ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ 2/3)

ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ 2/3)

ಆಕೆ ಸುಮಾರು ಅರವತ್ತರ ಆಸುಪಾಸಿನ ವೃದ್ಧ ಮಹಿಳೆ. ಸಾಧಾರಣ ಗಾತ್ರ ಎತ್ತರದ ಬಾಬ್ ಮಾಡಿಸಿದ ಕೂದಲಿನ ಅಗಲ ಮುಖದಲ್ಲಿ ಏಶಿಯಾ ಮತ್ತು ಪಾಶ್ಚಿಮಾತ್ಯ ಚಹರೆಗಳ ಮಿಶ್ರಣ... ಅದಕ್ಕೆ ಹೊಂದುವಂತೆ ಸದಾ ತುಂಬು ತೋಳಿನದೊಂದು ಶರಟು ಮತ್ತು ಮಂಡಿಯುದ್ದದ ಸ್ಕರ್ಟ್ ಯುನಿಫಾರಂಮಿನಂತೆ ಧರಿಸಿ ನಿಲ್ಲುವ ಅವಳ ಭಂಗಿ ಒಮ್ಮೆ ನೋಡಿದರೆ ಸಾಕು, ಸದಾ ಕಣ್ಣಿನಲ್ಲೆ ನೆಲೆ ನಿಂತು ಬಿಡುವಂತಹ ವ್ಯಕ್ತಿತ್ವ. ಅದೇಕೆ ಆ ಚಿತ್ರ ಹಾಗೆ ಮನದಲ್ಲಿ ನಿಂತು ಬಿಡುವುದೆಂದು ಅನೇಕ ಬಾರಿ ಯೋಚಿಸುತ್ತಿದ್ದ ಗಂಭೀರನಿಗೆ ಒಮ್ಮೆ ಅದೇಕಿರಬಹುದೆಂದು ತಟ್ಟನೆ ಹೊಳೆದಿತ್ತು - ಅದು ಸದಾ ಅವಳ ಮುಖದಲ್ಲಿರುವ ಮಂದಹಾಸದಿಂದ. ಮುಖವೆ ಮಂದಹಾಸವಾಗುವ ಆ ಪರಿಯ ನೋಟವೆ ಅದನ್ನು ಚಿತ್ರಪಠದಂತೆ ಬೇರೂರಿಸಿಬಿಡುತ್ತಿತ್ತು. ಹೋಗಿ ಬರುವ ಪ್ರತಿಯೊಬ್ಬರಿಗು ಕಾಣುವಂತೆ ಆ ಟಿಶ್ಯೂ ಪೇಪರಿನ ಕಟ್ಟನ್ನು ಕೈಯಲ್ಲಿ ಹಿಡಿದು ನಿಂತಿದ್ದರು ಯಾರಿಗು ಕೊಳ್ಳುವಂತೆ ಒತ್ತಾಯ ಮಾಡುತ್ತಿರಲಿಲ್ಲ. ಇಷ್ಟವಿದ್ದವರು ತಾವಾಗಿಯೆ ಮನಸಿಗೆ ಬಂದಷ್ಟು ಚಿಲ್ಲರೆ ಹಣ ಕೊಟ್ಟರೆ ಅದರನುಸಾರ ಒಂದಷ್ಟು ಕಟ್ಟುಗಳನ್ನೆಣಿಸಿ ಕೊಡುವಳು. ನಿರಂತರವಿರುವ ನಗೆಯಷ್ಟೆ ಅವಳ ಬಂಡವಾಳವಿದ್ದರು, ಸಾಕಷ್ಟು ಜನ ಅವಳಿಂದ ಕೊಳ್ಳುವುದು ಕಂಡಾಗ ಬಹುಶಃ ಆ ಮಾಂತ್ರಿಕ ನಗೆಯೆ ಅದರ ಗುಟ್ಟಿರಬಹುದೆಂದೂ ಅನಿಸಿತ್ತು. ಇಲ್ಲದಿದ್ದರೆ ಕೊಡುವ ಹಣಕ್ಕೆ ಅದರ ಐದರಷ್ಟು ಅಂಗಡಿಯಲ್ಲಿ ಸಿಗುವುದೆಂದು ಗೊತ್ತಿದ್ದೂ ಯಾರು ತಾನೆ ಅಲ್ಲಿ ಕೊಳ್ಳಬಯಸುತ್ತಾರೆ ? ದಾನ ಧರ್ಮಾ ಕರ್ಮದ ಪರಿಗಣನೆಯ ಸಾತ್ವಿಕತೆ ಮತ್ತು ಕೊಳ್ಳುವುದರಿಂದ ಅವಳಿಗೆ ಸಹಾಯವಾಗುವುದೆಂಬ ಕರುಣೆ ಮತ್ತು ಅನುಕಂಪದ ಭಾವನೆಯಷ್ಟೆ ಅಲ್ಲಿನ ಪ್ರೇರಣೆ. ಬಹುಶಃ ಅಲ್ಲೆ ಹತ್ತಿರದಲ್ಲಿರಬಹುದಾದ ವೃದ್ದಾಶ್ರಮದಲೆಲ್ಲೊ ವಾಸಿಸುವ ಆಕೆ ಬದುಕಿಗೆ ಭಿಕ್ಷಾಟನೆಯಂತಹ ವೃತ್ತಿಗಿಳಿಯದೆ ಆ ಇಳಿ ವಯಸ್ಸಿನಲ್ಲು ದುಡಿದು ತಿನ್ನುವ ಉತ್ಸಾಹ ತೋರುವ ಗುಣ ವಿಶಿಷ್ಠವೆನಿಸಿದ್ದರಿಂದಲೆ ಗಂಭೀರನೂ ದಿನವು ಅವಳಿಂದ ಖರೀದಿಸತೊಡಗಿದ್ದ - ಒಂದು ಡಾಲರು ನಾಣ್ಯವನ್ನು ಅವಳ ಕೈಗಿತ್ತು. 

ಹೀಗೆ ದಿನವು ಚರ್ಚಿನ ಹತ್ತಿರ ಬಂದಾಗ ಚಿಲ್ಲರೆಗಾಗಿ ತಡಕುತ್ತ ಸಿಕ್ಕಿದಷ್ಟನ್ನು ಎತ್ತಿಕೊಂಡು ಆ ವೃದ್ಧೆಗೆ ನೀಡುತ್ತ ಅವಳಿತ್ತಷ್ಟು ಟಿಶ್ಯೂ ಪೇಪರಿನ ಪುಟಾಣಿ ಕಟ್ಟುಗಳನ್ನೆತ್ತಿಕೊಂಡು ನಡೆಯುವುದು ಅಭ್ಯಾಸವಾಗಿಹೋಯ್ತು ಗಂಭೀರನಿಗೆ. ಅದು ಬರಬರುತ್ತ ಹೇಗಾಯ್ತೆಂದರೆ ಅವನು ದೂರದಲ್ಲಿ ಬರುವುದನ್ನು ಕಂಡಕೂಡಲೆ ಅವಳ ಮುಖ ತಟ್ಟನೆ ಅರಳಿ, ಅವನಿಗೆ ಕೊಡಲೆಂದು ಟಿಶ್ಯೂ ಪೇಪರಿನ ಕಟ್ಟುಗಳನ್ನು ಜೋಡಿಸಿಡಲಾರಂಭಿಸಿಬಿಡುತ್ತಿದ್ದಳು. ಅವನು ಮಾಮೂಲಿ ಗಿರಾಕಿಯೆಂದು ಗೊತ್ತಾದ ಮೇಲಂತು ಬೇರೆಯವರಿಗೆ ಕೊಡುವುದಕ್ಕಿಂತ ಒಂದೆರಡು ಕಟ್ಟು ಹೆಚ್ಚೆ ಜೋಡಿಸಿ ಕೊಡತೊಡಗಿದಳು. ಆಕೆಯ ಲೆಕ್ಕಾಚಾರಕ್ಕಿಂತ ಹೆಚ್ಚು ನೀಡುವ ಅವಳ ಪ್ರಕ್ರಿಯೆಯೆ ಮುಜುಗರಕ್ಕೆ ಕಾರಣವಾಗಿ, ಹಾಗೆ ಹೆಚ್ಚು ನೀಡಿದ್ದನ್ನು ಮತ್ತೆ ಹಿಂತಿರುಗಿಸಿ ನೀಡಲು ಯತ್ನಿಸುವುದು, ಅದನ್ನವಳು ನಿರಾಕರಿಸಿ ಮತ್ತೆ ಒತಾಯದಿಂದ ಅವನಿಗೇ ನೀಡುವುದು ದಿನವೂ ನಡೆಯುವ ದೃಶ್ಯವಾಗಿಬಿಟ್ಟಿತ್ತು. ಆ ವಿಧಿಯೆ ಅಭ್ಯಾಸವಾಗಿ ಹೋಗಿ, ಹೊರಡುವ ಮೊದಲು ಜೋಬಲ್ಲಿ ಚಿಲ್ಲರೆಯಿಲ್ಲದೆ ಹೋದರೆ ಮುಜುಗರವಾದೀತೆಂದು ಮೊದಲೆ ಪರೀಕ್ಷಿಸಿ ನೋಡಿ ಹೊರಡುವ ಪರಿಪಾಠವೂ ಆರಂಭವಾಗಿಹೋಯಿತು ಗಂಭೀರನಿಗೆ. ಒಂದೆರಡು ಬಾರಿಯಂತು ಇನ್ನೇನು ಹೊರಡಬೇಕೆಂದು ಎದ್ದು ನಿಂತವನಿಗೆ ತಟ್ಟನೆ ಚಿಲ್ಲರೆಯಿಲ್ಲವೆಂದು ಅರಿವಾಗಿ, ಯಾಕೊ ಹೊರಡಲೂ ಮನಸಾಗದೆ ಆ ದಿನದ ವಾಕಿಂಗ್ ಪ್ರೋಗ್ರಾಮನ್ನೆ ರದ್ದು ಮಾಡಿ ಕೆಲಸ ಮುಂದುವರೆಸಿದ್ದ...! ಹಾಗೆ ಅದೇ ಫಲಿತಾಂಶ ಒಂದೆರಡು ಬಾರಿ ಮರುಕಳಿಸಿದಾಗ ಮಧ್ಯಾಹ್ನದ ಲಂಚಿನ ಹೊತ್ತಲ್ಲಿ ಊಟಕ್ಕೆಂದು ಹೋದಾಗ ಒಂದಷ್ಟು ಚಿಲ್ಲರೆ ಉಳಿಯುವ ಹಾಗೆ ಮಾಡಿಕೊಳ್ಳುವ ಪರಿಪಾಠವೂ ಶುರುವಾಯ್ತು. ಆದರೆ ಅದಕ್ಕೊಂದು ವ್ಯವಸ್ಥಿತ ರೂಪ ಬಂದಿದ್ದು ಬೆಳಗಿನ ಹೊತ್ತಿನ ಬ್ಲಾಕ್ ಕಾಫಿ ಕುಡಿಯಲಾರಂಭಿಸಿದ ದಿನದಿಂದ; ಅದಕ್ಕು ಪ್ರೇರಣೆಯಾದದ್ದು ಕ್ಯಾಂಟಿನ್ನಿನ ಮತ್ತೊಂದು ವಿಶಿಷ್ಠ ವ್ಯಕ್ತಿತ್ವದಿಂದಾಗಿ ಎನ್ನುವುದು ಮತ್ತೊಂದು ಸೋಜಿಗ...

ಸಾಧಾರಣವಾಗಿ ಬೆಳಗಿನ ತಿಂಡಿ ಮನೆಯಲ್ಲಿ ಮುಗಿಸಿಯೆ ಆಫೀಸಿಗೆ ಹೋಗುತ್ತಿದ್ದ ಗಂಭೀರನಿಗೆ ಬೆಳಗಿನ ಹೊತ್ತು ಸಾಧಾರಣವಾಗಿ ಕ್ಯಾಂಟಿನ್ನಿಗೆ ಹೋಗುವ ಅಗತ್ಯವಿರುತ್ತಿರಲಿಲ್ಲ. ಆದರೆ ಮನೆಯಲ್ಲಾರು ಇರದೆ ಊರಿಗೆ ಹೋದ ದಿನಗಳಲ್ಲಿ ಮಾತ್ರ ಕ್ಯಾಂಟಿನ್ನಿಗೊಂದು ಭೇಟಿ ಹಾಕಲೆ ಬೇಕಾಗಿ ಬರುತ್ತಿತ್ತು - ಖಾಲಿ ಹೊಟ್ಟೆಗೊಂದಿಷ್ಟು ಮೇವು ಹಾಕುವ ಸಲುವಾಗಿ. ಅಲ್ಲಿ ಹತ್ತಾರು ಬಗೆಯ ಆಯ್ಕೆಗಳಿದ್ದರು ಬರಿಯ ಟೋಸ್ಟ್ ಮಾಡಿದ ಪ್ಲೇನ್ ಬ್ರೆಡ್ ಮತ್ತು ಸಕ್ಕರೆ, ಹಾಲಿರದ ಬ್ಲಾಕ್ ಕಾಫಿಗಳೆ ಪ್ರತಿನಿತ್ಯದ ಆರ್ಡರಾಗಿರುತ್ತಿತ್ತು. ಸದಾ ಆ ಕ್ಯಾಂಟಿನ್ನಿನ ಕೌಂಟರಿನಲ್ಲಿರುತ್ತಿದ್ದ ಚಾಂಗ್ ಪೀಟರ ಸುಮಾರು ಅರವತ್ತರ ಹತ್ತಿರದ ಚುರುಕಾದ ವ್ಯಕ್ತಿ. ಅವನಿರುವ ಎತ್ತರಕ್ಕೊ, ವಯಸಿನ ಪ್ರಭಾವಕ್ಕೊ ಅವನನ್ನು ನೋಡಿದರೆ 'ಲಾರ್ಡ್ ಆಫ್ ದಿ ರಿಂಗ್ಸ್' ಸಿನಿಮಾದಲ್ಲಿದ್ದ ವಿಚಿತ್ರ ಆಕಾರದ ಪ್ರಾಣಿಯನ್ನು ಹಿಂದಿನಿಂದ ಕಂಡಂತೆ ಅನಿಸುತ್ತಿತ್ತು. ಬಹುಶಃ ಅವನು ನಡೆಯುತ್ತಿದ್ದ ನಡಿಗೆಯ ರೀತಿಯೂ ಅದಕ್ಕೆ ಕಾರಣವೇನೊ. ಅದೇನೆ ಇದ್ದರು ಅವನದೊಂದು ವಿಶಿಷ್ಠ ರೀತಿಯ ವ್ಯಕ್ತಿತ್ವ; ದಿನವು ಬರುವ ನೂರಾರು ಗಿರಾಕಿಗಳ ಮುಖವನ್ನು ನೆನಪಿಟ್ಟುಕೊಂಡು ಪ್ರತಿನಿತ್ಯ ಅವರೇನು ಆರ್ಡರು ಮಾಡುವರೆಂಬುದನ್ನು ಕರಾರುವಾಕ್ಕಾಗಿ ನೆನಪಿಸಿಕೊಂಡು ಅವರು ಬಾಗಿಲಿನಿಂದ ಕೌಂಟರಿನತ್ತ ಬರುವ ಹೊತ್ತಿಗೆ ಅರ್ಧ ಆರ್ಡರು ಸಿದ್ದ ಪಡಿಸಿಟ್ಟುಬಿಡುತ್ತಿದ್ದ..! ಸಾಲದ್ದಕ್ಕೆ ಸೊಗಸಾದ ಮಾತಿನ ಚಾತುರ್ಯವೂ ಸೇರಿಕೊಂಡು ಒಂದು ರೀತಿಯ 'ಅಜಾತಶತ್ರು ಅಂಕಲ್' ಎಂದೆ ಹೆಸರಾಗಿಹೋಗಿದ್ದ... 

ಅವನ ಚಾತುರ್ಯದ ಪರಿಚಯವಾದ ಮೇಲೆ ಊರಿಂದ ಎಲ್ಲ ಹಿಂತಿರುಗಿದ್ದರು, ಬರಿಯ ಬ್ಲಾಕ್ ಕಾಫಿಯ ನೆಪದಲ್ಲಾದರು ಹೋಗಿ ಅವನ ಕೈನ ಕಾಫಿ ಕುಡಿಯುವುದು ಅಭ್ಯಾಸವಾಗಿ ಹೋಗಿತ್ತು ಗಂಭೀರನಿಗೆ. ಹಾಗೆ ಕಾಫಿ ಖರೀದಿಸಿದಾಗೆಲ್ಲ ಮರಯದೆ ಒಂದಷ್ಟು ಚಿಲ್ಲರೆಯನ್ನು ಕೇಳಿ ಪಡೆಯುತ್ತಿದ್ದ ಟಿಶ್ಯೂ ಪೇಪರಿನ ವೃದ್ಧೆಯ ಸಲುವಾಗಿ. ಹೀಗೆ ಒಂದು ಮಧ್ಯಾಹ್ನ ಕ್ಯಾಂಟಿನ್ನಿನ ಹೊರಗೆ ಕಾಫಿ ಕುಡಿಯುತ್ತ ಕುಳಿತ ಹೊತ್ತಲ್ಲಿ ಆ 'ಪೀಟರ ಅಂಕಲ್' ತಟ್ಟನೆ ಬಂದು ಇವರು ಕೂತಿದ್ದ ಟೇಬಲ್ಲಿನಲ್ಲೆ ಬಂದು ಕುಳಿತು ಮಾತಿಗಿಳಿದಾಗ ಅವನ ವ್ಯಕ್ತಿತ್ವದ ಮತ್ತೊಂದು ಮಗ್ಗುಲಿನ ಪರಿಚಯವೂ ಆಗಿತ್ತು, ಅವನ ಹಾಸ್ಯ ಪ್ರಜ್ಞೆಯ ಸರಳ ಹಾಗು ನೇರ ಮಾತಿನ ಪರಿಚಯವಾದಾಗ. ಆಗಲೆ ಅವನ ಮತ್ತೊಂದು ವಿಭಿನ್ನ ಹವ್ಯಾಸವು ಅನಾವರಣಗೊಂಡಿದ್ದು - ಅವನ ಸಿಗರೇಟು ಹೊಸೆಯುವ ಕಲೆ. ಸಾಧಾರಣವಾಗಿ ಸಿದ್ದ ಮಾಡಿಟ್ಟ ಸಿಗರೇಟನ್ನು ಪ್ಯಾಕಿಂದೆತ್ತಿ ಸೇದುವ ಜನರನ್ನು ಎಲ್ಲೆಡೆ ಕಾಣಬಹುದಾದರು ಅವನ ಹಾಗೆ ತನ್ನ ಸಿಗರೇಟನ್ನು ತಾನೆ ಮಾಡಿಕೊಳ್ಳುವವರನ್ನು ಗಂಭೀರ ಅದುವರೆಗೆ ಕಂಡಿರಲಿಲ್ಲ. ತಂಬಾಕು ಮತ್ತು ಬಿಳಿ ಪೇಪರಿನ ಹಾಳೆಗಳಿದ್ದ ಪುಟ್ಟ ಪೆಟ್ಟಿಗೆಯೊಂದನ್ನು ಜೇಬಿನಿಂದ ಹೊರ ತೆಗೆದವನೆ, ತುಸು ತಂಬಾಕಿನ ಸೊಪ್ಪನ್ನು ಕೈಯಲ್ಲೆತ್ತಿಕೊಂಡು ಸುರುಳಿಯಾಗಿ ಸುತ್ತಿ, ಆ ಬಿಳಿಯ ಪೇಪರಿನ ನಡುವಲ್ಲಿಟ್ಟವನೆ, ಎರಡು ಹಸ್ತಗಳ ನಡುವೆ ಸುರುಳಿ ಸುತ್ತುತ್ತ ಪೇಪರಿನ ತುದಿ ತಲುಪಿದಾಗ ಅದನ್ನು ತುಟಿಯ ನಡುವೆ ನಾಲಿಗೆಯ ತುದಿಗೆ ತಗುಲಿಸಿ, ಅದರ ಮೆಲುವಾದ ಅಂಟನ್ನು ಒದ್ದೆಯಾಗಿಸಿ, ಮೆಲುವಾಗಿ ಒತ್ತಿ ಅರೆ ಸೆಕೆಂಡು ಹಿಡಿದುಬಿಟ್ಟರೆ ಅವನ ಸಿಗರೇಟು ಸೇದಲು ಸಿದ್ದ. ಆ ಸುತ್ತುವ ವೈಭವದ ಇಡೀ ಪ್ರಕ್ರಿಯೆ ಕೆಲವೆ ಸೆಕೆಂಡುಗಳಲ್ಲಿ ಮುಗಿದು ಕಿಂಗ್ ಸೈಜಿನ ಬೀಡಿಯ ಗಾತ್ರದಲ್ಲಿ ಅವನ ತುಟಿಗಳ ನಡುವೆ ರಾರಾಜಿಸಿಬಿಡುತ್ತಿತ್ತು. ಬಹುಶಃ ಆ ಹೊತ್ತು ಮಾತ್ರವೆ ಅವನ ವಿಶ್ರಾಮದ ಗಳಿಗೆಯಾಗಿರುತ್ತಿತ್ತೇನೊ ? ಆ ದಿನವು ಹಾಗೆ ಸಿಗರೇಟು ಸೇದುತ್ತಲೆ ಪ್ರತಿ ಬಾರಿ ಚಿಲ್ಲರೆ ಕೇಳುವ ಹಿನ್ನಲೆ ವಿಚಾರಿಸಿದ್ದ ಗಂಭೀರನಲ್ಲಿ. ಟಿಶ್ಯೂ ಪೇಪರಿನ ವೃದ್ಧೆಯ ಪ್ರವರ ಅರಿವಾದ ಮೇಲೆ ಮುಂದಿನ ಬಾರಿಯಿಂದ ಕೇಳುವ ಮೊದಲೆ ಚಿಲ್ಲರೆ ಎತ್ತಿಟ್ಟು ಕೊಡುವ ಪರಿಯನ್ನು ಆರಂಭಿಸಿಬಿಟ್ಟಿದ್ದ ಆ ಕಿಲಾಡಿ ತಾತ...! ಆದರೂ ಒಮ್ಮೊಮ್ಮೆ ಏನಾದರು ಏರುಪೇರಾಗಿ ಜೀಬಿನಲ್ಲಿದ್ದ ಚಿಲ್ಲರೆಯು ಯಾವುದೊ ಕಾರಣದಿಂದ ಖರ್ಚಾಗಿ, ಖಾಲಿಯಾದ ಸಂಧರ್ಭಗಳು ಇರದಿರುತ್ತಿರಲಿಲ್ಲ. ಆಗ ಒಂದು ಡಾಲರು ನಾಣ್ಯದ ಬದಲು ಎರಡು ಡಾಲರಿನ ನೋಟು ಎತ್ತಿಕೊಡುವ ರೀತಿಯೂ ಚಾಲನೆಗೆ ಬಂತು. ಹೇಗು ನಡೆಯದೆ ಹೋದ ದಿನದ ಹಣದ ಲೆಕ್ಕವು ಇರುತ್ತಿತ್ತಲ್ಲ? ಜತೆಗೆ ಒಂದು ವೇಳೆ ನಡೆಯದೆ ಬಸ್ಸಿನಲ್ಲಿ ಹೋದರೆ ಟಿಕೆಟ್ಟಿಗಾಗಿ ಖರ್ಚಾಗುತ್ತಿದ್ದ ಹಣವನ್ನೆ ಆ ವೃದ್ಧೆಗೆ ಕೊಟ್ಟಂತೆ ಆಗುತ್ತದೆ, ಮತ್ತು ಸುಲಭ ಖರ್ಚಿನ ವ್ಯಾಯಾಮವೂ ಆದಂತೆ ಆಗುತ್ತದೆ ಎನ್ನುವ ವಾದವೂ ಸೇರಿಕೊಂಡು, ಯಾವಾಗಲಾದರು ಎರಡು ಮೂರು ದಿನ ತಪ್ಪಿ ಹೋದಾಗ ಐದು ಡಾಲರನ್ನು ಕೊಡುವ ಮಟ್ಟಕ್ಕೆ ತಲುಪಿಬಿಟ್ಟಿತ್ತು, ಈ ಹವ್ಯಾಸ...

ಗಂಭೀರನಿಗೆ ಅಚ್ಚರಿಯಾಗಿದ್ದ ವಿಷಯವೂ ಅದೇ - ಅದೇಕೆ ಹೀಗೆ ಹೆಚ್ಚೆಚ್ಚೆ ಕೊಟ್ಟರು, ಹಾಗೆ ಕೊಡುವಾಗ ಯಾವುದೆ ಹಿಡಿತದ, ಹಿಂಜರಿತದ ಅಥವಾ ಯಾಕೆ ಕೊಡಬೇಕೆಂದು ಪ್ರಶ್ನಿಸುವ ಭಾವಗಳೆ ಉದಿಸದೆ, ಕೊಡಲೆಬೇಕೆನ್ನುವ - ಕೊಟ್ಟು ನಿರಾಳವಾಗುವ ಒಂದು ರೀತಿಯ ತೃಪ್ತಿ ಹಾಗೂ ಸಾರ್ಥಕ್ಯದ ಭಾವಗಳೆ ಉದ್ಭವಿಸುತ್ತಿವೆಯಲ್ಲ ಎಂಬುದು. ಆ ವೃದ್ಧೆಯ ಕೈಂಕರ್ಯಕ್ಕೆ ತನ್ನ ಕೈಲಾದ ಅಳಿಲು ಸೇವೆ ಮಾಡುತ್ತಿರುವೆನೆಂಬ ಸಂತೃಪ್ತಿಯೆ ಕಾರಣ ಎನ್ನುವುದಾದರೆ ಆ ತೃಪ್ತಿ ಬೇರೆ ಯಾರಿಗೆ ಕೊಟ್ಟರು ಬರುವಂತಿರಬೇಕಿತ್ತು... ಆದರೆ ವಾಸ್ತವದಲ್ಲಿ ಅದು ಹಾಗಿಲ್ಲ. ಬಹುಶಃ ಆ ವೃದ್ಧೆಯ ಮುಗುಳ್ನಗೆಯೊಡಗೂಡಿದ ಸೌಜನ್ಯಪೂರ್ಣ, ಸಾತ್ವಿಕ ನಡುವಳಿಕೆಯಿಂದ ಆ ಕೊಟ್ಟು ತೃಪ್ತನಾಗುವ ಪರಿಣಾಮವುಂಟಾಗುತ್ತಿದೆಯೆ ? ಕೊಡುವುದರಲ್ಲಿನ ತೃಪ್ತಿ ಎಂದರೆ ಇದೇಯೇನು? ಹೀಗೆ ಅನೇಕಾನೇಕ ವಾದಸರಣಿಗಳು ಕಣ್ಮುಂದೆ ಬಂದು ನಿಲ್ಲುತ್ತಿದ್ದರು, ಯಾಕೊ ಯಾವುದು ಸರಿಯಾದ ತರ್ಕವೆಂದೆನಿಸದ ಅಸಂಪೂರ್ಣ ಭಾವವೆ ತುಂಬಿಕೊಂಡುಬಿಡುತ್ತಿತ್ತು. ಅದೆಲ್ಲದರ ನಡುವೆಯೂ ಅವಳ ನಡುವಳಿಕೆ ಮಾತ್ರ ಯಾವುದೆ ವ್ಯತ್ಯಯವಿಲ್ಲದ ಒಂದೇ ತೆರನಾದ ಹದವಾದ ಲಹರಿಯಲ್ಲಿರುತ್ತಿದ್ದುದು ಅವಳ ಕುರಿತಾದ ಗೌರವವನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗಿತ್ತು. ಆ ಗೌರವದ ಭಾವ ಮತ್ತು ಕೊಟ್ಟು ಸಂತೃಪ್ತಿಯನ್ನು ಕಾಣುವ ಕುರಿತಾದ ಅನಿಸಿಕೆಯ ಒಳಗುಟ್ಟು ಅರಿವಾಗೆ ಮತ್ತೊಂದು ಅನಿರೀಕ್ಷಿತ ಮತ್ತು ಅನಪೇಕ್ಷಿತ ಬೆಳವಣಿಗೆಯಾಗುವವರೆಗು ಕಾಯಬೇಕಾಯ್ತು - ಅವಳಿಗೊಬ್ಬ ಪ್ರತಿಸ್ಪರ್ಧಿ ಹುಟ್ಟಿಕೊಳ್ಳುವ ರೂಪದಲ್ಲಿ...! 

ಅದೊಂದು ದಿನ ನಡೆದು ಬರುತ್ತಿದ್ದ ಗಂಭೀರನಿಗೆ ಇದ್ದಕ್ಕಿದ್ದಂತೆ ಆ ಮೆಟ್ಟಿಲಿನ ಎಡದ ಬದಿಯಲ್ಲು ನಿಂತ ಮತ್ತೊಬ್ಬಾಕೆ ಕಂಡಾಗ ಮೊದಮೊದಲು ಯಾರೊ ಚರ್ಚಿಗೆ ಬಂದವರಾರೊ ಇರಬೇಕೆಂದುಕೊಂಡರು, ಅವಳ ಕೈಲಿದ್ದ ಟಿಶ್ಯೂ ಪೇಪರು ಮತ್ತು ಬಗಲಿನ ಚೀಲ ನೋಡಿದ ಮೇಲೆ ಇವಳಾರೊ ಮತ್ತೊಂದು ಮುದುಕಿ ಎಂದರಿವಾಗಿತ್ತು. ಅವಳು ಬಂದ ಮೇಲೆ ಇಬ್ಬರು ದ್ವಾರ ಪಾಲಕರಂತೆ ಮೆಟ್ಟಿಲ ಆರಂಭದ ಎರಡು ಬದಿಗಳಲ್ಲು ಜಯ ವಿಜಯರ ಪೋಸಿನಲ್ಲಿ ನಿಂತಂತೆ ಕಂಡಿತ್ತು. ಮೊದಲ ದಿನ ಕಂಡಾಗ ಅರೆಗಳಿಗೆ ಏನು ಮಾಡಬೇಕೆಂದು ತೋಚದಿದ್ದರು, ತಕ್ಷಣವೆ ಸಾವರಿಸಿಕೊಂಡು ಆ ಹೊಸ ಮುದುಕಿಯ ಕೈಗೂ ಒಂದು ಡಾಲರಿನ ನಾಣ್ಯ ಹಾಕಿದ್ದ. ನಾಣ್ಯವನ್ನು ಪಡೆದ ಆ ಹೊಸ ಮುದುಕಿ ಕೊಡಲೊ ಬೇಡವೊ ಎನ್ನುವಂತೆ ಕೈಲಿದ್ದ ಐದು ಕಟ್ಟಿನ ಕಂತೆಯಿಂದ ಬರಿ ಒಂದು ಸಣ್ಣ ಪೊಟ್ಟಣವನ್ನು ಮಾತ್ರ ಎದುರಿಗ್ಹಿಡಿದಾದ ಅದನ್ನೆ ಸ್ವೀಕರಿಸಿದ್ದ ಅವಳ ಮುಖವನ್ನೆ ನೋಡುತ್ತ. ಎಂದಿನಂತೆ ಹಳೆಯ ವೃದ್ಧೆಯ ಮೊಗದಲ್ಲಿ ಮಾತ್ರ ಅದೇ ನಗು, ವೃತ್ತಿ ಮಾತ್ಸರ್ಯದ ಕುರುಹೂ ಕಾಣದ ಪ್ರಶಾಂತ ಭಾವ, ಎಂದಿನಂತೆ ಪೊಟ್ಟಣಗಳ ಕಂತೆಯನ್ನು ಕೊಟ್ಟು ನಗುತ್ತಲೆ 'ಥ್ಯಾಂಕ್ಸ್' ಹೇಳುವ ದನಿ. ಅವಳಿಗೆ ಹೋಲಿಸಿದರೆ  ಹೊಸ ಮುದುಕಿಯದೊಂದು ರೀತಿಯ ಭಾವನಾ ಶೂನ್ಯ ಮುಖ. ತಾನೊಲ್ಲದ ಕೆಲಸವನ್ನು ಯಾರದೊ ಬಲವಂತಕ್ಕೆ, ಅನಿವಾರ್ಯವಾಗಿ ವಿಧಿಯಿಲ್ಲದೆ ಮಾಡುತ್ತಿರುವೆನೆಂಬ ಭಾವನೆ ಸೂಸುವ ಶುಷ್ಕ ಪ್ರಕ್ಷೇಪ. ಅದೆಲ್ಲ ಭಾವವನ್ನು, ಬಲವಂತದಿಂದೆಳೆದು ತಂದ ದೈನ್ಯತೆಯ ಜತೆಗೆ ಬೆರೆಸಿ ಮುಖದಲ್ಲಿ ಬಿಂಬಿಸಿದಾಗ ಜೀವವಿಲ್ಲದ ಕಣ್ಣೋಟ, ನಿರ್ಭಾವುಕತೆಗಳೆ ವಿಜೃಂಭಿಸಿ ಯಾಕೊ ಮೊದಲು ಅವಳಿಂದ ದೂರ ಹೋದರೆ ಸಾಕೆನಿಸುವ ಒತ್ತಾಯವೆ ಪ್ರಬಲವಾಗಿಬಿಡುವ ಚರ್ಯೆ. ಆ ವೃದ್ದೆಯ ಪರಿಪಕ್ವತೆಯೆದುರು ಈ ಮುದುಕಿಯ ಉಢಾಫೆಯ ಭಾವ ತುಲನೆಯಾಗಿ ಹೋಲಿಕೆಯಾದಾಗ ಇನ್ನೂ ಅಸಹನಿಯವೆನಿಸಿ, ಒಂದು ರೀತಿಯ ತುಚ್ಛ ಭಾವನೆ ಮೂಡಿಸಿಬಿಟ್ಟಿತ್ತು... ಬಹುಶಃ ಅವರಿಬ್ಬರ ನೈಜ ವ್ಯಕ್ತಿತ್ವವಿರುವುದೆ ಹಾಗೇನೊ.. ಆದರೂ ಮನದಲ್ಲಿ ಹೀಗನಿಸುವುದರ ಕಾರಣವನ್ನು ಹುಡುಕಲೂ ಆಗದೆ ಅಲ್ಲಗಳೆಯಲೂ ಆಗದೆ ತಲೆ ಕೆರೆದುಕೊಳ್ಳುವಂತೆ ಮಾಡಿಬಿಟ್ಟಿತ್ತು ಈ ಪ್ರಸಂಗ. 

(ಮುಂದುವರೆಯುವುದು)

Sent from http://bit.ly/hsR0cS

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com