, ಹೆತ್ತವರ ರೋದನ ಮುಗಿಲುಮುಟ್ಟಿತ್ತು.
ಮನೆ ಮೊಮ್ಮಗನ ಹುಟ್ಟು ಹಬ್ಬ ಆಚರಿಸಿ ಸಂಭ್ರಮಿಸಬೇಕಾಗಿದ್ದ ಮನೆ ಮನದಲ್ಲಿ ಸ್ಮಶಾನ ಮೌನ ನೆಲೆಸಿತ್ತು.





 

Comments