ಹೀಗೊಂದು ಪಿಕ್ನಿಕ್..

ಹೀಗೊಂದು ಪಿಕ್ನಿಕ್..

ಚಿತ್ರ

ಇನ್‌ಸ್ಟೆಂಟ್ ತಿನಿಸುಗಳಂತೆ ದಿಡೀರ್ ಒಂದು ಸಣ್ಣ ಪಿಕ್ನಿಕ್ ಇಟ್ಟುಕೊಳ್ಳಬೇಕು‍, ಅಂತಹ ಪ್ರಸಂಗ ಬಂದರೆ, ಬೆಂಗಳೂರೊಳಗೆ ಬೆಸ್ಟ್  ಸ್ಥಳ "ಓಂಕಾರ ಹಿಲ್ಸ್". ಸಿಟಿಯೊಳಗೇ ಉತ್ತರಹಳ್ಳಿಯಿಂದ ಕೆಂಗೇರಿ ಮಾರ್ಗದಲ್ಲಿದೆ. ಹುಡುಕಲು ಕಷ್ಟವೇನಿಲ್ಲ. ದೂರದಿಂದಲೇ ದೇವಸ್ಥಾನದ ಗೋಪುರಗಳು ಕಾಣಿಸುತ್ತದೆ. ಇದೇನು ೫-೬ ಗೋಪುರಗಳು ಕಾಣಿಸುತ್ತಿದೆಯಲ್ಲಾ ಅಂತ ಯೋಚಿಸುವುದರೊಳಗೇ ನೀವು ದೇವಸ್ಥಾನದ ಬಳಿ ತಲುಪುವಿರಿ. ಬೆಟ್ಟ ಹತ್ತುವ ಕಷ್ಟವೇನಿಲ್ಲ. ಮಾರ್ಗ ಚೆನ್ನಾಗಿದೆ. ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳವಿದೆ.
ವಾಹನ ಪಾರ್ಕ್ ಮಾಡಿ ಆಯಿತಾ? ಈಗ ಮೇಲೆ ನೋಡಿ. ೫-೬ ಗೋಪುರವಲ್ಲ, ಒಟ್ಟು ಹನ್ನೆರಡು ಗೋಪುರವಿದೆ! ಅದರಲ್ಲೂ ಏನೋ ವಿಶೇಷ ಕಾಣಿಸುತ್ತಿದೆಯಲ್ಲಾ.... ಹತ್ತು ಗೋಪುರಗಳು ಉತ್ತರದ ದೇವಸ್ಥಾನ ಗೋಪುರದ ಮಾದರಿಯಲ್ಲಿದ್ದರೆ, ಇನ್ನೆರಡು ದಕ್ಷಿಣದ ಮಾದರಿಯಲ್ಲಿದೆ. ೧೨ ಗೋಪುರವಿದೆ ಅಂದಮೇಲೆ ಒಳಗೆ ಕನಿಷ್ಠ ೧೨ ದೇವರಿರಲೇಬೇಕಲ್ವಾ? ಸೀನರಿ ಎಲ್ಲಾ ಮತ್ತೆ ನೋಡೋಣ, ಮೊದಲು ದೇವಸ್ಥಾನದ ಒಳಗೆ ಹೋಗೋಣ ಬನ್ನಿ.
ಒಳ ಹೋಗುವಾಗಲೇ ಸುಂದರ ನಂದಿ ವಿಗ್ರಹ, ಗಣೇಶ, ಸುಬ್ರಹ್ಮಣ್ಯ ಸ್ವಾಗತಕ್ಕೆ ನಿಂತಿರುವರು. ಅಂದ ಮೇಲೆ ಇದು ಶಿವದೇವಸ್ಥಾನವಿರಬೇಕು ಅಂದಿರಾ? ನಿಜ. "ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ"! ಕೇದಾರ, ರಾಮೇಶ್ವರ ಎಂದೆಲ್ಲಾ ಹೋಗಲು ಆಗದಿದ್ದವರಿಗೆ ಎಲ್ಲಾ ಜ್ಯೋತಿರ್ಲಿಂಗಗಳನ್ನು ಒಂದೇ ಸ್ಥಳದಲ್ಲಿ ನೋಡುವ ಭಾಗ್ಯ ಇಲ್ಲಿದೆ. ಪ್ರತೀ ಲಿಂಗದೆದುರು ಅದರ ವಿವರವಿದೆ. ಓದಿಕೊಂಡು ಒಂದು ಸುತ್ತು ಹಾಕಿ ಬನ್ನಿ. ಪೂಜೆ ಮಾಡಿಸುವ ಮೊದಲು ಒಮ್ಮೆ ಪೂಜೆ ರೇಟಿನ ಕಡೆ ಕಣ್ಣು ಹಾಯಿಸಿ :)
ದೇವಸ್ಥಾನ ನೋಡಿ ಸಂತೋಷವಾಗಿರುವುದು ನಿಮ್ಮ ಕಣ್ಣುಗಳೇ ಸೂಚಿಸುತ್ತಿರುವುದು. ಇದು ಬೆಂಗಳೂರಲ್ಲೇ ಅತೀ ಎತ್ತರದ ಬೆಟ್ಟಗಳಲೊಂದು. ಇನ್ನೂ ನೋಡಲು ಬಹಳಷ್ಟಿದೆ. ಗೋಶಾಲೆ, ವಿಶ್ವಾಮಿತ್ರ ವೇದ ವಿದ್ಯಾಲಯ, ವನದುರ್ಗ ದೇವಾಲಯ, ನಾಗದೇವತಾ ಟೆಂಪ್‌ಲ್...;
ಇದೇ ನೋಡಿ ಲಂಡನ್‌ನ ಬಿಗ್ ಬೆನ್ ಗಡಿಯಾರಕ್ಕಿಂತಲೂ ದೊಡ್ಡ ಗಡಿಯಾರ- ಪ್ರತೀ ಗಂಟೆಗೂ ಶಂಖನಾದ, ಓಂಕಾರ ನಾದ ಹೊಮ್ಮಿಸುವುದು. (ಗಡಿಯಾರದ ಮುಳ್ಳು ಸದ್ಯಕ್ಕೆ ನಡೆಯುತ್ತಿಲ್ಲ :( )
ಇದೇನು ಪಿಕ್ನಿಕ್ ಎಂದು ಹೇಳಿ ಹಿಂದೂ ದೇವಸ್ಥಾನ ಸುತ್ತಿಸುತ್ತಿದ್ದಾನೆ ಎಂದಿರಾ? ಹತ್ತೇ ಹತ್ತು ಮೆಟ್ಟಲು ಹತ್ತಿ ಇಲ್ಲಿ ಮೇಲೆ ಬನ್ನಿ. ವಿಶಾಲ ಆಲದ ಮರದ ಬುಡದಲ್ಲಿ "ಸರ್ವ ಧರ್ಮ ಸಮನ್ವಯ" ಮಂಟಪವಿದೆ. ರಾಮಾನುಜಾಚಾರ್ಯರಿಂದ ಏಸುವಿನವರೆಗೆ ಒಂದೊಂದು ಮಂಟಪವಿದೆ. ತಂಪಾದ ಹಿತವಾದ ಗಾಳಿಯೊಂದಿಗೆ, ಸುತ್ತಲಿನ ಪ್ರಕೃತಿ ಸೌಂದರ್ಯ ಆಸ್ವಾದಿಸಿ. ಇನ್ನು ಕೆಲ ವರ್ಷದಲ್ಲಿ ಈ ಬೆಟ್ಟವನ್ನೇ ಕಿರಿದಾಗಿಸುವಷ್ಟು ಬಿಲ್ಡಿಂಗ್ ಮಾಲ್‌ಗಳು ಸುತ್ತಮುತ್ತ ಎದ್ದುಬಿಡಬಹುದು.
ಗೊತ್ತಾಯ್ತು ಬಿಡಿ. ನಾಳೆ ಕೆಲಸದ ಟೆನ್ಷನ್ ಶುರುವಾಯಿತಾ? ಹೋಗೋಣ..ಇನ್ನು ಒಂದೇ ಒಂದು ದೇವಾಲಯ ನೋಡಲು ಬಾಕಿ ಇದೆ. ದೇಶದಲ್ಲೇ ಎರಡನೆಯ "ಮತ್ಸ್ಯನಾರಾಯಣ ದೇವಾಲಯ"  ಪಕ್ಕದಲ್ಲೇ ಕಾಣಿಸುತ್ತಿದೆಯಲ್ಲಾ ಅಲ್ಲಿಗೆ ಹೋಗಿ ಹಿಂತಿರುಗೋಣ. ಸಮುದ್ರದಾಳದಿಂದ ಭೂಮಿಯನ್ನು ಎತ್ತಿತಂದ ಮತ್ಸ್ಯನಾರಾಯಣನನ್ನು ಬೆಟ್ಟದ ತುದಿಯಲ್ಲಿರಿಸಿರುವರು. ದೇವಸ್ಥಾನದ ಹೊರಗಿನಿಂದ ಒಂದು ಸುತ್ತು ಹಾಕೋಣವಾ? ಸುಂದರ ರಮಣೀಯ ಪ್ರಕೃತಿ ದೃಶ್ಯ.....ಆಯ್ತು.. ಆಯ್ತು..ಹೋಗ್ಲಿ ಬಿಡಿ. ಇನ್ನೊಮ್ಮೆ ಟೈಮ್ ಮಾಡಿಕೊಂಡು ಬಂದು ಸುತ್ತೋಣ. goodbye..

Rating
No votes yet

Comments

Submitted by nageshamysore Mon, 08/12/2013 - 00:44

ಗಣೇಶ್ ಜಿ, ಚಿತ್ರ ಸಮೇತ ವಿವರಣೆ ಚೆನ್ನಾಗಿ ಬಂದಿದೆ. ನೀವಂದಂತೆ, ಆ ಸುಂದರ ಪರಿಸರ ಎಷ್ಟು ಬೇಗ ಕಾಂಕ್ರೀಟು ಕಾಡಿನ ಮಧ್ಯೆ ಮರೆಮಾಚಿಹೋಗಲಿದೆಯೆನ್ನುವುದು ಕಾದು ನೋಡಬೇಕಾದ ವಿಷಯ. ಅಲ್ಲಿಯತನಕ ಪರಿಸರದೊಡನೆ ಈ ವಿಶಿಷ್ಟ ದೇಗುಲ ಸೌಂದರ್ಯವನ್ನು ಜತೆಗೆ ಅಸ್ವಾದಿಸಿಬಿಡುವುದೊಳಿತು.

Submitted by ಗಣೇಶ Mon, 08/12/2013 - 23:52

In reply to by nageshamysore

ನಾಗೇಶರೆ, 20 ವರ್ಷ‌ ಮೊದಲು ಒಮ್ಮೆ ಅಲ್ಲಿಗೆ ಹೋಗಿದ್ದೆ. ಆಗ‌ ಎತ್ತರದ‌ ಬೆಟ್ಟದ‌ ಮೇಲೆ ಆಲದ‌ ಮರದ‌ ಸುತ್ತ "ಸರ್ವ‌ ಧರ್ಮ‌ ಸಮನ್ವಯ‌" ಮಂಟಪ‌ ಮಾತ್ರ ಇತ್ತು. ಸುತ್ತಲೂ ಹಳ್ಳಿ. ಈಗ‌ ನೋಡಿದರೆ ಅನೇಕ‌ ಮನೆ, ಫ್ಲಾಟ್ ಗಳು ... ಪಕ್ಕದಲ್ಲೇ JSS ಟೆಕ್ನಿಕಲ್ ಕಾಲೇಜಿದೆ.
ರಾಜಾಜಿನಗರದ‌ ಹರೇಕೃಷ್ಣ ಟೆಂಪ್‌ಲ್ ಸಹ ಹಾಗೇ-ಒಂದು ೨೫ ವರ್ಷದ ಮೊದಲು ಗುಡ್ಡದ ಮೇಲೆ ಒಂದು ತಾತ್ಕಾಲಿಕ ಶೆಡ್‌ನಲ್ಲಿ ಭಜನೆ ಪೂಜೆ ಮಾಡುತ್ತಿದ್ದರು. ನಾನೂ ಬೆಟ್ಟದ ಮೇಲಿನ ವಾತಾವರಣ, ಹರೇಕೃಷ್ಣ ಪಂಥದವರ ಭಜನೆ ಕೇಳಲು ಹೋಗುತ್ತಿದ್ದೆ.. ಈಗ ಆ ಬೆಟ್ಟ ಯಾವಲೆಕ್ಕ!? ಸುತ್ತಲೂ ಕಾಂಕ್ರಿಟ್ ಕಾಡು..:( ಜನ ಸಾಗರ...

Submitted by makara Mon, 08/12/2013 - 10:18

ಗಣೇಶರು ಏಕೆ ಸಂಪದದ ಕಡೆ ಒಂದೆರಡು ದಿನ ಸುಳಿದಿಲ್ಲ ಎಂದುಕೊಳ್ಳುತ್ತಿದ್ದೆ. ಈಗ ಅರ್ಥವಾಯಿತು ನೋಡಿ ಅವರು ಸಪ್ತಗಿರಿಯಂತಹ ಸಂಪದಿಗರಿಂದ ತಪ್ಪಿಸಿಕೊಳ್ಳಲು ಸುಂದರವಾದ ಜಾಗಗಳಿಗೆ ಪಿಕ್ನಿಕ್ ಹೋಗಿರುವುದು. ಪೋಟೋ ಹಾಗು ಬರಹ ಎರಡೂ ಚೆನ್ನಾಗಿವೆ ಗಣೇಶ್.ಜಿ.

Submitted by venkatb83 Mon, 08/12/2013 - 16:32

In reply to by makara

"ಪೂಜೆ ಮಾಡಿಸುವ ಮೊದಲು ಒಮ್ಮೆ ಪೂಜೆ ರೇಟಿನ ಕಡೆ ಕಣ್ಣು ಹಾಯಿಸಿ :)"

ಗಣೇಶ್ ಅಣ್ಣ ನೀವ್ ಲಾಲ್ಬಾಗ್ ಗೆ ನಮಗಿಂತ ಮುಂಚೆ ಹೋಗಿ ,ಆ ಬಗ್ಗೆ ಬರೆದಿರಿ .... ನಾವ್ ಅಲ್ಲಿಗೆ ಇನ್ನೂ ಹೋಗಿಲ್ಲ (ನಾ ಅಲ್ಲಿಗೆ ಕೊನೆಯ ಬಾರಿ -ಮೊದಲ ಬಾರಿ ಹೋಗಿದ್ದು ಸುಮಾರು ೭-೮ ವರುಷಗಳ ಹಿಂದೆ).. ಆಗಲೇ ನೀವು ಓಂಕಾರ್ ಆಶ್ರಮಕ್ಕೆ ಹೋಗಿ ಬಂದೂ -ಬರ್ದೂ ಆಯ್ತು ..!!
ಚಿತ್ರ ಸಮೇತ ಮಾಹಿತಿ ಬರಹ ಇಷ್ಟ ಆತು ..!!
ಮುಸ್ಸಂಜೆ ಹೊತ್ತಲ್ಲಿ ಅಲ್ಲಿದ್ದರೆ ತುಂಬಾ ಸೊಗಸಾಗಿರುವುದು .. ಒಳ್ಳೆ ಸೀನರಿ ..!!

ಇಲ್ಲಿದೆ ಓಂಕಾರ್ ಆಶ್ರಮದ ನಕ್ಷೆ ..!

http://wikimapia.org...

ಶುಭವಾಗಲಿ

\।

Submitted by ಗಣೇಶ Tue, 08/13/2013 - 00:13

In reply to by venkatb83

ಸಪ್ತಗಿರಿವಾಸಿಯವರೆ, ನನ್ನ ಮಗಳು ಚಿಕ್ಕವಳಿದ್ದಾಗ ವಾರಕ್ಕೊಮ್ಮೆ ಕಬ್ಬನ್ ಪಾರ್ಕ್ ಹೋಗುತ್ತಿದ್ದೆ. ಲಾಲ್ ಬಾಗ್ ಫ್ಲವರ್ ಶೋ ಮಿಸ್ ಮಾಡುತ್ತಲೇ ಇರಲಿಲ್ಲ. ಆಗೆಲ್ಲಾ ಕ್ಯಾಮರಾದಲ್ಲಿ ಫೋಟೋ ತೆಗೆದು, ರೀಲು ಮುಗಿದ ನಂತರ ಡೆವಲಪ್ ಮಾಡಲು ಕೊಟ್ಟು(೨-೩ ತಿಂಗಳ ನಂತರ) ಫೋಟೋ ನೋಡಬೇಕಾಗುತ್ತಿತ್ತು. ಈಗ ಚಕಾಚಕ್..ಎಲ್ಲರ ಕೈಯಲ್ಲೂ ಕ್ಯಾಮರಾವಿದೆ. ಈ ಬಾರಿಯೂ ಫ್ಲವರ್ ಶೋ ನೋಡಿ ಬಂದೆ. ಬಹಳ ಚೆನ್ನಾಗಿದೆ.ಕೆಲಸ ಯಾವತ್ತೂ ಇರುತ್ತದೆ. ಒಂದು ಸ್ವಲ್ಪ ಬಿಡುವು ಮಾಡಿ ನೋಡಿ ಬನ್ನಿ. ನೀವ್ಯಾರೂ ನೋಡಿ ಚಿತ್ರಗಳನ್ನು ಹಾಕದಿದ್ದರೆ ೧೫ರ ಮೊದಲು ನಾನೇ ಹಾಕುವೆ. ಓಂಕಾರ ಹಿಲ್ಸ್ ನಕ್ಷೆ ಕೊಂಡಿ ನೀಡಿದ್ದಕ್ಕೆ ಧನ್ಯವಾದಗಳು.

Submitted by partha1059 Mon, 08/12/2013 - 10:48

ಬರಹ ಚೆನ್ನಾಗಿದೆ. ಭೂಮಿಯನ್ನು ನೀರಿನಿಂದ ಮೇಲೆ ತಂದಿದ್ದು ವರಾಹ ! ಹಾಗೆ ಮತ್ಸ್ಯ ಪಾಪ ಏನು ಸುಮ್ಮನಿರಲಿಲ್ಲ ಮತ್ಸ್ಯನಾಗಿ ವೇದಗಳನ್ನು ಹೊರತಂದನೆಂದು ಪುರಾಣದ ಕತೆಗಳು ಕೇಳಿದಂತೆ ನೆನಪು. ತಪ್ಪಿದ್ದರೆ ಕ್ಷಮೆ ಇರಲಿ

Submitted by ಗಣೇಶ Tue, 08/13/2013 - 00:15

In reply to by partha1059

ತಪ್ಪು ಮಾಹಿತಿ ನೀಡಿದ್ದಕ್ಕೆ ಕ್ಷಮೆ ಕೇಳಬೇಕಾದದ್ದು ನಾನು ಪಾರ್ಥರೆ, ತಿದ್ದಿ ಸರಿಯಾದ ವಿವರ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು.

Submitted by ಗಣೇಶ Tue, 08/13/2013 - 00:22

In reply to by kavinagaraj

ಕವಿನಾಗರಾಜರೆ, ನೀವು ಬೆಂಗಳೂರಲ್ಲಿರುತ್ತಿದ್ದರೆ ಪ್ರತೀ ವಾರ ಹೋಗಿ ಬರುತ್ತಿದ್ದಿರೋ ಏನೋ..(ವೇದ ಪಾಠ ಶಾಲೆನೂ ಇದೆ). ಕೇದಾರ ಇತ್ಯಾದಿ ಜ್ಯೋತಿರ್ಲಿಂಗಕ್ಕೂ ಇಲ್ಲಿನ ಲಿಂಗಗಳಿಗೂ ಸಾಮ್ಯತೆ ಇರದಿದ್ದರೂ ಅವರ ಪ್ರಯತ್ನ ಮೆಚ್ಚಬೇಕಾದ್ದೇ. ಬೆಟ್ಟ ಉಳಿಯಿತಲ್ಲಾ..