ಜರ್ಮೇನಿಯಮ್

ಜರ್ಮೇನಿಯಮ್

ಬೆಂಗಳೂರು 

ಪಾರ್ಥ ತನ್ನ ಮರ್ಸಿಡೀಸ್ ಕಾರಿನ ಬಾಗಿಲನ್ನು ತೆಗೆದು ಒಳಗೆ ಕುಳಿತ. ಹತ್ತು ನಿಮಿಷದ ಹಿಂದೆ ಪೂರ್ಣಗೊಂಡ ವ್ಯಾವಹಾರಿಕ ಒಪ್ಪಂದ ತಾನು ನಿರೀಕ್ಷಿಸಿದ್ದಕ್ಕಿಂತ ಬೇಗನೆ ಮುಗಿದಿತ್ತು. ಹೊಸ ಕಂಪನಿಯಾದ್ದರಿಂದ ಹೆಚ್ಚು ಚೌಕಾಸಿ ಮಾಡದೆ ಕೇಳಿದ ಮೊತ್ತವನ್ನು ಸದ್ದಿಲ್ಲದೆ ನೀಡಿದ್ದರು. ಪಾರ್ಥ ಕಾರನ್ನು ಸ್ಟಾರ್ಟ್ ಮಾಡಿ ಬೆಂಗಳೂರಿನ ರೇಸ್ಕೋರ್ಸ್ ರೋಡಿನ ಕಡೆ ಕಾರನ್ನು ತಿರುಗಿಸಿದನು. ರಸ್ತೆ ಗಾಡಿಗಳಿಂದ ಕಿಕ್ಕಿರಿದ ಕಾರಣ, ಟ್ರಾಫಿಕ್ ನಿಧಾನವಾಗಿ ಸಾಗುತ್ತಿತ್ತು. ಪಾರ್ಥ ತನ್ನ ಟೈಯನ್ನು ಸ್ವಲ್ಪ ಬಿಡಿಸಿಕೊಂಡು ರಸ್ತೆಯ ಪಕ್ಕದಲ್ಲಿದ್ದ ಒಂದು ದೊಡ್ಡ ಪೋಸ್ಟರ್ ಕಡೆ ಕಣ್ಣು ಹಾಯಿಸಿದ. ಪರಿಶುದ್ಧವಾದಂತಹ ಗಾಜಿನಿಂದ ಮಾಡಿದ ಚಶ್ಮವನ್ನು ಸುಂದರ ಯುವತಿಯೊಬ್ಬಳು ಧರಿಸಿರುವ ಒಂದು ಚಿತ್ರ. ಚಿತ್ರದ ಕೆಳಗಿದ್ದ ಡಿಜಿಟಲ್ ಪ್ರದರ್ಶನ, “ಹೊಸ ವರ್ಷ ೨೦೨೬ ಅನ್ನು ಜರ್ಮೇನಿಯಮ್ ಚಾಲಿತ ಸ್ಮಾರ್ಟ್ ಕನ್ನಡಕದೊಂದಿಗೆ ಸ್ವಾಗತಿಸಿ. ಮುಂದಿನ ವಸಂತಗಳ ನಿಮ್ಮ ದೃಷ್ಟಿ, ದಿವ್ಯದೃಷ್ಟಿ!”, ಎಂದು ಘೋಷಿಸುತ್ತಿತ್ತು. ಪಾರ್ಥ ವ್ಯಂಗ್ಯವಾಗಿ ನಕ್ಕು ಸುಮ್ಮನಾದ. ಬೆಂಗಳೂರಿನ ಅರ್ಧ ಜನರಿಗೆ ಕುಡಿಯುವುದಕ್ಕೆ ಸ್ವಚ್ಛ ನೀರಿಲ್ಲದಿದ್ದರೂ, ಸಾವಿರ ಗಟ್ಟಲೆ ಬೆಲೆ ಬಾಳುವ ಹೈಟೆಕ್ ಸಾಧನಗಳನ್ನು ಕೊಂಡುಕೊಳ್ಳುವುದಕ್ಕೆ ಇಲ್ಲಿಯ ಜನ ಮುಗಿಬೀಳುತ್ತಾರೆ. “ಆದರೂ, ಈ ವಿಷಯ ನನಗೇಕೆ?”, ಎಂದು ಪಾರ್ಥ ಒಮ್ಮೆ ಯೋಚಿಸಿದ. ಜನರ ಈ “ಲೇಟೆಸ್ಟ್“ ಪ್ರವೃತ್ತಿಯ ಹಾಹಾಕಾರದಿಂದಲೇ ಈ ದಿನ ತಾನು ಜೀವನ ನಡೆಸುತ್ತಿರುವುದು ಎಂದು ಪಾರ್ಥ ತನಗೆ ತಾನೇ ನೆನಪಿಸಿಕೊಂಡನು. ಮುಂದೆ ಇದ್ದ ಕಾರುಗಳೆಲ್ಲಾ ನಿಂತಲ್ಲೇ ನಿಂತಿದ್ದವು. ಪಾರ್ಥ ನಿರ್ಲಿಪ್ತವಾಗಿ ಮುಂದೆ ನೋಡುತ್ತಾ, ಕಳೆದ ಐದಾರು ವರ್ಷಗಳಲ್ಲಿ ಆದ ಬದಲಾವಣೆಗಳನ್ನು ಅವಲೋಕಿಸಿದನು. 

ಕ್ರಿಸ್ತಶಕ ೨೦೨೦. ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳು ಸಿಲಿಕನ್ ಎಂಬ ಪದಾರ್ಥದಿಂದ ತಯಾರಾದ ಚಿಪ್ ಗಳಿಂದ ಕೂಡಿವೆ. ಸೇಬು ಎಂಬ ಹೆಸರಿನ ಕಂಪನಿ ‘ಐ-ಗ್ಲಾಸ್’ ಎಂಬುವ ಸಾಧನವನ್ನು ವಿಶ್ವಕ್ಕೆ ಪ್ರದರ್ಶಿಸಿದೆ. ಈ ಸಾಧನವು ಕಂಪ್ಯೂಟರಿನ ಎಲ್ಲಾ ಕಾರ್ಯಗಳನ್ನೂ ಮಾಡುವ, ನೋಡಲು ಅತ್ಯಾಕರ್ಷಕವಾಗಿರುವ ಕನ್ನಡಕವಾಗಿದೆ. ಇದರ ಗಣಕೀಕೃತ ಶಕ್ತಿಯು ಕನ್ನಡಕದ ಫ್ರೇಮಿನಲ್ಲಿ ಅಡಗಿತ್ತು. ಕನ್ನಡಕದಂತಹ ತೆಳುವಾದ ವಸ್ತುವಿನಲ್ಲಿ ಇಡೀ ಕಂಪ್ಯೂಟರಿನ ಸಾಮರ್ಥ್ಯವನ್ನು ತುಂಬಲು ಹೇಗೆ ಸಾಧ್ಯ, ಎಂದು ಸಾಕಷ್ಟು ಕಂಪನಿಗಳು, ವಿಜ್ಞಾನಿಗಳು ತಲೆ ಕೆಡಿಸಿಕೊಂಡರು. ಚಿಕಣಿ ಗಾತ್ರದ ಸಿಲಿಕನ್ ಚಿಪ್ ಗಳು ಐ-ಗ್ಲಾಸಿನಲ್ಲಿರುವ ವೈಶಿಷ್ಟ್ಯಗಳನ್ನು ಪೂರೈಸಲು ಸಾಧ್ಯವೇ ಇಲ್ಲ, ಎಂಬಂತಹ ಕೂಗುಗಳು ಹಲವು ತಾಂತ್ರಿಕ ಮೂಲೆಗಳಿಂದ ಕೇಳಿಬಂದವು. ಹಾಗಾದರೆ ಈ ಕನ್ನಡಕದಲ್ಲಿರುವ ರಹಸ್ಯಕರ ಚಿಪ್ ಯಾವ ಪದಾರ್ಥದಿಂದ ಮಾಡಲಾಗಿದೆ? ಗುಟ್ಟು ರಟ್ಟಾಗಲು ಹೆಚ್ಚು ಸಮಯವೇನು ಬೇಕಾಗಲಿಲ್ಲ. ಐ-ಗ್ಲಾಸ್ ಮಾರುಕಟ್ಟೆಗೆ ಬಂದ ದಿನವೇ ತಿಳಿಯಿತು, ಅದರ ಮೂಲಭೂತ ಶಕ್ತಿಗೆ ಕಾರಣ ಜರ್ಮೇನಿಯಮ್.

ಈ ವಿಷಯ ಮಾಧ್ಯಮದಲ್ಲಿ ಪ್ರಕಟವಾದ ದಿನವೇ ಜರ್ಮೇನಿಯಮ್ಮಿನ ಮಾರುಕಟ್ಟೆಯ ಮೌಲ್ಯ ಐವತ್ತು ಪಟ್ಟು ಮೇಲೆ ಹೋಯಿತು. ಒಂದು ವರ್ಷದ ಒಳಗಾಗಿ ಎಂಟು ಕಂಪನಿಗಳು ಜರ್ಮೇನಿಯಮ್ ಚಿಪ್ ಉಳ್ಳ ‘ಸ್ಮಾರ್ಟ್-ಕನ್ನಡಕ’ಗಳನ್ನು ಗ್ರಾಹಕರ ಮುಂದೆ ಇಟ್ಟವು. ಕನ್ನಡಕ ಒಂದೇ ಅಲ್ಲದೆ ಲ್ಯಾಪ್ಟಾಪ್, ಮೊಬೈಲ್, ಟಿವಿ, ಮತ್ತು ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳು, ಹೊಸದಾಗಿ ಲೋಕಪ್ರಸಿದ್ಧಿಯನ್ನು ಗಳಿಸಿದ ಲೋಹಸದ್ರುಶವನ್ನು ತಮ್ಮಲ್ಲಿ ಸೇರಿಸಿಕೊಂಡು ಮುಕ್ಕಾಲು ತೂಕವನ್ನು ಕಳೆದುಕೊಂಡವು. ಹಪ್ಪಳ-ಚಕ್ಕಲಿಗಳ ಗಾತ್ರಕ್ಕೆ ಇಳಿದ ಗ್ಯಾಜೆಟ್ ಗಳನ್ನು ಜನರು ಹಿಗ್ಗಾಮುಗ್ಗಾ ಖರೀದಿಸಲು ಆರಂಭಿಸಿದರು. ಹಿತ್ತಲಿನಲ್ಲಿ ಕೊತ್ತಂಬರಿ ಸೊಪ್ಪು ಚಿಗುರುವಂತೆ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಜರ್ಮೇನಿಯಮ್ ಚಿಪ್ ಫ್ಯಾಕ್ಟರಿಗಳು ಹುಟ್ಟಿಕೊಂಡವು. 

ಈ ಹೊಸಚಿಗುರಿನ ಕೆಲವು ಫ್ಯಾಕ್ಟರಿಗಳಿಗೆ ಪಾರ್ಥ ಕೆಲಸ ಮಾಡುತ್ತಿದ್ದ ಕಂಪನಿ, ‘ಸತ್ಯಪ್ರಮೋದ’, ಜರ್ಮೇನಿಯಮನ್ನು ಮಾರುಕಟ್ಟೆ ಬೆಲೆಯ ಅರ್ಧ ಮೊತ್ತಕ್ಕೆ ಸರಬರಾಜು ಮಾಡುತ್ತಿತ್ತು. ಸತ್ಯಪ್ರಮೋದ ರೇಷ್ಮೆಯನ್ನು ಆಮದು ಮಾಡುವ ಕಂಪನಿ ಎಂದು ಕಾನೂನಾತ್ಮಕವಾಗಿ ದಾಖಲಾದರೂ, ಐದಾರು ಹೆಚ್ಚುವರಿ ಪೆಟ್ಟಿಗೆಗಳನ್ನು ಭಾರತಕ್ಕೆ ಸಾಗಿಸಿದಾಗ ಮಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು, ಕೈ ತಂಪಾದ ನಂತರ, ತಾವೂ ತಂಪಾಗುತ್ತಿದ್ದರು. 

ಹಿಂದೆ ಯಾರೋ ಜೋರಾಗಿ ಹಾರ್ನ್ ಮಾಡಿದಾಗ ಪಾರ್ಥ ಪ್ರಸ್ತುತ ಕ್ಷಣಕ್ಕೆ ವಾಪಸ್ಸು ಬಂದನು. ಕಾರಿನ ಕನ್ನಡಿಯಲ್ಲಿ ಒಮ್ಮೆ ಹಿಂದೆ ನೋಡಿದ. ಎಣ್ಣೆ ಮುಖ, ಗುಂಗುರು ಕೂದಲ ಇಬ್ಬರು ಪುರುಷರು ಬೈಕಿನಲ್ಲಿ ಕುಳಿತು ತನ್ನ ಕಡೆ ನೋಡುತ್ತಿದ್ದರು. ಮುಖ ಲಕ್ಷಣದಲ್ಲಿ ಒಬ್ಬ ದುರ್ಯೋಧನ, ಮತ್ತೊಬ್ಬ ದುಶ್ಶಾಸನ. ಗಾಡಿಗಳೆಲ್ಲಾ ನಿಧಾನಕ್ಕೆ ಮುಂದೆ ಚಲಿಸಲಾರಂಭಿಸಿದವು. ಪಾರ್ಥ ಕಾರನ್ನು ನೇರವಾಗಿ ಚಲಿಸಿ, ಸಿಗ್ನಲಿನಲ್ಲಿ ಬಲಕ್ಕೆ ತಿರುಗಿದ. ಕೌರವರೂ ಬಲಕ್ಕೆ ತಿರುಗಿದರು. ಪಾರ್ಥ ಸ್ವಲ್ಪ ಮುಂದೆ ಹೋದ ನಂತರ, ಮುಖ್ಯ ರಸ್ತೆಯೊಂದನ್ನು ಸೇರುವುದಕ್ಕಾಗಿ ಎಡಕ್ಕೆ ತಿರುಗಿದ. ಕೌರವರೂ ಎಡಕ್ಕೆ ತಿರುಗಿದರು. ಪಾರ್ಥ ಕಾರಿನ ವೇಗವನ್ನು ಸ್ವಲ್ಪ ಕಡಿಮೆ ಮಾಡಿದ. ಬೈಕನ್ನು ಚಲಿಸುತ್ತಿದ್ದ ದುಶ್ಶಾಸನ ಇಕ್ಕಟ್ಟಾದ ಟ್ರಾಫಿಕ್ ಮಧ್ಯದಲ್ಲೇ ಪಾರ್ಥನ ಕಾರನ್ನು ಓವರ್ಟೇಕ್ ಮಾಡಲು ನಿರ್ಧರಿಸಿ, ಕಾರಿನ ಬಲಗಡೆ ಬಂದು, ಇದ್ದಕ್ಕಿದ್ದಂತೆ ಬೈಕನ್ನು ಎಡಕ್ಕೆ ವಾಲಿಸಿ, ಕಾರಿನ ಬಲ ಬಾಗಿಲಿಗೆ ಗುದ್ದಿದ. ಕೌರವರು ತಡವಿಲ್ಲದೆ ಬೈಕಿನ ಜೊತೆ ಕೆಳಗೆ ಉರುಳಿದರು. ಪಾರ್ಥ ಕಾರನ್ನು ರಸ್ತೆಯ ಮಧ್ಯದಲ್ಲೇ ನಿಲ್ಲಿಸಿದ. ಹತ್ತಿರವಿದ್ದ ಜನರೆಲ್ಲಾ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು, ಒಳ್ಳೆಯ ನಾಗರಿಕರಂತೆ, ಕಾರನ್ನು ಮತ್ತು ಬಿದ್ದ ಬೈಕನ್ನು ಸುತ್ತುವರೆದು ನಿಂತರು.

ದುರ್ಯೋಧನ ಕಾಲನ್ನು ಹಿಡಿದುಕೊಂಡು ರಸ್ತೆಯಲ್ಲೇ ಕುಳಿತುಕೊಂಡನು. ದುಶ್ಶಾಸನ ಎದ್ದು ನಿಂತು, ಕುಂಟಿಕೊಂಡು ಬಂದು ಪಾರ್ಥನ ಕಾರಿನ ಕಿಟಕಿಯನ್ನು ತಟ್ಟಿದ. ಪಾರ್ಥ ತನ್ನ ಏವಿಯೇಟರ್ ಸನ್ಗ್ಲಾಸ್ ಅನ್ನು ಧರಿಸಿ ಕಾರಿನ ಹೊರಗೆ ಇಳಿದನು.

ದುಶ್ಶಾಸನ ಕೂಗಿದ - “Aye! What stupid driving you doing idiot…”.

ಪಾರ್ಥ ಗಂಭೀರ ದನಿಯಲ್ಲಿ ನುಡಿದ - “ಕನ್ನಡ ಬರತ್ತೆ”. 

ದುಶ್ಶಾಸನ ತಕ್ಷಣ, “ಏನ್ ದೊಡ್ ಕಾರಿದೆ ಅಂತ ಧಿಮಾಗ್ ತೋರಸ್ತಾಯ್ದ್ಯಾ? ನನ್ ತಮ್ಮನ್ ಕಾಲ್ ಮುರ್ದ್ಯಲಾ ಮಗ್ನೇ, ನಡಿ ಈಗ ಪೋಲಿಸ್ ಸ್ಟೇಷನ್ಗೆ, ಬೆಂಡ್ ಎತ್ತಿಸ್ತೀನಿ….”, ಎಂದು ಕರ್ಕಶ ಧ್ವನಿಯಲ್ಲಿ ಕೂಗಿದ. ಪಾರ್ಥ ಕಾಲನ್ನು ಒತ್ತಿಕೊಳ್ಳುತ್ತಿದ್ದ ಮುದ್ದು ತಮ್ಮನ ಕಡೆ ಮೌನವಾಗಿ ನೋಡಿದ. 

ದುಶ್ಶಾಸನ ಕೆಂಗಣ್ಣಿನಿಂದ, “ಏನ್ ಬಾಯ್ ಮುಚ್ಕಂಡಿದ್ಯ? ಎಲ್ಲಾ ಆಫ್ ಆಯ್ತಾ?”, ಎಂದು ಸವಾಲು ಹಾಕಿದ. 

ಪಾರ್ಥ, “ಎಷ್ಟ್ ದುಡ್ಬೇಕು?”, ಎಂದಷ್ಟೇ ಕೇಳಿದನು. 

ಇದನ್ನು ಕೇಳಿದ ದುಶ್ಶಾಸನ ತಲೆಯನ್ನು ಎಡಗಡೆ ವಾಲಿಸಿ, “ಏನ್ ನಮ್ಮನ್ನ ಕೊಂಡ್ಕೊಳಕ್ಕೆ ನೋಡ್ತಾಯ್ದ್ಯೇನೋ,.... ಲೇಯ್!”, ಎಂದು ಕಿರುಚಿ ಪಾರ್ಥನ ಸೂಟಿನ ಮುಂದಿನ ಭಾಗವನ್ನು ಹಿಡಿದು ತನ್ನ ಕಡೆಗೆ ಎಳೆದುಕೊಂಡನು. ಪಾರ್ಥ ತನ್ನ ಬೂಟಿನಿಂದ ದುಶ್ಶಾಸನನ ಕಾಲನ್ನು ತುಳಿದು, ತನ್ನ ಹಣೆಯಿಂದ ಅವನ ಮೂಗನ್ನು ಮುರಿದನು. ದುಶ್ಶಾಸನ ಹಿಂದೆ ಎಡವಿ ತಕ್ಷಣ ತನ್ನ ಮುಷ್ಠಿಯನ್ನು, ಪಾರ್ಥನ ಮುಖವನ್ನು ಗುದ್ದಲು, ಮುಂದೆ ತಂದನು. ಪಾರ್ಥ ತನ್ನೆಡೆಗೆ ಬರುತ್ತಿದ್ದ ಕೈಯನ್ನು ಪಕ್ಕಕ್ಕೆ ಬಾಗಿಸಿ, ದುಶ್ಶಾಸನನ ತಲೆಯನ್ನು ಹಿಡಿದು, ಕಾರಿನ ಬಲ ಕನ್ನಡಿಯನ್ನು ಕೈಯಲ್ಲಿದ್ದ ತಲೆಯನ್ನು ಉಪಯೋಗಿಸಿ ಮುರಿದನು. ಸುತ್ತುವರೆದ ಜನರೆಲ್ಲಾ ಎರಡು ಹೆಜ್ಜೆ ಹಿಂದೆ ಸರಿದರು. ಆಟೋ ಚಾಲಕರ ಶರ್ಟನ್ನು ಧರಿಸಿದ್ದ ಇಬ್ಬರು, ಜನರ ಗುಂಪಿನಿಂದ ಮುಂದೆ ಬಂದು, “ನಮ್ ಮಾವನ್ನ ಒಡಿತ್ಯೇನೋ... “, ಎಂದು ಕೂಗುತ್ತಾ ಪಾರ್ಥನ ಹತ್ತಿರ ಓಡಿ ಬಂದರು. ಪಾರ್ಥ ಒಬ್ಬನ ಮುಖಕ್ಕೆ ಗುದ್ದಿ, ಮತ್ತೊಬ್ಬನ ಬೆಲ್ಟಿನ ಕೆಳಗೆ ಕ್ಷಣ ಮಾತ್ರದ ಅಂತರದಲ್ಲಿ ಗುದ್ದಿದ. ನಂತರ ಮೊದಲನೆಯವನ ಬೆಲ್ಟಿನ ಕೆಳಗೆ ಗುದ್ದಿ, ಎರಡನೆಯವನ ಮುಖಕ್ಕೆ ಗುದ್ದಿದ. ನೆಲಕ್ಕುರುಳಿದ ಇಬ್ಬರು ಪುನಃ ಏಳಲಿಲ್ಲ. 

ಒಂದು ನಿಮಿಷದಲ್ಲಿ ಮೂರು ದೇಹಗಳು ಉರುಳಿದ್ದನ್ನು ಕಂಡು ಕೆಳಗೆ ಕೂತಿದ್ದ ದುರ್ಯೋಧನ ಪೆಟ್ಟಾದ ಕಾಲನ್ನು ಮರೆತು ಅರ್ಧ ಎದ್ದು ನಿಂತನು. ನಂತರ, “ಆಗಿದ್ದಾಗಲಿ”, ಎಂದು ತೀರ್ಮಾನಿಸಿ ಪಾರ್ಥನ ದಿಕ್ಕಿನಲ್ಲಿ ಗೂಳಿಯ ಹಾಗೆ ಬಗ್ಗಿಕೊಂಡು ಓಡಿಕೊಂಡು ಬಂದನು. ಇನ್ನೇನು ಅವನು ಪಾರ್ಥನ ಹೊಟ್ಟೆಯನ್ನು ಹಿಡಿಯುವ ಕ್ಷಣಕ್ಕೆ ಸರಿಯಾಗಿ, ಪಾರ್ಥ ಗೂಳಿಯ ಕತ್ತನ್ನು ಹಿಡಿದು, ಪಕ್ಕಕ್ಕೆ ಸರಿದುಕೊಂಡು, ತನ್ನ ಹಿಂದೆ ಇದ್ದ ಕಾರಿನ ಬಾಗಿಲಿಗೆ ಗೂಳಿಯ ತಲೆಯನ್ನು ಶಕ್ತಿಮೀರಿ ತಳ್ಳಿದನು. ಮರ್ಸಿಡೀಸ್ ಬಾಗಿಲಿಗೆ ಸ್ವಲ್ಪ ಪೆಟ್ಟಾಯಿತು. ಸುತ್ತಲೂ ಇದ್ದ ಜನ ಆತ್ಮಜಾಗೃತಿಯ ಅರಿವಿನಿಂದ ಚೆದುರಗೊಂಡರು. ಪಾರ್ಥ ತನ್ನ ಸೂಟಿನ ಕತ್ತುಪಟ್ಟಿಯ ಮೇಲಿದ್ದ ಕೆಂಪು ಕರೆಯನ್ನು ವರೆಸಿಕೊಳ್ಳುತ್ತಾ ಕಾರಿನ ಒಳಗೆ ಕುಳಿತು, ಇಂಜಿನ್ ಸ್ಟಾರ್ಟ್ ಮಾಡಿ, ಕಾರನ್ನು ಮುಂದೆ ಚಲಿಸಿದನು.

 

*****
 

ಮೂರು ಗಂಟೆಗಳ ನಂತರ... 

 

ಬೆಂಗಳೂರು 

 

ಪಾರ್ಥ ತಾಜ್ ವೆಸ್ಟ್ ಎಂಡ್ ಹೋಟೆಲ್ಲಿನ ತನ್ನ ರೂಮಿನಲ್ಲಿ ಮುಖ ತೊಳೆದುಕೊಳ್ಳುತ್ತಿರುವಾಗ, ರೂಮಿನ ಬಾಗಿಲನ್ನು ಯಾರೋ ತಟ್ಟಿದರು. ಪಾರ್ಥ ಮುಖ ವರೆಸಿಕೊಂಡು ಬಾಗಿಲನ್ನು ತೆರೆದ. ಮುಂದೆ ಪೋಲಿಸ್ ಇನ್ಸ್ಪೆಕ್ಟರ್ ಮತ್ತು ಇಬ್ಬರು ಕಾನ್ಸ್ಟೇಬಲ್ ಗಳು ನಿಂತಿದ್ದರು. 

“ಪಾರ್ಥಸಾರಥಿ ಸ್ವಾಮಿನಾಥನ್?”, ಇನ್ಸ್ಪೆಕ್ಟರ್ ಗುಡುಗಿದರು. 

“ನಾನೆ”. 

“ಹಿಟ್ ಅಂಡ್ ರನ್ ಮತ್ತು ಸ್ಟ್ರೀಟ್ ಫೈಟಿಂಗ್ ಕೇಸುಗಳಿಗೆ ಸಂಬಂಧ ಪಟ್ಟಂತೆ ನಿನ್ನನ್ನು ಬಂಧಿಸುತ್ತಿದ್ದೇವೆ”, ಎಂದು ಹೇಳಿದ ಇನ್ಸ್ಪೆಕ್ಟರ್ ಯಾವುದೋ ದಾಖಲೆಯನ್ನು ಎತ್ತಿ ಹಿಡಿದು, ನಂತರ ಕಾನ್ಸ್ಟೇಬಲ್ ಒಬ್ಬನಿಗೆ ಸಂಜ್ಞೆ ಮಾಡಿದರು.

ಕಾನ್ಸ್ಟೇಬಲ್ ಪಾರ್ಥನಿಗೆ ಕೈಕೋಳವನ್ನು ಹಾಕಲು ಮುಂದೆ ನಡೆದನು. ಪಾರ್ಥ ಒಂದು ನಿಮಿಷ ಎನ್ನುವಂತೆ ಸಂಜ್ಞೆ ಮಾಡಿ, ಮಂಚದ ಮೇಲಿದ್ದ ತನ್ನ ಗುಚಿ ಜಾಕೆಟ್ ಅನ್ನು ತೆಗೆದುಕೊಂಡನು. ಜಾಕೆಟನ್ನು ಧರಿಸಿದ ನಂತರ ಕೈಕೋಳವನ್ನು ಹಾಕಿಸಿಕೊಂಡು ಪೊಲೀಸರ ಜೊತೆ ಹೊರಗೆ ನಡೆದನು. 

 

****

 

ಬೆಂಗಳೂರಿನ ಪೂರ್ವ ಅಂಚಿಗೆ ಪೊಲೀಸರು ತನ್ನನ್ನು ಕರೆದುಕೊಂಡು ಹೋಗುತ್ತಿರುವುದನ್ನು ಪಾರ್ಥ ಗಮನಿಸಿದನು. ಜೀಪಿನಲ್ಲಿ ಒಬ್ಬ ಕಾನ್ಸ್ಟೇಬಲ್ ಡ್ರೈವ್ ಮಾಡುತ್ತಿದ್ದನು ಮತ್ತು ಇನ್ಸ್ಪೆಕ್ಟರ್ ಪಕ್ಕದ ಸೀಟಿನಲ್ಲಿ ಮೌನವಾಗಿ ಕುಳಿತ್ತಿದ್ದರು. ಹಿಂದಿನ ಸೀಟಿನಲ್ಲಿ ಪಾರ್ಥ ಮತ್ತು ಇನ್ನೊಬ್ಬ ಕಾನ್ಸ್ಟೇಬಲ್. ಜೀಪು ಈಗ ಮುಖ್ಯ ರಸ್ತೆಗಳನ್ನು ಬಿಟ್ಟು ನಿರ್ಜನ ಪ್ರದೇಶದ ಒಂದು ಕಚ್ಚಾ ರಸ್ತೆಯಲ್ಲಿ ಸಾಗುತ್ತಿತ್ತು. ಇನ್ಸ್ಪೆಕ್ಟರ್ ಮುಂದೆಯೇ ನೋಡಿಕೊಂಡು, “ಪಾಪು ನಾ ಮಲಗ್ಸು”, ಎಂದರು. ಪಾರ್ಥನ ಪಕ್ಕದಲ್ಲಿ ಕುಳಿತಿದ್ದ ಕಾನ್ಸ್ಟೇಬಲ್ ಒಂದು ಕಪ್ಪು ಚೀಲವನ್ನು ಎಲ್ಲಿಂದಲೋ ತೆಗೆದು, ಪಾರ್ಥನ ತಲೆಯ ಮೇಲೆ ಹಾಕಿದನು. 

 

****

 

ಪಾರ್ಥನ ತಲೆಯ ಮೇಲೆ ಹಾಕಿದ್ದ ಕಪ್ಪು ಚೀಲವನ್ನು ಯಾರೋ ಎಳೆದು ತೆಗೆದರು. ಪಾರ್ಥ ಕಣ್ಣು ಮಿಟುಕಿಸಿ ಹೊಸ ವಾತಾವರಣವನ್ನು ಒಮ್ಮೆ ಪರಿಶೀಲಿಸಿದ. ಒಂದು ಪುಟ್ಟ ರೂಮಿನ ಹಳೆಯ ಚೇರಿನ ಮೇಲೆ ಕುಳಿತ್ತಿದ್ದನು. ಐದಾರು ಅಡಿ ದೂರದಲ್ಲಿ ಒಂದು ಮೇಜು. ಮೇಜಿನ ಹಿಂದೆ ಕೇಶರಹಿತನಾದ ಒಬ್ಬ ವ್ಯಕ್ತಿ, ಚೇರಿನಲ್ಲಿ ಹಿಂದೆ ವರಗಿಕೊಂಡು ಪಾರ್ಥನನ್ನು ನೋಡುತ್ತಿದ್ದ. ಅವನ ಪಕ್ಕ ನಿಂತಿದ್ದ ದೈತ್ಯಾಕಾರದ ಪೈಲ್ವಾನ್ ಮುಂದೆ ನಡೆದು ಪಾರ್ಥನ ಕೈಕೋಳವನ್ನು ಬಿಚ್ಚಿದ. ಪಾರ್ಥ ತಲೆ ಕೂದಲನ್ನು ಸರಿ ಮಾಡಿಕೊಂಡು ಮುಂದೆ ಕುಳಿತ್ತಿದ್ದ ನಡುವಯಸ್ಸಿನ ವ್ಯಕ್ತಿಯ ಕಡೆ ನೋಡಿದ. ಆತ ಕೈಯಲ್ಲಿದ್ದ ಸಿಗರೆಟನ್ನು ಸಾವಕಾಶವಾಗಿ ಸೇದಿ, “ನನ್ನ ಹೆಸ್ರು ಗುಂಡು ರಾವ್”, ಎಂದು ಹೇಳಿ ಸಿಗರೆಟ್ ಹೊಗೆಯನ್ನು ಹೋಗಲಾಡಿಸಲು ಕೈ ಆಡಿಸಿ, “ನಂಗೆ ಸುತ್ತು ಬಳಸಿ ಮಾತಾಡೊ ಅಭ್ಯಾಸ ಇಲ್ಲ. ನಿನ್ನನ್ನ ಇವತ್ತು ಬೆಳ್ಗೆನೇ ಇಲ್ಲಿ ಕರ್ಸಣ ಅಂತ ನಮ್ಮ ಹುಡುಗ್ರನ್ನ ಕಳ್ಸಿದ್ದೆ. ನೀನ್ ನೋಡದ್ರೆ, ಅವರನ್ನ ಆಸ್ಪತ್ರೆಗೆ ಕಳಿಸ್ದಿ. ಕಡೆಗೆ ಪೋಲಿಸವರನ್ನೇ ಕಳಿಸಿ ನಿಂಗೆ ಸ್ವಾಗತ ನೀಡ್ಬೇಕಿತ್ತು... “

“ಸುತ್ತು ಬಳ್ಸಿ ಮಾತಾಡ್ತಾಯ್ದ್ಯಾ”, ಪಾರ್ಥ ಎಚ್ಚರಿಸಿದ. 

ಗುಂಡು ರಾಯ ಮುಂದೆ ಬಗ್ಗಿ, “ನೀನು ಬೆಂಗಳೂರು ನಗರದ ಚಿಪ್ ಫ್ಯಾಕ್ಟರಿಗಳಿಗೆ ಚೀನಾ ದೇಶದ ಜರ್ಮೇನಿಯಮ್ ಅನ್ನು ಮುಟ್ಟುಸ್ತಾಯ್ದ್ಯಾ. ಗುಡ್. ವೆರಿ ಗುಡ್. ಆದರೆ ಇದು ಕಾನೂನುಬದ್ಧವಾ? ನಿಮ್ಮ ಕಂಪನಿಯವರು ಅಕ್ರಮ ಗಣಿಗಾರಿಕೆಯಿಂದ ಸಿಕ್ಕ ಜರ್ಮೇನಿಯಮನ್ನು, ಕಸ್ಟಮ್ಸ್ ತೆರಿಗೆಯೂ ಕಟ್ಟದೆ, ಈ ದೇಶಕ್ಕೆ ತರ್ತಿದಾರೆ ಅಂತ ನಮ್ಮ ರಾಜಕೀಯ ನಾಯಕರಿಗೆ ಗೊತ್ತಾದ್ರೆ, ಅವ್ರು ಸುಮ್ನೆ ಇರ್ತಾರ? ಖಂಡಿತ ಇಲ್ಲ. ನಿನ್ನ ವ್ಯವಹಾರ ಮುಂದೆ ನಡೀಬೇಕು ಅಂದ್ರೆ ಐವತ್ತು ಪರ್ಸೆಂಟ್ ಈ ಕಡೆ ತಳ್ಳು, ಅಂತಾರೆ”, ಎಂದು ಹೇಳಿ, ಹೇಳಿಕೆಯ ಪರಿಣಾಮವನ್ನು ಸೂಚಿಸಲು ಒಂದು ಕ್ಷಣ ವಿರಾಮಿಸಿ, “ಆದರೆ ರಾಜಕಾರಿಣಿಗಳು ಇವತ್ತು ಬರ್ತಾರೆ, ನಾಳೆ ಪೋರ್ಟ್ ಆಗ್ತಾರೆ. ನಾನು ಮಾತ್ರ ಅಶ್ವತ್ತಾಮನ ಹಾಗೆ ಸದಾ ಇದ್ದೇ ಇರ್ತೀನಿ. ಐವತ್ತು ಪರ್ಸೆಂಟ್ ಲಾಭವನ್ನು ರಾಜಕಾರಿಣಿಗಳಿಗೆ ಕೊಟ್ಟು ಅಪಾಯ ಎದುರಿಸುವ ಬದಲು ಅದನ್ನು ಇನ್ಶುರೆನ್ಸ್ ಎನ್ನುವ ರೀತಿಯಲ್ಲಿ ನನಗೆ ನೀಡು”. 

ಪಾರ್ಥ ಎರಡು ನಿಮಿಷ ಡೀಲಿನ ಬಗ್ಗೆ ಅವಲೋಕಿಸಿದ. ನಂತರ, “ನಿನ್ನ ಒಪ್ಪಂದ ನನಗೆ ಒಪ್ಪಿಗೆ. ಮುಂದಿನ ಜರ್ಮೇನಿಯಮ್ ಪೆಟ್ಟಿಗೆಯನ್ನು ಸಾಗಿಸುವ ಮುನ್ನ ನಿನಗೆ ತಿಳಿಸ್ತೀನಿ”, ಎಂದು ಹೇಳುತ್ತಾ ಪಾರ್ಥ ಎದ್ದು ನಿಂತ. 

“ಈ ಡೀಲಿನ ಪುರಾವೆಗಾಗಿ, ನೀನು ಮುಂದೆ ಮಾರಲಿರುವ ಮೊದಲನೇ ಪೆಟ್ಟಿಗೆಯನ್ನು ನಾನು ನಾಳೆ ನೋಡ್ಬೇಕು”, ಗುಂಡು ರಾಯ ಷರತ್ತು ಹಾಕಿದ. 

“ಈಗ ಬೆಂಗಳೂರಿನಲ್ಲಿ ಯಾವುದೇ ಪೆಟ್ಟಿಗೆಗಳಿಲ್ಲ. ಹೊಸದಾಗಿ ಆಮದಾದ ಜರ್ಮೇನಿಯಮ್ ಅನ್ನು ಇಲ್ಲಿಗೆ ಸಾಗಿಸಲು ನಂಗೆ ಮೂರು ದಿವಸ ಆಗುತ್ತೆ”, ಎಂದು ಹೇಳಿ ಪಾರ್ಥ ಮುಂದೆ ನಡೆದು ಗುಂಡು ರಾಯನ ಪಕ್ಕದಲ್ಲಿ ನಿಂತಿದ್ದ ಪೈಲ್ವಾನ್ ಕೈಯಿಂದ ಕಪ್ಪು ಚೀಲವನ್ನು ಕಿತ್ತುಕೊಂಡನು. ಚೀಲವನ್ನು ತನ್ನ ತಲೆಯ ಮೇಲೆ ಹಾಕಿಕೊಂಡು, “ನಾ ಈಗ ಹೊರಡ್ಬೇಕು”, ಎಂದನು. 

ಪೈಲ್ವಾನ್ ಜೊತೆ ಹೊರಗೆ ನಡೆಯುತ್ತಿರುವಾಗ ಪಾರ್ಥನಿಗೆ ಗುಂಡು ರಾಯನ ಧ್ವನಿ ಕೇಳಿಸಿತು : “ಇನ್ನು ಮೂರು ದಿವಸಕ್ಕೆ ನನ್ನ ಹುಡುಗ್ರು ಜರ್ಮೇನಿಯಮ್ ಪೆಟ್ಟಿಗೆಗಳನ್ನು ನೋಡಲು ನಿನ್ನನ್ನ ಭೇಟಿಯಾಗ್ತಾರೆ. ಈ ಬಾರಿ ಅವರು ಬರಿ ಕೈಯಲ್ಲಿ ಇರೋದಿಲ್ಲ..... ”.  

 

*****

 

ಒಂದು ದಿನದ ನಂತರ…  

 

ಉಡುಪಿ 

 

ಬೆಳಿಗ್ಗೆ ಎಂಟು ಗಂಟೆಗೇ ಸೂರ್ಯ ಬೆವರು ಇಳಿಸುವಷ್ಟು ಊರಿನ ಉಷ್ಣಾಂಶವನ್ನು ಹೆಚ್ಚಿಸಿದ್ದ. ಜುಬ್ಬಾ ಪೈಜಾಮ ಧರಿಸಿದ್ದ ಪಾರ್ಥ ಕೃಷ್ಣ ಮಠದ ಸಂಕೀರ್ಣದ ಒಳಗಿದ್ದ ಲಕ್ಷ್ಮೀ ನರಸಿಂಹ ದೇವಾಲಯದ ಸಣ್ಣ ಪ್ರಾಕಾರವನ್ನು ಗಮನಿಸಿದ. ಏಕಾದಶಿಯಾದ್ದರಿಂದ ಆಚಾರ್ಯರು ಪ್ರಾತಃಕಾಲದಲ್ಲಿ ಪೂಜೆ ಮುಗಿಸಿ, ಗರ್ಭಗುಡಿಯ ಬಾಗಿಲಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ದೇವಾಲಯದಲ್ಲಿ ಪಾರ್ಥನನ್ನು ಬಿಟ್ಟರೆ ಮತ್ತ್ಯಾರೂ ಇರಲಿಲ್ಲ. ಪಾರ್ಥ ದೇವಾಲಯದ ಹೊರದ್ವಾರದ ಕಡೆ ನೋಡಿದ. ಸ್ವಲ್ಪ ದೂರದಲ್ಲಿ ಸಣ್ಣ ಕುಟುಂಬ ಒಂದು ಕಂಡುಬಂತು. ಕುಟುಂಬ ಸದಸ್ಯರು ಮಗ, ಸೊಸೆ, ಅತ್ತೆ, ಮಾವ, ಎಂದು ಊಹಿಸಬಹುದಾಗಿತ್ತು. ಅವರು ರಸ್ತೆಯಲ್ಲೇ ನಿಂತು ಚರ್ಚಿಸುತ್ತಿದ್ದರು. ಅತ್ತೆ ಸೊಸೆಯನ್ನುದ್ದೇಶಿಸಿ ಏನನ್ನೋ ಹೇಳಿ ಹೂಂ ಎನ್ನುವಂತೆ ತಲೆದೂಗಿದರು. ಸೊಸೆ ಮುಗುಳ್ನಗುತ್ತಾ ಹಿಂದೆ ತಿರುಗಿ ಪಾರ್ಥನಿದ್ದ ದೇವಾಲಯದ ಕಡೆ ನಡೆಯಲಾರಂಭಿಸಿದಳು. ಅತ್ತೆ, ಮಾವ, ಮತ್ತು ಗಂಡ ಹತ್ತಿರದಲ್ಲೇ ಇದ್ದ ಅಂಗಡಿಗಳ ಸಾಲಿನ ಕಡೆ ನಡೆದರು. ಸೊಸೆ ದೇವಾಲಯವನ್ನು ಪ್ರವೇಶಿಸಿ ಪಾರ್ಥನ ಎದುರಿನಲ್ಲಿದ್ದ ಸರತಿ ಕಂಬಿಯ ಹಿಂದೆ ನಿಂತಳು. ನಂತರ, ಮುಚ್ಚಿದ ಗರ್ಭಗುಡಿಯ ದೇಗುಲವನ್ನು ನೋಡುತ್ತಾ ಅದಿತಿ ನುಡಿದಳು, “ಸಾವಿತ್ರಮ್ಮ ಹೇಳದ್ರು ಬೆಂಗಳೂರಿನ ವ್ಯವಹಾರಕ್ಕೆ ಕುತ್ತಾಗಿದೆ ಅಂತ”. 

“ಬಿಸಿನೆಸ್ ಮುಂದುವರಿಸುವುದಕ್ಕೆ ಐವತ್ತು ಪರ್ಸೆಂಟ್ ಲಾಭ ಹಂಚಿಕೆಯ ಒಪ್ಪಂದವನ್ನು ಮಾಡ್ಬೇಕಿತ್ತು”, ಪಾರ್ಥ ಉತ್ತರಿಸಿದ. 

ಅದಿತಿ ತಲೆಯಾಡಿಸುತ್ತಾ, “ಸಾವಿತ್ರಮ್ಮನಿಗೆ ನೀನು ಸಂದರ್ಭವನ್ನು ನಿಭಾಯಿಸಿದ ರೀತಿ ಸರಿ ಇಲ್ಲ ಎನಿಸಿತು. ಏನೇ ಅಂದ್ರು ನೀನು ಹಾಗೆ ಧಿಡೀರ್ ಅಂತ ಗುಂಡು ರಾಯನ ಜೊತೆ ಒಪ್ಪಂದ ಮಾಡಬಾರದಿತ್ತು….”. 

“ಸಾವಿತ್ರಮ್ಮನವರು ತಮ್ಮ ಅನಿಸಿಕೆಯನ್ನು ಸ್ವೀಡನ್ ಅಲ್ಲಿ ಕೂತು ವ್ಯಕ್ತಪಡಿಸುವ ಬದಲು, ಬೆಂಗಳೂರಿನ ವಾಸ್ತವತೆಯನ್ನು ಅರ್ಥ ಮಾಡಿಕೊಂಡು ಮಾತಾಡುವುದು ಒಳ್ಳೆಯದು”, ಪಾರ್ಥ ತೀಕ್ಷ್ಣವಾಗಿ ನುಡಿದ. 

“ಜರ್ಮೇನಿಯಮ್ ಪೆಟ್ಟಿಗೆಗಳನ್ನು ಒಪ್ಪಂದದ ಪುರಾವೆಯಾಗಿ ತೋರಿಸ್ತೀನಿ ಅಂತ ಬೇರೆ ಒಪ್ಕೊಂಡಿದ್ಯ. ನಾನು ಮುಂದಿನ ತಿಂಗಳು ಇಲ್ಲಿಂದ ಬೆಂಗಳೂರಿಗೆ ಸಾಗಿಸಬೇಕಿದ್ದ ಪೆಟ್ಟಿಗೆಗಳನ್ನು, ನೀನು ಮಾಡಿದ ಪಜೀತಿಯ ಕಾರಣ, ಈಗಲೇ ಕಳಿಸಬೇಕಿದೆ. ಜೊತೆಗೆ, ನಾನು ಈಗ ರಜದ ಮಧ್ಯದಲ್ಲಿದ್ದೆ”, ಅದಿತಿ ದೇವಾಲಯದ ದ್ವಾರದ ಹೊರಗೆ ಕಾಣುತ್ತಿದ್ದ ತನ್ನ ಕುಟುಂಬವನ್ನು ನೋಡಿಕೊಂಡು ನುಡಿದಳು. 

ಪಾರ್ಥ ಅದೇ ದಿಕ್ಕಿನಲ್ಲಿ ನೋಡುತ್ತಾ - “ಇನ್ನು ಎರಡು ವಾರಕ್ಕೆ ಕೆಲ್ಸ ಬಿಡ್ತ್ಯಂತೆ?”

“ಹೌದು. ಮನೆಯವರಿಗೆ ನಾನು ಮಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡು ಓಡಾಡುತ್ತಿರುವುದಕ್ಕೆ ನನ್ನ ಮನಸು ಒಪ್ಪುವುದಿಲ್ಲ”. 

“ನಿನ್ ಮದ್ವೆ ಇನ್ವಿಟೇಶನ್ ನಂಗೆ ತಲುಪ್ಲಿಲ್ಲ”. 

“ಮದ್ವೆ ಸಮಾರಂಭವನ್ನ ಮನೆ ಮಟ್ಟಿಗೆ ಮಾಡ್ಕೊಂಡ್ವಿ”.

“ಅಂದ್ರೆ. ನಾವು ಹೊರಗಿನವ್ರು ಅಂತ….”. 

“ಸಹೋದ್ಯೋಗಿಗಳು ಬಂಧುಗಳು ಹೇಗಾಗುತ್ತಾರೆ?”, ಎಂದ ಅದಿತಿ, ಮಾವನವರು ದೇವಾಲಯದ ಕಡೆ ಬರುತ್ತಿರುವುದನ್ನು ಕಂಡು, “ನೋಡು, ನಾ ಈಗ ಹೊರಡ್ಬೇಕು. ಇದು ಪೆಟ್ಟಿಗೆಗಳು ಇರುವ ಲಾರಿಯ ಕೀ. ಇದು ಸದಾ ನಿನ್ ಹತ್ರಾನೇ ಇರ್ಲಿ”, ಎಂದು ಹೇಳಿ ಅದಿತಿ ಪಾರ್ಥನಿಗೆ ಕೀಯನ್ನು ಎಸೆದಳು. ಪಾರ್ಥ ಒಂದೇ ಕೈಯಲ್ಲಿ ಅದನ್ನು ಹಿಡಿದು, ನಂತರ ಕಣ್ಣಿಗೊತ್ತಿಕೊಂಡನು. ಅದಿತಿ ಮೆದುವಾಗಿ ನಕ್ಕಿ, ಸೀರೆಯನ್ನು ಜೋಪಾನವಾಗಿ ಹಿಡಿದು ದೇವಾಲಯದ ಹೊಸ್ತಿಲನ್ನು ದಾಟಿ ಹೊರಗೆ ನಡೆದಳು. ಪಾರ್ಥ ಕ್ರಮೇಣ ಮಸುಕಾದ ಗೆಜ್ಜೆ ಸದ್ದಿನ ನಾದವನ್ನು ಕೇಳಿಸಿಕೊಂಡು ಮೌನವಾಗಿ ನಿಂತನು. ನಂತರ ಕೈಯಲ್ಲಿದ್ದ ಕೀಗೊಂಚಲನ್ನು ಝಳ್ ಝಳ್ ಎಂದು ಎರಡು ಬಾರಿ ಅಲುಗಾಡಿಸಿ, ಗರ್ಭಗುಡಿಯ ಮುಚ್ಚಿದ ಬಾಗಿಲಿನ ಕಡೆ ನೋಡಿದನು. 

 

*****  

 

ಒಂದು ದಿನದ ನಂತರ… 

 

ಬೆಂಗಳೂರು 

 

ಪಾರ್ಥ ತನ್ನ ಮರ್ಸಿಡೀಸ್ ಅನ್ನು ಒಂದು ಸಣ್ಣ ರಸ್ತೆಯ ಬದಿಯಲ್ಲಿ ನಿಲ್ಲಿಸಿದ. ಹೊರಗೆ ಇಳಿದು ಗಾಂಧೀ ಬಜಾರಿನ  ವಾತಾವರಣವನ್ನು ಗಮನಿಸಿದ. ಗೌರಿ-ಗಣೇಶ ಹಬ್ಬದ ಹಿಂದಿನ ದಿನವಾದ್ದರಿಂದ ಸುತ್ತ ಮುತ್ತಲಿನ ಎಲ್ಲಾ ರಸ್ತೆಗಳಲ್ಲೂ ಜನಜಂಗುಳಿ. ನೋಡಿದ ಕಡೆಯೆಲ್ಲಾ ಉತ್ಸಾಹದ ಮುಖಗಳು, ಕೇಳಿದ ಕಡೆಯೆಲ್ಲಾ ಹಬ್ಬದ ಆಚರಣೆಯ ವರ್ಣನಾತ್ಮಕ ಪದಗಳು. ಹೂವು-ಹಣ್ಣುಗಳನ್ನು ಮಾರುತ್ತಿದ್ದ ಐದಾರು ತಳ್ಳುಗಾಡಿಗಳ ಒಂದು ಗುಂಪು ಪಾರ್ಥನ ಗಮನ ಸೆಳೆಯಿತು. ಅವನು ನೇರವಾಗಿ ಆ ದಿಕ್ಕಿನಲ್ಲಿ ನಡೆದ. ಪ್ರತಿ ಗಾಡಿಯ ಮುಂದೆಯೂ ಕನಿಷ್ಠ ಹತ್ತು ಗಿರಾಕಿಗಳಿದ್ದರು. ಆದರೆ ಕೊನೆಯಲ್ಲಿದ್ದ ಒಂದು ಗಾಡಿಯ ಮುಂದೆ ಒಬ್ಬಾಕೆ ಮಾತ್ರ ಹಣ್ಣುಗಳನ್ನು ಚೀಲದಲ್ಲಿ ತುಂಬಿಸಿಕೊಳ್ಳುತ್ತಿದ್ದರು. ಪಾರ್ಥ ಆ ಗಾಡಿಯ ಬಳಿ ಬಂದು, ಹಣ್ಣುಗಳನ್ನು ಮಾರುತ್ತಿದ್ದ ಅಜ್ಜಿಯನ್ನು ಉದ್ದೇಶಿಸಿ, “ಕಮಲಾ ಬಾಯ್ ಅವ್ರೇ! ಹೇಗಿದಿರಾ?”, ಎಂದು ವಿಚಾರಿಸಿದ. 

ಅಜ್ಜಿ ಹಣ್ಣನ್ನು ಕೊಂಡ ಆಕೆಗೆ ಚೇಂಜ್ ಕೊಟ್ಟು ಕಳಿಸಿದ ನಂತರ ಪಾರ್ಥನ ಕಡೆ ತಿರುಗಿ - “ಏನು ಮಹರಾಯರು? ಇತ್ತೀಚೆಗೆ ಈ ಕಡೆ ಬಂದೇ ಇಲ್ವಲಾ?”. 
 
“ನೀ ಕಳೆದ ಬಾರಿ ನೀಡಿದ ಫಲಗಳ ರಾಶಿ ಇನ್ನೂ ಖಾಲಿಯಾಗಿಲ್ಲ”. 

“ಒಳ್ಳೇದು. ಹಾಗಾದ್ರೆ ಈ ವೃದ್ಧಜೀವಿಯನ್ನು ಸುಮ್ನೆ ಮಾತಾಡ್ಸ್ಕೊಂಡು ಹೋಗಲು ಬಂದೆಯಾ?”. 

“ಹ ಹ. ಹಾಗೇನೂ ಇಲ್ಲ. ಸಾವಿತ್ರಮ್ಮ ನಿಂಗೆ ಫೋನ್ ಮಾಡಿರಬಹುದು... ”. 

“ಹೂಂ. ಬೆಂಗಳೂರಿನ ವಿತರಣೆಯ ಜಾಲ ಮುರಿದಿದೆ, ಇನ್ಮುಂದೆ ಇಲ್ಲಿ ವ್ಯವಹಾರ ಮಾಡುವುದು ಕಷ್ಟ ಅಂತ ಹೇಳದ್ರು”. 

“ನಂಗೆ ಒಂದಿಷ್ಟು ಪೂಜೆ ಸಾಮಾಗ್ರಿಗಳು ಅರ್ಜೆಂಟ್ ಆಗಿ ಬೇಕು”.  

“ನಿಂಗೆ ಧರ್ಮಾಚರಣೆಯಲ್ಲಿ ಆಸಕ್ತಿ ಇದೆ ಅಂತ ನಂಗೆ ಈವತ್ತೇ ಗೊತ್ತಾಗಿದ್ದು”. 

“ನಂಗೆ ನೂರು ಡೈನಮೈಟ್ ಶೆಲ್ಲುಗಳು, ಮೂರು ಕೆಜಿ ಅಮೋನಿಯಂ ನೈಟ್ರೇಟ್, ಎರಡು ಅಸ್ಫೋಟಕ ಸರ್ಕ್ಯೂಟ್ ಗಳು, ನೈಟ್ ವಿಷನ್ ಸಾಧನಗಳು, ಮತ್ತು ಒಂದು ಬೆರೆಟ್ಟಾ ನಾಳೆ ಒಳಗಾಗಿ ಬೇಕು”. 

“ಅಷ್ಟೊಂದು ಡೈನಮೈಟ್ ಶೆಲ್ಲುಗಳು ಇದ್ಯೋ ಇಲ್ವೋ ಗೊತ್ತಿಲ್ಲ. ಒಂದ್ ನಿಮ್ಷ ತಾಳು. ನೋಡ್ಬಿಟ್ಟು ಹೇಳ್ತೀನಿ”, ಎಂದ ಅಜ್ಜಿ ತಮ್ಮ ಕೈಚೀಲದಿಂದ ಐ-ಗ್ಲಾಸ್ ಸಾಧನವನ್ನು ತೆಗೆದು, ಕನ್ನಡಕವನ್ನು ಹಾಕಿಕೊಳ್ಳುವಂತೆ ಅದನ್ನು ಧರಿಸಿದರು. ನಂತರ, “ಡೈನಮೈಟ್”, ಎಂದಷ್ಟೇ ಉಚ್ಚರಿಸಿ, ಕನ್ನಡಕದ ಗಾಜನ್ನು ದೃಷ್ಟಿಸಿ, ಅದರ ಫ್ರೇಮ್ ಅನ್ನು ಮೂರ್ನಾಲ್ಕು ಬಾರಿ ಸವರಿದರು.

“ಹೂಂ. ಸ್ಟಾಕ್ ಇದೆ. ಹ್ಯಾಂಡ್ ಗನ್ ಬೆರೆಟ್ಟಾದಲ್ಲಿ ಯಾವ ವಿಧ ಬೇಕು?”

“ಎಂ ೯”. 

“ಎಲ್ಲಿ ಇಳ್ಕೊಂಡಿದ್ಯ? ಯಥಾ ಪ್ರಕಾರ, ತಾಜ್ ವೆಸ್ಟ್ ಎಂಡಾ?”. 

“ಹೌದು”. 

“ಸರಿ ಹಾಗಿದ್ರೆ. ನಾಳೆ ರಾತ್ರಿ ನಿನ್ನ ರೂಮಲ್ಲಿ ಸಾಮಾಗ್ರಿಗಳು ಇರ್ತವೆ”. 

“ಧನ್ಯವಾದ. ಜೊತೆಗೆ ನಿನ್ನ ಆಶೀರ್ವಾದಾನೂ ಕಳ್ಸು”. 

“ನಿಂಗ್ ಅದ್ಬೇರೆ ಕೇಡು”. 

ಪಾರ್ಥ ಮುಗುಳ್ನಗುತ್ತಾ ಕಾರಿನ ಕಡೆ ನಡೆಯಲಾರಂಭಿಸಿದನು.

 

*****

 

ಒಂದು ವಾರದ ನಂತರ…

 

ದುಬೈ 

 

ಪಾರ್ಥ ಮುಂದೆ ನಡೆದು ಹುಡುಗಿಯ ಪಕ್ಕ ನಿಂತನು. ಎದುರಿನಲ್ಲಿದ್ದ ಪರಿಶುದ್ಧ ನೀಲಿ ವರ್ಣದ ಕೆರೆ, ಅದರ ಸುತ್ತ ಸುವರ್ಣ ಸರೋವರದಂತೆ ಕಾಣುತ್ತಿದ್ದ ಮರಳಿನ ದಿಬ್ಬಗಳನ್ನು ಪಾರ್ಥ ಮೌನವಾಗಿ ಪರಿಶೀಲಿಸಿದ. ಕೆರೆಯ ಪಶ್ಚಿಮ ದಡದಲ್ಲಿ ಒಂದೇ ಒಂದು ತಾಳೆ ಮರ ಬಿಟ್ಟರೆ ಸುತ್ತಮುತ್ತಲು ಮತ್ತ್ಯಾವುದೇ ಸಸ್ಯಗಳ ಸುಳಿವಿರಲಿಲ್ಲ. ದುಬಾಯಿನ ರಣಬಿಸಿಲಿಗೆ ಸವಾಲಾಗಿ ನಿಂತ ಆ ತಾಳೆ ಮರದ ಸ್ಥೈರ್ಯವನ್ನು ಪಾರ್ಥ ಮೆಚ್ಚಿದ. ತನ್ನ ಪಕ್ಕದಲ್ಲಿದ್ದ ಹುಡುಗಿ, ಮರದ ಕಡೆ ನೋಡುತ್ತಾ ಒಂದು ದಿನಪತ್ರಿಕೆಯನ್ನು ಎತ್ತಿ ಹಿಡಿದು, “ಏನಿದು?”, ಎಂದು ಕೇಳಿದಳು. ಪಾರ್ಥ ಪತ್ರಿಕೆಯನ್ನು ತೆಗೆದುಕೊಂಡು ಮೊದಲ ಪುಟದಲ್ಲಿದ್ದ ಒಂದು ಸುದ್ದಿ ಲೇಖನವನ್ನು ಓದಿದ: 

 

ಮುತಸಂದ್ರದಲ್ಲಿ ಕಟ್ಟಡ ಸ್ಫೋಟ 

ಕನ್ನಡಪ್ರಭ ವಾರ್ತೆ, ಬೆಂಗಳೂರು 

ಮುತಸಂದ್ರದ ಬೆಳ್ಳಿಕೆರೆ ಹಳ್ಳಿಯಲ್ಲಿರುವ ಒಂದು ಕಾರ್ಯಾಲಯ ಕಟ್ಟಡದಲ್ಲಿ ಶನಿವಾರ ಬೆಳಿಗ್ಗೆ ಅಧಿಕ ತೀವ್ರತೆಯ ಸ್ಫೋಟ ಸಂಭವಿಸಿ ಕಟ್ಟಡವನ್ನು ನೆಲ ಸಮ ಮಾಡಿತು. ಎರಡು ಮಹಡಿಯ ಈ ಕಟ್ಟಡದ ಅವಶೇಷದಿಂದ ಪೊಲೀಸರು ೧೧ ಮೃತ ದೇಹಗಳನ್ನು ಗುರುತಿಸಿದ್ದಾರೆ. ದುರ್ಘಟನೆಯ ಸ್ಥಳದಲ್ಲಿ ಆರ್ಡಿಎಕ್ಸ್ ಸಿಕ್ಕಿದ್ದರಿಂದ, ಈ ಸ್ಫೋಟ ಆಕಸ್ಮಿಕವಲ್ಲದೆ ಯಾರದೋ ದುಷ್ಕ್ರುತ್ಯದಿಂದ ಸಂಭವಿಸಿರಬಹುದು ಎಂದು ತನಿಖೆಯನ್ನು ನಡೆಸುತ್ತಿರುವ ಪೋಲಿಸ್ ಅಧಿಕಾರಿ ಹಫೀಜ್ ಅಹ್ಮೆದ್ ತಿಳಿಸಿದ್ದಾರೆ. 

ಮೃತರ ಪಟ್ಟಿಯಲ್ಲಿರುವ ಕಲಬುರ್ಗಿ ಗುಂಡು ರಾವ್, ೫೨, ವಿ. ಕೆ. ಗ್ರೂಪ್ ಎಂಬ ರಿಯಲ್ ಎಸ್ಟೇಟ್ ಕಂಪನಿಯ ಮಾಲೀಕರು. ಇವರ ಮೇಲೆ ಭೂ-ಮಾಫಿಯಾ ಮತ್ತು ಸುಲಿಗೆಯ ಪ್ರಕರಣಗಳು ಐದು ವರ್ಷಗಳ ಹಿಂದೆ ದಾಖಲಾಗಿತ್ತು. ಸಾಕ್ಷ್ಯಾಧಾರದ ಕೊರತೆಯಿಂದಾಗಿ ಈ ಪ್ರಕರಣಗಳಲ್ಲಿ ಅವರು ನಿರಪರಾಧಿ ಎಂಬ ತೀರ್ಪು ನೀಡಲಾಗಿತ್ತು. ಗುಂಡು ರಾವ್ ಅವರ ಕಂಪನಿಯ ಏಳಿಗೆಯನ್ನು ತಾಳಲಾರದೆ, ಸೇಡಿಗಾಗಿ ಕಾಯುತ್ತಿದ್ದ ಅವರ ರಿಯಲ್ ಎಸ್ಟೇಟ್ ಸ್ಪರ್ಧಿಗಳು ಈ ಸ್ಫೋಟದ ಹಿಂದಿನ ಕಾರಣವಿರಬಹುದು, ಎಂದು ಕೆಲವು ವರದಿಗಳು ಊಹಿಸಿವೆ…

 

ಲೇಖನವನ್ನು ಓದಿ ಮುಗಿಸಿದ ಪಾರ್ಥ ನಿರ್ಭಾವದಿಂದ ನುಡಿದ - “ನಾನು ಉಪಯೋಗಿಸಿದ್ದು ಅಮೋನಿಯಂ ನೈಟ್ರೇಟ್. ಪೊಲೀಸರಿಗೆ ಅದಕ್ಕೂ ಆರ್ಡಿಎಕ್ಸ್ ಗೂ ವ್ಯತ್ಯಾಸಾನೂ ಗೊತ್ತಿಲ್ಲ”. 

ಅದಿತಿ ತನ್ನ ಅಸಹನೆಯನ್ನು ತಡೆಹಿಡಿಯದೆ ಗಂಭೀರ ದನಿಯಲ್ಲಿ, “ನಿಂಗೆ ಸಾವಿತ್ರಮ್ಮ ಹೇಳಿದ್ದು, ಎರಡು ತಿಂಗಳು ಗುಂಡು ರಾಯನ ಒಪ್ಪಂದವನ್ನು ಪಾಲಿಸಿ, ಅವನ ಸಂಕೀರ್ಣ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು, ನಂತರ ಅವನನ್ನು ಮುಗಿಸು, ಅಂತ ತಾನೇ?”, ಎಂದಳು. 

“ಕಜ್ಜಿ ನಾಯಿಗಳು ಎಲ್ಲೆಲ್ಲಿ ಹುಟ್ಟುತ್ತವೋ ಅಲ್ಲಲ್ಲೇ ಮಟ್ಟ ಹಾಕುವುದು ಉತ್ತಮ”. 

ಅದಿತಿ ಹತಾಶೆಯಿಂದ ತಲೆಯಾಡಿಸಿ - “ಅಷ್ಟಕ್ಕೂ, ನಿಂಗೆ ಗುಂಡು ರಾಯನ ಗುಹೆಯ ಸ್ಥಳ ಹೇಗೆ ತಿಳಿಯಿತು? ನಿನ್ನನ್ನು ಅಲ್ಲಿಗೆ ಕರ್ಕೊಂಡು ಹೋದಾಗ ಕಣ್ಣಿಗೆ ಬಟ್ಟೆ ಕಟ್ಟಿದ್ರು ಆಲ್ವಾ?“. 

“ಜೀಪಿನಲ್ಲಿ ನನ್ನನ್ನು ಗುಂಡು ರಾಯನ ಗುಹೆಗೆ ಕರ್ಕೊಂಡು ಹೋಗುತ್ತಿದ್ದಾಗ, ಸಂಚಿರಿಸುತ್ತಿದ್ದ ದಾರಿಯನ್ನು ನನ್ನ ಫೋನಿನ ಜಿಪಿಎಸ್ ದಾಖಲಿಸುತ್ತಿತ್ತು. ಉಡುಪಿಯಿಂದ ಹಿಂತಿರುಗಿದ ರಾತ್ರಿ, ನಾನು ದಾಖಲಾದ ದಾರಿಯಲ್ಲಿ ಚಲಿಸಿ, ಗುಂಡು ರಾಯನ ಕಂಪನಿ ಕಚೇರಿಯ ಮುಂದೆ ಬಂದು ನಿಂತೆ. ಕಚೇರಿ ಕಟ್ಟಡದ ನಾನಾ ಕಂಬಗಳಲ್ಲಿ ಸ್ಫೋಟಕಗಳನ್ನು ಸಿಗಿಸಿದೆ. ಮಾರನೆ ದಿನ ಬೆಳಿಗ್ಗೆ, ಹತ್ತಿರವಿದ್ದ ಒಂದು ಕಾಕನ ಅಂಗಡಿಯಿಂದ ಆ ಕಚೇರಿಯನ್ನು ಗಮನಿಸುತ್ತಾ ಕುಳಿತೆ. ಗುಂಡು ರಾಯ ಮತ್ತು ಅವನ ಬಾಡಿಗಾರ್ಡ್ ಗಳು ತಮ್ಮ ಸ್ಕಾರ್ಪಿಯೊ ಕಾರುಗಳಿಂದ ಇಳಿದು, ಕಚೇರಿಯನ್ನು ಪ್ರವೇಶಿಸಿದ ಐದು ನಿಮಿಷಕ್ಕೆ ಆಸ್ಫೋಟಕವನ್ನು ಒತ್ತಿದೆ“.

ಅದಿತಿ ತನ್ನ ಮುಂಗುರುಳನ್ನು ಪಕ್ಕಕ್ಕೆ ಸರಿಸಿ ಎರಡು ಕ್ಷಣ ಮೌನವಾಗಿದ್ದಳು. ನಂತರ, “ನಿನ್ನ ಅವಸರದ ಬುದ್ಧಿಗೆ ಪಾಠ ಕಲಿಸಲು ಸಾವಿತ್ರಮ್ಮ ನಿನ್ನನ್ನು ಕೊಲ್ಕತ್ತಾ ವ್ಯವಹಾರ ನೋಡಿಕೊಳ್ಳಲು ವರ್ಗಾವಣೆ ಮಾಡಿದ್ದಾರೆ”. 

“ಸಂತೋಷ. ಬೆಂಗಾಲಿನ ಸಿಹಿ ತಿಂಡಿಗಳನ್ನು ಸವಿದು ಹಲವು ವರ್ಷಗಳಾಗಿವೆ”. 

“ಸದ್ಯಕ್ಕೆ ಸ್ಥಗಿತವಾದ ಬೆಂಗಳೂರಿನ ಕಂಪನಿ ಕಾರ್ಯಾಚರಣೆಯನ್ನು ನೋಡಿಕೊಳ್ಳಲು ವಿಭೀಷಣನನ್ನು ಅಲ್ಲಿಗೆ ಕರಿಸಲಾಗಿದೆ”. 

“ತುಂಬಾ ಸಂತೋಷ. ಅವನಿಗೆ ಒಂದು ಬುಕೆ ಕಳಿಸ್ತೀನಿ”. 

“ಏನಾದ್ರು ಮಾಡು. ಈವತ್ತು ಈ ಕಂಪನಿಯಲ್ಲಿ ನನ್ನ ಕೊನೆಯ ದಿನ. ಸಾವಿತ್ರಮ್ಮ ಇದಿಷ್ಟನ್ನು, “ಆ ಭೂಪತಿಗೆ ತಿಳ್ಸು”, ಅಂದ್ರು, ಅದನ್ನ ಮಾಡಿದ್ದೀನಿ”, ಎಂದು ಅದಿತಿ ನುಡಿದು, ಮುಂದಿದ್ದ ಮರಳು ದಿಬ್ಬಗಳನ್ನು ನೋಡುತ್ತಾ ನಿಂತಳು. ಕೆಲವು ಕ್ಷಣಗಳ ಮೌನ. ನಂತರ, ಅದಿತಿ ಮುಂದುವರೆದಳು - “ಆದ್ರೂ ಒಂದು ಪ್ರಶ್ನೆ ಉಳ್ದೇ ಇದೆ. ನೀನು ಗುಂಡು ರಾಯನ ಒಪ್ಪಂದವನ್ನು ಧಿಕ್ಕರಿಸಿ ಅವನನ್ನು ಕೊಲ್ಲುವ ಹೊಂಚ್ ಹಾಕಿದ್ದರೂ, ಒಪ್ಪಂದದ ಸಾಕ್ಷಿಗಾಗಿ ಬೇಕಾಗಿದ್ದ ಜರ್ಮೇನಿಯಮ್ ಪೆಟ್ಟಿಗೆಗಳನ್ನು ತೊಗೊಂಡು ಹೋಗಲು ಉಡುಪಿಗೆ ಏಕೆ ಬಂದೆ?”. 

ಪಾರ್ಥ ಅದಿತಿಯ ಕಡೆ ತಿರುಗಿ ಅರ್ಧ ನಿಮಿಷ ಅವಳನ್ನೇ ನೋಡಿದನು. ನಂತರ ಸನ್ಗ್ಲಾಸ್ ಧರಿಸಿ, ಹಿಂದೆ ತಿರುಗಿ ನಡೆಯಲಾರಂಭಿಸಿದನು. ಕೆರೆಯಿಂದ ಸ್ವಲ್ಪ ದೂರದಲ್ಲಿದ್ದ ಸಿಮೆಂಟ್ ರಸ್ತೆಯ ಬಳಿ ಬಂದ ಪಾರ್ಥ, ಅದಿತಿಯ ಎಸ್‌ಯುವಿ ವಾಹನದ ಪಕ್ಕ ನಿಲ್ಲಿಸಲಾಗಿದ್ದ ಡುಕಾಟಿ ಮೋಟರ್ಸೈಕಲನ್ನು ಏರಿದ. ಬೈಕನ್ನು ಸ್ಟಾರ್ಟ್ ಮಾಡಿ, ಗೇರನ್ನು ಬದಲಿಸಿ, ಮುಂದೆ ಚಲಿಸಿದ. 

ಮರಳುಗಾಡಿನ ಮಧ್ಯದಲ್ಲಿದ್ದ ಖಾಲಿ ರಸ್ತೆಯಲ್ಲಿ ವೇಗವಾಗಿ ದೂರಕ್ಕೆ ತೆರಳುತ್ತಿದ್ದ ಬೈಕನ್ನು ಅದಿತಿ ನೋಡುತ್ತಾ ನಿಂತಳು.

 

 

 

 

 

Comments

Submitted by kavinagaraj Thu, 06/11/2015 - 15:43

ಸಾಮಾನ್ಯರಿಗೂ ಅಸಾಮಾನ್ಯರ ವ್ಯವಹಾರಗಳ ಪರಿಚಯ ಮಾಡಿಕೊಡುವ ಕಥೆ ಕುತೂಹಲಕರವಾಗಿದೆ.