ಶೀಘ್ರ ಗೋಡೆಯ ಅಗ್ಗದ ಮನೆಯ ತಂತ್ರಜ್ಞಾನ

ಶೀಘ್ರ ಗೋಡೆಯ ಅಗ್ಗದ ಮನೆಯ ತಂತ್ರಜ್ಞಾನ

ಆಷ್ಟ್ರೇಲಿಯಾ ದೇಶದಲ್ಲಿ ರೂಪಿಸಿದ ಶೀಘ್ರ ಗೋಡೆಯ ತಂತ್ರಜ್ಞಾನವನ್ನು (rapid wall technology) ಚೆನ್ನೈಯ ಐಐಟಿ ತಂತ್ರಜ್ಞರು ಪರಿಷ್ಕರಿಸಿ ಅಗ್ಗದ ಮನೆಯನ್ನು ಕಡಿಮೆ ಅವಧಿಯಲ್ಲಿ ಕಟ್ಟುವ ವಿಧಾನ ರೂಪಿಸಿದ್ದು ಇದು ಭಾರತದ ಕೆಳಮಧ್ಯಮ ಹಾಗೂ ಮಧ್ಯಮ ವರ್ಗದ ಜನತೆಯ ಸ್ವಂತ ಮನೆ ಹೊಂದುವ ಕನಸಿಗೆ ಅನುಕೂಲಕರವಾಗಿದೆ.  ಶೀಘ್ರ ಗೋಡೆಯ ತಂತ್ರಜ್ಞಾನದ ಮನೆಯನ್ನು ಕಟ್ಟಲು ಸಾಂಪ್ರದಾಯಿಕ ಕಟ್ಟಡ ನಿರ್ಮಾಣದ 50% ಕಡಿಮೆ ಕಾರ್ಮಿಕ ಶ್ರಮ ಹಾಗೂ 35% ಕಡಿಮೆ ಸಿಮೆಂಟ್ ಹಾಗೂ ಉಕ್ಕು ಸಾಕಾಗುತ್ತದೆ.  ಹೀಗಾಗಿ ಸಾಂಪ್ರದಾಯಿಕ ವಿಧಾನಕ್ಕಿಂಥ 40%ದಷ್ಟು ಕಡಿಮೆ ವೆಚ್ಚದಲ್ಲಿ ಮನೆಯನ್ನು ಕಟ್ಟಬಹುದು.  ಈ ವಿಧಾನದಲ್ಲಿ ಮನೆಯನ್ನು ಕಟ್ಟಿ ಮುಗಿಸಲು ಬೇಕಾದ ಸಮಯವೂ ಕಡಿಮೆ.  ಚೆನ್ನೈಯಲ್ಲಿ ಐಐಟಿ ತಂತ್ರಜ್ಞರು ಎರಡು ಅಂತಸ್ತುಗಳ ತಲಾ ಎರಡು ಫ್ಲಾಟಿನಂತೆ ಒಟ್ಟು ನಾಲ್ಕು ಫ್ಲಾಟ್ ಉಳ್ಳ ಮಾದರಿ ಕಟ್ಟಡವನ್ನು ಒಂದು ತಿಂಗಳ ಅವಧಿಯಲ್ಲಿ ಕಟ್ಟಿದ್ದಾರೆ.  ಈ ವಿಧಾನದ ಕಟ್ಟಡದಲ್ಲಿ ಗೋಡೆ, ಛಾವಣಿ ಹಾಗೂ ಮೆಟ್ಟಿಲುಗಳನ್ನು ಮೊದಲೇ ಕಾರ್ಖಾನೆಯಲ್ಲಿ ತಯಾರಿಸಿದ ರಾಪಿಡ್ ವಾಲ್ ಪ್ಯಾನೆಲ್ ಎಂದು ಕರೆಯಲ್ಪಡುವ 12 ಮೀಟರ್ ಉದ್ದ ಹಾಗೂ ೩ ಮೀಟರ್ ಅಗಲದ ಪ್ಯಾನೆಲ್ಲುಗಳಿಂದ ಕಟ್ಟಲಾಗುತ್ತದೆ.  ಈ ಪ್ಯಾನೆಲ್ಲುಗಳನ್ನು ಕೈಗಾರಿಕಾ ತ್ರಾಜ್ಯವಾದ ಜಿಪ್ಸಮ್ ಹಾಗೂ ಗಾಜಿನ ಫೈಬರುಗಳನ್ನು ಬಳಸಿ ಕಾರ್ಖಾನೆಯಲ್ಲಿ ತಯಾರಿಸಿ ನಂತರ ಲಾರಿಯ ಮೂಲಕ ಮನೆ ಕಟ್ಟುವ ಜಾಗಕ್ಕೆ ತಂದು ಕ್ರೇನಿನ ಮೂಲಕ ಎತ್ತಿ ಮೊದಲೇ ಅಡಿಪಾಯ ಹಾಕಿದ ಜಾಗದಲ್ಲಿ ವಿಶೇಷ ವಿಧಾನದ ಮೂಲಕ ಕೂರಿಸಿ ಮನೆ ಕಟ್ಟಲಾಗುತ್ತದೆ.  ಹೀಗೆ ಕಟ್ಟಿದ ಗೋಡೆ ಹಾಗೂ ಛಾವಣಿಗೆ ಪ್ಲಾಷ್ಟರಿಂಗ್ ಮಾಡುವ ಅಗತ್ಯ ಇಲ್ಲ.  ಇದು ಉಷ್ಣ ನಿರೋಧಕ ಗುಣ ಹೊಂದಿರುವ ಕಾರಣ ಮನೆಯ ಒಳಭಾಗ ತಂಪಾಗಿರುತ್ತದೆ.  ಇವುಗಳು ಭೂಕಂಪವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನೂ ಹೊಂದಿವೆ ಮಾತ್ರವಲ್ಲ ಬೆಂಕಿಯನ್ನೂ ತಡೆಯುವ ಗುಣ ಹೊಂದಿವೆ.

ರಾಪಿಡ್ ವಾಲ್ ಪ್ಯಾನೆಲ್ಲುಗಳನ್ನು ತಯಾರಿಸಲು ಬೇಕಾದ ಜಿಪ್ಸಮ್ ರಾಸಾಯನಿಕ ಗೊಬ್ಬರ ತಯಾರಿಸುವ ಕಾರ್ಖಾನೆಯ ತ್ರಾಜ್ಯವಾಗಿರುತ್ತದೆ.  ಇದನ್ನು ಕೊಚ್ಚಿನ್ ಹಾಗೂ ಮುಂಬೈಗಳಲ್ಲಿರುವ ರಾಷ್ಟ್ರೀಯ ಕೆಮಿಕಲ್ಸ್ ಎಂಡ್ ಫರ್ಟಿಲೈಸರ್ ಕಾರ್ಖಾನೆಗಳಲ್ಲಿ ತಯಾರಿಸಲಾಗುತ್ತದೆ.  ದೇಶದಲ್ಲಿ ಸುಮಾರು ಏಳು ಮಿಲಿಯನ್ ಟನ್ನುಗಳಷ್ಟು ಜಿಪ್ಸಮ್ ತ್ರಾಜ್ಯಈ ಕಾರ್ಖಾನೆಗಳಿಂದ ಉತ್ಪತ್ತಿಯಾಗುತ್ತದೆ.  ಹೀಗಾಗಿ ಇದನ್ನು ಮನೆ ಹಾಗೂ ಕಟ್ಟಡ ನಿರ್ಮಾಣದಲ್ಲಿ ಬಳಸುವುದರಿಂದ ಅಗ್ಗದ ವೆಚ್ಚದಲ್ಲಿ ಕೆಳಮಧ್ಯಮ ಹಾಗೂ ಮಧ್ಯಮ ವರ್ಗದ ಜನರು ಮನೆ ಕಟ್ಟಿಸಲು ಅನುಕೂಲ ಹಾಗೂ ತ್ರಾಜ್ಯದ ಸದುಪಯೋಗವೂ ಆಗುತ್ತದೆ.  ಇಂದು ಮನೆ ಕಟ್ಟಲು ಬೇಕಾಗುವ ಸಿಮೆಂಟ್, ಜಲ್ಲಿ, ಮರಳು, ಕಬ್ಬಿಣ ಇತ್ಯಾದಿಗಳು ತುಂಬಾ ದುಬಾರಿಯಾಗಿವೆ.  ರಾಪಿಡ್ ವಾಲ್ ವಿಧಾನದಲ್ಲಿ ಮನೆ ಕಟ್ಟಿದರೆ ಇವುಗಳ ಬಳಕೆ ಸಾಕಷ್ಟು ಕಡಿಮೆ ಮಾಡಲು ಸಾಧ್ಯವಾಗುತ್ತದೆ.  ಈ ರಾಪಿಡ್ ವಾಲ್ ಪ್ಯಾನೆಲ್ಲುಗಳು ಸಾಕಷ್ಟು ಗಟ್ಟಿಮುಟ್ಟಾಗಿದ್ದು ಎಂಟರಿಂದ ಹತ್ತು ಮಹಡಿ ಎತ್ತರದ ಕಟ್ಟಡ ಕಟ್ಟಲು ಸಾಧ್ಯವಿದೆ ಎಂದು ಚೆನ್ನೈ ಐಐಟಿ ತಂತ್ರಜ್ಞರು ಶಿಫಾರಸು ಮಾಡಿದ್ದಾರೆ ಹಾಗೂ ಭಾರತ ಸರ್ಕಾರದ ಬಿಲ್ಡಿಂಗ್ ಮೆಟೀರಿಯಲ್ಸ್ ಎಂಡ್ ಟೆಕ್ನಾಲಜಿ  ಪ್ರಮೋಷನ್ ಕೌನ್ಸಿಲ್ ಇವುಗಳನ್ನು  ದೃಢೀಕರಿಸಿದೆ.

ರಾಪಿಡ್ ವಾಲ್ ವಿಧಾನದ ಮನೆ ಕಟ್ಟಿಸುವ ತಂತ್ರಜ್ಞಾನವನ್ನು ರಾಜ್ಯದ ಎಲ್ಲಾ ತಾಲೂಕುಗಳಿಗೂ ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಗಮನ ಹರಿಸಬೇಕಾಗಿದೆ.  ಈ ವಿಧಾನದಲ್ಲಿ ಮನೆ ಕಟ್ಟುವ ತಂತ್ರಜ್ಞಾನದಲ್ಲಿ ಸಿವಿಲ್ ಇಂಜಿನಿಯರ್ ಹಾಗೂ ಡಿಪ್ಲೋಮಾ ಪಧವೀಧರರಿಗೆ ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ತರಬೇತಿ ನೀಡುವ ಕಾರ್ಯಕ್ರಮವನ್ನು ಸರ್ಕಾರ ಹಾಗೂ ಇಂಜಿನಿಯರಿಂಗ್ ಕಾಲೇಜುಗಳು ಹಮ್ಮಿಕೊಳ್ಳಲು ಮುಂದಾಗಬೇಕಾದ ಅಗತ್ಯ ಇದೆ.  ರಾಜ್ಯದಲ್ಲಿ ರಾಪಿಡ್ ವಾಲ್ ವಿಧಾನದಲ್ಲಿ ಮನೆ ಹಾಗೂ ಕಟ್ಟಡ ಕಟ್ಟಿಸುವ ಇಂಜಿನಿಯರ್/ಡಿಪ್ಲೋಮಾ ಪಧವೀಧರರ ಕೊರತೆ ಇದೆ.  ಇದನ್ನು ಹೋಗಲಾಡಿಸಲು ಸರ್ಕಾರ ಹಾಗೂ ಕಟ್ಟಡ ನಿರ್ಮಾಣ ಕಂಪನಿಗಳು ತೀವ್ರ ಗಮನ ಹರಿಸಬೇಕಾದ ಅಗತ್ಯ ಇದೆ.  ಅದೇ ರೀತಿ ರಾಜ್ಯದಲ್ಲಿಯೇ ರಾಪಿಡ್ ವಾಲ್ ಪ್ಯಾನೆಲ್ಲುಗಳನ್ನು ತಯಾರಿಸುವ ಕಾರ್ಖಾನೆಗಳನ್ನು ಕೆಲವು ಕಡೆ ಸ್ಥಾಪಿಸಬೇಕಾದ ಅಗತ್ಯವಿದ್ದು ಈ ನಿಟ್ಟಿನಲ್ಲಿ ಸರ್ಕಾರ ಬಂಡವಾಳಗಾರರನ್ನು ಆಕರ್ಷಿಸಬೇಕಾಗಿದೆ ಅಥವಾ ಸರ್ಕಾರವೇ ಕಾರ್ಖಾನೆಗಳನ್ನು ಸ್ಥಾಪಿಸಲು ಮುಂದಾಗಬೇಕಾದ ಅಗತ್ಯ ಇದೆ ಮತ್ತು ಈ ಕುರಿತು ಜನತೆ, ಬಂಡವಾಳಗಾರರು, ತಂತ್ರಜ್ಞರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ.  ರಾಪಿಡ್ ವಾಲ್ ತಂತ್ರಜ್ಞಾನದ ಕಟ್ಟಡ/ಮನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಗಳನ್ನು ನೋಡಬಹುದು.
1.  http://www.crazyengineers.com/threads/iit-madras-civil-engineers-promise...
2.  http://www.srikumar.com/engineering/civil/costruction/rapidwall-technolo...
3.  http://www.ndtv.com/article/south/blog-how-iit-madras-built-a-flat-for-6...
4.  http://www.worldhaus.com/index.php/products/rapidpanels
5.  http://www.rapidwall.com.au/
6.  www.rcfltd.com/
7.  http://www.daijiworld.com/news/news_disp.asp?n_id=116231

ಚಿತ್ರಗಳು:  ಕ್ರೆಜಿ ಇಂಜಿನಿಯರ್ಸ್ ಡಾಟ್ ಕಾಂ, ದೈಜಿವರ್ಲ್ಡ್ ಡಾಟ್ ಕಾಂ ಮೊದಲಾದ ಅಂತರ್ಜಾಲ ಪುಟಗಳಿಂದ.

Comments

Submitted by partha1059 Tue, 01/06/2015 - 16:53

ರಾಜರಾಜೇಶ್ವರಿ ನಗರದತ್ತ ವಾಕಿಂಗ್ ಹೋಗುವಾಗ ಗಮನಿಸಿದ್ದೆ,ಅಲ್ಲಿ ಒಂದು ಮನೆಯನ್ನು ತಳಪಾಯ, ಪಿಲ್ಲರ್, ಮುಂತಾದ ಸಂಪ್ರದಾಯಿಕ ಕ್ರಮ ಅನುಸರಿಸದೆ, ಬರಿ ಕಬ್ಬಿಣದ ಕಂಬಗಳನ್ನು, ಅಡ್ಡ ಉದ್ದ ಬಳಸಿ ಮನೆಯ ಹಂದರ ನಿರ್ಮಿಸಿ, ಅದರಲ್ಲಿ ಸಿಮೆಂಟ್ ಬ್ಲಾಕ್ ಇಟ್ಟೆಗೆಯ ಗೋಡೆ ಕಟ್ಟಿ ಪೂರ್ಣಗೊಳಿಸಿದ್ದಾರೆ ನೋಡಲು ಸಾಮಾನ್ಯ ಮನೆಯಂತೆಯೇ ಕಾಣುತ್ತದೆ,
ಅದು ಸಾಮಾನ್ಯ ಮನೆಗಿಂತ ಹೆಚ್ಚು ಖರ್ಚೋ ಅಥವ ಕಡಿಮೆಯೋ ತಿಳಿದಿಲ್ಲ