ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ 1/3)

ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ 1/3)

ದಿನದ ಕೊನೆಯ ಮೇಯ್ಲೊಂದನ್ನು ಓದಿ ಮುಗಿಸಿ, ಚುಟುಕಾದ ಮಾರುತ್ತರ ಬರೆದು ಕಳಿಸಿದವನೆ ಮೊಬೈಲಿನ ಗಡಿಯಾರದತ್ತ ಕಣ್ಣು ಹಾಯಿಸಿದ ಗಂಭೀರ, ' ಓಹ್.. ಆಗಲೆ ಆರೂವರೆ..' ಎಂದುಕೊಂಡು ಸ್ವಲ್ಪ ಅವಸರದಲ್ಲೆ ಕಂಪ್ಯೂಟರು ಮುಚ್ಚಿ ಬ್ಯಾಗಿಗೆ ಸೇರಿಸಿ ಹೊರಟ. ಅದು ಅವನ ನಿತ್ಯದ ದಿನಚರಿ - ಆರರಿಂದ ಆರೂವರೆಗೂ ಮೊದಲೆ ಆಫೀಸು ಬಿಟ್ಟು ಹೊರಟುಬಿಡುವುದು. ಆಗಲೆ ಇನ್ನು ಚೆನ್ನಾಗಿ ಬೆಳಕಿರುವುದರಿಂದ ಸಂಜೆಯ ತಂಪು ಹವೆಯಲ್ಲಿ ತೀರಾ ಬೆವರದೆ ನಡೆದು ಮನೆ ಸೇರಿಬಿಡಬಹುದು. ಅದೇ ಆರೂವರೆ ದಾಟಿತೆಂದರೆ ಯಾಕೊ ವಾಕಿಂಗ್ ಹೊರಡಲು ಮನಸಾಗುವುದಿಲ್ಲ.. ಆ ನಂತರದ ವಾಕಿಂಗಿನಲ್ಲಿ ಬೆನ್ನಿನಲ್ಲಿ ಬ್ಯಾಗು ನೇತು ಹಾಕಿಕೊಂಡು ಎಷ್ಟೆ ಬೇಗನೆ ನಡೆದು ಹೊರಟರೂ ಆರು ಕಿಲೊಮೀಟರು ದೂರದ ಸಿಟಿಯ ಮಧ್ಯದಲ್ಲಿರುವ ಮನೆ ಸೇರುವ ಹೊತ್ತಿಗೆ ಕನಿಷ್ಠ ಒಂದು ಗಂಟೆ ಹತ್ತು ನಿಮಿಷವಾದರೂ ಬೇಕು. ಜತೆಗೆ ಹೋಗುವ ದಾರಿಯಲ್ಲೆ ಮಗನಿಗೆಂದು ಏನಾದರೂ ತಿನ್ನಲು ಕಟ್ಟಿಸಿಕೊಂಡು ಹೋಗುವ ಕಾರಣ ಮತ್ತೊಂದು ಹದಿನೈದಿಪ್ಪತ್ತು ನಿಮಿಷವನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಆರೂವರೆಯ ನಂತರ ಹೊರಟರೆ ಮನೆಯಲ್ಲಿ ಕಾದಿರುವ ಮಗನ ಊಟದ ಸಮಯದಲ್ಲಿ ಏರುಪೇರಾಗಿಬಿಡುತ್ತದೆ. ಅದಕ್ಕೆ ಅವಕಾಶ ಕೊಡದೆ ಒಂದೊ ಆರೂವರೆಗೆ ಮೊದಲೆ ಹೊರಡುತ್ತಾನೆ ಇಲ್ಲವೆ ತಡವಾಯ್ತೆಂದರೆ ಬಸ್ಸಿನಲ್ಲೊ, ಟ್ರೈನಿನಲ್ಲೊ ಹೊರಟುಬಿಡುತ್ತಾನೆ. ಆ ಕಾರಣಕ್ಕಾಗಿಯೆ ಎಂಟಕ್ಕು ಮೊದಲೆ ಆಫೀಸಿಗೆ ಬರುವುದನ್ನು ರೂಢಿಸಿಕೊಂಡಿದ್ದಾನೆ - ಕಡ್ಡಾಯವಾಗಿ ನಿರ್ವಹಿಸಲೆಬೇಕಾದ ದೈನಿಕ ಗಂಟೆಗಳ ಅವಧಿಯಲ್ಲಿ ಯಾವುದೆ ವ್ಯತ್ಯಯವಾಗಲಿ, ಖೋತಾವಾಗಲಿ ಆಗದಂತೆ ನೋಡಿಕೊಳ್ಳಲು. ಎಲ್ಲಕ್ಕಿಂತ ಹೆಚ್ಚಿನ ಪ್ರೇರಣೆಯೆಂದರೆ ಈ ನೆಪದಲ್ಲಿಯಾದರು ಸ್ವಲ್ಪ ದೈಹಿಕ ವ್ಯಾಯಾಮ ಸಿಕ್ಕಂತಾಗುವುದಲ್ಲ ಎನ್ನುವುದು. ಕನಿಷ್ಠ ವಾರಕ್ಕೆ ಮೂರು ದಿನ ನಡೆದರು ಸಾಕು ದೈನಂದಿನ ಆರೋಗ್ಯದ ಕೋಟಾ ಮುಗಿಸಲು ಸಾಧ್ಯ - ದಿನಕ್ಕರ್ಧ ಗಂಟೆಯ ಲೆಕ್ಕದಲ್ಲಿ...

'ದಿನವೂ ನಡೆಯುತ್ತೀಯಲ್ಲಾ, ಬೋರಾಗುವುದಿಲ್ಲವಾ..? ಅದು ಅಷ್ಟೊಂದು ದೂರಾ..! ಹೋಗಿ ತಲುಪುವುದರಲ್ಲೆ ತುಂಬಾ ಹೊತ್ತಾಗಿಬಿಡುವುದಿಲ್ಲಾ?' ಎಂದು ಅಚ್ಚರಿಯಿಂದ ಕಣ್ಣರಳಿಸಿ ಕೇಳುತ್ತಾಳೆ ಥಾಯ್ ಹುಡುಗಿ ಕುನ್. ಜಂದ್ರ... ಮಸಲಾ ಅವಳನ್ನು ಹುಡುಗಿಯೆನ್ನುವುದೆ ತಪ್ಪು.. ಇಬ್ಬರು ಬೆಳೆದ ಹೆಣ್ಣು ಮಕ್ಕಳ ತಾಯಿಯವಳು. ಗಂಡ ಮತ್ತು ಮಕ್ಕಳಿಬ್ಬರನ್ನೂ ಬ್ಯಾಂಕಾಕಿನಲ್ಲೆ ಬಿಟ್ಟು ತಾನೊಬ್ಬಳೆ ವರ್ಗಾವಣೆ ಮಾಡಿಸಿಕೊಂಡು ಸಿಂಗಪುರ ಸೇರಿಕೊಂಡಿದ್ದಾಳೆ... ಇಲ್ಲಿನ ಡಾಲರಿನ ಸಂಬಳ ಥಾಯ್ಲ್ಯಾಂಡಿನ ಕರೆನ್ಸಿಯಲ್ಲಿ ಹಲವು ಪಟ್ಟು ತೂಗುವುದು ಒಂದು ಕಾರಣವಾದರೆ, ಬ್ಯಾಂಕಾಕಿನಲ್ಲಿದ್ದಾಗ ಅವಳ ಸಿನಿಯಾರಿಟಿ ಮತ್ತು ಸರ್ವೀಸಿನ ಅವಧಿಯನ್ನು ಪರಿಗಣಿಸದೆ, ಕೇವಲ ಇಂಗ್ಲೀಷ್ ಭಾಷೆ ಚೆನ್ನಾಗಿ ಬರುವುದೆಂಬ ಒಂದೆ ಕಾರಣಕ್ಕೆ ಆಗ ತಾನೆ ಹೊಸದಾಗಿ ಸೇರಿದ್ದ ಜೂನಿಯರ ಉದ್ಯೋಗಿಯನ್ನು ವಿಭಾಗದ ಮುಖ್ಯಸ್ಥನನ್ನಾಗಿ ಮಾಡಿ ತನ್ನನ್ನು ಕಡೆಗಣಿಸಿದರಲ್ಲ ಎಂಬುದು ಮತ್ತೊಂದು ಕಾರಣ - ಅದೂ ಡಬಲ್ ಗ್ರಾಜುಯೇಷನ್ ಮುಗಿಸಿ, ಎಂಬಿಯೆ ಮಾಡಿಕೊಂಡರು... ಅದಕ್ಕೂ ಮೀರಿದ ಸಂಸಾರದ ವೈಯಕ್ತಿಕ ಕಾರಣವಿರಬಹುದೆಂದು ಗಂಭೀರನ ಗುಮಾನಿ. ಅಲ್ಲವಾದಲ್ಲಿ ಗಂಡ-ಮನೆ-ಮಕ್ಕಳು ಎಲ್ಲರನ್ನು ಬಿಟ್ಟು, ಬಾರದ ಭಾಷೆಯ ಮೇಲೆ ಪ್ರಭುತ್ವ ಸಾಧಿಸಲು ಅಹರ್ನಿಶಿ ಬಡಿದಾಡುತ್ತ ಈ ದೂರದೂರಿನಲ್ಲಿ ಒದ್ದಾಡುವ ಅಗತ್ಯವಾದರೂ ಏನು ? ಎಂದವನ ಜಿಜ್ಞಾಸೆ. ತನ್ನ ಸಂಸ್ಕೃತಿ, ಸಂಪ್ರದಾಯದ ಆಚಾರ ವಿಚಾರಗಳ ಮಾನದಂಡದಲ್ಲಿ ಅವಳದನ್ನು ಹೋಲಿಸಿ ನೋಡುವುದೆ ತಪ್ಪು ಎಂದೆನಿಸಿದಾಗ ತನ್ನ ಅನಿಸಿಕೆಯನ್ನು ನಿರಾಕರಿಸಿಕೊಳ್ಳಲೂ ಯತ್ನಿಸಿದ್ದಾನೆ. ಆದರೂ ಅವಳ ಆಗಮನ ಮತ್ತು ಇರುವಿಕೆಯೆ ಅವನಿಗೊಂದು ಅಚ್ಚರಿ ಮತ್ತು ಅದ್ಭುತ ನಿಗೂಢ..! 

ಅವಳು ಮಾತ್ರವಲ್ಲದೆ ಸುಮಾರು ಮಂದಿ ಆ ಪ್ರಶ್ನೆ ಕೇಳಿದ್ದಾರೆ ಅವನಿಗೆ - ದಿನವೂ ಆರು ಕಿಲೊಮೀಟರ್ ಎಂದಾಕ್ಷಣವೆ ಯಾರೊ ಹುಚ್ಚನನ್ನು ನೋಡುವಂತೆ ದೃಷ್ಟಿ ಹರಿಸುತ್ತ. ಗಂಭೀರ ಎಷ್ಟೊ ಬಾರಿ ಪ್ರಾಮಾಣಿಕವಾಗಿ ವಿವರಿಸಲು ಯತ್ನಿಸಿದ್ದಾನೆ ಅದರ ಹಿಂದಿನ ತರ್ಕವನ್ನು. ತಾನು ನಡೆದು ಸ್ಟಾಪು ಸೇರಿ ಬಸ್ಸಿಗೊ, ಟ್ರೈನಿಗೊ ಕಾದು ಮನೆ ತಲುಪಲು ಹೇಗೂ ಸುಮಾರು ನಲವತ್ತರಿಂದ ಐವತ್ತು ನಿಮಿಷ ಹಿಡಿಯುತ್ತದೆ.. ನಡೆದೆ ಹೊರಟರು ಅಬ್ಬಬ್ಬಾ ಎಂದರೆ ಇನ್ನರ್ಧ ಗಂಟೆ ಮಾತ್ರ ಹೆಚ್ಚು. ಸುಮ್ಮನೆ ಬಸ್ಸಿನಲ್ಲಿ ಕೂತು ಪಯಣಿಸುವ ಸಮಯದಲ್ಲಿಯೆ ಪುಕ್ಕಟೆ ವ್ಯಾಯಾಮ ದೊರಕಿದ್ದೂ ಅಲ್ಲದೆ, ಅದಕ್ಕಾಗಿ ಬೇರೆ ಸಮಯ ವ್ಯಯಿಸುವ ಅಗತ್ಯವಿಲ್ಲದೆ ಅನುಕೂಲ ದೊರಕುತ್ತದೆಯಾಗಿ, ಈ ಬಿಡುವಿಲ್ಲದ ಆಧುನಿಕ ದಿನಗಳಲ್ಲಿ ಸಿಕ್ಕ ಸಮಯವನ್ನು ಸದುಪಯೋಗಿಸಿಕೊಂಡು ನಡೆಯುವುದೆ ಉತ್ತಮವಲ್ಲವೆ? ಎಂದು ವಿವರಿಸುತ್ತಾನೆ. ಆದರೂ ಏಕೊ ಅವರು ತನ್ನ ಮಾತನ್ನು ನಂಬಿದರೆಂದು ಅವನಿಗೆಂದೂ ಅನಿಸಿದ್ದೆ ಇಲ್ಲ. ಮೊದಲು ಬಂದಾಗ ಸಪೂರವಾಗಿ ಬಳುಕುವ ಬಳ್ಳಿಯಂತಿದ್ದ ಕುನ್. ಜಂದ್ರ ಅಲ್ಲಿಗೆ ಬಂದ ಮೇಲೆ ಮನೆಯೂಟದ ಬದಲಿಗೆ ಹೊರಗಿನೂಟದ ಜತೆಗೆ ಪೀಡ್ಜಾ, ಬರ್ಗರು, ಕೇಕು, ಡೋನಟ್ಗಳಾದಿ ಎಲ್ಲಾ ಜಂಕ್ ಪುಡ್ಡುಗಳನ್ನೆ ತಿಂದುಕೊಂಡು ಮೂರು ಸುತ್ತು ಊದಿಕೊಂಡಿದ್ದಾಳೆ - ಮೂರು ಹೆಜ್ಜೆಯಿಕ್ಕಿದರು ಏದುಸಿರು ಬಿಡುವಷ್ಟು.ಹೀಗಾಗಿ ಅವಳಲ್ಲಿ ವಾಕಿಂಗ್ ಬಗ್ಗೆ ಮಾತನಾಡಿ ಫಲವಿಲ್ಲ ಎಂದು ನಕ್ಕು ಸುಮ್ಮನಾಗಿಬಿಡುತ್ತಾನೆ, ಏನೂ ಉತ್ತರಿಸದೆ. 

ಆದರೆ ಬರಿಯ ವ್ಯಾಯಮದೊಂದು ಉದ್ದೇಶ ಮಾತ್ರವೆ ಅದರ ಪ್ರೇರಣಾ ಶಕ್ತಿಯಲ್ಲವೆಂಬುದು ಬಹುಶಃ ಅವನಿಗೆ ಮಾತ್ರವೆ ಗೊತ್ತಿರುವ ಸತ್ಯವೆನ್ನಬೇಕು. ಮೂಲತಃ ಆ ಉದ್ದೇಶದಿಂದಲೆ ಆರಂಭವಾದ ಪ್ರಕರಣ ವಾರಕ್ಕೊಂದು ಕೇಜಿ ತೂಕವಿಳಿಸಿಕೊಳ್ಳುವ ಹುನ್ನಾರವಾಗಿಯೆ ಓಂನಾಮ ಹಾಡಿದರು, ದಿನಗಳೆದಂತೆಲ್ಲ ಅದೊಂದು ಹವ್ಯಾಸ ಪ್ರೇರಿತ ಚಪಲವಾಗಿ ಅದರ ಜತೆಜತೆಗೆ ಕೆಲವು ಆಯಾಚಿತ ಆಯಾಮದ ಹೊಸ ಬೆಳವಣಿಗೆಗಳನ್ನು ಹುಟ್ಟು ಹಾಕಿಸಿ, ಆಳವಾಗಿ ಬೆಸೆದುಕೊಂಡು ಅಂತರ್ಗತವಾಗಿಸಿಬಿಟ್ಟಿತ್ತು. ಆ ಬೆಳವಣಿಗೆಯ ಎರಡು ಅನಿವಾರ್ಯ ಮುಖಗಳೆಂದರೆ ಆ ಟಿಶ್ಯೂ ಪೇಪರು ಮಾರುವ ವೃದ್ಧೆ ಮತ್ತು ಕಾಫಿ, ಟೀ ಬೆರೆಸಿಕೊಡುವ ಕ್ಯಾಂಟಿನಿನ ಚಿರ ಯುವಕನಂತೆ ಕಾಣುವ ವೃದ್ಧ ಟೀ ಅಂಕಲ್. ಅವರಿಬ್ಬರೂ ಅಪರಿಚಿತರು ಅದು ಹೇಗೆ ಗಂಭೀರನ ದೈನಂದಿನ ಪ್ರಕ್ರಿಯೆಯಲ್ಲಿ ಏಕಾಏಕಿ ಪಾಲುದಾರರಾಗಿಬಿಟ್ಟರೆಂದು ಗಂಭೀರನಿಗೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಅವನರಿವಿಗೆ ನಿಲುಕುವ ಹೊತ್ತಿಗೆ ಅವರಿಬ್ಬರೂ ಅವನ ನಿತ್ಯದ ಚಟುವಟಿಕೆಯಲ್ಲಿ ಹಾಸುಹೊಕ್ಕಾಗಿ ಬೆಸೆದುಹೋಗಿ, ಅದು ಹೇಗಾಯ್ತೆಂಬ ಕುತೂಹಲದ ಪ್ರಶ್ನೆಯನ್ನೂ ಹುಟ್ಟಿಸದಷ್ಟು ಸಹಜವಾಗಿ ಹಿನ್ನಲೆಗೆ ಸರಿದು ಹೋಗಿದ್ದವು. ಅದು ಸಂಭವಿಸಿದ್ದು ಸಹ ಅನಿರೀಕ್ಷಿತ ಸ್ತರದಲ್ಲೆ ಆದರೂ ಯಾವುದೆ ರೀತಿಯ ನಾಟಕೀಯತೆಯಿರದೆ ಸಹಜವಾಗಿ ಘಟಿಸಿದ್ದ ಪ್ರಕರಣಗಳಾದ ಕಾರಣ ಅದೇನು ವಿಶೇಷವೆಂದು ಅನಿಸಿರಲೆ ಇಲ್ಲ. ಆದರೆ ಅವನಿಗೆ ನಿಜಕ್ಕು ಅವು ವಿಶೇಷವೆನಿಸತೊಡಗಿದ್ದು, ಅವುಗಳ ಘಟಿಸುವಿಕೆಯನ್ನು ಬಲವಂತವಾಗಿ ಆರೋಪಿಸುತ್ತ ಅದರ ಪೂರಕವಾಗುವ ಘಟನೆಗಳತ್ತ ಗಮನ ಸೆಳೆಯುವ ಪ್ರಕ್ರಿಯೆ ತನ್ನಂತಾನೆ ಆರಂಭವಾದಾಗ.

ನಿಜಕ್ಕು ಅವೇನೂ ಅಂತಹ ಮಹಾನ್ ಸಂಭವಗಳೇನೂ ಆಗಿರಲಿಲ್ಲ. ದಿನವೂ ನಡೆವ ಹಾದಿಯಲ್ಲಿ ಕಾಣುವ ಚಿತ್ರಣಗಳು ಅವನ ಬದುಕಿನಲ್ಲೊಂದೊಂದು ತುಣುಕಾಗಿ ಸೇರಿಕೊಂಡು, ಅವಿಭಾಜ್ಯ ಅಂಗಗಳಾಗಿ ಬದಲಾದುದಷ್ಟೆ ಅಚ್ಚರಿಯ ಕಾರಣ. ಸಿಂಗಪುರದ ಒಂದು ವೈಶಿಷ್ಠ್ಯತೆಯೆಂದರೆ ಸಿಟಿಯ ನಟ್ಟ ನಡುವಲ್ಲೆ ಹೋದರೂ ಅಲ್ಲೊಂದು ಜಾಗ್ ಮಾಡುವ ಅಥವಾ ವಾಕ್ ಮಾಡುವ ಸಲುವಾಗಿರುವ ಪುಟ್ಪಾತ್ ಅಥವಾ ವಾಕ್ ವೇಯ ಇರುವಿಕೆ. ಹೀಗಾಗಿ ನಡೆದುಕೊಂಡು ಬರುತ್ತಲೆ ಸುತ್ತಲ ವಾಣಿಜ್ಯಮಯ ಜಗದ ಕಣ್ಣೋಟ ಸಿಗುವುದರ ಜತೆ ಜತೆಗೆ ನಡುನಡುವೆ ಯಥೇಚ್ಛವಾಗಿರುವ ಹಸಿರು ಸಸ್ಯ ರಾಶಿಯ ಸಾಲುಗಳು, ಪಾರ್ಕುಗಳು ಕಾಣಿಸಿಕೊಳ್ಳುತ್ತಲೆ ಇರುತ್ತವೆ. ಅದರ ನಡುನಡುವಲ್ಲೆ ಆಧುನಿಕ ಬದುಕಿನ ಅವಿಭಾಜ್ಯ ಅಂಗಗಳಾದ ವಿಶಾಲ ರಸ್ತೆಗಳು, ವಾಹನಗಳು, ಶಿಸ್ತುಬದ್ಧ ಟ್ರಾಫಿಕ್ ಸಿಗ್ನಲ್ಲುಗಳು ಸಿಕ್ಕಿ ಎರಡು ಜಗಗಳ ನಡುವಿನ ಸಂತುಲಿತ ಸ್ಥಿತಿಯ ಅನಾವರಣ ಮಾಡುತ್ತಲೆ, ಅವೆರಡಕ್ಕು ನಡುವಿನ ಸೇತುವೆಯನ್ನು ಕಟ್ಟುವ ಕೆಲಸ ಮಾಡುತ್ತವೆ. ಟ್ರಾಫಿಕ್ಕಿನಲ್ಲಿ ನಿಂತು ಗುಂಡಿಯೊಂದನ್ನು ಒತ್ತಿ ಸರದಿಯ ಹಾದಿ ಕಾಯುವಾಗ, ಆ ಸಣ್ಣ ಪ್ರಕ್ರಿಯೆ ಕೂಡ ಎರಡು ಜಗಗಳ ನಡುವಿನ ಕೊಂಡಿಯ ನೂರೆಂಟು ಸಲಕರಣೆಗಳಲ್ಲೊಂದು ಎಂದು ಭಾಸವಾಗುವಷ್ಟು ಒಗ್ಗಿಹೋಗಿದೆ ಅವನ ಮನ. ಅವನ ಆ ದೈನಿಕ ಯಾನದ ಜೈವಿಕಾಜೈವಿಕ ಪರಿಸರದೊಡನೆಯ ಮೌನ ಸಂವಾದದ ಮತ್ತೊಂದು ತುಣುಕು - ಉದ್ದಕ್ಕು ಎದುರಾಗುವ ತರತರದ ಜನ ಯಾತ್ರೆ. ವಿಭಿನ್ನ ದಿರುಸಿನ, ವಿಭಿನ್ನ ವಯೋಮಾನ ಮತ್ತು ಮನೋಸ್ಥಿತಿಯ ಅಸಂಖ್ಯಾತ ಜನರು ಸರಿದು ಹೊಗುತ್ತಾರೆ ಆ ಕ್ರಮಿಸುವ ಪುಟ್ಟ ಹಾದಿಯಲ್ಲಿ. ಆದರೇಕೊ ಒಮ್ಮೆಯೂ ಅವರಲ್ಲಾರು ಪರಿಚಿತ ಮುಖಗಳೆಂದು ಅವನಿಗನಿಸಿದ್ದಿಲ್ಲ. ದಿನವು ನಡೆವಾಗ ಒಮ್ಮೆ ಸಿಕ್ಕವರು ಮತ್ತೆ ಸಿಗಬೇಕೆಂದೇನು ಕಾನೂನೇನು ಇಲ್ಲವಾದರು, ಅಪರೂಪಕ್ಕೊಮ್ಮೆಯಾದರು ಆ ಭೇಟಿಯ ತುಣುಕುಗಳು ಮರುಕಳಿಸಬಹುದಲ್ಲ ? ಗಂಭೀರನಿಗದೂ ಅನುಮಾನವೆ - ಬಹುಶಃ ಅನೇಕರು ದಿನವು ಸಿಗುತ್ತಿದ್ದರು, ಅದರತ್ತ ಜಾಗೃತ ಗಮನವಿರಿಸದ ತಾನೆ ಗುರುತಿಸಲಾಗುತ್ತಿಲ್ಲ ಎಂದು. ಹಾಗೆಂದು ಆ ಯಾತನೆಯೇನು ಅವನನ್ನು ಭಾದಿಸುವುದಿಲ್ಲ. ದಾರಿಯಲ್ಲಿ ಸಿಕ್ಕುವ ಅಂಗಡಿಗಳು, ಮತ್ತಲ್ಲಿ ಆಗೀಗೊಮ್ಮೆ ಸರಕು ಕೊಳ್ಳುವ ಪರಿಪಾಠಕ್ಕೊ ಏನೊ, ಅವೇ ಹೆಚ್ಚು ಪರಿಚಿತ ವ್ಯಕ್ತಿತ್ವಗಳಂತೆ ಕಾಣಿಸಿಕೊಳ್ಳುತ್ತವೆ - ಅದರಲ್ಲು ಬರ್ಗರ ಕಿಂಗ್,  ಮೆಕ್ಡೊನಾಲ್ಡ್, ಕೇಯಫ್ಸಿ, ಪೀಡ್ಜಾ ಹಟ್ಟಿನಂತಹ ಅಂಗಡಿಗಳು...

ಬಹುಶಃ ಅವಷ್ಟೆ ಆಗಿದ್ದರೆ ಅವೆಂದೊ ತಂತಾನೆ ಬೇಸರ ಹುಟ್ಟಿಸಿ ಆಸಕ್ತಿ ಕುಗ್ಗಿಸಿಬಿಡುತ್ತಿದ್ದವೊ ಏನೊ - ಆ ಟಿಶ್ಯೂ ಪೇಪರು ಮಾರುವ ವೃದ್ಧೆಯೊಡನೆ ವ್ಯವಹರಿಸುವ ಸಂಧರ್ಭ ಉದ್ಭವಿಸದಿದ್ದರೆ.. ಅದೊಂದು ರೀತಿಯ ವಿಚಿತ್ರ ಬೆಳವಣಿಗೆಯೆಂದೆ ಅನಿಸಿತ್ತು ಗಂಭೀರನಿಗೆ. ದಿನವು ಹಾದು ಹೋಗುವ ಹಲವಾರು ಬೃಹತ್ಕಟ್ಟಡಗಳ ನಡುವೆ ವಿಶಾಲ ಹರವಿನಲ್ಲಿದ್ದ ಬಯಲು ಪ್ರದೇಶದಿಂದಾವೃತ್ತ ಮತ್ತು ಕೆಲವೆ ಮಹಡಿಗಳ ಆ ಚರ್ಚಿನ ತಾಣ, ಆ ಕಾರಣದಿಂದಲೆ ಏನೊ ತನ್ನ ಸುತ್ತ ಒಂದು ವಿಭಿನ್ನ ವಾತಾವರಣವನು ಸೃಜಿಸಿಕೊಂಡಂತಿತ್ತು. ಇದ್ದಕ್ಕಿದ್ದಂತೆ ಕಟ್ಟಡಗಳ ಕಾಡಿನ ನಡುವಿನಿಂದ ಧುತ್ತನೆದುರಾಗುವ ದಟ್ಟ ವನರಾಜಿಯ ನಡುವೆ ತುಸು ಹಳೆಯ ವಾಸ್ತುಶಿಲ್ಪದ ಚರ್ಚಿನ ಕಟ್ಟಡ ಆ ನಡೆಯುವ ಕಾಲುಹಾದಿಯಿಂದಲೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆ ಚರ್ಚಿನ ಕಟ್ಟಡವಿದ್ದ ಎತ್ತರದ ದಿಬ್ಬ ಸುಮಾರು ನೂರು ಮೀಟರು ದೂರದಲ್ಲಿದ್ದರು ಹೊರಗಿಂದ ನಡೆಯುವಾಗ ಅದರ ಪೂರ್ಣ ವಿಹಂಗಮ ನೋಟ ಕಣ್ಣಿಗೆ ನಿಲುಕುವ ಹಾಗಿದ್ದ ಭೂ ವಿನ್ಯಾಸಕ್ಕೆ ಬಹುಶಃ ಕಾಂಪೌಂಡಲ್ಲದ ತುಸುವೆ ಎತ್ತರದ ಬೇಲಿಯೂ ಕಾರಣವಿತ್ತೇನೊ? ತನ್ನ ಬೃಹತ್ ವ್ಯಾಪ್ತಿಯ ಗಾತ್ರದಿಂದಲೆ ಗಮನ ಸೆಳೆಯುತ್ತಿದ್ದ ಆ ಚರ್ಚಿನ ಪ್ರವೇಶ ದ್ವಾರವನ್ನು ದಾಟಿಯೆ ಮುಂದುವರೆಯುತ್ತಿದ್ದ ಕಾಲು ಹಾದಿಯಲ್ಲಿ, ಕಾರುಗಳಿಗೆಂದೆ ಮಾಡಿದ್ದ ರಸ್ತೆಯನ್ನು ದಾಟಿದರೆ ಸುಮಾರು ಐವತ್ತು ಮೆಟ್ಟಿಲುಗಳಿದ್ದ ಪ್ರವೇಶ ಮಾರ್ಗ - ನಡೆದು ಬರುವವರಿಗಾಗಿ. ಅದು ನೇರ ಚರ್ಚಿನ ಬಾಗಿಲಿಗೆದುರಾಗಿಯೆ ನಿರ್ಮಿಸಿದ್ದ ಕಾರಣ ಒಳಾಂಗಣದ ಅಸ್ಪಷ್ಟ ನೋಟ ಮೆಟ್ಟಿಲುಗಳಿಂದಲೆ ಕಾಣುವಂತಿತ್ತು. ಅದನ್ನು ದಾಟಿ ಮತ್ತೆ ಹತ್ತೆಜ್ಜೆ ಮುನ್ನಡೆದರೆ ಅಲ್ಲಿಯೂ ಹೆಚ್ಚಾಗಿ ಬಳಸದ ಅದೇ ರೀತಿಯ ಮತ್ತೊಂದು ಹಳೆಯ ಮೆಟ್ಟಿಲ ಸಾಲು. ಬಹುಶಃ ಹೊಸದರ ನಿರ್ಮಾಣವಾದ ಮೇಲೆ ಅದರ ಬಳಕೆ ಹೆಚ್ಚಿರದ ಕಾರಣ ಒಂದು ರೀತಿ ಶಿಥಿಲಗೊಂಡ ಹಾಗೆ ಕಾಣುತ್ತಿತ್ತು. ಆದರು ಕಾಲ್ನಡಿಗೆಯ ಜನ ಅದನ್ನು ಮಾಮೂಲಿನ ಹಾಗೆಯೆ ಬಳಸುತ್ತಿದ್ದರು ಅಭ್ಯಾಸ ಬಲದಿಂದೆಂಬಂತೆ - ಬಹುಶಃ ಬಸ್ ಸ್ಟಾಪಿಗೆ ಪಕ್ಕದಲ್ಲಿದ್ದ ಮತ್ತೊಂದು ಕಾರಣಕ್ಕು ಇರಬಹುದೇನೊ... ಗಂಭೀರ ಮೊಟ್ಟ ಮೊದಲ ಬಾರಿಗೆ ಆ ಟಿಶ್ಯೂ ಪೇಪರು ಮಾರುವ, ಕೆಳಗಿನ ಮೆಟ್ಟಿಲುಗಳ ಮೇಲೊ ಅಥವಾ ರಸ್ತೆ ಬದಿಯಲ್ಲೊ ಕೈಲೊಂದಷ್ಟು ಪ್ಯಾಕೆಟ್ಟು ಮತ್ತು ಬದಿಯಲ್ಲೊಂದು ಚೀಲ ಹಿಡಿದು ಸದಾ ಆ ಜಾಗದಲ್ಲಿಯೆ ನಿಲ್ಲುತ್ತಿದ್ದ ವೃದ್ಧೆಯನ್ನು ನೋಡಿದ್ದು ಆ ಜಾಗದಲ್ಲಿಯೆ...

(ಮುಂದುವರೆಯುವುದು)