ಓ..ಒಲವೇ(10)

ಓ..ಒಲವೇ(10)

ಒಂದೊಂದು ಕ್ಷಣವೂ ಯುಗಗಳಂತೆ ಭಾಸವಾಗತೊಡಗಿತ್ತು.ಎಷ್ಟು ತಡೆದರೂ ದುಃಖ ತಡೆಯಲಾಗುತ್ತಿಲ್ಲ.ಕೂತರೂ ನಿಂತರೂ ಬರೀ ಸಂಜೂನ ನೆನಪಿಸಿಕೊಂಡು ಅಳುತ್ತಲೇ ಇರುತ್ತಿದ್ದಳು.ತನ್ನ ಜೊತೆ ಯಾರಿದ್ದಾರೆ ಅನ್ನೋ ಪರಿವೆಯೇ ಇರುತ್ತಿರಲಿಲ್ಲ.ಒಂದು ದಿನ ಚಂದನ್ ಗೆ ಊಟ ಬಡಿಸುತ್ತಿದ್ದಳು.ಇದ್ದಕ್ಕಿದಂತೆ ಅವಳ ಕಣ್ಣುಗಳಲ್ಲಿ ಧಾರಾಕಾರವಾಗಿ ಕಂಬನಿ ಸುರಿಯಲಾರಂಭಿಸಿತು.ಯಾಕೇ..? ಏನೇ ಆಯ್ತು ನಿಂಗೆ ಇಷ್ಟೊತ್ತು ಚೆನ್ನಾಗೇ ಇದ್ದೆ.ಸಡನ್ನಾಗಿ ಅಳ್ತಾ ಇದ್ದೀಯ? ಅಂದ. ಇಲ್ಲಾ ರೀ ಕಣ್ಣಲ್ಲಿ ಏನೋ ಧೂಳು ಬಿದ್ದು ಕಣ್ಣು ಉರೀತಾ ಇದೆ ಅಂದಳು.ಅಷ್ಟಕ್ಕೆಲ್ಲಾ ಯಾರಾದ್ರೂ ಇಷ್ಟೊಂದು ಅಳ್ತಾರಾ.ಹೋಗಿ ಕೆಲ್ಸ ಮಾಡೋಗು ಅಂದ.ಹೀಗೇ ಯಾರೇ ಇದ್ದರೂ ಅವಳ ಕಣ್ಣೀರಿಗೆ ಕಡಿವಾಣ ಹಾಕೋಕೆ ಅಸಾಧ್ಯವಾಗಿತ್ತು.ಅತ್ತು ಅತ್ತು ಮುಖ ಕಳೆಗುಂದಿತ್ತು.ಕಣ್ಣುಗಳಲ್ಲಿ ಕಾಂತಿ ಇಲ್ಲವಾಯ್ತು.ಸ್ವಲ್ಪ ಸ್ವಲ್ಪಾನೇ ಹಾಗೇ ಖಿನ್ನತೆಗೆ ಒಳಗಾಗುತ್ತಾ ಮಾನಸಿಕ ರೋಗಿಯಾಗತೊಡಗಿದಳು.ಮನಸ್ಸಿನಲ್ಲೇ ಕೊರಗಿ ಕೊರಗಿ ಸೊರಗತೊಡಗಿದಳು.ಹೀಗೆ ಅವಳು ರೋಗಿಯ ಹಾಗೆ ಕಾಣತೊಡಗಿದರೂ ಗಂಡ ಅವಳ ಬಗ್ಗೆ ಸ್ವಲ್ಪಾನೂ ಯೋಚಿಸಲಿಲ್ಲ.ಅವಳ ಪರಿಸ್ಥಿತಿ ಎಂಥವರಲ್ಲಿಯೂ ಕನಿಕರ ಹುಟ್ಟಿಸುವಂತಾಗಿತ್ತು.ಆದರೂ ಅವಳ ಗಂಡನಿಗೆ ಇದ್ಯಾವುದರ ಪರಿವೆಯೇ ಇರಲಿಲ್ಲ. ಅವನು ಅವನದೇ ಒಂದು ಲೋಕದಲ್ಲಿ ವಿಹರಿಸುತ್ತಿದ್ದ. ಅವಳನ್ನು ನೋಡಿದವರೆಲ್ಲ ಯಾಕೆ ತನು ಹೀಗೆ ಆಗ್ಬಿಟ್ಟಿದ್ದೀಯ ಹುಷಾರಿಲ್ವಾ..? ಮೊದಲು ಆಸ್ಪತ್ರೆಗೆ ತೋರಿಸು ಇಲ್ಲಾ ಅಂದ್ರೆ ಸತ್ತೇ ಹೋಗ್ಬಿಡ್ತೀಯ ಅನ್ನುತ್ತಿದ್ದರು. ಹೌದು ನಾನು ಯಾರಿಗೂ ಬೇಡವಾದ ಮೇಲೆ ಬದುಕಿದ್ದು ಪ್ರಯೋಜನವಿಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡು ಸಾಯೋಕೆ ನಿರ್ಧಾರ ಮಾಡಿದಳು.ಮನೆಯಲ್ಲಿ ಯಾರೂ ಇರಲಿಲ್ಲ.ತಾನು ಶೇಖರಿಸಿಟ್ಟ ಎಲ್ಲಾ ನಿದ್ರೆ ಮಾತ್ರೆಗಳನ್ನು ಕೈಗೆತ್ತಿಕೊಂಡಳು. ಅದನ್ನು ಬಾಯಿಗೆ ಹಾಕಿಕೊಳ್ಳುವ ಮೊದಲು ಹಾಗೇ ಕಣ್ಮುಚ್ಚಿದಳು. ತನ್ನ ಜೀವನದಲ್ಲಿ ನಡೆದ ಎಲ್ಲ ಘಟನೆಗಳು ಅವಳಿಗೆ ಕಣ್ಮುಂದೆ ಬಂತು. ಮತ್ತು ಸಂಜು ತನ್ನ ಬಾಳಿನಲ್ಲಿ ಬಂದದ್ದು, ಅವನ ಪ್ರೀತಿಯನ್ನು ಎಷ್ಟೇ ನಿರಾಕರಿಸಿದರೂ, ಹಠ ಮಾಡಿ ಅವನ ಪ್ರೀತಿಗೆ ಮಣಿಯುವಂತೆ ಮಾಡಿದ್ದು, ಮೊದಮೊದಲ ಅವನ ಮಾತುಗಳು, ಅವನು ಅವಳ ಮೇಲೆ ತೋರಿಸುತ್ತಿದ್ದ ಅಕ್ಕರೆ, ನಿನ್ನನ್ನು ನನ್ನ ಮನಸ್ಸಿನಲ್ಲಿ ಹೆಂಡತಿ ಅಂತಾನೆ ಭಾವಿಸಿದ್ದೀನಿ ಅಂದದ್ದು, ನಿನ್ನಿಷ್ಟಾನೇ ನನ್ನಿಷ್ಟ, ನೀನು ಏನೇ ಕೇಳಿದರೂ ಇಲ್ಲ ಅನ್ನಲ್ಲ ಅಂತ ಆಗಾಗ ಹೇಳುತ್ತಿದ್ದದ್ದು, ತನು msg n call ಮಾಡೋದು ಸ್ವಲ್ಪ ತಡವಾದ್ರೂ ಅವಳನ್ನು ಬೈಯ್ಯತಿದ್ದದ್ದು, ನಂತರ ಇತ್ತೀಚೆಗಿನ ದಿನಗಳಲ್ಲಿ ಅವಳನ್ನು ತಾತ್ಸಾರ ಮಾಡುತ್ತಿದ್ದದ್ದು, ಎಲ್ಲಾ ನೆನಪಾಗಿ ಹಾಗೇ ಕುಳಿತಳು. ಎಷ್ಟು ಹೊತ್ತು ಕುಳಿತಳೋ ಗೊತ್ತಾಗಲಿಲ್ಲ. ಇದ್ದಕ್ಕಿದ್ದಂತೆ ತಟ್ಟಂಥ ಕಣ್ಬಿಟ್ಟಳು. ಏನೋ ದೃಢನಿರ್ಧಾರ ಮಾಡಿಕೊಂಡಳು, ಹೌದು ಹಿಂದೆ ನಡೆದಿದ್ದರಲ್ಲಿ ನನ್ನ ತಪ್ಪೇನಿದೆ,ನನ್ನದಲ್ಲದ ತಪ್ಪಿಗೆ ನಾನ್ಯಾಕೆ ಶಿಕ್ಷೆ ಅನುಭವಿಸಬೇಕು.ಭಾವನೆಗಳಿಗೆ ಬೆಲೆಕೊಡದ ವ್ಯಕ್ತಿಗಾಗಿ ನಾನ್ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು.ಅವನೇನು ನನ್ನನ್ನು ತಿರಸ್ಕರಿಸೋದು ? ನಾನೇ ಅವನನ್ನು ತಿರಸ್ಕಾರ ಮಾಡುತ್ತೀನಿ.ಯಾರೂ ನನ್ನ ಪ್ರೀತಿ ಮಾಡೋ ಅಗತ್ಯವಿಲ್ಲ. ಇನ್ಮೇಲೆ ನನ್ನ ಮನಸ್ಸಿನಲ್ಲಿ ಯಾರಿಗೂ ಜಾಗವಿಲ್ಲ. ಅಂದುಕೊಂಡು ಮೊಬೈಲ್ ಕೈಗೆತ್ತಿಕೊಂಡಳು.ಸಂಜು ಗೆ msg ಮಾಡಿದಳು.
Hi, gud mrng ಎಂದು msg ಮಾಡಿದಳು. ಅವತ್ತು ಸ್ವಲ್ಪ ಬೇಗಾನೇ reply ಬಂತು.
"Gud mrng"
"ಬ್ಯುಸಿ ನಾ ?" ಅಂದಳು
"ಹೌದು ತುಂಬಾ ಬ್ಯುಸಿ" ಅಂದ.
"ನಂಗೆ ಗೊತ್ತು, ನೀವು ಈ ನಡುವೆ ತುಂಬಾ ಬ್ಯುಸಿ ಅಂತ,ಅದಕ್ಕೆ ಇನ್ಮೇಲೆ ನಿಮ್ಗೆ disturb ಮಾಡಬಾರದು ಅನ್ಕೋತಾ ಇದೀನಿ."
"ಓ ಪರವಾಗಿಲ್ಲ, ನಿಂಗೂ ಬುದ್ದಿ ಇದೆ."
"ಹೌದು ನಂಗೆ ಈಗ ಬುದ್ದಿ ಬಂದಿದೆ.ನಾನು ನಿಮ್ಮ mobile no. ಇಟ್ಕೋಬಾರದು ಅನ್ಕೋತಾ ಇದ್ದೀನಿ, delete ಮಾಡ್ಬಿಡ್ತೀನಿ."
"Ok ನಿನ್ನಿಷ್ಟ,ಏನಾದ್ರೂ ಮ‌ಾಡ್ಕೋ."
"ನೀವು ನಿಮ್ಮ ಹೆಂಡತಿ ಮಕ್ಕಳೊಂದಿಗೆ ಚೆನ್ನಾಗಿರಿ,ಮತ್ತೆ ಯಾವತ್ತೂ ನಾನು ನಿಮಗೆ ತೊಂದರೆ ಕೊಡಲ್ಲ, ನಿಮ್ಮ ಜೀವನದಲ್ಲಿ ಮತ್ತೆ ಯಾವತ್ತೂ ಬರಲ್ಲ." ಅಂದಳು
"Thank you." ಅಂದ
"Good bye." ಅಂದಳು
"Ok Good bye." ಅಂದ ಅವನಿಗೂ ಅದೇ ಬೇಕಾಗಿತ್ತು ಅನ್ನುವ ಹಾಗೆ.
ಇಲ್ಲಿಗೆ ಅವರಿಬ್ಬರ chatting ಮುಕ್ತಾಯವಾಯ್ತು, ಅವನ ನಂ. ಡಿಲೀಟ್ ಮಾಡಬೇಕು ಅಂದುಕೊಂಡಳು. ಛೇ ಬೇಡ ಬೇಡ ಇರಲಿ,ಅವನ ನಂ.ನೋಡಿದಾಗೆಲ್ಲ ಅವನು ನನಗೆ ಮಾಡಿದ ನಂಬಿಕೆದ್ರೋಹ ನನಗೆ ನೆನಪಾಗಬೇಕು, ಯಾರನ್ನೂ ನಂಬಬಾರದು ಅನ್ನೋ ಪಾಠ ಕಲಿಸಿದ್ದಾನೆ.
ಅಬ್ಬ! ಎಂತಹ ವ್ಯಕ್ತಿ ಇರಬೇಕು ಇವನು.ಆಗ ಮೊದಲ ದಿನ ಬಸ್ಸಿನಿಂದ ಇಳಿಯುವಾಗ ನನ್ನನ್ನು ಕಳೆದುಕೊಳ್ತಾ ಇದ್ದಾನೇನೋ ಅಂತ ಎಷ್ಟು ಬೇಸರ ಮಾಡ್ಕೊಂಡಿದ್ದ.ಆದ್ರೆ ಇವತ್ತು ನಾನೇ Good Bye ಅಂತ ಹೇಳಿದ್ರೂ ಅವನಿಗೆ ಸ್ವಲ್ಪ ಸಹ ಬೇಜಾರಾಗ್ತಿಲ್ಲ, ಯಾಕೆ ಅಂತ ಒಂದು ಮಾತು ಸಹ ಕೇಳಲಿಲ್ಲ.ಎಷ್ಟು ಸಲೀಸಾಗಿ Good bye ಅಂತ ಹೇಳಿಬಿಟ್ಟ, ತುಟಿಯ ಮೇಲೆ ಒಂದು ನಗು ಬಂತು.ಯಾರೇ ನೋಡಿದರೂ ತುಂಬಾ ಸುಲಭವಾಗಿ ಹೇಳಬಹುದಿತ್ತು ಅದು ನೋವಿನ ನಗು ಅಂತ. ಮತ್ತೆ ದುಃಖ ಉಕ್ಕಿಬಂತು, ಕಣ್ಣುಗಳಲ್ಲಿ ನೀರು ಧಾರಾಕಾರವಾಗಿ ಸುರಿಯತೊಡಗಿತು.ಎಷ್ಟು ತಡೆಯಲು ಪ್ರಯತ್ನಿಸಿದರೂ ಆಗಲಿಲ್ಲ. ಲೇ ತನು ಇನ್ನೂ ಅಡುಗೆ ರೆಡಿ ಆಗಿಲ್ವೇನೇ ಅಂತ ಗಂಡನ ಧ್ವನಿ ಕೇಳಿ ಸುರಿಯುತ್ತಿರುವ ಕಣ್ಣೀರನ್ನು ಒರೆಸಿಕೊಂಡು ಅಡುಗೆ ಮನೆ ಕಡೆ ನಡೆದಳು.ಯಾರಿಗೂ ಕಾಣದಂತೆ ಕಣ್ಣೀರೇನೋ ಒರೆಸಿಕೊಂಡಳು ಆದರೆ ತನ್ನ ಮನಸ್ಸಿನಲ್ಲಿ ಹರಿಯುತ್ತಿದ್ದ ಗುಪ್ತಗಾಮಿನಿ ಮಾತ್ರ ಯಾರಿಗೂ ಗೊತ್ತಾಗಲೇ ಇಲ್ಲ...

N....R....

ಮುಗಿಯಿತು.....

Comments

Submitted by nageshamysore Thu, 06/04/2015 - 06:10

ಅಂತೂ ಸಂಜೂವಿನ ಬದಲಾದ ನಡುವಳಿಕೆಯ ಹಿನ್ನಲೆಯನ್ನು ಓದುಗರಿಗು ಒಗಟಾಗಿಯೆ ಇರಿಸಿ ಕಥೆ ಮುಗಿಸಿಬಿಟ್ಟಿರಿ :-)

ಅಂತ್ಯದ ನಿರ್ಧಾರ ಚೆನ್ನಾಗಿದೆ - ಭಾವನಾತ್ಮಕ ನಾಯಕಿ ಸಾವಿನತ್ತ ಸೆಳೆದ ದೌರ್ಬಲ್ಯವನ್ನಧಿಗಮಿಸಿ ವಾಸ್ತವಿಕ ಚಿಂತನೆಯತ್ತ ಹೊರಳುವುದು ಸರಿಯಾದ ಸಂದೇಶವನ್ನು ನೀಡುತ್ತದೆ.'ಲೈಫ್ ಗೋಸ್ ಆನ್' ಎನ್ನುವ ಸರಳ ಸತ್ಯಕ್ಕೆ ಒತ್ತು ನೀಡುವ ಅಂಶ ಇಷ್ಟವಾಯಿತು.

Submitted by partha1059 Thu, 06/04/2015 - 10:21

In reply to by nageshamysore

ಸಮಾಜದಲ್ಲಿ ಈಗಿರುವ ಸಾಮಾಜಿಕ ಪರಿಸ್ಥಿಥಿ, ಟೀವಿ ದಾರವಾಹಿಗಳ ಹಿನ್ನಲೆ ಎಲ್ಲವನ್ನು ಗಮದಲ್ಲಿಟ್ಟರೆ,
ಇಲ್ಲಿಯ ಪಾತ್ರಗಳು ಸಜೀವ.
ಸಂಜೂನ ಗೆಳೆತನದ ಹಿನ್ನಲೆಯನ್ನು ನಾಯಕಿ ಅರ್ಥಮಾಡಿಕೊಳ್ಳಲಿಲ್ಲವೋ ಅಥವ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಲಿಲ್ಲವೋ ಎನ್ನುವ ಅನುಮಾನ.
ಕಡೆಗೊಮ್ಮೆ ಯಾವುದೆ ದುರ್ಘಟನೆಗಳಿಲ್ಲದೆ ತನ್ನ ಸಂಸಾರಕ್ಕೆ ಮರಳಿದಳು ಎನ್ನುವ ಅಂತ್ಯ ಸಮಾದಾನಕರ
ಆದರೆ ಹೆಣ್ಣುಮಕ್ಕಳು ಆ ರೀತಿ ಅನ್ಯ ಪುರುಶರಿಗೆ ಸತತ ಮೆಸೇಜ್ ಹಾಗು ಪೋನ್ ಕಾಲ್ ಮಾಡುವುದು ಅಪಾಯಕಾರಿ, ಒಮ್ಮೆ ಸಂಜೂ ಅದನ್ನೆ ಹಿಡಿದು ನಾಯಕಿಯನ್ನು ಬ್ಲಾಕ್ ಮೈಲ್ ಮಾಡಿ ತನ್ನ ಬಯಕೆ ತೀರಿಸಿಕೊಳ್ಳುವ ಸಂಭವವು ಇತ್ತು. ಅದು ಅವನಿಗೆ ಹೊಳೆಯಲಿಲ್ಲ.
ಸದ್ಯ ಎಲ್ಲವೂ ಸುಖಾಂತ್ಯ ಅನ್ನುವುದು ಓದುಗರಿಗೆ ಸಂತಸ ತರುವ ವಿಷಯ :‍)

‍ ಪಾರ್ಥಸಾರಥಿ

Submitted by Nagaraj Bhadra Thu, 06/04/2015 - 10:17

ಏನಾಗಲ್ಲಿ ಮೂಂದೆ ಸಾಗು ನೀ.ಬಯಸಿದೇಲ್ಲ‌ ಸೀಗದು ಬಾಳಲ್ಲಿ......ಎಂಬ‌ ಅಂತ್ಯದ‌ ಸಂದೇಶ‌ ಸರೀಯಿದೆ.........

Submitted by kavinagaraj Fri, 06/05/2015 - 14:50

ಪ್ರಿಯಕರನ ಬದಲಾದ ನಡವಳಿಕೆಯ ಕಾರಣ ತಿಳಿಸಿದ್ದರೆ ಕಥೆ ಪೂರ್ಣವಾಗುತ್ತಿತ್ತು ಅನ್ನಿಸಿತು. ಒಟ್ಟಾರೆ ಚೆನ್ನಾಗಿದೆ.