ಈಕೆ ಹಣತೆಯಂತೆ..

ಈಕೆ ಹಣತೆಯಂತೆ..

ಅಶ್ವಿನಿ ಅಂಗಡಿ

ಜುಲೈ 12, ಯುನೈಟೆಡ್‍ ನೇಷನ್ಸ್‍ರವರು ಆ ದಿನವನ್ನು ‘ಮಲಾಲ ದಿನ’ ಎಂದು ಪಾಕಿಸ್ತಾನಿ ಮಕ್ಕಳ ಹಕ್ಕು ರಕ್ಷಣಾ ಹೋರಾಟಗಾರ್ತಿ ಮಲಾಲಗೆ ಗೌರವ ಸೂಚಿಸುವ ಸಲುವಾಗಿ ಘೋಷಿಸಿದ್ದಾರೆ. ಈ ದಿನದಂದು ವಿಶ್ವದಾದ್ಯಂತ ಶಿಕ್ಷಣಕ್ಕಾಗಿ ಹೋರಾಡುತ್ತಿರುವ ಯುವ ಮಂದಿಯನ್ನು ಆಯ್ಕೆ ಮಾಡಿ ಗೌರವಿಸುತ್ತಾರೆ. ಈ ಬಾರಿ ಕರ್ನಾಟಕದಿಂದ ಅಶ್ವಿನಿ ಅಂಗಡಿ ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ.

ಈಕೆಯ ಸಾಧನೆ ಹಲವರಿಗೆ ಸೂರ್ತಿದಾಯಕವಾದದ್ದು. ಹುಟ್ಟಿನಿಂದ ದೃಷ್ಟಿಹೀನೆಯಾಗಿರುವ ಈಕೆ ತನ್ನಂತೆಯಿರುವ ವಿಕಲ ಚೇತನರ ಬದುಕಿನಲ್ಲಿ ಹಣತೆಗಳನ್ನು ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈಕೆಯ ಬದುಕು ಒಂದು ಹಣತೆಯಂತೆ. ಈಕೆ ಮೂಲತಃ ಬಳ್ಳಾರಿಯ ಒಂದು ಹಳ್ಳಿಗೆ ಸೇರಿದವರು. ಹುಟ್ಟಿನಿಂದಲೇ ದೃಷ್ಟಿಹೀನಳಾಗಿದ್ದ ಮಗಳಿಗೆ ಉತ್ತಮ ಭವಿಷ್ಯ ನೀಡುವ ಸಲುವಾಗಿ ಈಕೆಯ ತಂದೆ-ತಾಯಿಗಳು ಬೆಂಗಳೂರಿಗೆ ಬಂದರು. ಆರಂಭದ ಶಿಕ್ಷಣವನ್ನು ಅಶ್ವಿನಿ ‘ರಮಣ ಮಹರ್ಷಿ ಅಂಧರ ಶಾಲೆ’ಯಲ್ಲಿ ಪಡೆದರು. ಅವರ ಮಾತಿನಲ್ಲೇ ಅವರ ಶಿಕ್ಷಣದ ಕತೆ ಹೀಗಿದೆ: “ಆರಂಭದಲ್ಲಿ ಅಂಧರ ಶಾಲೆಯಲ್ಲಿ ಓದಿದ್ದರಿಂದ ನನಗೆ ಯಾವುದೇ ತರಹದ ಸಮಸ್ಯೆಗಳು ಎದುರಾಗಲಿಲ್ಲ. ಸವಾಲುಗಳು ಎದುರಾದದ್ದೇ ನಾನು ಪಿಯು ಶಿಕ್ಷಣಕ್ಕೆ ಸಾಮಾನ್ಯರ ಕಾಲೇಜಿಗೆ ಸೇರಿದಾಗ. ನನ್ನ ಸಹಪಾಠಿಗಳಾಗಲಿ ನನ್ನ ಶಿಕ್ಷಕರಿಗಾಗಲಿ ನನ್ನಂತಹವರ ಸಮಸ್ಯೆಗಳು ಅರ್ಥವಾಗುತ್ತಿರಲಿಲ್ಲ. ಅವರೊಡನೆ ಬೆರೆತು ಓದುವುದು ನಿಜಕ್ಕೂ ನನಗೆ ಸವಾಲಾಗಿತ್ತು. ನಮ್ಮಂತಹ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ತರಹದ ಸೌಲಭ್ಯಗಳು ಲಭ್ಯವಿರುವುದಿಲ್ಲ. ಉದಾಹರಣೆಗೆ: ಬ್ರೈಲ್‍ ಲಿಪಿಯಲ್ಲಿ ಪುಸ್ತಕಗಳು, ವಿಶೇಷ ಸಾಫ್ಟವೇರ್‍ ಹೊಂದಿದ ಕಂಪ್ಯೂಟರ್‍ಗಳು, ಬ್ರೈಲ್‍ ಲಿಪಿ ಬಲ್ಲ ಶಿಕ್ಷಕರು ಹೀಗೆ. ನಾನು ತರಗತಿಯಲ್ಲಿ ಕೇಳಿದ ಪಾಠಗಳನ್ನು ರೆಕಾರ್ಡ ಮಾಡಿಕೊಂಡು ನನ್ನ ನೋಟ್ಸ ತಯಾರು ಮಾಡಿಕೊಳ್ಳಬೇಕಿತ್ತು. ನನ್ನ ಸಹಪಾಠಿಗಳು ಮತ್ತು ಶಿಕ್ಷಕರು ಅನುಕಂಪದಿಂದ ನನ್ನಂತಹ ವಿದ್ಯಾರ್ಥಿಗಳನ್ನು ನೋಡುತ್ತಿದ್ದರೆ ಹೊರತು ತಮ್ಮಂತೆ ನಮ್ಮನ್ನು ನಡೆಸಿಕೊಳ್ಳುತ್ತಿರಲಿಲ್ಲ. ಎಲ್ಲರೊಂದಿಗೆ ನಾನು ಬೆರೆಯಬಲ್ಲೆ ನನಗೆ ಬೇಕಿರುವುದು ಅನುಕಂಪವಲ್ಲ ನಿಮ್ಮೊಡನೆ ಇರುವ, ನಿಮ್ಮಂತೆ ಎಲ್ಲವನ್ನು ಮಾಡಬಲ್ಲ ಅವಕಾಶ ಮಾತ್ರ ಎಂದು ನಾನವರಿಗೆ ಮನದಟ್ಟು ಮಾಡಿಸಬೇಕಾಯಿತು. ಈಗಲೂ ನಾನು ಹೇಳುವುದು ಶಿಕ್ಷಣ ಪ್ರತಿಯೊಬ್ಬರಿಗೂ ಅವಶ್ಯಕ. ಅದರಲ್ಲೂ ವಿಕಲ ಚೇತನ ಹೆಣ್ಣು ಮಕ್ಕಳು ವಿದ್ಯಾವಂತರಾಗಬೇಕು. ಸಾಮಾಜಿಕ ಆರ್ಥಿಕ ಸ್ವಾವಲಂಬನೆ ಗಳಿಸಿಕೊಳ್ಳಬೇಕು. ನನ್ನ ಈ ಉದ್ದೇಶ ಈಡೇರಿಕೆಗಾಗಿಯೇ ನಾನೀಗ ದುಡಿಯುತ್ತಿದ್ದೇನೆ. ಇದಕ್ಕೆ ಸಮಾನ ಮನಸ್ಕರ ಸಹಕಾರ ಅತ್ಯಗತ್ಯ.”

ಹೀಗೆ ಶಿಕ್ಷಣ ಪಡೆದ ಅಶ್ವಿನಿ ಪಿಯು ಮತ್ತು ಪದವಿ ಎರಡರಲ್ಲೂ ರ‍್ಯಾಂಕ್‍ ಪಡೆದಿದ್ದಾರೆ. ಪದವಿಯ ನಂತರ ಐಟಿಯಲ್ಲಿ ದೊರೆತ ಉದ್ಯೋಗವನ್ನು ಬಿಟ್ಟು ಅವರು ಆಯ್ಕೆ ಮಾಡಿಕೊಂಡಿದ್ದು ತಮ್ಮಂತೆ ಇರುವವರ ಬದುಕಿನಲ್ಲಿ ಹಣತೆ ಹಚ್ಚುವ ಕೆಲಸ. ಲಿಯೊನಾರ್ಡ ಚೆಸ್ಹೈರ್ ಎಂಬ ಎನ್‍ಜಿಒದಲ್ಲಿನ ಮಹೇಶ್ ಚಂದ್ರಶೇಖರ್‍ ಅವರ ಮೂಲಕ ಅವರಿಗೆ ಈ ಅವಕಾಶ ದೊರೆಯಿತು. ಅವರು ಮೊದಲಿಗೆ ಈಕೆಯನ್ನು ಸ್ವಿಟ್ಜರ್‍ಲ್ಯಾಂಡ್‍ನಲ್ಲಿ ನಡೆಯಲಿರುವ ಕಾನ್ಫರೆನ್ಸ್‍ ಒಂದರಲ್ಲಿ ಭಾಗವಹಿಸಲು ಕೇಳಿದರಂತೆ. ಆದರೆ ಸಮಯಕ್ಕೆ ಸರಿಯಾಗಿ ಪಾಸ್‍ಪೋರ್ಟ್‍ ಸಿಗದ ಕಾರಣ ಅಶ್ವಿನಿ ಅದರಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ ಟೆಲಿಕಾನ್ಫರೆನ್ಸ್‍ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವನ್ನು ಮಹೇಶ್‍ ಚಂದ್ರಶೇಖರವರು ಅಶ್ವಿನಿಗೆ ದೊರಕಿಸಿಕೊಟ್ಟರು. ಅದೇ ರೀತಿ ಯಂಗ್ ವಾಯ್ಸ್‍ ಎನ್ನುವ ಯೋಜನೆಯಡಿಯಲ್ಲಿ ವಿಕಲ ಚೇತನರನ್ನು ಭೇಟಿ ಮಾಡುವ ಮತ್ತು ಅವರ ಸಂದರ್ಶನ ಪಡೆದು ರಿಪೋರ್ಟ್ ತಯಾರು ಮಾಡುವ ಕೆಲಸಕ್ಕೆ ಈಕೆಯನ್ನು ಹಚ್ಚಿದರು. ಈ ಯೋಜನೆಯಲ್ಲಿ ಕೆಲಸ ಮಾಡಲು ಆರಂಭಿಸಿದ್ದೇ ಅವರ ಕೆಲಸ ವಿಶ್ವದ ಗಮನ ಸೆಳೆಯಲು ಕಾರಣವಾಯಿತು. ಈ ಬಾರಿಯ “ಯಂಗ್‍ ಕರೇಜ್‍ ಅವಾರ್ಡ ಫಾರ್‍ ಎಜುಕೇಷನ್‍” ಪ್ರಶಸ್ತಿ ಅಶ್ವಿನಿಯ ಪಾಲಾಯಿತು.

‘ಒಂದು ಮಗು, ಒಬ್ಬ ಶಿಕ್ಷಕ, ಒಂದು ಪೆನ್ನು ಮತ್ತು ಒಂದು ಪುಸ್ತಕ ವಿಶ್ವವನ್ನೇ ಬದಲಾಯಿಸಬಲ್ಲುದು’ ಎಂದ ಮಲಾಲಳ ಮಾತು ಹಾಗೂ ‘ವಿಕಲ ಚೇತನರಿಗೂ ಎಲ್ಲ ಸಾಮಾನ್ಯರೂ ಪಡೆವಂತಹ ಶಿಕ್ಷಣ ದೊರೆಯಬೇಕು. ಅದರಲ್ಲೂ ವಿಕಲ ಚೇತನ ಹೆಣ್ಣು ಮಕ್ಕಳು ವಿದ್ಯಾವಂತರಾಗಬೇಕು. ಸ್ವಾವಲಂಬಿಗಳಾಗಬೇಕು. ಇದಕ್ಕೆ ಸಮಾಜದ ನೆರವು ಅತ್ಯಗತ್ಯ’ ಎಂದ ಅಶ್ವಿನಿ ಅಂಗಡಿಯ ಮಾತುಗಳು ಶಿಕ್ಷಣದ ಶಕ್ತಿಯನ್ನು ತೋರಿಸುವುದರೊಂದಿಗೆ ಹೆಣ್ಣುಮಕ್ಕಳ ಹೋರಾಟಕ್ಕೆ ಸೂರ್ತಿಯನ್ನು ನೀಡುವಂತದ್ದಾಗಿದೆ.

ಅಶ್ವಿನಿ ಅಂಗಡಿಯವರನ್ನು ಇಲ್ಲಿ ನೋಡಬಹುದು:

http://www.youtube.com/watch?v=JmaRJJ-Ab3s

 

ಚಿತ್ರಕೃಪೆ: timesofindia.indiatimes.com

Comments

Submitted by Vasant Kulkarni Tue, 08/06/2013 - 10:20

ಸ್ಫೂರ್ತಿದಾಯಕ ಲೇಖನ. ಅಷ್ಟೇ ಸುಂದರ ತಲೆಬರಹ. ಅಶ್ವಿನಿ ಅಂಗಡಿಯವರ ಸಾಧನೆ ಎಲ್ಲರೂ ಮಾದರಿಯಾಗಲಿ.