೮೮. ಶ್ರೀ ಲಲಿತಾ ಸಹಸ್ರನಾಮ ೩೨೨ನೇ ನಾಮದ ವಿವರಣೆ

೮೮. ಶ್ರೀ ಲಲಿತಾ ಸಹಸ್ರನಾಮ ೩೨೨ನೇ ನಾಮದ ವಿವರಣೆ

ಲಲಿತಾ ಸಹಸ್ರನಾಮ ೩೨೨

Kāmakalā rūpā कामकला रूपा (322)

೩೨೨. ಕಾಮಕಲಾ ರೂಪಾ

              ದೇವಿಯು ಕಾಮಕಲಾ ರೂಪದಲ್ಲಿದ್ದಾಳೆ. ಇದು ಆಕೆಯ ಸೂಕ್ಷ್ಮ ರೂಪವಾಗಿದ್ದು ಇದು ಕೇವಲ ಆಕೆಯ ಸಂಗಾತಿಯಾದ ಶಿವನಿಗೆ ಮಾತ್ರ ತಿಳಿದಿದೆ. ಅವಳ ಸೂಕ್ಷ್ಮಾತೀಸೂಕ್ಷ್ಮ ರೂಪವು ಸಹಸ್ರಾರದಲ್ಲಿನ ಕುಂಡಲಿನೀ ರೂಪವಾಗಿದ್ದು; ಅಲ್ಲಿ ಆಕೆಯು ತನ್ನ ಸಂಗಾತಿಯೊಡನೆ ಸಂಯೋಗ ಹೊಂದುತ್ತಾಳೆ. ಕೆಳಗಿನ ಚಕ್ರಗಳಲ್ಲಿ ಕುಂಡಲಿನಿಯು ಅತ್ಯಂತ ಸೂಕ್ಷ್ಮವಾಗಿರದೆ ಅದು ಸೂಕ್ಷ್ಮಾತೀಸೂಕ್ಷ್ಮ ರೂಪವನ್ನು ಸಹಸ್ರಾರದಲ್ಲಿದ್ದಾಗ ಮಾತ್ರವೇ ಹೊಂದುತ್ತದೆ. ಕಾಮ ಎನ್ನುವುದು ಬಯಸುವ ವಸ್ತುವನ್ನು ಕುರಿತದ್ದಾಗಿದೆ; ಅಥವಾ ಆಸೆ ಪಡುವ ವಸ್ತುವಾಗಿದೆ. ಇಲ್ಲಿ ಶಿವನು ಅತ್ಯಂತ ಬಯಕೆಯ ವಸ್ತುವಾಗಿದ್ದಾನೆ; ಏಕೆಂದರೆ ಅವನೊಬ್ಬನೇ ಅಂತಿಮ ಸತ್ಯನು ಅಥವಾ ಪರಮಾರ್ಥನಾಗಿದ್ದಾನೆ. ಶಿವನು ಅಂತಿಮ ಪರಿಪಾಲಕನಾಗಿದ್ದು, ಅವನನ್ನು ಕಾಮೇಶ್ವರನೆಂದು ಸಂಭೋದಿಸಲಾಗಿದೆ. ಹೀಗೆ ಅವನನ್ನು ಕರೆಯುವುದರಿಂದ ಅವನು ಆಸೆಯ ಲಕ್ಷವಾಗುತ್ತಾನೆ (ಕಾಮ) ಅದಲ್ಲದೇ ಪರಮೋನ್ನತ ಪಾಲಕನಾಗುತ್ತಾನೆ (ಈಶ್ವರ). ಹೀಗೆ ಅವನು ಕಾಮ+ ಈಶ್ವರ= ಕಾಮೇಶ್ವರ’ನಾಗಿದ್ದಾನೆ. ಕಲಾ ಎನ್ನುವುದು ಶಿವನ ವಿಮರ್ಶ ರೂಪವಾದ ಮಹಾತ್ರಿಪುರಸುಂದರೀ ಆಗಿದೆ. ಶಿವನೊಬ್ಬನೇ ಸ್ವಯಂ ಪ್ರಕಾಶಕನಾಗಿದ್ದು, ಶಕ್ತಿಯು ಅವನ ಹೊಳಪಿನಿಂದ ಈ ಜಗತ್ತನ್ನು ಬೆಳಗಿಸುತ್ತಾಳೆ. ಅವರಿಬ್ಬರ ಸಂಯುಕ್ತ ರೂಪವೇ ಕಾಮಕಲಾ.

              ಕಾಮಕಲಾವು ಮೂರು ಬಿಂದುಗಳನ್ನು ಒಳಗೊಂಡಿದ್ದು ಅವು ತ್ರಿಭುಜವನ್ನು ಉಂಟುಮಾಡುತ್ತವೆ, ಮತ್ತು ಈ ತ್ರಿಕೋಣದ ಕೆಳಗೆ ಒಂದು ತಲೆ ಕೆಳಗಾದ ತ್ರಿಕೋಣವಿದ್ದು (ಹಾರ್ಧ-ಕಲಾ) ಅದರಲ್ಲಿ ಪಂಚದಶೀ ಮಂತ್ರದ ತ್ರಿಕೂಟಗಳನ್ನು ಇರಿಸಲಾಗುತ್ತದೆ. ಈ ಕೆಳಗಿನ ತಲೆಕೆಳಗಾದ ತ್ರಿಕೋಣದಿಂದ ಎಲ್ಲಾ ತ್ರಿಪುಟಿಗಳು ಹುಟ್ಟಿ ಅವೆಲ್ಲವೂ ಅಂತಿಮವಾಗಿ ಈ ಜಗತ್ತಿನ ಸೃಷ್ಟಿಯೆಡೆಗೆ ಕೊಂಡೊಯ್ಯುತ್ತವೆ. ಅದರಲ್ಲಿ ಎರಡು ಸಮಾನಾಂತರ ಚುಕ್ಕೆಗಳು ಅವಳ ಸ್ತನಗಳಾಗಿದ್ದು ಅವುಗಳ ಮೂಲಕ ಈ ಪ್ರಪಂಚವು ಪೋಷಿಸಲ್ಪಡುತ್ತದೆ ಮತ್ತು ಇವೆರಡೂ ಚುಕ್ಕೆಗಳ ಮೇಲಿರುವ ಒಂಟಿ ಚುಕ್ಕಿಯು ಆಕೆಯ ಮೂರನೆಯ ಕಣ್ಣಾಗಿದೆ. ಕಾಮ ಎಂದರೆ ಸೃಷ್ಟಿಸಬೇಕೆನ್ನುವ ಉದ್ದೇಶ ಮತ್ತು ಕಲಾ ಎಂದರೆ ಒಂದು ಪ್ರಮುಖ ವಸ್ತುವಿನ ಭಾಗವಾಗಿರುತ್ತದೆ, ಆ ಮುಖ್ಯ ವಸ್ತುವು ಇಲ್ಲಿ ಅದು ಶಿವನಾಗಿದೆ. ಕಾಮ ಮತ್ತು ಕಲಾ ಇವರೆಡರ ಸಂಯೋಗವು ಕಾಮೇಶ್ವರ ಮತ್ತು ಕಾಮೇಶ್ವರೀ ರೂಪಗಳ ಆವಿರ್ಭಾವದೆಡೆಗೆ ಕರೆದೊಯ್ಯುತ್ತದೆ. ಶಿವ ಮತ್ತು ಶಕ್ತಿಯರು ಕೇವಲ ಅವರ ಕಾಮ ರೂಪಗಳಲ್ಲಿ ಒಂದಾಗುತ್ತಾರೆ, ಅಂದರೆ ಕಾಮ+ಈಶ್ವರೀ ಮತ್ತು ಕಾಮ+ಈಶ್ವರ. ಇವರೆಡೂ ಸೃಷ್ಟಿಯನ್ನುಂಟು ಮಾಡುವ ಅವರಿಬ್ಬರ ಅತ್ಯುನ್ನತ ರೂಪಗಳಾಗಿವೆ. ದೇವಿಯನ್ನು ಕಾಮಕಲಾ ರೂಪದಲ್ಲಿ ’ಮಹಾ-ತ್ರಿಪುರ-ಸುಂದರೀ’ ಎಂದು ಕರೆಯಲಾಗುತ್ತದೆ ಅದಲ್ಲದೇ ಆಕೆಯನ್ನು ’ಬಿಂದುತ್ರಯ ಸಮಷ್ಟಿ ರೂಪಾ ದಿವ್ಯಾಕ್ಷರ ರೂಪಿಣಿ’ ಎಂದೂ ಕರೆಯಲಾಗುತ್ತದೆ. ಮಹಾ ಎಂದರೆ ಅತ್ಯುನ್ನತವಾದದ್ದು, ತ್ರಿಪುರ ಎಂದರೆ ಮೂರು ನಗರಗಳು (ಇವು ಸೃಷ್ಟಿಗೆ ಕಾರಣವಾದ ಮತ್ತು ದೇವಿಯಿಂದ ಪರಿಪಾಲಿಸಲ್ಪಡುವ ಎಲ್ಲಾ ವಿಧವಾದ ತ್ರಿಪುಟಿಗಳನ್ನು ಸೂಚಿಸಬಹುದು). ತ್ರಿಪುರ ಎನ್ನುವುದರ ಅಂತರಾರ್ಥವು ಆಕೆಯ ಮೂರು ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯಗಳಾಗಿವೆ. ಸುಂದರೀ ಎಂದರೆ ಅಂದವಾಗಿರುವವಳು ಅಥವಾ ಚೆಲುವೆ. ಆದ್ದರಿಂದ ‘ಮಹಾ-ತ್ರಿಪುರ-ಸುಂದರೀ’ ಎಂದರೆ ಸುಂದರವಾದ ಪರಮೋನ್ನತ ಮಾತೆ; ಮತ್ತಾಕೆಯು ಸೃಷ್ಟಿಸಿ, ಪೋಷಿಸಿ ಮತ್ತು ಲಯವಾಗಿಸುವಾಕೆ. ಈ ಮೂರು ಕ್ರಿಯೆಗಳನ್ನು ಈ ಕಾಮಕಲಾ ನಾಮದಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ.

                ಈ ಮೂರು ಬಿಂದುಗಳು ಅತ್ಯಂತ ಶಕ್ತಿಯುತವಾಗಿವೆ. ಅವುಗಳು ಕ್ರಮವಾಗಿ ಸೂರ್ಯ, ಚಂದ್ರ ಮತ್ತು ಅಗ್ನಿಯನ್ನು ಪ್ರತಿನಿಧಿಸುತ್ತವೆ. ಬಿಂದುವನ್ನು ಅತ್ಯುನ್ನತವಾದ ಬೆಳಕೆಂದು ಕರೆಯುತ್ತಾರೆ. ಆದ್ದರಿಂದ ಪರಮೋನ್ನತವಾದ ಬೆಳಕಿನ ರೂಪವು ಬೆಳಕಿನ ಮೂಲವಾಗಿದ್ದು ಅದರಿಂದ ಇತರೆಲ್ಲಾ ಬೆಳಕುಗಳು ಉದ್ಭವಿಸಿರಬೇಕು. ಸ್ವಯಂಪ್ರಕಾಶಕನಾಗಿರುವ ಬೆಳಕೇ ಶಿವನಾಗಿರುವುದರಿಂದ ಅವನನ್ನು ಪ್ರಕಾಶ ರೂಪ ಎಂದು ಕರೆಯುತ್ತಾರೆ. ಶಕ್ತಿಯು ಪ್ರಕಾಶ ರೂಪದಿಂದ ಪಡೆದುಕೊಂಡ ಬೆಳಕನ್ನು ಪ್ರತಿಫಲಿಸುವುದಲ್ಲದೇ ಎಲ್ಲೆಡೆ ಅದನ್ನು ಹಂಚುತ್ತಾಳೆ; ಆದ್ದರಿಂದ ಆಕೆಯನ್ನು ವಿಮರ್ಶ ರೂಪ ಎಂದು ಕರೆಯಲಾಗಿದೆ. ’ವಿಮರ್ಶ’ ಎನ್ನುವುದನ್ನು ಕಾರಣದಿಂದೊಡಗೂಡಿದ ಜ್ಞಾನವೆನ್ನಬಹುದು. ಶಿವನ ಬೆಳಕು ಶಕ್ತಿಯು ಅವನೊಡನೆ ಇಲ್ಲದಿದ್ದರೆ ಪ್ರತಿಫಲಿಸದು. ಆದ್ದರಿಂದ ಈ ಮೂರು ಬಿಂದುಗಳು ದೇವಿಯ ವಿವಿಧ ರೂಪಗಳಾಗಿದ್ದು ಅವು ಪ್ರತಿಯೊಂದೂ ಮೂರು ದೈವೀ ಶಕ್ತಿಗಳನ್ನು ಪ್ರತಿನಿಧಿಸುತ್ತವೆ; ಅವೆಂದರೆ ವಾಮ, ಜ್ಯೇಷ್ಠ ಮತ್ತು ರೌದ್ರೀ. ಈ ಮೂರು ದೇವತೆಗಳು ಅವಳ ಮೂರು ಕ್ರಿಯಗಳಾದ ಸೃಷ್ಟಿ, ಪೋಷಣೆ ಮತ್ತು ಲೀನವಾಗುವಿಕೆಯನ್ನು ಪ್ರತಿನಿಧಿಸುತ್ತಾರೆ. ಇದುವರೆಗಿನದು ಮೇಲಿನ ತ್ರಿಕೋಣದ ಕುರಿತಾದದ್ದು. ಇಲ್ಲಿ ಯಾವುದೇ ತ್ರಿಕೋಣವಿಲ್ಲ ಆದರೆ ಕೇವಲ ಮೂರು ಬಿಂದುಗಳು ಮಾತ್ರ ಇವೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು (ಬಿಂದುವಿನ ಕುರಿತು ಹೆಚ್ಚಿನ ವಿವರಣೆಯನ್ನು ೯೦೫ನೇ ನಾಮದಲ್ಲಿ ನೋಡೋಣ). ಇದನ್ನು ತ್ರಿಕೋಣವೆಂದು ಏಕೆ ಕರೆಯಲಾಗಿದೆ ಎಂದರೆ ಈ ಮೂರು ಚುಕ್ಕೆಗಳನ್ನು ನೇರವಾದ ಗೆರೆಗಳಿಂದ ಸೇರಿಸಿದಾಗ ಒಂದು ತ್ರಿಕೋಣವು ಉಂಟಾಗುವುದರಿಂದ.

                ಮೇಲಿನ ಗ್ರಹಿಕೆಯ ತ್ರಿಕೋಣವು ಕೆಳಗಿನ ಹಾರ್ಧ-ಕಲಾ ಅಥವಾ ತಲೆಕೆಳಗಾದ ತ್ರಿಕೋಣದೊಂದಿಗೆ ಬೆಸಗೊಂಡಿರುತ್ತದೆ. ಈ ತ್ರಿಕೋಣದ ಮೂರು ರೇಖೆಗಳು ಪ್ರತಿಯೊಂದೂ ಪಂಚದಶೀ ಮಂತ್ರದ ಒಂದೊಂದು ಕೂಟಗಳನ್ನು ಪ್ರತಿನಿಧಿಸುತ್ತವೆ. ಪರಮೋನ್ನತವಾದ ಪಂಚದಶೀ ಮಂತ್ರದ ತ್ರಿಕೂಟಗಳಿಂದ ಉಂಟಾದ ಕೆಳಗಿನ ತಲೆಕೆಳಗಾದ ತ್ರಿಕೋಣದಲ್ಲಿ ಎಲ್ಲಾ ಮಂತ್ರಗಳೂ ಉದ್ಭವಿಸಿ ಅವು ಸೃಷ್ಟಿಯೆಡೆಗೆ ಕೊಂಡೊಯ್ಯುತ್ತವೆ. ಆದ್ದರಿಂದ ಕೆಳಗಿನ ತ್ರಿಕೋಣವನ್ನು ಈ ಪ್ರಪಂಚದ ಸೃಷ್ಟಿಗೆ ಕಾರಣವಾದ ಸೃಷ್ಟಿಯ ಅಂಗವೆಂದು ಕರೆಯಲಾಗುತ್ತದೆ. ಮೇಲಿನ ತ್ರಿಕೋಣದಲ್ಲಿರುವ ಎರಡು ಕೆಳಗಿನ ಬಿಂದುಗಳು ಪಾಲನೆ ಮತ್ತು ಪೋಷಣೆಗಳಾಗಿದ್ದರೆ ಅತ್ಯಂತ ಮೇಲಿರುವ ಚುಕ್ಕೆಯು ವಿನಾಶಕ್ಕೆ ಕಾರಣವಾಗಿದೆ. ಈ ಮೂರು ಬಿಂದುಗಳನ್ನು ಸೂರ್ಯ, ಚಂದ್ರ ಮತ್ತು ಅಗ್ನಿ ಎಂದೂ ಕರೆಯಲಾಗುತ್ತದೆ; ಬಹುಶಃ ಅವು ಪಾಲನೆ (ಸೂರ್ಯ -ಅವನಿಲ್ಲದಿದ್ದರೆ ಈ ಪ್ರಪಂಚವು ಕಾರ್ಯನಿರ್ವಹಿಸಲಾರದು), ಪೋಷಣೆ (ಚಂದ್ರ- ಚಂದ್ರನು ಪ್ರೀತಿಯ ಸಂಕೇತವಾಗಿದ್ದಾನೆ) ಮತ್ತು ಲಯ (ಅಗ್ನಿ - ಬೆಂಕಿಯ ಒಂದು ಗುಣವು ನಾಶಪಡಿಸುವುದಾಗಿದೆ) ಇವುಗಳನ್ನು ಪ್ರತಿನಿಧಿಸುತ್ತವೆ. ಇದನ್ನು ವಾಸ್ತವವಾಗಿ ಪಂಚದಶೀ ಮಂತ್ರದ ಮೂರು ಕೂಟಗಳಿಗೆ ಹೋಲಿಸಬಹುದು ಅದರಲ್ಲಿ ಆ ಕೂಟಗಳನ್ನು ಅಗ್ನಿ, ಸೂರ್ಯ ಮತ್ತು ಚಂದ್ರ ಕೂಟಗಳೆಂದು ಕರೆಯಲಾಗುತ್ತದೆ.

              ಇದೇ ವಿಧವಾದ ವಿವರಣೆಯನ್ನು ಸೌಂದರ್ಯ ಲಹರಿಯಲ್ಲೂ (ಸ್ರೋತ್ರ ೧೯) ಕೊಡಲಾಗಿದ್ದು ಅದು ಹೇಳುತ್ತದೆ, "ಯಾರು ನಿನ್ನ ಮುಖವನ್ನು ಬಿಂದುವೆಂದು  (ಮೇಲಿನ ಬಿಂದುವೆಂದು)  ಮತ್ತು ನಿನ್ನ ಸ್ತನದ್ವಯಗಳನ್ನು ಬಿಂದುಗಳೆಂದು (ಕೆಳಗಿನ ಎರಡು ಬಿಂದುಗಳು) ಪರಿಗಣಿಸಿ ನಿನ್ನ ಕಾಮಕಲಾ ರೂಪದ ಮೇಲೆ ಧ್ಯಾನಿಸುತ್ತಾರೆಯೋ ಮತ್ತು ಅದರ ಕೆಳಗಿರುವ ಹ ಅಕ್ಷರದ ಅರ್ಧವನ್ನು (ಕೆಳಗಿನ ತಲೆಕೆಳಗಾದ ತ್ರಿಕೋಣ) ಸಹ; ಅವರು ತತ್-ಕ್ಷಣವೇ ಸ್ತ್ರೀಯರನ್ನು ವಶೀಕರಿಸಿಕೊಳ್ಳುತ್ತಾರೆ, ಆದರೆ ಅದು ದುರಂತವಾಗಿದೆ."

    ಕಾಮಕಲಾದ ಕುರಿತು ಹೆಚ್ಚಿನ ವಿವರಣೆಗಳಿಗೆ ಈ ಲೇಖನವನ್ನು ನೋಡಿ - ೧೭. ಲಲಿತಾ ಸಹಸ್ರನಾಮ - ಪಂಚದಶೀ ಮಂತ್ರದ ವಿವರಣೆ http://sampada.net/b...

              ಕಾಮಕಲಾದ ಇನ್ನಷ್ಟು ವಿವರಗಳಿಗೆ ಹಾಗು ಚಿತ್ರಗಳಿಗೆ ಈ ಲೇಖನವನ್ನೂ ನೋಡಿ : ೩೫. ಶ್ರೀ ಲಲಿತಾ ಸಹಸ್ರನಾಮ - ಕಾಮಕಲಾ ರೂಪದ (ಸೌಂದರ್ಯಲಹರಿಯ ೧೯ನೇ ಶ್ಲೋಕದ) ವಿವರಣೆ http://sampada.net/b...

         ಇದರ ದೀರ್ಘವಾದ ವಿವರಣೆಯನ್ನು ಕೊಡುವುದು ಸಮಂಜಸವಲ್ಲ, ಏಕೆಂದರೆ ಅದನ್ನು ಶ್ರೀ ವಿದ್ಯಾ ಉಪಾಸನೆಯನ್ನರಿತ ಯೋಗ್ಯ ಗುರುವಿನಿಂದ ತಿಳಿದುಕೊಳ್ಳಬೇಕು. ಆದರೆ ಯಾರಿಗೆ  ಗುರುವಿಲ್ಲವೋ, ಆದರೆ ಶ್ರೀ ಮಾತೆಯೊಂದಿಗೆ ದೀರ್ಘವಾದ ಒಡನಾಟವಿಟ್ಟುಕೊಂಡಿದ್ದಾರೆಯೋ ಅವರು ’ಕಾಮಕಲಾ’ದ ಮಹತ್ವವನ್ನು ಅರಿಯುವುದರಿಂದ ವಂಚಿತರಾಗಬಾರದು. ಆದ್ದರಿಂದ ಮಧ್ಯಮ ಸ್ಥಾಯಿಯ ವಿಶ್ಲೇಷಣೆಯನ್ನು ಇಲ್ಲಿ ಕೊಡಲಾಗಿದೆ. ಷೋಡಶೀ ಮಂತ್ರದಲ್ಲಿ ಸೂಕ್ತವಾದ ಸಮಯದಲ್ಲಿ ’ಕಾಮಕಲಾ’ವನ್ನು ಉಪಯೋಗಿಸಿದಾಗ ಅದು ಮಂತ್ರ ಸಿದ್ಧಿಯನ್ನು ಶೀಘ್ರಗೊಳಿಸುತ್ತದೆ. 

******

ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 322 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
No votes yet

Comments

Submitted by nageshamysore Wed, 08/14/2013 - 04:26

ಶ್ರೀಧರರೆ, ೮೮. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಸಾರ ತಮ್ಮ ಪರಿಷ್ಕರಣೆಗೆ ಸಿದ್ದ :-)

ಲಲಿತಾ ಸಹಸ್ರನಾಮ ೩೨೨
___________________________________________

೩೨೨. ಕಾಮಕಲಾ ರೂಪಾ 
ಅಂತಿಮ ಸತ್ಯ ಪರಮಾರ್ಥವಾಗಿ ಶಿವ, ಸಾಧಕ ಹೊಂದಬಯಸುವ ವಸ್ತು 
ಆಸೆಯಂತಿಮಲಕ್ಷ್ಯ, ಪರಮೋತ್ತರ ಪಾಲಕ ಕಾಮೇಶ್ವರ ಸ್ವಪ್ರಕಾಶ ದಾತು
ಶಿವವಿಮರ್ಶಾರೂಪ ಶಕ್ತಿ, ಮಹಾತ್ರಿಪುರಸುಂದರೀ ಜಗ ಬೆಳಗಲಾಪ್ರಕಾಶ
ಶಿವ ಶಕ್ತಿ ಸಂಯೋಗ ಸಂಭ್ರಮ ಕಾಮಕಲಾರೂಪಾಗಿ ಲಲಿತಾ ಪರಮೇಶ!

ಕಾಮಕಲಾ ತ್ರಿಭುಜ ತಳದೆ, ಹಾರ್ಧಕಲಾದಲಿಟ್ಟ ಪಂಚದಶೀ ತ್ರಿಕೂಟ
ಶೀರ್ಷಾಸನ ತ್ರಿಕೋನಾಜನ್ಯ ತ್ರಿಪುಟಿ ಜಗ ಸೃಷ್ಟಿಯೆಡೆಗೊಯ್ವ ಮುಕುಟ
ಜಗ ಪೋಷಿಸೆ ಸ್ತನ ಚುಕ್ಕೆ, ವಿನಾಶಿಸೆ ಮುಕ್ಕಣ್ಣ ಚುಕ್ಕೆ ಸೃಷ್ಟಿಗಾಗಿ ಕಾಮ
ಅವಿರ್ಭವಿಸೆ ಮಿಲನದಿ ಕಾಮೇಶ್ವರ ಕಾಮೇಶ್ವರೀ ಸೃಷ್ಟಿಗೆ ಪರಮೋನ್ನತ!

ಸೃಷ್ಟಿ ಸ್ಥಿತಿ ಲಯ ತ್ರಿಪುರಾ ನಗರಿ, ಪರಿಪಾಲಿಸಿ ದೇವಿ ಸುಂದರಿ
ತ್ರಿಪುಟಿ ರೂಪಿಗಳಾಗಿ ತ್ರಿಪುರ ಸೃಷ್ಟಿ ಕಾರ್ಯ ನಿಯಮದ ದಾರಿ
ಪರಮೋನ್ನತ ಮಾತೆ 'ಮಹಾ ತ್ರಿಪುರ ಸುಂದರೀ' ಚೆಲುವಿನಗಣಿ
ಈಕಾಮಕಲಾ 'ಬಿಂದುತ್ರಯ ಸಮಷ್ಟಿರೂಪಾ ದಿವ್ಯಾಕ್ಷರರೂಪಿಣಿ'!

ಬಿಂದುತ್ರಯ ಶಕ್ತಿಯುತ ಸೂರ್ಯ ಚಂದ್ರ ಅಗ್ನಿ ಪ್ರತಿನಿಧಿತ
ಪರಮೋನ್ನತ ತೇಜೊಪುಂಜ ಬಿಂದು ಬೆಳಕಿಗೆ ಬೆಳಕಾಗುತ
ಪ್ರಕಾಶರೂಪಿ ಶಿವಜ್ಞಾನ ಪ್ರತಿಫಲಿಸಿ ಹಂಚುವ ಶಕ್ತಿ ವಿಮರ್ಶ
ವಾಮ ಜೇಷ್ಠ ರೌದ್ರೀ ದೈವೀಶಕ್ತಿ ತ್ರಿಸೃಷ್ಟಿ ಕ್ರಿಯೆ ಬಿಂದುಸ್ಪರ್ಶ!

ಬೆಸೆದು ಬಿಂದುತ್ರಯ ತ್ರಿಕೋನಗಳೆರಡರ ದಾಯ
ಪ್ರತಿರೇಖೆ ಪಂಚದಶೀಕೂಟವ ಪ್ರತಿನಿಧಿಸೊ ತ್ರಯ
ಹಾರ್ಧ ಕಲಾ ಸೃಷ್ಟಿ ಮಂತ್ರ, ಬಿಂದುತ್ರಯ ಗಣನೆ
ಪಾಲನೆ ಪೋಷಣೆ ಲಯ ಸೂರ್ಯಚಂದ್ರಾಗ್ನಿಯೆನೆ!

ಪರಮಾರ್ಥವನರಿಸುವ ಸಮರ್ಥ ಕಾಮಕಲಾ ರೂಪದರ್ಥ
ಬಾಹ್ಯ ರೂಪ ಧ್ಯಾನ ಬರಿ ಸ್ತ್ರೀ ವಶೀಕರಣವಾಗಲೆ ದುರಂತ
ಷೋಡಶೀ ಮಂತ್ರ ಸೂಕ್ತ ಸಮಯೆ ಮಂತ್ರಸಿದ್ದಿ ಕಾಮಕಲಾ
ಶ್ರೀ ವಿದ್ಯಾ ಉಪಾಸನೆ ಸಮಂಜಸ ಗುರುಮುಖೇನವೆ ಸಕಲ!
 
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು

ನಾಗೇಶರೆ,
ನಾನು ಮತ್ತೊಮ್ಮೆ ಮಂತ್ರಮುಗ್ದನಾಗುವಂತೆ ಮಾಡಿದ್ದು ಈ ನಿಮ್ಮ ಸಾರವತ್ತಾದ ಕಾಮಕಲಾ ವಿವರಣೆಯ ಕವನ. ಈ ವಿವರಣೆಯ ಕವನ ಬಹಳ ಕ್ಲಿಷ್ಟವಾಗಬಹುದೆಂದು ತಿಳಿದುಕೊಂಡಿದ್ದೆ; ಆದರೆ ನೀವು ಅದನ್ನು ಸುಳ್ಳು ಮಾಡಿ ಅದ್ಭುತವಾಗಿ ಕವನ ರಚನೆ ಮಾಡಿದ್ದೀರಿ. ಅಭಿನಂದನೆಗಳು ನಿಮಗೆ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, ನಿಮ್ಮ ಮಾತು ನಿಜ - ಇದನ್ನು ನೋಡಿದಾಗಲೆ ಕ್ಲಿಷ್ಟವಾದದ್ದೆಂದು ಅರಿವಾಯ್ತು. ಅಲ್ಲದೆ ಹೇಳದಿದ್ದರೂ ಸ್ಪುರಿಸುವ ಕೆಲವು ಗೂಢಾರ್ಥಗಳನ್ನು ಹಿತಮಿತವಾದ ಚೌಕಟ್ಟಿನಲ್ಲೆ ಹಿಡಿದಿಡಬೇಕು. ಅದಕ್ಕೆ 89, 90 ಮೊದಲು ಮುಗಿಸಿ ಒಂದು ಬೆಳಗಿನ ಜಾವ ಇದೊಂದನ್ನೆ ಕೈಗೆತ್ತಿಕೊಂಡೆ. ಲಲಿತಾ ಕೃಪೆಯಿಂದಾಗಿ ಎಲ್ಲಾ ಪಂಕ್ತಿ ಸರಾಗವಾಗಿ ಹರಿದು ಬಂತು. ಮೊದಲು ಒಂದೆ ಪಂಕ್ತಿ ಸಾಕೇನೊ ಅಂದುಕೊಂಡಿದ್ದೆ. ಆದರೆ ಈ ನಾಮದ ಮಹತ್ವ ತೀರಾ ಹೆಚ್ಚು ಅನಿಸಿ ಪೂರ್ತಿ ಹೊಸೆದುಬಿಟ್ಟೆ:-)

ಈಗ ಅಂತಿಮಗೊಳಿಸಿದ ಆವೃತ್ತಿ ಬಿಡುಗಡೆ ಮಾಡಿದ್ದೇನೆ.
 
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು