ಪುಟ್ಟನ ಅಳಲು ..

ಪುಟ್ಟನ ಅಳಲು ..

ಮತ್ತೊಂದು 'ಬಾಲ ಮಂಗಳ'ದಲಿ ಪ್ರಕಟಿತವಾಗಿದ್ದ ಶಿಶುಗೀತೆ - 'ಪುಟ್ಟನ ಅಳಲು'. ಆಧುನಿಕ ಜೀವನ ಸ್ಪರ್ಶದ ದೆಸೆಯಿಂದಾಗಿ, ಈಗಲೂ ಪರಿಸ್ಥಿತಿಯಲ್ಲಿ ತೀರ ಬದಲಾವಣೆಯಾಗಿರಲಾರದೆಂಬ ಅನಿಸಿಕೆಯೊಡನೆ ಇದನ್ನೂ ಸಂಪದದಲ್ಲಿ ಪ್ರಕಟಿಸುತ್ತಿದ್ದೇನೆ - ನಾಗೇಶ ಮೈಸೂರು

ಪುಟ್ಟನ ಅಳಲು ..
‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍------------------------

ಅಮ್ಮಾ...ಅಮ್ಮಾ...
ನನ್ನಮ್ಮಾ 
ನನ್ನಯ ಅಳಲು ಕೇಳಮ್ಮ                                || ಅಮ್ಮಾ ||

ಹತ್ತೇ ತಿಂಗಳ 
ಹಸುಗೂಸಮ್ಮ
' ಏ ಬಿ ಸಿ ಡಿ ' ಏಕಮ್ಮ?
ತೊದಲುವ ಬಾಯಲೇ 
ಡ್ಯಾಡಿ,ಮಮ್ಮೀ 
ಎಂದೆನಿಸುವ ಹಠ ಬೇಡಮ್ಮ                              || ಅಮ್ಮಾ ||

ಹಲ್ಲುಗಳೆರೆಡೇ
ಮೊಳೆತಿದೆಯಷ್ಟೇ,
ಬೇವಿನ ಕಹಿಯುಣಿಸೆಕಮ್ಮ?
ಹಾಲನು ಕುಡಿದು 
ಡುಮ್ಮನಾಗುವೆ
ಬಾಟಲ್ ಹಾಲು ಬೇಡಮ್ಮ                                || ಅಮ್ಮಾ ||

ಬೆಳಗಿನ ನಿದ್ದೇಲಿ 
ಮೈಮರೆತಾಗ 
ಎಲ್ಲಿಗೆ ಹೊರಟೇ? ಹೇಳಮ್ಮ 
ಬೆಚ್ಚಿದ ಒಡಲಿಗೆ 
ಬೆಚ್ಚನೆ ಮಡಿಲಿಗೆ 
ದಾದಿಯಿದ್ದರೆ ಸಾಕೆನಮ್ಮ?                              || ಅಮ್ಮಾ ||

ಬೆಳಗಿನಿಂದಲಿ 
ಬೈಗಿನವರೆಗೂ 
ನಿನ್ನಯ ಸುಳಿವೇ ಇಲ್ಲಮ್ಮ
ಸ್ಕೂಟರಿನಲ್ಲಿ ಅಪ್ಪನ ತಬ್ಬಿ
ಹೊರಟಿದ್ದಾದರೂ ಎಲ್ಲಮ್ಮ                                || ಅಮ್ಮಾ ||

ಹಸಿವೆಂದಾಗ
ಅಳುವೆಂದಾಗ 
ಕೇಳಲು ಯಾರು ಇಲ್ಲಮ್ಮ
ಕನಸಿನಲೆಲ್ಲ 
ಗುಮ್ಮನ ಕಾಟ
ಹೆದರಿ ಅಳುತಿರುವೆ ಬಾರಮ್ಮಾ                          || ಅಮ್ಮಾ ||

ಆಫೀಸಂತೆ 
ಗೀಫೀಸಂತೆ 
ಅಂತೆ ಕಂತೆಗಳು ಬೇಡಮ್ಮ
ಚೇಷ್ಟೆಯ ಮಾಡಲು 
ದೂರು ಬಂದರೆ
ಹೊಡೆದು, ರಮಿಸುವುದು ಯಾರಮ್ಮ?                  || ಅಮ್ಮಾ ||

ಹೊಟ್ಟೆ ತುಂಬಿ
ಆಡುವ ಹೊತ್ತಲಿ 
'ಅಪ್ಪ,ಅಮ್ಮ' ಕಲಿಸಮ್ಮ
ಮುದ್ದಿಸಿ ನನ್ನನು 
'ಕಂದಾ' ಎಂದು 
ತಟ್ಟಿ ನಿದಿರೆಯ ಬರಿಸಮ್ಮ                                || ಅಮ್ಮಾ ||

ನನಗೂ ಬೇಕು
ಅಪ್ಪಾ, ಅಮ್ಮಾ..
'ಬೇಬಿ ಸಿಟ್ಟಿಂಗ್' ಅಲ್ಲಮ್ಮ 
ಸೆರಗನು ಹಿಡಿದು 
ತೊಡರುತ ನಡೆಯಲು 
ಮನೆಯಲಿ ನೀನಿರಬೇಕಮ್ಮ !                            || ಅಮ್ಮಾ ||

'ಮಾಮಿಯ ಆಣೆ' 
ನನ್ನಮ್ಮ..
ಬಿಟ್ಟು ಹೋಗುವುದು 
ಬೇಡಮ್ಮ..
ಪ್ರೀತಿಯಾಟದಲಿ ನಲಿಸಮ್ಮ
ನೀತಿ ಪಾಠಗಳ ಕಲಿಸಮ್ಮ!                                || ಅಮ್ಮಾ ||

===================================
ನಾಗೇಶ ಮೈಸೂರು (ದಿನಾಂಕ :  ೩೦.ಡಿಸೆಂಬರ.೧೯೯೧)
(೧೫.ಆಗಸ್ಟ್.೧೯೯೨ ರ 'ಬಾಲ ಮಂಗಳ' ದಲ್ಲಿ ಪ್ರಕಟಿತ
===================================
 

Comments

Submitted by Tejaswi_ac Thu, 07/25/2013 - 15:02

ನಾಗೇಶ್ ರವರೆ, ಅಪರೂಪದಿ ಸಂಪದದಲ್ಲಿ ಶಿಶು ಗೀತೆ ನೋಡಿ ಖುಷಿಯಾಯಿತು. ೧೯೯೧ ಹಾಗೂ ೧೯೯೨ ರಲ್ಲಿ ನಾನು ಚಿಕ್ಕ ಹುಡುಗ. ಬಾಲ ಮಂಗಳವನ್ನು ಓದುತ್ತಿದ್ದ ಕಾಲ. ಡಿಂಗ ನನ್ನ ನೆಚ್ಚಿನ ಪಾತ್ರವಾಗಿತ್ತು.
Submitted by venkatb83 Thu, 07/25/2013 - 15:49

In reply to by Tejaswi_ac

ಬಾಲ ಮಂಗಳವನ್ನು ನಾನು ೧೦ ನೆ ಕ್ಲಾಸ್ ವರಗೆ ಓದಿರುವೆ , ಬಹು ಅಹ್ಚು ಮೆಚ್ಚಿನ ಮಕ್ಕಳ ಪತ್ರಿಕೆ ಅದು . ಡಿಂಗ - ನನ್ನ ಬಹು ಸೆಳೆದ ಪಾತ್ರ ... ಅಲ್ಲಿಯ ಕಥೆಗಳು - ಚಿತ್ರಗಳೂ ಸೂಪರ್ .. ಆ ಪುಸ್ತಕ ಕೊಂಡು ಮನೆಗೆ ತರುವಾಗ ಮೊದಲಿಗೆ ಮನೆಯವರು ಬಯ್ದರೂ ಆಮೇಲೆ ಅವರೂ ಓದಿ ನಲಿಯುತ್ತಿದ್ದರು.. ಆ ಪತ್ರಿಕೆ ಈಗಲೂ ಪ್ರಸಾರದಲ್ಲಿದ್ದು ಈಗಲೂ ಜನ ಮನ ರಂಜಿಸುತ್ತಿದೆ.. ನಾಗೇಶ್ ಅವರೇ ನಿಮ್ಮ ಈ ಬರಹವನ್ನು ನಾ ಓದಿರಿಲಿಕ್ಕು ಉಂಟು ಆದರೆ ನೆನಪಿಲ್ಲ . . ಈಗ ಗೊತ್ತಾದ ಸತ್ಯ ಎಂದರೆ - ನೀವು ಯಾವತ್ತೋ ಒಳ್ಳೊಳ್ಳೆ ಬರಹಗಳನ್ನು ಬರೆದಿರುವಿರಿ ಆದರೆ ನಮ್ಮೆಲ್ಲರ ಕಣ್ಣಿಗೆ ಬಿದ್ದಿರಲಿಲ್ಲ. ಆದರೆ ತಡವಾದರೂ ಈಗ ಇಲ್ಲಿ ಸಕ್ರಿಯರಾಗಿರುವುದು ಖುಷಿ ತಂತು.. ನಿಮ್ಮ ಬರಹಗಳನು ಎಲ್ಲರೂ ಓದಬೇಕು ಎಂಬ ಹಂಬಲ ನನ್ನದು ಅದಕ್ಕಾಗಿ ನೀವು ಈ ಬರಹಗಳನ್ನು ಇಲ್ಲೆಲ್ಲಾ ಪ್ರಕಟಿಸಿ ಹಾಗೆಯೇ ಫೆಸ್ಬುಕ್ ಮತ್ತು ಮಯೂರ- ತುಷಾರ --ಕಸ್ತೂರಿ - ಕರ್ಮವೀರ -ತರಂಗ -ಸುಧಾ ಈ ತರಹದ ಮಾಸಿಕ ವಾರ ಪತ್ರಿಕೆಗಳಲು ಪ್ರಕಟಿಸಿ . ಈಗ ವಿಜಯವಾಣಿ ಮತ್ತು ಪ್ರಜಾವಾಣಿ ಅವರು ದೀಪಾವಳಿ ವಿಶೇಷಾಂಕಕ್ಕೆ ಕಥೆ ಕವನ ಆಹ್ವಾನಿಸಿರುವರು ಅಲ್ಲಿಗೆ ನಿಮ್ಮ ಬರಹಗಳನ್ನು ಕಳಿಸಿ - ಅವರಿಹ್ಗೆ ಎಲ್ಲೋ ಪ್ರಕಟ ಆಗಿರದ ಹೊಸ ಬರಹಗಳು ಬೇಕು - ನೀವು ಹೊಸ ಬರಹಗಳನ್ನು ಕ್ಷಣ ಮಾತ್ರದಲ್ಲಿ ಸೃಷ್ಟಿಸುವ ಜಾದುಗಾರ - ಹಾಗಾಗಿ ಬರಹಗಳನ್ನು ಅಲ್ಲಿಗೆ ಕಳುಹಿಸಿ .. ಈ ಪುಟನ ಅಳಲು ಈಗಿನ ಬಹುಪಾಲು ಪುಟ್ಟ ಪುಟ್ಟಿಯರ ಅಳಲೂ ಹೌದು.. ;()( ಶುಭವಾಗಲಿ \।
Submitted by nageshamysore Fri, 07/26/2013 - 18:27

In reply to by venkatb83

ಸಪ್ತಗಿರಿಗಳೆ, ಆ ಸಮಯದಲ್ಲಿ ಡಿಂಗನ ಹಾಗೆ ಮಜಾ ಕೊಡುತ್ತಿದ್ದ ಸುಧಾದ 'ಶೂಜ' , ಹಾಸ್ಯಾಸ್ಪದ 'ಮಜನೂ' ಎಲ್ಲರೂ ನೆನಪಾಗುತ್ತಿದ್ದಾರೆ. ಟೀವಿಗಳ ಹಾವಳಿಯಿಲ್ಲದ ಆ ಕಾಲದಲ್ಲಿ ಪುಸ್ತಕಗಳೆ ನಮ್ಮ ಬಂಡವಾಳವಾಗಿರುತ್ತಿತ್ತು. ನೀವು ಹೇಳಿದ ದೀಪಾವಳಿ ವಿಶೇಷಾಂಕದ ವಿವರ ಆನ್ಲೈನಿನಲ್ಲಿ ಸಿಗುವುದೆ? ನಿಮ್ಮ ಮಾತಿನಂತೆ ಕಳಿಸಲು ಖಂಡಿತ ಪ್ರತ್ನಿಸುತ್ತೇನೆ - ಅಲ್ಲೆಲ್ಲ ಹಾಕುವರೊ ಇಲ್ಲವೊ ಗೊತ್ತಿಲ್ಲ - ಆದರೂ ಪ್ರಯತ್ನಿಸಲೇನಡ್ಡಿ?(ಅವರ) ಗ್ರಹಚಾರ ಕೆಟ್ಟು ಅಪ್ಪಿ ತಪ್ಪಿ ಪ್ರಕಟವಾದರೆ ಅದನ್ನು ಮೊದಲು ನೋಡಿ ಹೇಳುವವರೂ ಹೇಗೂ ನೀವೆ ಆಗಿರುತ್ತಿರಾ :-)
Submitted by nageshamysore Fri, 07/26/2013 - 18:18

In reply to by Tejaswi_ac

ತೇಜಸ್ವಿಯರೆ, ಡಿಂಗ ಬಾಲ್ಯದ ದಿನಗಳಲ್ಲಿ ನನಗೂ ಅಚ್ಚುಮೆಚ್ಚು! ಹಳೆ ಕಡತ ಒದರುವಾಗ ಸಿಕ್ಕ ಪುಸ್ತಕದ ಮೂಲಪ್ರತಿಯಿಂದಾಗಿ ಈ ಕವನಗಳು ಮತ್ತೆ ಸಿಕ್ಕಿದವು - ಹಾಗಾಗಿ ಡಿಜಿಟಲ್ ಕಾಪಿ ಮಾಡಿಟ್ಟೆ - ಮೆಚ್ಚುಗೆಗೆ ಧನ್ಯವಾದಗಳು :-)
Submitted by gopinatha Thu, 07/25/2013 - 17:50

ನಾಗೇಶರೇ ಮಕ್ಕಳಿಗಾಗಿ ನಮ್ಮಲ್ಲಿ ತುಂಬಾನೇ ಕಡಿಮೆ ಅನುಭೂತಿಯುಕ್ತ ಬರಹಗಳು ಇಷ್ಟವಾಯ್ತು
Submitted by nageshamysore Fri, 07/26/2013 - 18:32

In reply to by gopinatha

ಧನ್ಯವಾದಗಳು ಗೋಪಿನಾಥರೆ - ನಿಮ್ಮ ಮಾತು ನಿಜ. ಮಕ್ಕಳಿಗಾಗಿ ಮಕ್ಕಳಂತೂ ಬರೆಯುವ ಸಾಧ್ಯತೆ ಕಡಿಮೆ. ದೊಡ್ಡವರು ಮಕ್ಕಳ ಸಾಹಿತ್ಯದ ಕುರಿತು ಆಸ್ಥೆ ವಹಿಸುವುದೂ ಕಡಿಮೆ. ಅದರಲ್ಲೂ ಮಕ್ಕಳ ಅನುಭೂತಿಯ ದೃಷ್ಟಿಯೆಂದರೆ ಇನ್ನೂ ಕಡಿಮೆ.  ಹೀಗಾಗಿ, ಅಂತೂ ಇಂತೂ ....:-)
Submitted by kavinagaraj Fri, 07/26/2013 - 10:29

ಚೆನ್ನಾಗಿದೆ. ಆ ಅವಧಿಯಲ್ಲಿ ನನ್ನ ಮಕ್ಕಳಿಗೆ ಬಾಲಮಂಗಳ ತಪ್ಪದೇ ತಂದುಕೊಡುತ್ತಿದ್ದೆ.