ಅನ್ವೇಷಣೆ ಭಾಗ ೧೪

ಅನ್ವೇಷಣೆ ಭಾಗ ೧೪

ಆ ಬುಲೆಟ್ಟನ್ನು ತೆಗೆದುಕೊಂಡು ಸ್ಟೇಷನ್ ಒಳಗೆ ಹೋಗಿ ತ್ರಿವಿಕ್ರಂ ಗೆ ತೋರಿಸಿ ನಡೆದ ಘಟನೆಯನ್ನು ವಿವರಿಸಿದಾಗ ಕೂಡಲೇ ತ್ರಿವಿಕ್ರಂ ಆ ಜಾಗ ತೋರಿಸಿ ಎಂದು ಜೊತೆಯಲ್ಲಿ ಆಚೆ ಬಂದು ಆ ಜಾಗ ಪರಿಶೀಲಿಸಿದರು. ಸ್ಟೇಷನ್ ಬಳಿಯೇ ನಿಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದರೆ ಅವರು ಯಾರೋ ದೊಡ್ಡ ಹಂತಕರೆ ಇರಬೇಕು. ಬಹುಷಃ ಜಾನಕಿಯನ್ನು ಕೊಂದವರೇ ನಿಮ್ಮನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ ಎಂದೆನಿಸುತ್ತಿದೆ ಮಿ. ಅರ್ಜುನ್. ನೀನು ಜಾನಕಿಯನ್ನು ಕೊಂದವರ ಬಗ್ಗೆ ಮಾಹಿತಿ ಕಲೆಹಾಕುತ್ತಿರುವುದು ಆ ಹಂತಕರಿಗೆ ಗೊತ್ತಾಗಿದೆ ಎನಿಸುತ್ತದೆ. ಹಾಗಾಗಿ ಅವರು ನಿಮ್ಮ ಮೇಲೆ ದಾಳಿಗೆ ಮುಂದಾಗಿದ್ದಾರೆ ಎನಿಸುತ್ತಿದೆ. ಅರ್ಜುನ್, ಇನ್ನು ಮುಂದೆ ನೀವು ಬಹಳ ಎಚ್ಚರಿಕೆಯಿಂದಿರಬೇಕು. ನಿಮ್ಮ ವಿಷಯ ಅವರಿಗೆ ತಿಳಿದಿದೆಯೆಂದರೆ ಅವರು ನಿಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎನಿಸುತ್ತದೆ.

ಅದು ಸರಿ ಸರ್... ಆದರೆ ನಾನು ಜಾನಕಿಯ ಹಂತಕರನ್ನು ಹುಡುಕುತ್ತಿದ್ದೇನೆ ಎಂಬ ಮಾಹಿತಿ ಅವರಿಗೆ ಹೇಗೆ ದಕ್ಕಿರುತ್ತದೆ?

ಅರ್ಜುನ್, ಅವರು ಜಾನಕಿಯನ್ನು ಕೊಲೆ ಮಾಡುವ ಮುಂಚಿನಿಂದಲೇ ನಿಮ್ಮನ್ನು ಗಮನಿಸಿರುತ್ತಾರೆ. ಜಾನಕಿಯ ಬಗ್ಗೆ ಮಾಹಿತಿಗಳನ್ನು ಕಲೆಹಾಕಬೇಕಾದರೆಯೇ ನಿಮ್ಮ ಬಗ್ಗೆಯೂ ಮಾಹಿತಿ ಸಂಗ್ರಹಿಸಿರುತ್ತಾರೆ. ಅಷ್ಟೂ ಮುಂಜಾಗ್ರತೆ ಇಲ್ಲದೆ ಅವರು ಕೆಲಸ ಮಾಡುವುದಿಲ್ಲ. ಅವರಿಗೆ ನೀವು ಜಾನಕಿಯನ್ನು ಮದುವೆ ಆಗುತ್ತಿದ್ದಿರೆಂದು ಗೊತ್ತಾಗಿ, ಮುಂದೆ ನೀವು ತನಿಖೆ ನಡೆಸುತ್ತೀರಾ ಎಂಬ ಅನುಮಾನವೂ ಇರುತ್ತದೆ. ಹಾಗಾಗಿಯೇ ಅವರು ನಿಮ್ಮ ಚಲನವಲನಗಳನ್ನು ಗಮನಿಸುತ್ತಿರುತ್ತಾರೆ. ಇದರಲ್ಲಿ ಆಶ್ಚರ್ಯ ಏನಿಲ್ಲ ಬಿಡಿ.... ಆದರೆ ಸ್ಟೇಷನ್ ಮುಂದೆಯೇ ನಿಮ್ಮನ್ನು ಕೊಲ್ಲಲು ಪ್ರಯತ್ನ ಪಟ್ಟಿದ್ದಾರೆ ಎಂದರೆ ಅವರು ಖಂಡಿತ ನಮಗೆ ಏನೋ ಮೆಸೇಜ್ ಕೊಡಲು ಹೀಗೆ ಮಾಡಿರುತ್ತಾರೆ.

ಸರ್... ಬಿಡಿ, ಅದೇನೋ ಜಾನಕಿ ಬಗ್ಗೆ ಮುಖ್ಯವಾದ ಸುಳಿವು ಸಿಕ್ಕಿದೆ ಎಂದು ಹೇಳಿದಿರಲ್ಲ ಏನದು?

ಹಾ ಅರ್ಜುನ್, ಅದೇ ನಮ್ಮ ತಂಡ ಕೊಟ್ಟಾಯಂಗೆ ಹೋಗಿತ್ತಲ್ಲ ಅಲ್ಲಿ ಕೊಲೆಮಾಡಿದವರು ಸಿಕ್ಕಿದ್ದಾರೆ.... ಆದರೆ ಅವರೂ ಸಹ ಈ ಮಂತ್ರವಾದಿಗಳಂತೆ ಹಣಕ್ಕಾಗಿ ಕೆಲಸ ಮಾಡಿದವರು ಹೊರತು ಕೊಲೆ ಮಾಡಿಸಿದವರು ಯಾರೆಂದು ಇವರಿಗೆ ಗೊತ್ತಿಲ್ಲ. ಯಾವುದೋ ಒಂದು ಕರೆ ಬಂದು ಈ ರೀತಿ ಇಷ್ಟು ಹಣ ಕೊಡುತ್ತೇವೆ, ಒಂದು ಕೊಲೆ ಆಗಬೇಕು, ಹಣವನ್ನು ನಿಮಗೆ ತಲುಪಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ. ಮರುದಿನ ಬೆಳಿಗ್ಗೆ ಇವರ ಮನೆಯ ಮುಂದೆ ಒಂದು ಕಪ್ಪು ಕವರಿನಲ್ಲಿ ಹಣ ಮತ್ತು ಜಾನಕಿಯ ಫೋಟೋ ಇಟ್ಟಿದ್ದರಂತೆ.

ಇವರು ಫೋಟೋ ತೆಗೆದುಕೊಂಡು ಬೆಂಗಳೂರಿಗೆ ಬಂದು ಜಾನಕಿ ಮನೆಯ ಅಡ್ರೆಸ್ ತಿಳಿದುಕೊಂಡು ಮೂರು ದಿವಸ ಅವಳ ದಿನಚರಿಯನ್ನು ಗಮನಿಸಿದ್ದಾರೆ. ನಾಲ್ಕನೇ ದಿನ ಬೆಳಿಗ್ಗೆ ನಿಮ್ಮ ಮನೆಗೆಂದು ಹೊರಟ ಜಾನಕಿಯನ್ನು ಇವರಿಬ್ಬರೂ ಅಪಹರಿಸಿದ್ದಾರೆ. ಅಪಹರಿಸಿದ ನಂತರ ಜಾನಕಿಯನ್ನು ಒಂದು ಕಡೆ ಬಿಡಲು ಇವರಿಗೆ ಆಜ್ಞೆ ಆಗಿತ್ತು. ಅದೇ ರೀತಿ ಇವರು ಜಾನಕಿಯನ್ನು ಊರ ಹೊರಗಿರುವ ಒಂದು ಹಳೆಯ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಬಿಟ್ಟು ಅಲ್ಲಿಂದ ಬಂದು ಬಿಟ್ಟಿದ್ದಾರೆ. ಅದಾದ ನಂತರ ಜಾನಕಿಯನ್ನು ಮತ್ತೆ ಅದೇ ಇಟ್ಟಿಗೆ ಫ್ಯಾಕ್ಟರಿ ಬಳಿ ಬಿಟ್ಟಿರುವುದಾಗಿ, ಮತ್ತು ಅವಳನ್ನು ಕೊಂದು ಬಿಡುವುದಾಗಿ ಆ ವ್ಯಕ್ತಿ ಹೇಳಿದ್ದಾನೆ. ಅದೇ ರೀತಿ ಇವರು ಜಾನಕಿಯನ್ನು ಕೊಂದು ಆ ಪೊದೆಯ ಬಳಿ ಹಾಕಿ ಹೋಗಿದ್ದಾರೆ.

ಸರ್ ಎಲ್ಲಿದ್ದಾರೆ ಆ ಬೋ....ಕ್ಳು... ಅವರನ್ನು ಕತ್ತರಿಸಿ ಬಿಡುತ್ತೇನೆ, ಜುಜುಬಿ ಹಣದ ಆಸೆಗೆ ಇಂಥಹ ಕೆಲಸ ಮಾಡುವವರನ್ನು ಉಳಿಸಬಾರದು ಸರ್, ಕಚಡಾಗಳು... ಸರ್... ಸುಮ್ಮನೆ ಅವರನ್ನು ಸ್ಟೇಷನ್ ನಲ್ಲಿಟ್ಟು, ಕೇಸ್ ಹಾಕಿ, ಕೋರ್ಟ್ ಗೆ ಅಲೆದು, ಅವರ ಶಿಕ್ಷೆ ನಿಗದಿ ಆಗುವಷ್ಟರಲ್ಲಿ ವರ್ಷಗಳು ಕಳೆದು ಬಿಡುತ್ತದೆ.... ಇವರು ಚೆನ್ನಾಗಿ ಜೈಲಿನ ಊಟ ಮೇಯುತ್ತಾ ಹಾಯಾಗಿರುತ್ತಾರೆ, ನಂತರ ಒಂದು ದಿನ ಬೇಲ್ ತೆಗೆದುಕೊಂಡು ಆಚೆ ಬಂದು ಮತ್ತೆ ತಮ್ಮ ಆಟ ಮುಂದುವರೆಸುತ್ತಾರೆ. ಇಂತಹವರನ್ನು ಸುಮ್ಮನೆ ಬಿಡಬಾರದು ಸರ್... ನನಗೆ ಒಂದೇ ಒಂದು ಅವಕಾಶ ಕೊಡಿ ಸರ್, ಈ ನನ್ಮಕ್ಳಿಗೆ ನರಕ ಎಂದರೆ ಏನೆಂದು ತೋರಿಸುತ್ತೇನೆ.... ಜಾನಕಿ ಪಟ್ಟ ಕಷ್ಟ ಇವರೂ ಪಡಬೇಕು... ಸರ್ ಪ್ಲೀಸ್ ಅವರು ಎಲ್ಲಿದ್ದಾರೆ ಎಂದು ಹೇಳಿ ಸರ್ ಎಂದು ಕಿರುಚಾಡುತ್ತಿದ್ದೆ.

ತ್ರಿವಿಕ್ರಂ ನನ್ನ ಕೈ ಹಿಡಿದು, ಅರ್ಜುನ್... ಅರ್ಜುನ್ .... calm down.... relax...ನೀವು ಹೀಗೆ ಆವೇಶ ಪಟ್ಟರೆ ಕೆಲಸ ಕೆಡುತ್ತದೆ. ಈಗಲೇ ಅವರು ನಿಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈಗ ನೀವು ಎಷ್ಟು calm ಆಗಿ ಇರುತ್ತೀರೋ ಅಷ್ಟು ಒಳ್ಳೆಯದು. ನಿಮಗೆ ಇನ್ನೊಂದು ಮಾಹಿತಿ ಕೊಡುತ್ತೇನೆ, ಸಮಾಧಾನವಾಗಿ ಕೇಳಿ, ಅಸಲಿಗೆ ನಾನಿದನ್ನೆಲ್ಲಾ ನಿಮ್ಮ ಬಳಿ ಮಾತಾಡಬಾರದು. ಆದರೂ ಹೇಳುತ್ತೇನೆ ಕೇಳಿ, ಈ ಇಬ್ಬರು ಕೊಲೆಗಾರರಲ್ಲಿ ಒಬ್ಬ ಸ್ವಲ್ಪ ಅಂಜುಬುರುಕ ಇದ್ದಾನೆ. ನಾವು ಕೊಟ್ಟಿರುವ ಟ್ರೀಟ್ಮೆಂಟ್ ಈಗಾಗಲೇ ಅವನು ಅರ್ಧ ಸತ್ತು ಹೋಗಿದ್ದಾನೆ. ನನ್ನ ಅನಿಸಿಕೆ ಪ್ರಕಾರ ಅವನಿಗೆ ಕೊಲೆ ಮಾಡಿಸಿದವನ ಮಾಹಿತಿ ಗೊತ್ತಿರುವ ಹಾಗಿದೆ. ಇನ್ನೊಂದು ಸುತ್ತು ಊಟ ಹಾಕಿದರೆ ಖಂಡಿತ ಅವನು ಬಾಯಿ ಬಿಡುವ ಸಾಧ್ಯತೆಗಳಿದೆ.

ಸರ್... ಏನು ನೀವು ಹೇಳುತ್ತಿರುವುದು?

ಹೌದು ಅರ್ಜುನ್.... ಆದರೆ ನಾವು ಮತ್ತೆ ಅವನಿಗೆ ಊಟ ಹಾಕಬೇಕೆಂದರೆ ಕನಿಷ್ಠ ಪಕ್ಷ ಒಂದು ವಾರ ಬೇಕು. ಏಕೆಂದರೆ ಈಗ ಹಾಕಿರುವ ಊಟವೇ ಅವನಿಗೆ ಅಜೀರ್ಣ ಆಗುವಷ್ಟು ಹಾಕಿದ್ದೇವೆ. ಈ ಸಮಯದಲ್ಲಿ ಮತ್ತೆ.... ಉಹುಂ.... ಅದಕ್ಕೆ ಒಂದು ವಾರ ಆದಮೇಲೆ ಮತ್ತೆ ಟ್ರೀಟ್ಮೆಂಟ್ ಕೊಟ್ಟು ಅವನಿಂದ ನಿಜ ಬಾಯಿ ಬಿಡಿಸುತ್ತೇನೆ. ಆಮೇಲೆ ನೋಡೋಣ

Rating
No votes yet

Comments