೮೧. ಶ್ರೀ ಲಲಿತಾ ಸಹಸ್ರನಾಮ ೨೯೫ರಿಂದ ೨೯೮ನೇ ನಾಮಗಳ ವಿವರಣೆ

೮೧. ಶ್ರೀ ಲಲಿತಾ ಸಹಸ್ರನಾಮ ೨೯೫ರಿಂದ ೨೯೮ನೇ ನಾಮಗಳ ವಿವರಣೆ

ಲಲತಾ ಸಹಸ್ರನಾಮ ೨೯೫ - ೨೯೮

Ambikā अम्बिका (295)

೨೯೫. ಅಂಬಿಕಾ

         ಅಂಬಿಕಾ ಎಂದರೆ ಈ ವಿಶ್ವದ ತಾಯಿ. ಇದು ಶ್ರೀ ಮಾತಾ ಎನ್ನುವ ಮೊದಲನೇ ನಾಮಕ್ಕಿಂತ ಭಿನ್ನವಾದದ್ದು. ಅಲ್ಲಿ ಆಕೆಯನ್ನು ಈ ಸಮಸ್ತ ವಿಶ್ವದ ಎಲ್ಲಾ ಜೀವಿಗಳ ತಾಯಿಯೆಂದು ಸಂಭೋದಿಸಲಾಗಿತ್ತು. ಆದರೆ ಇಲ್ಲಿ ಅವಳು ಈ ಜಗತ್ತಿನ ಸಮಸ್ತ ಚರಾಚರ ವಸ್ತುಗಳ ಮಾತೆಯೆನಿಸಿದ್ದಾಳೆ. ಈ ನಾಮವು ದೇವಿಯ ಸೃಷ್ಟಿ ಕ್ರಿಯೆಯನ್ನು ಕುರಿತಾಗಿ ಹೇಳುತ್ತದೆ; ಸೃಷ್ಟಿಕ್ರಿಯೆಯು ಇಚ್ಛಾ ಶಕ್ತಿ (ಆಸೆ ಅಥವಾ ಬಯಕೆ), ಜ್ಞಾನ ಶಕ್ತಿ (ತಿಳುವಳಿಕೆ ಅಥವಾ ಅರಿವು) ಮತ್ತು ಕ್ರಿಯಾ (ಕೆಲಸ ಮಾಡುವ) ಶಕ್ತಿಗಳನ್ನು ಒಳಗೊಂಡಿದೆ. ಒಂದು ಹೇಳಿಕೆಯೂ ಇದೆ, ಅದೇನೆಂದರೆ ಶಿವನು ಹಗಲನ್ನು ಪ್ರತಿನಿಧಿಸಿದರೆ, ದೇವಿಯು ರಾತ್ರಿಯನ್ನು ಪ್ರತಿನಿಧಿಸುತ್ತಾಳೆ; ಮೂಲಭೂತವಾಗಿ ತನ್ನ ಮಾಯೆಯ ಕಾರಣದಿಂದಾಗಿ.

Anādi-nidhanā अनादि-निधना (296)

೨೯೬. ಅನಾದಿ-ನಿಧನಾ

          ದೇವಿಗೆ ಆದಿಯೂ ಇಲ್ಲಾ ಹಾಗೆಯೇ ಅಂತ್ಯವೂ ಇಲ್ಲದವಳು. ಇಲ್ಲಿ ಬ್ರಹ್ಮದ ಗುಣಲಕ್ಷಣಗಳನ್ನು ವಿವರಿಸಲಾಗಿದೆ; ಏಕೆಂದರೆ ಅದೊಂದೇ ಅನಂತವಾದದ್ದು.

        ಆನಂದವೆನ್ನುವುದು ಎರಡು ವಿಧವಾದದ್ದು. ಮೊದಲನೆಯದು ಆತ್ಮಸಾಕ್ಷಾತ್ಕಾರವಾಗಿದೆ ಎನ್ನುವ ಭಾವನೆ ಉಂಟಾಗುವುದು; ಒಬ್ಬನು ಬ್ರಹ್ಮಸಾಕ್ಷಾತ್ಕಾರದಿಂದ ಯೋಜನಗಳಷ್ಟು ದೂರವಿದ್ದರೂ ಸಹ. ಈ ವಿಧವಾದ ಭ್ರಮೆಯು ದೈವಸಾಕ್ಷಾತ್ಕಾರ ಅಥವಾ ಆತ್ಮಸಾಕ್ಷಾತ್ಕಾರಕ್ಕೆ ಇರುವ ತೊಡಕೆಂದು ಭಾವಿಸಲಾಗಿದೆ. ಇದು ಮಾಯೆಯಿಂದ ಉತ್ಪನ್ನವಾಗಿರುವುದರಿಂದ, ಯಾರು ಆಧ್ಯಾತ್ಮಿಕ ಸಾಧನೆಯನ್ನು ಹೊಂದಲು ಯೋಗ್ಯರೋ ಅಂಥಹವರಲ್ಲಿ ದೇವಿಯು ಈ ವಿಧವಾದ ಮಾಯೆಯನ್ನು ತೊಲಗಿಸುತ್ತಾಳೆ. ಎರಡನೆಯ ವಿಧವಾದ ಆನಂದವೆಂದರೆ, ಆಧ್ಯಾತ್ಮಿಕ ಸಾಧನೆಯ ಹಾದಿಯಲ್ಲಿ ಗಳಿಸಿಕೊಳ್ಳುವ ಕೆಲವೊಂದು ಸಿದ್ಧಿಗಳು. ಉದಾಹರಣೆಗೆ, ಒಳಅರಿವು ಅಥವಾ ಅಪರೋಕ್ಷ ಜ್ಞಾನ ಶಕ್ತಿ (intuitive power), ಮಿಂಚಿನಂತೆ ಬ್ರಹ್ಮಸಾಕ್ಷಾತ್ಕಾರವಾಗುವುದು - ಬಹುಶಃ ಗುರುವೊಬ್ಬನ ಅಥವಾ ಬೇರೊಬ್ಬರ ಮಾತುಗಳಿಂದಾಗಿ, ಋಷಿಮುನಿಯೊಬ್ಬರೊಂದಿಗಿನ ಅನಿರೀಕ್ಷಿತ ಭೇಟಿಯಿಂದಾಗಿ ಕೇವಲ ಆತನ ಕಣ್ಣೋಟ ಮೊದಲಾದವುಗಳಿಂದ ದೈವೀ ಶಕ್ತಿಯ ಸಂವಹನೆಯಾಗುವುದು. ಈ ಅನಿರೀಕ್ಷಿತ ಅವಕಾಶದಿಂದ ಒಬ್ಬ ವ್ಯಕ್ತಿಯು ಪ್ರಾಪಂಚಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಉನ್ನತ ಸ್ಥಾಯಿಗಳನ್ನು ತಲುಪಬಹುದು ಇವು ಎಲ್ಲವೂ ಆಕೆಯ ಇಚ್ಛೆಗನುಗುಣವಾಗಿಯೇ ಜರುಗುತ್ತವೆ. ಇಂತಹ ಸಂತೋಷದಾಯಕವಾದ ಕ್ರಿಯೆಗಳಿಗೆ ಕಾರಣಕರ್ತಳಾಗಿರುವುದರಿಂದ ಮತ್ತು ಆಕೆಯ ಇಂತಹ ಕ್ರಿಯೆಗಳಿಗೆ ಆರಂಭವಾಗಲಿ ಅಥವಾ ಅಂತ್ಯವಾಗಲಿ ಇಲ್ಲದೇ ಇರುವುದರಿಂದ ಆಕೆಯನ್ನು ಅನಾದಿ-ನಿಧನಾ ಎಂದು ಕರೆಯಲಾಗಿದೆ.

        ಅನಾದಿ ಎಂದರೆ ನಿತ್ಯನಿರಂತರಳಾಗಿರುವವಳು ಮತ್ತು ನಿಧನಾ ಎಂದರೆ ವಾಸವಾಗಿರುವವಳು. ನಿಧನ ಎಂದರೆ ವಿನಾಶವೆನ್ನುವ ಅರ್ಥವೂ ಇದೆ. ಸಾಂಖ್ಯ ಸೂತ್ರವು (೩.೩೮, ೩೯ ಮತ್ತು ೪೦) ಮೂರು ವಿಧವಾದ ವಿನಾಶಗಳನ್ನು ಕುರಿತಾಗಿ ಹೇಳುತ್ತದೆ (ವಾಸ್ತವವಾಗಿ ಅವು ವಿನಾಶಗಳಲ್ಲ ಆದರೆ ವಿಕಾರಗಳು); "ಅಸಮರ್ಥತೆಯು  ೨೮ ಪಟ್ಟಿದ್ದು, ಒಪ್ಪಿಗೆಯು ೯ ಪಟ್ಟಿದ್ದು, ಪರಿಪೂರ್ಣತೆಯು ೮ ಪಟ್ಟು ಇರುತ್ತದೆ". ಅಸಮರ್ಥತೆ ಎಂದರೆ ಶಕ್ತಿಯಿಲ್ಲದಿರುವಿಕೆ. ಒಬ್ಬನು ದೇವಿಯನ್ನು ತನ್ನ ಐದು ಜ್ಞಾನೇಂದ್ರಿಯಗಳಿಂದ ಹಾಗೂ ಐದು ಕರ್ಮೇಂದ್ರಿಯಗಳಿಂದ ಪೂಜಿಸಬಹುದು ಮತ್ತು ಮನಸ್ಸಿನಿಂದ ಸಹ ಪೂಜಿಸಬಹುದು. ಆದರೆ ಅವುಗಳು ನಿಷ್ಕ್ರಿಯವಾದರೆ ದೇವಿಯನ್ನು ಪೂಜಿಸಲಾಗುವುದಿಲ್ಲ. ನಿಷ್ಕ್ರಿಯತೆಯನ್ನೇ ಅಶಕ್ತಿ ಎಂದು ಕರೆಯಲಾಗಿದೆ. ಇನ್ನೂ ಎರಡು ವಿಧವಾದ ವಿಕಾರಗಳಿವೆ. ಮೊದಲನೆಯದು ತುಷ್ಟಿ; ತೃಪ್ತಿಯ ಮೂರ್ತರೂಪ. ಇದು ಮಾಯೆಯಿಂದ ಉಂಟಾಗುತ್ತದೆ. ಉದಾಹರಣೆಗೆ, ಮುಕ್ತಿಯ ಕುರಿತು ತಪ್ಪಾದ ಅನುಭೂತಿಯನ್ನು ಹೊಂದುವುದೇ ತುಷ್ಟಿಯಾಗಿದೆ; ಮತ್ತು ಇದೂ ಸಹ ಎರಡು ವಿಧವಾಗಿರುತ್ತದೆಂದು ಹೇಳಲಾಗುತ್ತದೆ. ಮೂರನೆಯದೇ ಸಿದ್ಧಿಗಳನ್ನು ಪಡೆಯುವುದಾಗಿದೆ; ಅಂದರೆ ಅತೀಂದ್ರಿಯ ಶಕ್ತಿಗಳನ್ನು ಐಂದ್ರಜಾಲಿಕವಾಗಿ ಪಡೆದುಕೊಳ್ಳುವುದು ಅಥವಾ ಅಷ್ಟವಿಧವಾದ ಸಿದ್ಧಿಗಳನ್ನು ಪಡೆದುಕೊಳ್ಳುವುದು (ಸಾಮಾನ್ಯವಾಗಿ ಈ ಎಂಟು ವಿಧವಾದ ಸಿದ್ಧಿಗಳನ್ನು ಈ ಸೂತ್ರದ ಮೂಲಕ ವ್ಯಕ್ತಮಾಡಲಾಗುತ್ತದೆ - “ಅಣಿಮಾ ಲಘಿಮಾ ಪ್ರಾಪ್ತಿಃ ಪ್ರಾಕಾಮ್ಯಮ್ ಮಹಿಮಾ ತಥಾ ಈಶಿತ್ವಂ ಚ ವಶಿತ್ವಂ ಚ ತಥಾ  ಕಾಮವಶ್ಯತಾ”). ಈ ಸಿದ್ಧಿಗಳೂ ಸಹ ಅಂತಿಮ ಸಾಕ್ಷಾತ್ಕಾರದ ಹಾದಿಯಲ್ಲಿನ ಅಡಚಣೆಗಳೇ ಆಗಿವೆ.

Haribrahamendra-sevitā हरिब्रहमेन्द्र-सेविता (297)

೨೯೭. ಹರಿಬ್ರಹ್ಮೇಂದ್ರ-ಸೇವಿತಾ

          ಹರಿ (ವಿಷ್ಣು), ಬ್ರಹ್ಮ ಮತ್ತು ಇಂದ್ರಾದಿಗಳು ದೇವಿಯನ್ನು ಪೂಜಿಸುತ್ತಾರೆ. ಶ್ರೀ ಚಕ್ರ ಪೂಜೆಯಲ್ಲಿ ಹರಿ, ಬ್ರಹ್ಮ ಮತ್ತು ಇಂದ್ರ ಇವರೆಲ್ಲರನ್ನೂ ಪೂಜಿಸಲಾಗುತ್ತದೆ. ಶಕ್ತಿ ಪೂಜೆಯ ಮಹತ್ವವನ್ನು ಈ ನಾಮದಲ್ಲಿ ಒತ್ತುಕೊಟ್ಟು ಹೇಳಲಾಗಿದೆ. ಇಲ್ಲಿ ಹೆಸರಿಸಿರುವ ದೇವರುಗಳು ಉಪದೇವತೆಗಳಲ್ಲ ಆದರೆ ಸೃಷ್ಟಿಕರ್ತ, ಪಾಲನಕರ್ತ ಮತ್ತು ಎಲ್ಲಾ ಸ್ತ್ರೀ ಹಾಗೂ ಪುರುಷ ದೇವತೆಗಳ ಅಧಿಪತಿ. ಅವರೆಲ್ಲರೂ ತಮ್ಮ ಸ್ವಂತ ಸಾಮರ್ಥ್ಯಗಳಲ್ಲಿ ಶಕ್ತಿವಂತರೇ ಆಗಿದ್ದಾರೆ. ಇಲ್ಲಿ ಶಿವನನ್ನು ಹೆಸರಿಸಲಾಗಿಲ್ಲ; ಬಹುಶಃ ಎರಡು ಕಾರಣಗಳಿಗಾಗಿ. ಶಿವನು ಆಕೆಯ ಸಂಗಡಿಗನಾಗಿರುವುದರಿಂದ ದೇವಿಯನ್ನು ಅವನು ಪೂಜಿಸುವುದಿಲ್ಲ ಅಥವಾ ಶಿವ-ಶಕ್ತಿಯರೊಳಗೆ ಭೇದವಿಲ್ಲದೇ ಇರುವುದರಿಂದ. ಬಹುಶಃ ಎರಡನೇ ವ್ಯಾಖ್ಯಾನವೇ ಹೆಚ್ಚು ಸಮಂಜಸವೆಂದು ತೋರುತ್ತದೆ. ಈ ಮುಂಚೆ ಪರಬ್ರಹ್ಮವು ಜಡಶಕ್ತಿ ಮತ್ತು ಕ್ರಿಯಾಶೀಲ ಶಕ್ತಿಗಳ ಸಂಗಮವೆಂದು ಚರ್ಚಿಸಲಾಗಿತ್ತು. ಕ್ರಿಯಾಶೀಲ ಶಕ್ತಿಯು ಜಡಶಕ್ತಿಯ ಮೂಲಕವೇ ಆವಿರ್ಭವಿಸಿದರೂ ಸಹ ಕ್ರಿಯಾಶೀಲ ಶಕ್ತಿಯಿಲ್ಲದೇ ಜಡ ಶಕ್ತಿಯು ಕಾರ್ಯನಿರ್ವಹಿಲಾಗದು. ಈ ತತ್ವವನ್ನೇ ಇಲ್ಲಿ ವಿವರಿಸಲಾಗಿದೆ. ಹರಿ (ವಿಷ್ಣು), ಬ್ರಹ್ಮ ಮತ್ತು ಇಂದ್ರ ಇವರುಗಳನ್ನು ಶಬ್ದಶಃ ಅರ್ಥಗಳಲ್ಲಿ ತೆಗೆದುಕೊಳ್ಳಬಾರದು. ವಾಸ್ತವವಾಗಿ, ವೇದಗಳು ಶಕ್ತಿಗಿಂತ ಹೆಚ್ಚಾಗಿ ಈ ದೇವರುಗಳ ಬಗ್ಗೆ ಉಲ್ಲೇಖಿಸುತ್ತವೆ. ಕೇವಲ ವೇದಗಳ ಮೇಲೆ ಪ್ರಭುತ್ವವನ್ನು ಹೊಂದಿದ ಮಾತ್ರಕ್ಕೆ ಬ್ರಹ್ಮಸಾಕ್ಷಾತ್ಕಾರವಾಗದು ಎನ್ನುವುದನ್ನು ಅರಿಯಬೇಕು. ಸಾಧಕನು ವೇದಗಳನ್ನು ಅಧಿಗಮಿಸಿ ಮುಂದೆ ಸಾಗಿದಾಗ ಸೃಷ್ಟಿ ಮತ್ತು ಸೃಷ್ಟಿಕರ್ತ ಎರಡರ ಕುರಿತಾಗಿಯೂ ತಿಳುವಳಿಕೆಯುಂಟಾಗುತ್ತದೆ. ಸೃಷ್ಟಿ ಮತ್ತು ಸೃಷ್ಟಿಕರ್ತಾ ಎರಡೂ ಜಗನ್ಮಾತೆ ಅಥವಾ ಪ್ರೀತಿಯಿಂದ ಸಂಭೋದಿಸಲ್ಪಡುವ ’ಮಾತೆ’ಯನ್ನೇ ಪ್ರತಿನಿಧಿಸುತ್ತವೆ.

       ಇದೇ ರೀತಿಯಾದ ವಿಶ್ಲೇಷಣೆಯನ್ನು ಶಿವಾನಂದ ಲಹರಿಯ ೪ನೇ ಸ್ತೋತ್ರವು ವ್ಯಕ್ತಪಡಿಸುತ್ತದೆ. "ತಮ್ಮನ್ನು ಪೂಜಿಸಿದವರಿಗೆ ವರಗಳನ್ನು ಕೊಡುವ ಸಾವಿರಾರು ಕ್ಷುದ್ರ ದೇವತೆಗಳಿರುವರು ಆದರೆ ನಾನು ಅಂತಹ ದೇವತೆಗಳನ್ನು ಕನಸಿನಲ್ಲಿಯೂ ಪ್ರಾರ್ಥಿಸುವುದಿಲ್ಲ ಅಥವಾ ಅವರಿಂದ ವರಗಳನ್ನೂ ಅಪೇಕ್ಷಿಸುವುದಿಲ್ಲ. ವಿಷ್ಣು-ಬ್ರಹ್ಮಾದಿಗಳು ಶಿವನೊಡನೆ ಒಳ್ಳೆಯ ಒಡನಾಟವಿಟ್ಟುಕೊಂಡಿದ್ದರೂ ಸಹ ಅವರಿಗೆ ಶಿವನನ್ನು ಸಮೀಪಿಸಲು ಸಾಧ್ಯವಾಗುವುದಿಲ್ಲ; ಆದ್ದರಿಂದ ನಾನು ಯಾವಾಗಲೂ ಅವನ ಪಾದಪದ್ಮಗಳನ್ನು ಹೊಂದುವಕ್ಕಾಗಿ ಹಂಬಲಿಸಿ ಬೇಡುತ್ತೇನೆ”.

Nārāyaṇī नारायणी (298)

೨೯೮. ನಾರಾಯಣೀ

          ಈ ನಾಮವನ್ನು ಹಲವು ವಿಧವಾಗಿ ವಿವರಿಸಬಹುದು. ಶಿವಾನಂದ ಲಹರಿಯ (ಶಿವಾನಂದ ಲಹರಿಯು ಶಿವನ ಕುರಿತಾದ ಒಂದು ನೂರು ಸ್ತೋತ್ರಗಳನ್ನು ಹೊಂದಿದ್ದರೆ, ಸೌಂದರ್ಯಲಹರಿಯು ಶಕ್ತಿಯ ಕುರಿತಾಗಿ ಒಂದು ನೂರು ಸ್ತೋತ್ರಗಳನ್ನು ಹೊಂದಿದೆ) ೮೨ನೇ ಸ್ತೋತ್ರವು ಹೀಗೆ ಹೇಳುತ್ತದೆ, "ಆ ಹರಿ ಮತ್ತು ಹರರು ಹಲವಾರು ವಿಧಗಳಲ್ಲಿ ಒಂದುಗೂಡಿದ್ದಾರೆ”. ಮುಂದುವರಿಯುತ್ತಾ ಅದು ಹೇಳುತ್ತದೆ, ’ಅರ್ಧವಪುಷ ಭಾರ್ಯತ್ವಮ್ ಆರ್ಯಾಪತೇ’ ಅಂದರೆ ವಿಷ್ಣುವು ಶಿವನ ಅರ್ಧಾಂಗಿಯ ಸ್ಥಾನವನ್ನಲಂಕರಿಸಿದರೆ, ಶಿವನು ವಿಷ್ಣವಿನ ಎಡ ಅರ್ಧಭಾಗವನ್ನು ಪ್ರತಿನಿಧಿಸುತ್ತಾನೆ". ಇದು ಅರ್ಧನಾರೀಶ್ವರ ರೂಪದಲ್ಲಿ ಶಕ್ತಿಯ ಸ್ಥಾನವಾಗಿದೆ. ಶಿವ ಮತ್ತು ವಿಷ್ಣು ಇವರ ಸಂಯುಕ್ತ ರೂಪವನ್ನು ಶಂಕರ ನಾರಾಯಣ ರೂಪವೆಂದು ಕರೆಯಲಾಗಿದೆ. ಆದ್ದರಿಂದ ನಾರಾಯಣನೆಂದೂ ಕರೆಯಲ್ಪಡುವ ವಿಷ್ಣು ಮತ್ತು ಲಲಿತಾಂಬಿಕೆಯರಲ್ಲಿ ಭೇದವಿಲ್ಲವೆನ್ನುವುದನ್ನು ಇದು ಬಹಳ ಸ್ಪಷ್ಟವಾಗಿ ತಿಳಿಸಿಕೊಡುತ್ತದೆ. ಈ ಸಂಗತಿಯನ್ನು ಇದೇ ಸಹಸ್ರನಾಮದ ಇತರೇ ನಾಮಗಳಾದ ಗೋವಿಂದ-ರೂಪಿಣೀ (ನಾಮ ೨೬೯), ಮುಕುಂದಾ (ನಾಮ ೮೩೮) ಮತ್ತು ವಿಷ್ಣು-ರೂಪಿಣೀ (ನಾಮ ೮೯೩) ಅನುಮೋದಿಸುತ್ತವೆ.  

         ನಾರಾಯಣ ಶಬ್ದವು ನರ+ಅಯನ ಎನ್ನುವ ಎರಡು ಶಬ್ದಗಳ ಸಂಯೋಗದಿಂದ ಉಂಟಾಗಿದೆ. ನರ ಎಂದರೆ ಇಲ್ಲಿ ಪರಬ್ರಹ್ಮ. ನೀರು ಪರಬ್ರಹ್ಮನಿಂದ ಮೊದಲು ಆವಿರ್ಭವಿಸಿದ್ದರಿಂದ ನೀರನ್ನೂ ಸಹ ನರ ಎಂದು ಕರೆಯುತ್ತಾರೆ. ನೀರು ಪರಬ್ರಹ್ಮನ ಆವಾಸ ಸ್ಥಾನವೆಂದು ಹೇಳುತ್ತಾರೆ ಆದ್ದರಿಂದ ನೀರನ್ನು ವಾಸಸ್ಥಾನವಾಗುಳ್ಳ ಪರಬ್ರಹ್ಮನನ್ನು ನಾರಾಯಣನೆಂದು ಕರೆಯುತ್ತಾರೆ. ಪರಬ್ರಹ್ಮ ಮತ್ತು ಲಲಿತಾಂಬಿಕೆಯರಲ್ಲಿ ಭೇದವಿಲ್ಲದೇ ಇರುವುದರಿಂದ ಆಕೆಯನ್ನೂ ಸಹ ನಾರಾಯಣೀ ಎಂದು ಸಂಭೋದಿಸಲಾಗಿದೆ.

         ವಿಷ್ಣು ಸಹಸ್ರನಾಮದ ೨೪೫ನೇ ನಾಮವೂ ಸಹ ನಾರಾಯಣ. ಈ ಕೆಳಗಿನ ವಿವರಣೆಯನ್ನು ಆ ನಾಮಕ್ಕೆ ಕೊಡಲಾಗುತ್ತದೆ, "ಈ ಸೃಷ್ಟಿಯು ಆತ್ಮನಿಂದ (ಪರಬ್ರಹ್ಮನಿಂದ) ಹೊರಹೊಮ್ಮಿದೆ. ಅಂತಹ ಸೃಷ್ಟಿಗಳನ್ನು ನಾರಾಣೀ ಎಂದು ಕರೆಯಲಾಗುತ್ತದೆ; ಆದ್ದರಿಂದ ನಾರಾಣಿಯ ಆವಾಸ ಸ್ಥಾನವನ್ನು ನಾರಾಯಣ ಎಂದು ಕರೆಯಲಾಗಿದೆ”. ನಾರಾಯಣ ಶಬ್ದದ ಸ್ತ್ರೀಲಿಂಗ ರೂಪವೇ ನಾರಾಯಣೀ. ಈ ನಾಮವೂ ಸಹ ದೇವಿಯ ಪರಬ್ರಹ್ಮ ಸ್ವರೂಪವನ್ನು ಪುನಃ ಸ್ಪಷ್ಟಪಡಿಸುತ್ತದೆ. ಈ ಸಹಸ್ರನಾಮದಲ್ಲಿ ಇಂತಹ ಹಲವಾರು ಸ್ಪಷ್ಟನೆಗಳಿವೆ.

******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 295-298 http://www.manblunde...  ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
No votes yet

Comments

Submitted by nageshamysore Wed, 08/07/2013 - 02:36

ಶ್ರೀಧರರೆ, ಲಲಿತಾ ಸಹಸ್ರನಾಮ ೨೯೫ - ೨೯೮ ರ ಸಾರ ತಮ್ಮ ಪರಿಶೀಲನೆಗೆ ಸಿದ್ದ :-)

ಲಲಿತಾ ಸಹಸ್ರನಾಮ ೨೯೫ - ೨೯೮
__________________________________

೨೯೫. ಅಂಬಿಕಾ
ಹಗಲಾಗಿ ಶಿವ ಪ್ರಕಾಶ, ಇರುಳ ಮಾಯೆಯಾಗುತ ಲಲಿತೆ
ಇಚ್ಛಾ ಜ್ಞಾನ ಕ್ರಿಯಾ ಸಮಷ್ಟಿ ಶಕ್ತಿ, ಸೃಷ್ಟಿ ಕ್ರಿಯೆಯಾದಂತೆ
ಸಮಸ್ತ ವಿಶ್ವದ ಜೀವಿಗೆ, ತಾಯಯಾದವಳ ಪರಬ್ರಹ್ಮ ತರ್ಕ
ಅಮಿತ ಅಕ್ಕರೆಯಲಿ ಸಲಹುವಳೀ ಜಗವ ಅಂಬಿಕಾ ಮಾತ!

೨೯೬. ಅನಾದಿ-ನಿಧನಾ 
ಅನಂತವಾಗಿಹ ಬ್ರಹ್ಮ ಲಕ್ಷಣ, ಆದಿ ಅಂತ್ಯವಿಲ್ಲದ ಲಲಿತಾ ಗುಣ
ಆತ್ಮಸಾಕ್ಷಾತ್ಕಾರಾನಂದದ ಭ್ರಮೆ, ಹುಸಿಮಾಯೆ ತೊಡಕೆ ಕಾರಣ
ಅರ್ಹ ಸಾಧಕನಿಗೊಲಿವ ಸಿದ್ದಿ, ಬ್ರಹ್ಮ ಸಾಕ್ಷಾತ್ಕಾರ ಮಿಂಚಿನ ತರ
ಅವಿರತಾನಂದ ಕಾರಣ ಕರ್ತೆ, ಅನಾದಿ ನಿಧನಾ ಅಧ್ಯಾತ್ಮಿಕ ಸ್ತರ!

ತ್ರಿವಿಕಾರಗಳು ( ಅಸಮರ್ಥತೆ, ತುಷ್ಟಿ, ಸಿದ್ದಿ)
ನಿತ್ಯ ನಿರಂತರತೆ ಅನಾದಿ, ವಾಸಾ ಯಾ ವಿನಾಶವೆ ನಿಧನ
ಜ್ಞಾನೆಂದ್ರ ಕರ್ಮೇಂದ್ರ ಮನ, ಅಸಮರ್ಥತೆ ನಿಷ್ಕ್ರಿಯಜ್ಞಾನ
ಮಾಯಾ ತೃಪ್ತಿಗೆ ಮೂರ್ತರೂಪ, ಹುಸಿಮುಕ್ತಿಯನುಭೂತಿ ತುಷ್ಟಿ
ಐಂದ್ರಾಜಾಲಾತೀಂದ್ರಿಯಶಕ್ತಿ, ಅಷ್ಟಸಿದ್ದಿಯ ತೊಡಕಿಗು ಎಚ್ಚರದ ದೃಷ್ಟಿ!

೨೯೭. ಹರಿಬ್ರಹ್ಮೇಂದ್ರ-ಸೇವಿತಾ
ಬರಿ ವೇದಗಳ ಪ್ರಭುತ್ವ, ಬ್ರಹ್ಮ ಸಾಕ್ಷಾತ್ಕಾರವಾಗದ ಸತ್ಯ
ಸಾಧಕನಧಿಗಮಿಸಿ ನಡೆದರಷ್ಟೆ, ಅರಿವ ಸೃಷ್ಟಿ ಸೃಷ್ಟಿಕರ್ತಾ
ಜಡ ಕ್ರಿಯಾಶೀಲ ಶಕ್ತಿಸಂಗಮ ಪರಬ್ರಹ್ಮ, ಜಡಶಕ್ತಿ ನಿರ್ಲಿಪ್ತ
ಬ್ರಹ್ಮೇಂದ್ರ ವಿಷ್ಣು ಪೂಜಿತ ಶಿವಶಕ್ತಿ, ಹರಿಬ್ರಹ್ಮೇಂದ್ರ ಸೇವಿತಾ!

೨೯೮. ನಾರಾಯಣೀ
ನರವೆ ಪರಬ್ರಹ್ಮ, ತಾ ಸೃಜಿಸಿದ ಜಲವೇ ಆವಾಸ ಸ್ಥಾನ
ಅರ್ಧನಾರೀಶ್ವರರಂತೆ ಶಂಕರನಾರಾಯಣ ಅವಿರ್ಭವಣ
ಭೇಧವೆಲ್ಲಿ ವಿಷ್ಣು ಲಲಿತೆಗೆ, ನಾರಾಯಣನೆ ನಾರಾಯಣೀ
ಪರಬ್ರಹ್ಮರೂಪದಿ ಮಾತೆ, ಸೃಷ್ಟಿಸಿದ ಲೋಕವೆ ನಾರಾಣೀ!

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
 

ನಾಗೇಶರೆ,
೨೯೫-೨೯೮ನೇ ನಾಮಗಳ ಕವನ ಪಂಕ್ತಿಗಳ ಕರಡು ಪ್ರತಿಯನ್ನು ನನಗೆ ತಿಳಿದ ಹಾಗೆ ಪರಿಷ್ಕರಣೆ ಮಾಡಿದ್ದೇನೆ. ನೋಡಿ ಸೂಕ್ತವಾದ ಬದಲಾವಣೆಗಳನ್ನು ಮಾಡಿ.
೨೯೫. ಅಂಬಿಕಾ
:
:
ಸಮಸ್ತ ವಿಶ್ವದ ಜೀವಿಗೆ, ತಾಯಯಾದವಳ ಪರಬ್ರಹ್ಮ ತರ್ಕ
ಶ್ರೀ ಮಾತಾ ಎನ್ನುವುದು ಸಮಸ್ತ ವಿಶ್ವದ ಜೀವಿಗಳಿಗೆ ತಾಯಿ ಎನ್ನುವುದನ್ನು ಸೂಚಿಸುತ್ತದೆ. ಅಂಬಿಕಾ ಎಂದಾಗ ದೇವಿಯು ಸಕಲ ಚರಾಚರ ವಸ್ತುಗಳಿಗೆ (ಜೀವ ಮತ್ತು ಜಡ ವಸ್ತುಗಳೆಲ್ಲವಕ್ಕೂ) ಆಕೆ ಮಾತೆಯಾಗಿದ್ದಾಳೆ ಎಂದು ಹೇಳುತ್ತದೆ. ಆದ್ದರಿಂದ, ಸಮಸ್ತ ವಿಶ್ವದ ಜೀವಿಗೆ=ಸಮಸ್ತ ಚರಾಚರ ವಸ್ತುಗಳಿಗೆ ಎಂದು ಮಾರ್ಪಡಿಸಿ. ತಾಯಯಾದವಳ=ತಾಯಾದವಳ
:
೨೯೬. ಅನಾದಿ-ನಿಧನಾ = ಎಲ್ಲಾ ಸರಿಯಾಗಿದೆ.

ತ್ರಿವಿಕಾರಗಳು ( ಅಸಮರ್ಥತೆ, ತುಷ್ಟಿ, ಸಿದ್ದಿ)
ನಿತ್ಯ ನಿರಂತರತೆ ಅನಾದಿ, ವಾಸಾ ಯಾ ವಿನಾಶವೆ ನಿಧನ
ವಾಸಾ=ಅಸ್ತಿತ್ವ ಮಾಡಿ ಏಕೆಂದರೆ ವಿವರಣೆಯನ್ನು ಓದದಿದ್ದರೆ ವಾಸಾ ಎನ್ನುವ ಶಬ್ದವನ್ನು ಅರ್ಥಮಾಡಿಕೊಳ್ಳಲಾಗದು.
ಜ್ಞಾನೆಂದ್ರ ಕರ್ಮೇಂದ್ರ ಮನ, ಅಸಮರ್ಥತೆ ನಿಷ್ಕ್ರಿಯಜ್ಞಾನ
ಜ್ಞಾನೇಂದ್ರಿಯ, ಕರ್ಮೇಂದ್ರಿಯ, ಎಂದು ಆಗಬೇಕು.
ಮಾಯಾ ತೃಪ್ತಿಗೆ ಮೂರ್ತರೂಪ, ಹುಸಿಮುಕ್ತಿಯನುಭೂತಿ ತುಷ್ಟಿ
ಐಂದ್ರಾಜಾಲಾತೀಂದ್ರಿಯಶಕ್ತಿ, ಅಷ್ಟಸಿದ್ದಿಯ ತೊಡಕಿಗು ಎಚ್ಚರದ ದೃಷ್ಟಿ!
ಐಂದ್ರಜಾಲಾತೀಂದ್ರಿಯಶಕ್ತಿ=ಅತೀಂದ್ರಿಯಶಕ್ತಿ ಎಂದು ಸಂಕ್ಷಿಪ್ತಗೊಳಿಸಬಹುದು. ಅತೀಂದ್ರಿಯಶಕ್ತಿ ಮತ್ತು ಅಷ್ಟಸಿದ್ಧಿಗಳು ಆತ್ಮಸಾಕ್ಷಾತ್ಕಾರಕ್ಕೆ ತೊಡಕಾಗುತ್ತವೆ ಎನ್ನುವ ಅರ್ಥ ಬರಬೇಕಾದ್ದರಿಂದ ಕಡೆಯ ಸಾಲನ್ನು ಸ್ವಲ್ಪ ಬದಲಾಯಿಸಲು ಸಾಧ್ಯವೋ ನೋಡಿ.

೨೯೭. ಹರಿಬ್ರಹ್ಮೇಂದ್ರ-ಸೇವಿತಾ
ಬರಿ ವೇದಗಳ ಪ್ರಭುತ್ವ, ಬ್ರಹ್ಮ ಸಾಕ್ಷಾತ್ಕಾರವಾಗದ ಸತ್ಯ
ಸಾಧಕನಧಿಗಮಿಸಿ ನಡೆದರಷ್ಟೆ, ಅರಿವ ಸೃಷ್ಟಿ ಸೃಷ್ಟಿಕರ್ತಾ
ಸೃಷ್ಟಿ ಸೃಷ್ಟಿಕರ್ತಾ=ಸೃಷ್ಟಿ, ಸೃಷ್ಟಿಕರ್ತಾ
ಜಡ ಕ್ರಿಯಾಶೀಲ ಶಕ್ತಿಸಂಗಮ ಪರಬ್ರಹ್ಮ, ಜಡಶಕ್ತಿ ನಿರ್ಲಿಪ್ತ
ಬ್ರಹ್ಮೇಂದ್ರ ವಿಷ್ಣು ಪೂಜಿತ ಶಿವಶಕ್ತಿ, ಹರಿಬ್ರಹ್ಮೇಂದ್ರ ಸೇವಿತಾ!
ಈ ಪಂಕ್ತಿಯ ಮೊದಲೆರಡು ಸಾಲುಗಳು ಬಹಳ ಸುಂದರವಾಗಿ ಮೂಡಿ ಬಂದಿವೆ ನಾಗೇಶರೆ. ಆದರೆ ಕಡೆಯ ಎರಡು ಸಾಲುಗಳಲ್ಲಿ ನೀವು ಏನು ಹೇಳಹೊರಟಿರುವಿರೆಂದು ಅರ್ಥವಾಗುತ್ತದೆಯಾದರೂ ಅದು ಸ್ಪಷ್ಟವಾಗಿ ಅಭಿವ್ಯಕ್ತಗೊಳ್ಳುವುದಿಲ್ಲ; ಆದ್ದರಿಂದ ಸ್ವಲ್ಪ ಬದಲಾವಣೆ ಮಾಡಲು ಸಾಧ್ಯವೇ ನೋಡಿ. ಶಿವ ಅಚರ/ಜಡ ಶಕ್ತಿ ಮತ್ತು ದೇವಿಯು ಚರ/ಕ್ರಿಯಾಶೀಲ ಶಕ್ತಿ. ಸೃಷ್ಟಿಕ್ರಿಯೆಯು ಇವರೆಡೂ ಶಕ್ತಿಗಳ ಸಂಯೋಗದಿಂದಲೇ ಉಂಟಾಗುತ್ತದೆ ಮತ್ತು ಪರಬ್ರಹ್ಮವೂ ಸಹ ಈ ಎರಡು ಶಕ್ತಿಗಳ ಸಂಗಮವಾಗಿದೆ. ಮತ್ತು ದೇವಿಯು ಹರಿ, ಬ್ರಹ್ಮ ಮತ್ತು ಇಂದ್ರರಿಂದಲೂ ಪೂಜಿಸಲ್ಪಡುತ್ತಾಳೆನ್ನುವುದೂ ನಿಜ. ಈ ಎಲ್ಲ ಅರ್ಥಗಳೂ ನಿಮ್ಮ ಕವನದಿಂದ ವ್ಯಕ್ತವಾದರೂ ಸಹ ಎಲ್ಲೋ ಸ್ವಲ್ಪ "ಬೀಟಿಂಗ್ ಅರೌಂಡ್ ದ ಬುಷ್" ಅನಿಸುತ್ತಿದೆ. ಆದ್ದರಿಂದ ಸೂಕ್ತವಾಗಿ ಮಾರ್ಪಡಿಸಲು ಸಾಧ್ಯವೇ ನೋಡಿ.
೨೯೮. ನಾರಾಯಣೀ
ನರವೆ ಪರಬ್ರಹ್ಮ, ತಾ ಸೃಜಿಸಿದ ಜಲವೇ ಆವಾಸ ಸ್ಥಾನ
ಅರ್ಧನಾರೀಶ್ವರರಂತೆ ಶಂಕರನಾರಾಯಣ ಅವಿರ್ಭವಣ
ಭೇಧವೆಲ್ಲಿ ವಿಷ್ಣು ಲಲಿತೆಗೆ, ನಾರಾಯಣನೆ ನಾರಾಯಣೀ
ಪರಬ್ರಹ್ಮರೂಪದಿ ಮಾತೆ, ಸೃಷ್ಟಿಸಿದ ಲೋಕವೆ ನಾರಾಣೀ!
ಈ ಪಂಕ್ತಿಯು ಈ ನಾಮದ ಸಾರವನ್ನು ಸಮಂಜಸವಾಗಿ ಹಿಡಿದಿಟ್ಟಿದೆ. ಮೂರನೇ ಮತ್ತು ನಾಲ್ಕನೇ ಸಾಲುಗಳನ್ನು ಅದಲು ಬದಲು ಮಾಡಿದರೆ ಚೆನ್ನಾಗಿರುತ್ತದೆ ಎನಿಸುತ್ತಿದೆ. ಇದರ ಬಗ್ಗೆ ಸ್ವಲ್ಪ ಆಲೋಚಿಸಿ; ಅಂತಿಮ ನಿರ್ಣಯ ನಿಮ್ಮದೇ :))
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ಲಲಿತಾ ಸಹಸ್ರನಾಮ ೨೯೫ - ೨೯೮ ಮರು ತಿದ್ದುಪಡಿಸಿದ ರೂಪ ಹೀಗಿದೆ - ಈಗ ಮಾರ್ಪಾಡು ಸೂಕ್ತವಾಗಿದೆಯೆ ನೋಡಿ.

ಲಲಿತಾ ಸಹಸ್ರನಾಮ ೨೯೫ - ೨೯೮
__________________________________

೨೯೫. ಅಂಬಿಕಾ
ಹಗಲಾಗಿ ಶಿವ ಪ್ರಕಾಶ, ಇರುಳ ಮಾಯೆಯಾಗುತ ಲಲಿತೆ
ಇಚ್ಛಾ ಜ್ಞಾನ ಕ್ರಿಯಾ ಸಮಷ್ಟಿ ಶಕ್ತಿ, ಸೃಷ್ಟಿ ಕ್ರಿಯೆಯಾದಂತೆ
ಸಮಸ್ತ ಚರಾಚರ ವಸ್ತುಗಳಿಗೆ, ತಾಯಾದವಳ ಪರಬ್ರಹ್ಮ ತರ್ಕ
ಅಮಿತ ಅಕ್ಕರೆಯಲಿ ಸಲಹುವಳೀ ಜಗವ ಅಂಬಿಕಾ ಮಾತ!

೨೯೬. ಅನಾದಿ-ನಿಧನಾ
ಅನಂತವಾಗಿಹ ಬ್ರಹ್ಮ ಲಕ್ಷಣ, ಆದಿ ಅಂತ್ಯವಿಲ್ಲದ ಲಲಿತಾ ಗುಣ
ಆತ್ಮಸಾಕ್ಷಾತ್ಕಾರಾನಂದದ ಭ್ರಮೆ, ಹುಸಿಮಾಯೆ ತೊಡಕೆ ಕಾರಣ
ಅರ್ಹ ಸಾಧಕನಿಗೊಲಿವ ಸಿದ್ದಿ, ಬ್ರಹ್ಮ ಸಾಕ್ಷಾತ್ಕಾರ ಮಿಂಚಿನ ತರ
ಅವಿರತಾನಂದ ಕಾರಣ ಕರ್ತೆ, ಅನಾದಿ ನಿಧನಾ ಅಧ್ಯಾತ್ಮಿಕ ಸ್ತರ!

ತ್ರಿವಿಕಾರಗಳು ( ಅಸಮರ್ಥತೆ, ತುಷ್ಟಿ, ಸಿದ್ದಿ)
ನಿತ್ಯ ನಿರಂತರತೆ ಅನಾದಿ, ಅಸ್ತಿತ್ವ ಯಾ ವಿನಾಶವೆ ನಿಧನ
ಜ್ಞಾನೇಂದ್ರಿಯ, ಕರ್ಮೇಂದ್ರಿಯ ಮನ, ಅಸಮರ್ಥತೆ ನಿಷ್ಕ್ರಿಯಜ್ಞಾನ
ಮಾಯಾ ತೃಪ್ತಿಗೆ ಮೂರ್ತರೂಪ, ಹುಸಿಮುಕ್ತಿಯನುಭೂತಿ ತುಷ್ಟಿ
ಅತೀಂದ್ರಿಯಶಕ್ತಿ ಅಷ್ಟಸಿದ್ದಿ, ಆತ್ಮಾಸಾಕ್ಷಾತ್ಕಾರಕೆ ತೊಡಕಾಗೊ ಭೀತಿ!

೨೯೭. ಹರಿಬ್ರಹ್ಮೇಂದ್ರ-ಸೇವಿತಾ
ಬರಿ ವೇದಗಳ ಪ್ರಭುತ್ವ, ಬ್ರಹ್ಮ ಸಾಕ್ಷಾತ್ಕಾರವಾಗದ ಸತ್ಯ
ಸಾಧಕನಧಿಗಮಿಸಿ ನಡೆದರಷ್ಟೆ, ಅರಿವ ಸೃಷ್ಟಿ, ಸೃಷ್ಟಿಕರ್ತಾ
ಜಡ ಶಿವ ಕ್ರಿಯಾಶೀಲ ಶಕ್ತಿ ಸಂಯೋಗದೆ ಸೃಷ್ಟಿಮೂಹೂರ್ತ
ಶಿವಶಕ್ತಿ ಸಂಗಮವಾಗಿ ಪರಬ್ರಹ್ಮ, ಹರಿಬ್ರಹ್ಮೇಂದ್ರ ಸೇವಿತಾ!

೨೯೮. ನಾರಾಯಣೀ
ನರವೆ ಪರಬ್ರಹ್ಮ, ತಾ ಸೃಜಿಸಿದ ಜಲವೇ ಆವಾಸ ಸ್ಥಾನ
ಅರ್ಧನಾರೀಶ್ವರರಂತೆ ಶಂಕರನಾರಾಯಣ ಅವಿರ್ಭವಣ
ಪರಬ್ರಹ್ಮರೂಪದಿ ಮಾತೆ, ಸೃಷ್ಟಿಸಿದ ಲೋಕವೆ ನಾರಾಣೀ
ಭೇಧವೆಲ್ಲಿ ವಿಷ್ಣು ಲಲಿತೆಗೆ, ನಾರಾಯಣನೆ ನಾರಾಯಣೀ!

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು

ನಾಗೇಶರೆ,
ಈಗ ಸೂಕ್ತ ಮಾರ್ಪಾಡುಗಳೊಂದಿಗೆ ಎಲ್ಲಾ ಕವನಗಳು ಚೆನ್ನಾಗಿ ಮೂಡಿ ಬಂದಿವೆ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ