೯೭. ಲಲಿತಾ ಸಹಸ್ರನಾಮ ೩೬೨ರಿಂದ ೩೬೫ನೇ ನಾಮಗಳ ವಿವರಣೆ

೯೭. ಲಲಿತಾ ಸಹಸ್ರನಾಮ ೩೬೨ರಿಂದ ೩೬೫ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೩೬೨ - ೩೬೫

Citiḥ चितिः (362)

೩೬೨. ಚಿತಿಃ

        ದೇವಿಯು ನಿತ್ಯವಾದ ಜ್ಞಾನದ ರೂಪದಲ್ಲಿರುತ್ತಾಳೆ. ಚಿತ್ ಎನ್ನುವುದನ್ನು ಬ್ರಹ್ಮಸಾಕ್ಷಾತ್ಕಾರಕ್ಕೆ ಸಹಾಯಕವಾಗಿರುವ ಪರಿಶುದ್ಧವಾದ ಜ್ಞಾನವೆಂದು ವಿವರಿಸಬಹುದು. ಚಿತ್ ಅಥವಾ ವಿದ್ಯಾ ಇದರ ವಿರುದ್ಧಾತ್ಮಕ ಪದವು ಅಜ್ಞಾನ ಅಥವಾ ಅವಿದ್ಯಾ ಆಗಿದೆ (ಬ್ರಹ್ಮನ ಕುರಿತ ತಿಳುವಳಿಕೆ ಇಲ್ಲದಿರುವಿಕೆಯಾಗಿದೆ). ದೇವಿಯ ವಿಮರ್ಶಾ ರೂಪದ ಕುರಿತಾಗಿ ಇಲ್ಲಿ ಚರ್ಚಿಸಲಾಗಿದೆ. ಪರಬ್ರಹ್ಮಕ್ಕೆ ಎರಡು ರೂಪಗಳಿವೆ; ಪ್ರಕಾಶ ಅಥವಾ ಜಡ ಹಾಗು ಸ್ವಯಂಪ್ರಕಾಶಕ ಶಕ್ತಿ ಮತ್ತು ವಿಮರ್ಶ ಅಥವಾ ಚಲನಶೀಲ/ಕ್ರಿಯಾ ಶೀಲ ಹಾಗೂ ಪ್ರತಿಫಲಿಸುವ ಶಕ್ತಿ. ಒಂದಿಲ್ಲದಿದ್ದರೆ ಮತ್ತೊಂದು ಈ ಪ್ರಪಂಚವನ್ನು ಸುಸ್ಥಿಯಲ್ಲಿಡಲು ಸಾಧ್ಯವಾಗದು ಈ ಪರಸ್ಪರ ಅವಲಂಬಿಸುವಿಕೆಯನ್ನು ಶಿವ ಮತ್ತು ಶಕ್ತಿಯರ ಐಕ್ಯರೂಪವೆಂದು ಕರೆಯಲಾಗುತ್ತದೆ.

ಚಿತ್ ಕುರಿತಾದ ಇನ್ನಷ್ಟು ವಿವರಣೆಗಳು:

          ಬ್ರಹ್ಮವು ಸತ್ (ನಿರಂತರವಾಗಿರುವುದರ), ಚಿತ್ (ಪರಿಶುದ್ಧ ಅಥವಾ ಮೂಲಭೂತ ಪ್ರಜ್ಞೆ) ಮತ್ತು ಆನಂದ (ಅತ್ಯುನ್ನತವಾದ ಸಂತೋಷ) ಇವುಗಳ ಸಾರವಾಗಿದೆ. ಚಿತ್ ಎನ್ನುವುದನ್ನು ಆಧ್ಯಾತ್ಮ ಪ್ರಜ್ಞೆ ಮತ್ತು ಚಿದಾತ್ಮ ಎಂದೂ ಕರೆಯುತ್ತಾರೆ. ಯಾವಾಗ ಚಿದಾತ್ಮವು ಬ್ರಹ್ಮಾಂಡ ಪ್ರಜ್ಞೆಯ ಅಜ್ಞಾನದಲ್ಲಿ ಪ್ರತಿಫಲನವಾಗುತ್ತದೆಯೋ ಆಗ ಅದು ದೇವರ ಸ್ವರೂಪವನ್ನು ಪಡೆಯುತ್ತದೆ. ಯಾವಾಗ ಚಿದಾತ್ಮವು ವ್ಯಕ್ತಿಗತ ಅಜ್ಞಾನದಲ್ಲಿ ಪ್ರತಿಫಲನವಾಗುತ್ತದೆಯೋ ಆಗ ಅದು ಪ್ರತ್ಯೇಕ ಆತ್ಮಗಳ ಸ್ವರೂಪವನ್ನು ಪಡೆಯುತ್ತದೆ. ಆದರೆ ದೇವರಿಗೆ ಮತ್ತು ಆತ್ಮಕ್ಕೆ ವ್ಯತ್ಯಾಸವಿದೆ. ದೇವರು ಪ್ರಕೃತಿಯ ಒಡೆಯನಾದರೆ, ಆತ್ಮವು ಪ್ರಕೃತಿಯಿಂದ ಬಂಧನಕ್ಕೊಳಗಾಗುವ ಗುಣವನ್ನು ಹೊಂದಿದೆ.

Tatpada-lakṣyārthā तत्पद-लक्ष्यार्था (363)

೩೬೩. ತತ್ಪದ-ಲಕ್ಷಾರ್ಥಾ

         ತತ್ ಎಂದರೆ ಅದು ಮತ್ತು ಪದ ಎಂದರೆ ಶಬ್ದ. ತತ್ಪದ ಎನ್ನುವುದರಲ್ಲಿ ಅದು ಎನ್ನುವುದು ಪರಬ್ರಹ್ಮವನ್ನು ಸೂಚಿಸುತ್ತದೆ. ಲಕ್ಷಾರ್ಥಾ ಅಂದರೆ ಪರೋಕ್ಷ ಉಲ್ಲೇಖವೆಂದಾಗುತ್ತದೆ. ತತ್-ತ್ವಮ್-ಅಸಿ ಅಂದರೆ ಅದು ನೀನೇ ಆಗಿದ್ದೀಯಾ ಎನ್ನುವುದರಲ್ಲಿ ನೀನು ಬ್ರಹ್ಮವೇ ಆಗಿದ್ದೀಯಾ ಎಂದು ಹೇಳುತ್ತದೆ. ಇದು ಪರಬ್ರಹ್ಮದ ಸರ್ವಾಂತರ್ಯಾಮಿತ್ವವನ್ನು ತಿಳಿಸುವುದಲ್ಲದೆ ಅದು ಪರಬ್ರಹ್ಮದ ಅದ್ವೈತ ಗುಣವನ್ನೂ ಸಹ ಹೇಳುತ್ತದೆ. ಹಿಂದಿನ ನಾಮವು ಬ್ರಹ್ಮದ ಎರಡು ರೂಪಗಳ ಕುರಿತಾಗಿ ಚರ್ಚಿಸಿತು. ಪ್ರಕಾಶ ರೂಪವು ನಾಮರೂಪ ಮತ್ತು ಗುಣ ರಹಿತವಾಗಿದ್ದು ಅದು ನಿತ್ಯ ಪರಿಶುದ್ಧವಾಗಿದೆ ಮತ್ತು ವಿಮರ್ಶಾ ರೂಪವು ನಾಮರೂಪ ಗುಣಗಳಿಂದ ಕೂಡಿದ್ದು ಅದು ಎಲ್ಲಾ ವಿಧವಾದ ಬದಲಾವಣೆಗಳಿಗೆ ಒಳಪಡುತ್ತದೆ ಕೇವಲ ಈ ಬ್ರಹ್ಮಾಂಡವನ್ನು ಪರಿಪಾಲಿಸುವ ಸಲುವಾಗಿ. ಅವರೆಡೂ ಒಂದಕ್ಕೊಂದು ಪರಸ್ಪರ ಅವಲಂಬಿತವಾಗಿದ್ದರೆ, ಶಬ್ದಶಃ ಅರ್ಥದಲ್ಲಿ ನೋಡಿದರೆ ಅವೆರಡರ ನಡುವೆ ವ್ಯತ್ಯಾಸವು ಕಂಡುಬರದು ಏಕೆಂದರೆ ಅವೆರಡೂ ರೂಪಗಳು ಪರಿಶುದ್ಧ ಜ್ಞಾನ ಅಥವಾ ಚಿತ್ ಇದರ ಮೂರ್ತರೂಪಗಳಾಗಿವೆ. ವಾಸ್ತವವಾಗಿ ಈ ನಾಮ, ರೂಪ ಮತ್ತು  ಗುಣ ರಹಿತ ಬ್ರಹ್ಮವು ’ಅದು’ ಅಥವಾ ಚಿತ್ ಎಂದು ಕರೆಯಲ್ಪಟ್ಟಿದೆ. ಹಿಂದಿನ ನಾಮದಿಂದ ಉಂಟಾಗಬಹುದಾದ ಗೊಂದಲವನ್ನು ನಿವಾರಿಸಲು ಈ ನಾಮವು ದೇವಿಯ ನಿರ್ಗುಣ ಬ್ರಹ್ಮದ ರೂಪದ ಕುರಿತು ದೃಢಪಡಿಸುತ್ತದೆ.  

Cideka-rasa-rūpiṇī चिदेक-रस-रूपिणी (364)

೩೬೪. ಚಿದೇಕ-ರಸ-ರೂಪಿಣೀ

         ದೇವಿಯು ಜ್ಞಾನದ ಸಾರವಾಗಿದ್ದಾಳೆ. ಜ್ಞಾನ ಮತ್ತು ಜ್ಞಾನದ ಸಾರಗಳ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿದುಕೊಳ್ಳತಕ್ಕದ್ದು. ನಿರ್ಗುಣ ಬ್ರಹ್ಮದ ಅಥವಾ ಪ್ರಕಾಶ ರೂಪದ ಜ್ಞಾನವು ಸಗುಣ ಬ್ರಹ್ಮ ಅಥವಾ ವಿಮರ್ಶ ರೂಪಕ್ಕಿಂತ ಭಿನ್ನವಾಗಿದೆ. ಸಗುಣ ಬ್ರಹ್ಮದ ಮತ್ತು ನಿರ್ಗುಣ ಬ್ರಹ್ಮದ ಒಂದೇ ತೆರನಾಗಿರುತ್ತವೆ ಮತ್ತವುಗಳ ಜ್ಞಾನದ ಪರಿಶುದ್ಧತೆಯೂ ಸಹ. ಈ ಕಾರಣದಿಂದಾಗಿ ಅವರೆಡನ್ನೂ ಒಂದೇ ಎಂದು ಗುರುತಿಸಲಾಗುತ್ತದೆ. ಈ ನಾಮವು ದೇವಿಯು ಚಿತ್ (ನಾಮ ೩೬೨)ಗಿಂತ ಅಥವಾ ತತ್ (ನಾಮ ೩೬೩)ಗಿಂತ ಭಿನ್ನಳಲ್ಲ; ಎನ್ನುವ ಪರಬ್ರಹ್ಮದ ಗುಣವನ್ನು ಹೇಳುತ್ತದೆ. ನಿರ್ಗುಣ ಬ್ರಹ್ಮಕ್ಕೂ ಮತ್ತು ಸಗುಣ ಬ್ರಹ್ಮಕ್ಕೂ ಯಾವುದೇ ವಿಧವಾದ ವ್ಯತ್ಯಾಸಗಳಿಲ್ಲ ಏಕೆಂದರೆ ಸಗುಣ ಬ್ರಹ್ಮದಲ್ಲಿ ಉಂಟಾಗುವ ಬದಲಾವಣೆಗಳು ಪರಬ್ರಹ್ಮದ ಇಚ್ಛೆಗನುಗುಣವಾಗಿ ಸೃಷ್ಟಿ, ಸ್ಥಿತಿ ಮತ್ತು ಲಯ ಕಾರ್ಯಗಳನ್ನು ಉಂಟು ಮಾಡುವ ಉದ್ದೇಶದಿಂದ ಹೊಂದಲ್ಪಡುತ್ತವೆ. ಯಾವಾಗ ಜ್ಞಾನದ ಸಾರವನ್ನು ಭಟ್ಟಿ ಇಳಿಸುತ್ತಾರೆಯೋ ಆಗ ಜ್ಞಾನದ ಸಾರವು ದೊರೆಯುತ್ತದೆ, ಬಹುಶಃ ಅದರ ಸ್ಥೂಲ ರೂಪದಿಂದ ಸೂಕ್ಷ್ಮ ರೂಪಕ್ಕೆ. ವಾಸ್ತವವಾಗಿ ಜ್ಞಾನದ ಸ್ಥೂಲ ಮತ್ತು ಸೂಕ್ಷ್ಮ ರೂಪಗಳ ಮೂಲಭೂತ ಸ್ವರೂಪದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಇದನ್ನು ನಾವು ಹಾಲು ಮತ್ತು ಅದರ ಉತ್ಪನ್ನಗಳಿಗೆ ಹೋಲಿಸಬಹುದು.

Svātmānanda-lavī-bhūta-brahmādyānanda-santatiḥ स्वात्मानन्द-लवी-भूत-ब्रह्माद्यानन्द-सन्ततिः (365)

೩೬೫. ಸ್ವಾತ್ಮಾನಂದ-ಲವೀ-ಭೂತ-ಬ್ರಹ್ಮಧ್ಯಾನಂದ-ಸಂತತಿಃ

        ಬ್ರಹ್ಮ ಮೊದಲಾದ ದೇವತೆಗಳ ಒಟ್ಟ ಪರಮಾನಂದವು ದೇವಿಯ ಪರಮಾನಂದದಲ್ಲಿ ಕೇವಲ ಒಂದು ಹನಿಯಷ್ಟು ಪ್ರಮಾಣದ್ದು. ಎಲ್ಲಾ ದೇವಾನು ದೇವತೆಗಳು ಪರಮಾನಂದವನ್ನು ಅನುಭವಿಸುತ್ತಾರೆ. ಬ್ರಹ್ಮ ಮೊದಲಾದ ದೇವರಗಳು ಪರಬ್ರಹ್ಮದ ಮೂರು ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯ ಮೊದಲಾದ ಕ್ರಿಯೆಗಳನ್ನು ಸೂಚಿಸುತ್ತಾರೆ. ಈ ವಿಶ್ವದ ಸಮಸ್ತ ಕ್ರಿಯೆಗಳು ಒಂದಿಲ್ಲೊಂದು ದೇವತೆಯರಿಂದ ನಿಯಂತ್ರಿಸಲ್ಪಡುತ್ತವೆ. ಉದಾಹರಣೆಗೆ ಬ್ರಹ್ಮನು ಸೃಷ್ಟಿಯ ಮೇಲ್ವಿಚಾರಕನಾಗಿದ್ದರೆ, ವಿಷ್ಣುವು ಪಾಲನೆಯ ನಿಯಂತ್ರಣವನ್ನು ಹೊಂದಿದ್ದಾನೆ ಮತ್ತು ರುದ್ರನು ಲಯಕ್ಕೆ ಕಾರಕನಾಗಿದ್ದಾನೆ. ವರುಣನು ನೀರಿಗೆ, ಅಗ್ನಿಯು ಬೆಂಕಿ ಹೀಗೆ ಒಂದೊಂದಕ್ಕೆ ಒಬ್ಬೊಬ್ಬರು ನಿಯಂತ್ರಕರಾಗಿದ್ದಾರೆ. ಆದರೆ ಪರಮಾನಂದವೆಂದರೇನು? ನಮ್ಮ ನಿಜವಾದ ಸ್ವರೂಪವು ಯಾವಾಗಲೂ ಪರಮಾನಂದದ ಅಥವಾ ಅತ್ಯುನ್ನತವಾದ ಸಂತೋಷದ ಸ್ಥಿತಿಯಲ್ಲಿರುತ್ತದೆ. ಆದರೆ ಈ ನಿರಂತರ ಪರಮಾನಂದದ ಸ್ಥಿತಿಯು ಕಾಮ ಮೊದಲಾದ ಅರಿಷಡ್ವರ್ಗಗಳು ಉಂಟುಮಾಡುವ ನಷ್ಟಗಳಿಂದ ಅಡಚಣೆಗೊಳಗಾಗುತ್ತದೆ. ಕಾಮನೆಯೆಂದರೆ ಯಾವುದು ತನ್ನ ಬಳಿಯಲ್ಲಿ ಇಲ್ಲವೋ ಅದನ್ನು ಹೊಂದಲು ಒಬ್ಬನು ಬಯಸುವುದಾದರೆ, ನಷ್ಟವೆನ್ನುವ ಪ್ರಸಂಗವು ತನ್ನ ಬಳಿ ಮೊದಲು ಇದ್ದದ್ದು ಈಗ ಇಲ್ಲದೇ ಇರುವಾಗ ಉಂಟಾಗುವ ಸ್ಥಿತಿಯಾಗಿದೆ.

         ತೈತ್ತರೀಯ ಉಪನಿಷತ್ತು (೨.೮) ಪರಮಾನಂದವನ್ನು ಬಹು ಸುಂದರವಾಗಿ ವರ್ಣಿಸುತ್ತದೆ, "ಬ್ರಹ್ಮದಿಂದ ಉಂಟಾಗುವ ಪರಮಾನಂದದ ಅಂದಾಜನ್ನು ತಿಳಿಯಬೇಕೆಂದರೆ, ಒಬ್ಬ ಪ್ರಾಮಾಣಿಕ ಮತ್ತು ಆಕರ್ಷಕ ವ್ಯಕ್ತಿತ್ವವುಳ್ಳ ಹಾಗೂ ಎಲ್ಲಾ ವಿಧವಾದ ಶಾಸ್ತ್ರಗಳಲ್ಲಿ ಪರಿಣಿತನಾದ ಮತ್ತು ಬಲಿಷ್ಠ ಹಾಗೂ ದೃಢವಾದ ಮೈಕಟ್ಟುಳ್ಳ ಯುವಕನನ್ನು ತೆಗೆದುಕೊಳ್ಳಿ. ಅಂಥಹವನು ಒಂದು ವೇಳೆ ಸಮಸ್ತ ಪ್ರಪಂಚದ ಐಶ್ವರ್ಯಕ್ಕೆ ಒಡೆಯನಾದರೆ ಅವನಿಗೆ ಉಂಟಾಗುವ ಗರಿಷ್ಠ ಪ್ರಮಾಣದ ಆನಂದವನ್ನು ಒಂದು ಅಂಶವೆಂದಿಟ್ಟುಕೊಂಡು ಅದನ್ನು ಅನಂತದಿಂದ ಗುಣಿಸಿದರೆ ಲಭ್ಯವಾಗುವ ಆನಂದವನ್ನು ಪರಬ್ರಹ್ಮದ ಪರಮಾನಂದಕ್ಕೆ ಸಮಾನವಾದುದೆಂದು ಹೇಳಬಹುದು". ಮುಂದಿನ ಶ್ಲೋಕದಲ್ಲಿ ಉಪನಿಷತ್ತು ಹೀಗೆ ಹೇಳುತ್ತದೆ, ".......ಎಲ್ಲಾ ಆಸೆಗಳಿಂದ ಮುಕ್ತನಾಗಿರುವ, ಅವನು ಮೊದಲು ಪ್ರಾಣ ವಾಯುವು ಪ್ರತಿನಿಧಿಸುವ ಆತ್ಮವನ್ನು, ತದನಂತರ ಮನಸ್ಸಿನಿಂದ ಪ್ರತಿನಿಧಿಸಲ್ಪಡುವ ಆತ್ಮವನ್ನು, ನಂತರ ಬುದ್ಧಿಯಿಂದ ಪ್ರತಿನಿಧಿಸಲ್ಪಡುವ ಆತ್ಮವನ್ನು ಮತ್ತು ಪರಮಾನಂದವು ಪ್ರತಿನಿಧಿಸುವ ಆತ್ಮವನ್ನು ಹೊಂದುತ್ತಾನೆ ಮತ್ತು ಅಂತಿಮವಾಗಿ ಅವನು ಬ್ರಹ್ಮಾಂಡದ ಆತ್ಮದಲ್ಲಿ ಅಥವಾ ಪರಬ್ರಹ್ಮದಲ್ಲಿ ಲೀನವಾಗುತ್ತಾನೆ."

         ಪರಮಾನಂದವು ಅಂತಿಮ ಮುಕ್ತಿಗಿಂತ ಕೇವಲ ಒಂದು ಹಂತ ಮೊದಲಿನದಾಗಿದೆ. ಈ ವಿಧವಾದ ಪರಮಾನಂದವನ್ನು ಕೇವಲ ಪರಬ್ರಹ್ಮದಲ್ಲಿ ಲೀನವಾಗುವ ಅಂತಿಮ ಹಂತಗಳಲ್ಲಿ ಅಥವಾ ಮುಕ್ತಿಯ ಅಂತಿಮ ಹಂತದಲ್ಲಿರುವ ಅಂದರೆ ಕೈವಲ್ಯದ ಹಂತವನ್ನು ತಲುಪಿದಾಗ ಅನುಭವಿಸಬಹುದಾಗಿದೆ.

         ಈ ನಾಮವು ೩೬೩ನೇ ನಾಮದಲ್ಲಿ ಹೇಳಿರುವುದನ್ನು ದೃಢಪಡಿಸುತ್ತದೆ; ಅದು ದೇವಿಯು ಪರಬ್ರಹ್ಮವೇ ಆಗಿದ್ದಾಳೆ ಅಥವಾ ನಿರ್ಗುಣ ಬ್ರಹ್ಮವಾಗಿದ್ದಾಳೆ ಎನ್ನುವುದು.

******

       ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 362-365 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Tue, 08/20/2013 - 20:21

ಶ್ರೀಧರರೆ, ೯೭. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಸಾರ ಪರಿಷ್ಕರಣೆಗೆ ಸಿದ್ದ. ತುಸು ಅವಸರದಲ್ಲಿ ಮಾಡಿದ ಕಾರಣ, ನಿಮಗೆ ತ್ರಾಸ ಹೆಚ್ಚೆಂದು ಕಾಣುತ್ತದೆ!

ಲಲಿತಾ ಸಹಸ್ರನಾಮ ೩೬೨ - ೩೬೫
_________________________________________

೩೬೨. ಚಿತಿಃ 
ಬ್ರಹ್ಮ ಸಾಕ್ಷಾತ್ಕಾರಕೆ ಸಹಾಯಕ, ಚಿತ್ ಪರಿಶುದ್ಧ ಜ್ಞಾನ
ದೇವಿ ವಿಮರ್ಶಾ ರೂಪ ಚಿತಿಃ, ಚಿದಾತ್ಮ ಆಧ್ಯಾತ್ಮದ ಪ್ರಜ್ಞ
ನಿತ್ಯವಾದ ಜ್ಞಾನದರೂಪಿನಲಿಹಳು ದೇವಿ ತೊಲಗಿಸಿ ಅವಿದ್ಯೆ
ಪರಬ್ರಹ್ಮ ರೂಪ ಬ್ರಹ್ಮದರಿವಾಗಿಸಿ ನಿರಂತರಾನಂದದ ಮಧ್ಯೆ!

೩೬೩. ತತ್ಪದ-ಲಕ್ಷಾರ್ಥ 
'ತತ್' ಅದು 'ಪದ' ಶಬ್ದ - ತತ್ಪದ ಪರಬ್ರಹ್ಮ, ಉಲ್ಲೇಖಾ ಪರೋಕ್ಷ 'ಲಕ್ಷಾರ್ಥ'
ಪರಬ್ರಹ್ಮ ಸರ್ವಾಂತರ್ಯಾಮಿತ್ವ, ಬ್ರಹ್ಮದದ್ವೈತ ಗುಣವನು ಸಾರುತ
ಬ್ರಹ್ಮಾಂಡ ಪರಿಪಾಲನಾರ್ಥ ಪ್ರಕಾಶ ವಿಮರ್ಶಾ ಪರಸ್ಪರಾವಲಂಬಿತ
ಶಬ್ದಶಃ ಏಕತ್ರ ಸ್ವರೂಪ, ಚಿತ್ ಪರಿಶುದ್ಧಜ್ಞಾನಗಳ ಮೂರ್ತರೂಪ ನಿರ್ಗುಣ ತಾ!

೩೬೪. ಚಿದೇಕ-ರಸ-ರೂಪಿಣೀ 
ಕ್ಷೀರದುತ್ಪನ್ನದೊಳಗಿಹ ಕ್ಷೀರದಂತೆ, ಮೂಲಭೂತ ರೂಪದಿ ಜ್ಞಾನದ ಸಾರ
ಜ್ಞಾನವಿದ್ದೂ ಸ್ಥೂಲ ಸೂಕ್ಷ್ಮರೂಪ, ಮೂಲಭೂತ ಸ್ವರೂಪದಲಿರದ ಅಂತರ
ಸಗುಣಬ್ರಹ್ಮ ದೇವಿ ಜ್ಞಾನದಸಾರ, ಹಾಲಂತೆ ನಿರ್ಗುಣ ಜತೆಗೇಕತಾ ರೂಪ
ಸೃಷ್ಟಿ ಸ್ಥಿತಿ ಲಯ ತ್ರಿಕಾರ್ಯಕಷ್ಟೆ ರೂಪಾಂತರ, ಜಡ ಚಲನ ಮಿಲನ ತಪ!

೩೬೫. ಸ್ವಾತ್ಮಾನಂದ-ಲವೀ-ಭೂತ-ಬ್ರಹ್ಮಧ್ಯಾನಂದ-ಸಂತತಿಃ
ಪರಮಾನಂದದಗಣಿತ ಬೃಹತ್ಸಾಗರ ದೇವಿ, ಬ್ರಹ್ಮಾದಿದೇವತೆಗಳಾನಂದ ಹನಿಯಷ್ಟೆ ಕನಿಷ್ಠ
ವಿಶ್ವಸಮಸ್ತ ಕ್ರಿಯಾನಿಯಂತ್ರಣನಿರತ, ದೇವಾನುದೇವರೆಲ್ಲ ಪರಮಾನಂದವನನುಭವಿಸುತ
ಜೀವಿ ಅಸ್ಥಿತ್ವದ ನೈಜ್ಯ ಸ್ವರೂಪ ಅತ್ಯುನ್ನತ ಸಂತೋಷ, ಪರಮಾನಂದದ ಸ್ಥಿತಿಯೇ ಮೂಲತಃ
ಕಾಮಾದಿ ಅರಿಷಡ್ವರ್ಗ ನಷ್ಟಗಳಿಂದಾಗಡಚಣೆ, ತೊಲಗಿದಲ್ಲದೆ ಪರಮಾನಂದವಾಗ ಹಸ್ತಗತ!

ಮುಕ್ತಿಗೊಂದೇ ಮೆಟ್ಟಿಲು ದೂರ, ಪರಬ್ರಹ್ಮಲೀನಾಮುನ್ನ ಪರಮಾನಂದ
ಬರಿ ಒಂದಂಶ ರೂಪಗುಣಾದಿಸಂಪನ್ನ,ಯುವಲೋಕೇಶ್ವರನಾದ ಆನಂದ
ಅನಂತದಿಂಗುಣಿಸೆ ಪರಮಾನಂದ, ನಿರ್ಮೋಹಿ ಪರಬ್ರಹ್ಮ ವಿಲೀನಪಥ
ಪ್ರಾಣ,ಮನಸ,ಬುದ್ಧಿಯ,ಪರಮಾನಂದದಾತ್ಮದಿಂದ ಬ್ರಹ್ಮಾಂಡಾತ್ಮದತ್ತ!

 
ಧನ್ಯವಾದಗಳೊಂದಿಗೆ,
-ನಾಗೇಶ ಮೈಸೂರು
 

ನಾಗೇಶರೆ,
ಸಂಪದದ ಬಾಹ್ಯರೂಪ ಮಾರ್ಪಾಡಾಗಿರುವುದರಿಂದ ಲೇಖನಗಳನ್ನು ಹೆಕ್ಕಿ ತೆಗೆಯುವುದೇ ಕಷ್ಟವಾಗಿದೆ. ಹಾಗಾಗಿ ಈ ಕಂತನ್ನು ನೀವು ನೋಡಿರುವುದಿಲ್ಲವೆಂದುಕೊಂಡೆ. ಆದರೆ ನನ್ನ ನಿರೀಕ್ಷೆಯನ್ನು ಸುಳ್ಳಾಗಿಸಿ ನೀವು ಯಾವುದೋ ಮಾಯದಲ್ಲಿ ಕವನವನ್ನು ಸೇರಿಸಿದ್ದೀರ. ಸ್ವಲ್ಪ ಅವಸರದಲ್ಲಿ ರಚಿಸಿದರೂ ಅಷ್ಟೇನೂ ರಸಭಂಗವಾಗಿಲ್ಲ :)೦
೩೬೨. ಚಿತಿಃ
:
:
ಪರಬ್ರಹ್ಮ ರೂಪ ಬ್ರಹ್ಮದರಿವಾಗಿಸಿ ನಿರಂತರಾನಂದದ ಮಧ್ಯೆ!
ಪರಬ್ರಹ್ಮ ರೂಪ ಬ್ರಹ್ಮದರಿವಾಗಿಸಿ= ಪರಬ್ರಹ್ಮರೂಪದ ಅರಿವಾಗಿಸಿ ಮಾಡಿದರೆ ಸಾಕು; ಏಕೆಂದರೆ ಪರಬ್ರಹ್ಮ ಮತ್ತು ಬ್ರಹ್ಮ ಎರಡೂ ಒಂದೇ ಈ ಸಂದರ್ಭದಲ್ಲಿ.
೩೬೩. ತತ್ಪದ-ಲಕ್ಷಾರ್ಥ =ತತ್ಪದ-ಲಕ್ಷ್ಯಾರ್ಥ ಆಗಬೇಕು. ನನ್ನ ಬರಹದಲ್ಲೇ ತಪ್ಪಾಗಿ ಅಚ್ಚಾಗಿದೆ.
'ತತ್' ಅದು 'ಪದ' ಶಬ್ದ - ತತ್ಪದ ಪರಬ್ರಹ್ಮ, ಉಲ್ಲೇಖಾ ಪರೋಕ್ಷ 'ಲಕ್ಷಾರ್ಥ'
ಇಲ್ಲಿ ಶಬ್ದವೇ ಬ್ರಹ್ಮವೆನ್ನುವುದನ್ನು ಪರೋಕ್ಷವಾಗಿ ಹೇಳಲಾಗಿದೆ. (ತತ್ ತ್ವಂ ಅಸಿ - ಅದು ನೀನೇ ಆಗಿದ್ದೀಯ ಎಂದು ಪರೋಕ್ಷವಾಗಿ ಹೇಳಿದಂತೆ). ಈ ಹಿನ್ನಲೆಯಲ್ಲಿ ಮೇಲಿನ ಸಾಲನ್ನು ಸೂಕ್ತವಾಗಿ ಮಾರ್ಪಡಿಸಿ.
:
:
ಶಬ್ದಶಃ ಏಕತ್ರ ಸ್ವರೂಪ, ಚಿತ್ ಪರಿಶುದ್ಧಜ್ಞಾನಗಳ ಮೂರ್ತರೂಪ ನಿರ್ಗುಣ ತಾ!
ಚಿತ್ ಪರಿಶುದ್ಧಜ್ಞಾನಗಳ= ಚಿತ್ ಶುದ್ಧಜ್ಞಾನಗಳ

೩೬೪. ಚಿದೇಕ-ರಸ-ರೂಪಿಣೀ
:
:
ಸೃಷ್ಟಿ ಸ್ಥಿತಿ ಲಯ ತ್ರಿಕಾರ್ಯಕಷ್ಟೆ ರೂಪಾಂತರ, ಜಡ ಚಲನ ಮಿಲನ ತಪ!
ಜಡ ಚಲನ ಮಿಲನ ತಪ=ಚರ ಅಚರ ಮಿಲನ ತಪ; ಹೀಗೆ ಮಾರ್ಪಡಿಸಿದರೆ ಪ್ರಾಸಕ್ಕೆ ಭಂಗ ಬರುತ್ತದೆಂದುಕೊಳ್ಳುತ್ತೇನೆ. ಅರ್ಥವನ್ನು ಹೆಚ್ಚು ಸ್ಪಷ್ಟ ಪಡಿಸುವುದಕ್ಕೆ ಈ ಬದಲಾವಣೆ ಬೇಕೇನೋ ಎನಿಸಿತಷ್ಟೆ.

೩೬೫. ಸ್ವಾತ್ಮಾನಂದ-ಲವೀ-ಭೂತ-ಬ್ರಹ್ಮಧ್ಯಾನಂದ-ಸಂತತಿಃ
ಎರಡೂ ಪಂಕ್ತಿಗಳು ಬಹಳ ಚೆನ್ನಾಗಿ ಮೂಡಿ ಬಂದಿವೆ. ಎರಡನೆಯದು ಸೂಪರ್. ಮೊದಲನೆಯದರಲ್ಲಿ ಸ್ವಲ್ಪ ಶಬ್ದಗಳನ್ನು ತಗ್ಗಿಸಲು ಸಾಧ್ಯವೇ ನೋಡಿ; ಪದ್ಯದ ಸಾಲು ತುಸು ಉದ್ದವಾಯಿತೆನಿಸುತ್ತಿದೆ. ಅದರ ಹೊರತಾಗಿಯೂ ಪದ್ಯ ಚೆನ್ನಾಗಿ ಮೂಡಿ ಬಂದಿದೆ.
ಇದರಲ್ಲಿನ ೧ನೇ ಪಂಕ್ತಿಯ ಕಡೆಯ ಸಾಲು.......
ಕಾಮಾದಿ ಅರಿಷಡ್ವರ್ಗ ನಷ್ಟಗಳಿಂದಾಗಡಚಣೆ, ತೊಲಗಿದಲ್ಲದೆ ಪರಮಾನಂದವಾಗ ಹಸ್ತಗತ!
ತೊಲಗಿದಲ್ಲದೆ=ಜಯಿಸಿದಲ್ಲದೆ ಮಾಡಿ.

ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ ತಿದ್ದಿದ ರೂಪ ಮತ್ತು ೩೬೫ರ ಸಂಕ್ಷೇಪಿಸಿದ ರೂಪ ಸೇರಿಸಿದ್ದೇನೆ. ಈಗ ಸರಿ ಕಾಣುವುದೆ?

ಲಲಿತಾ ಸಹಸ್ರನಾಮ ೩೬೨ - ೩೬೫
________________________________________

೩೬೨. ಚಿತಿಃ 
ಬ್ರಹ್ಮ ಸಾಕ್ಷಾತ್ಕಾರಕೆ ಸಹಾಯಕ, ಚಿತ್ ಪರಿಶುದ್ಧ ಜ್ಞಾನ
ದೇವಿ ವಿಮರ್ಶಾ ರೂಪ ಚಿತಿಃ, ಚಿದಾತ್ಮ ಆಧ್ಯಾತ್ಮದ ಪ್ರಜ್ಞ
ನಿತ್ಯವಾದ ಜ್ಞಾನದರೂಪಿನಲಿಹಳು ದೇವಿ ತೊಲಗಿಸಿ ಅವಿದ್ಯೆ
ಪರಬ್ರಹ್ಮ ರೂಪದ ಅರಿವಾಗಿಸಿ ನಿರಂತರಾನಂದದ ಮಧ್ಯೆ!

೩೬೩. ತತ್ಪದ-ಲಕ್ಷ್ಯಾರ್ಥ 
'ತತ್' ಅದು 'ಪದ' ಶಬ್ದ - ತತ್ಪದ ಶಬ್ದ ಬ್ರಹ್ಮ, ಉಲ್ಲೇಖಾ ಪರೋಕ್ಷ 'ಲಕ್ಷ್ಯಾರ್ಥ'
ಪರಬ್ರಹ್ಮ ಸರ್ವಾಂತರ್ಯಾಮಿತ್ವ, ಬ್ರಹ್ಮದದ್ವೈತ ಗುಣವನು ಸಾರುತ
ಬ್ರಹ್ಮಾಂಡ ಪರಿಪಾಲನಾರ್ಥ ಪ್ರಕಾಶ ವಿಮರ್ಶಾ ಪರಸ್ಪರಾವಲಂಬಿತ
ಶಬ್ದಶಃ ಏಕತ್ರ ಸ್ವರೂಪ, ಚಿತ್ ಶುದ್ಧಜ್ಞಾನಗಳ ಮೂರ್ತರೂಪ ನಿರ್ಗುಣವಾಗಿ ತಾ!

೩೬೪. ಚಿದೇಕ-ರಸ-ರೂಪಿಣೀ 
ಕ್ಷೀರದುತ್ಪನ್ನದೊಳಗಿಹ ಕ್ಷೀರದಂತೆ, ಮೂಲಭೂತ ರೂಪದಿ ಜ್ಞಾನದ ಸಾರ
ಜ್ಞಾನವಿದ್ದೂ ಸ್ಥೂಲ ಸೂಕ್ಷ್ಮರೂಪ, ಮೂಲಭೂತ ಸ್ವರೂಪದಲಿರದ ಅಂತರ
ಸಗುಣಬ್ರಹ್ಮ ದೇವಿ ಜ್ಞಾನದಸಾರ, ಹಾಲಂತೆ ನಿರ್ಗುಣ ಜತೆಗೇಕತಾ ರೂಪ
ಸೃಷ್ಟಿ ಸ್ಥಿತಿ ಲಯ ತ್ರಿಕಾರ್ಯಕಷ್ಟೆ ರೂಪಾಂತರ, ಚರ ಅಚರ ಮಿಲನ ತಪ!

೩೬೫. ಸ್ವಾತ್ಮಾನಂದ-ಲವೀ-ಭೂತ-ಬ್ರಹ್ಮಧ್ಯಾನಂದ-ಸಂತತಿಃ
ಪರಮಾನಂದದಗಣಿತ ಬೃಹತ್ಸಾಗರ ದೇವಿ, ಬ್ರಹ್ಮಾದಿದೇವತೆಗಳಾನಂದ ಹನಿಯಷ್ಟೆ ಕನಿಷ್ಠ
ವಿಶ್ವಸಮಸ್ತ ಕ್ರಿಯಾನಿಯಂತ್ರಣನಿರತ, ದೇವಾನುದೇವರೆಲ್ಲ ಪರಮಾನಂದವನನುಭವಿಸುತ
ಜೀವಿ ಅಸ್ಥಿತ್ವದ ನೈಜ್ಯ ಸ್ವರೂಪ ಅತ್ಯುನ್ನತ ಸಂತೋಷ, ಪರಮಾನಂದದ ಸ್ಥಿತಿಯೇ ಮೂಲತಃ
ಕಾಮಾದಿ ಅರಿಷಡ್ವರ್ಗ ನಷ್ಟಗಳಿಂದಾಗಡಚಣೆ, ಜಯಿಸಿದಲ್ಲದೆ ಪರಮಾನಂದವಾಗ ಹಸ್ತಗತ!

ಸಂಕ್ಷೇಪಿಸಿದ ರೂಪ
ಪರಮಾನಂದ ಸಾಗರ ದೇವಿ, ಬ್ರಹ್ಮಾದಿದೇವತಾನಂದ ಹನಿಯಷ್ಟೆ ಕನಿಷ್ಠಾ
ಸಮಸ್ತ ಕ್ರಿಯಾನಿಯಂತ್ರಣದೆ, ದೇವಗಣವೆಲ್ಲ ಪರಮಾನಂದವನುಭವಿಸುತ
ಸಹಜ ಸ್ವರೂಪ ಅತ್ಯುನ್ನತ ಸಂತೋಷ, ಪರಮಾನಂದದ ಸ್ಥಿತಿಯೇ ಮೂಲತಃ
ಅರಿಷಡ್ವರ್ಗ ನಷ್ಟಗಳಿಂದ ಅಡಚಣೆ, ಜಯಿಸದೆ ಪರಮಾನಂದವಾಗ ಹಸ್ತಗತ!

ಮುಕ್ತಿಗೊಂದೇ ಮೆಟ್ಟಿಲು ದೂರ, ಪರಬ್ರಹ್ಮಲೀನಾಮುನ್ನ ಪರಮಾನಂದ
ಬರಿ ಒಂದಂಶ ರೂಪಗುಣಾದಿಸಂಪನ್ನ,ಯುವಲೋಕೇಶ್ವರನಾದ ಆನಂದ
ಅನಂತದಿಂಗುಣಿಸೆ ಪರಮಾನಂದ, ನಿರ್ಮೋಹಿ ಪರಬ್ರಹ್ಮ ವಿಲೀನಪಥ
ಪ್ರಾಣ,ಮನಸ,ಬುದ್ಧಿಯ,ಪರಮಾನಂದದಾತ್ಮದಿಂದ ಬ್ರಹ್ಮಾಂಡಾತ್ಮದತ್ತ!
 
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
 

ನಾಗೇಶರೆ,
ನಿಮ್ಮ ಆಫೀಸಿನ ಕಾರ್ಯಗಳಲ್ಲೂ ಸಹ ನೀವು ಶಿಸ್ತಿನ ಸಿಪಾಯಿ ಎನ್ನಿಸುತ್ತಿದೆ; ಎಲ್ಲಾ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸುವ ನಿಮ್ಮ ಗುಣ ನಿಜಕ್ಕೂ ಅನುಕರಣೀಯ. ಇದನ್ನು ಏಕೆ ಹೇಳಿದೆನೆಂದರೆ ಪದ್ಯ ಸ್ವಲ್ಪ ಉದ್ದವಾಯಿತು ಎಂದು ಹೇಳಿದ್ದೇ ತಡ ಅದನ್ನು ಅದ್ಭುತವಾಗಿ ಸಂಕ್ಷಿಪ್ತಗೊಳಿಸಿ ಮೂಲ ಅರ್ಥಕ್ಕೆ ಚ್ಯುತಿ ಬಾರದಂತೆ ಬಹಳ ಚೆನ್ನಾಗಿ ಬದಲಾಯಿಸಿದ್ದೀರ. ಹ್ಯಾಟ್ಸಾಫ್ ಟು ಯೂ!
ಈಗ ಮಾಡಿರುವ ಪರಿಷ್ಕರೆಣೆಗಳು ಚೆನ್ನಾಗಿಯೇ ಇವೆ ಮತ್ತು ೩೬೫. ಸ್ವಾತ್ಮಾನಂದ-ಲವೀ-ಭೂತ-ಬ್ರಹ್ಮಧ್ಯಾನಂದ-ಸಂತತಿಃ ದಲ್ಲಿನ ಮೊದಲನೇ ಪಂಕ್ತಿಯ ಸಂಕ್ಷಿಪ್ತ ಪರಿಷ್ಕೃತ ರೂಪವನ್ನೇ ಅಂತಿಮಗೊಳಿಸಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಬಹುಶಃ ಐಟಿ ಪ್ರಾಜೆಕ್ಟುಗಳಲ್ಲಿ 'ರಿಕೈರ್ಮೆಂಟಿಗೆ ಅನುಸಾರ' ತಿದ್ದಿ ತೀಡುವ ಕೆಲಸ ಪದೆ ಪದೆ ನಡೆಯುವುದರಿಂದ, ಇದು ಅಭ್ಯಾಸಗತವಾಗಿದೆಯೆಂದು ಕಾಣುತ್ತದೆ - ಅದು ಬಿಟ್ಟರೆ ಶಿಸ್ತಿನ ವಿಷಯದಲ್ಲಿ ನಾನು ಸ್ವಲ್ಪ ದುರ್ಬಲನೆಂದೆ ಹೇಳಬೇಕು :-)

ಈ ಕೊಂಡಿಯನ್ನು ಅಂತಿಮಗೊಳಿಸಿ ಹಾಕಿದ್ದೇನೆ.
 
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು