ದೇವರೊಡನೆ ಸಂದರ್ಶನ - 7

ದೇವರೊಡನೆ ಸಂದರ್ಶನ - 7

ಗಣೇಶ: ಶಕ್ತಿಗಿಂತಲೂ ದೊಡ್ಡದು ಯುಕ್ತಿ! ಅಲ್ಲವಾ ದೇವರೇ?

ದೇವರು: ಶಕ್ತಿಗಿಂತಲೂ ಮಿಗಿಲಾದುದು ಶಕ್ತಿ ಬರಲು ಕಾರಣವಾಗುವ ಅನ್ನ! ಅನ್ನ ಅಂದಾಕ್ಷಣ ಕೇವಲ ನೀವು ಅಕ್ಕಿಯನ್ನು ಬೇಯಿಸಿ ಮಾಡಿದ ಅನ್ನ ಎಂದು ಭಾವಿಸುವುದು ಬೇಡ. ಅನ್ನ ಅಂದರೆ ಆಹಾರ ಎಂತಲೇ ಅರ್ಥ. ಸೇವಿಸಲು ಉಪಯೋಗಿಸುವ ಯಾವುದೇ ಪದಾರ್ಥವಾಗಲಿ ಅದು ಆಹಾರವೆನಿಸುತ್ತದೆ, ಅದು ಅಕ್ಕಿಯಿರಬಹುದು, ಗೋಧಿಯಿರಬಹುದು ಅಥವ ಮತ್ತೇನೋ ಆಗಿರಬಹುದು. ಅದು ಯಾವುದೋ ಮಾನಸಿಕ ವಸ್ತುವೂ ಆಗಿರಬಹುದು. ಯಾವುದೋ ಒಂದರ ಜೀವಿತಕ್ಕೆ ಪೂರಕವಾಗುವ ಯಾವುದೇ ಸಂಗತಿ ಅನ್ನವೆನಿಸುವುದು. ಹೀಗೆ ಅನ್ನ ಎಂಬುದರಲ್ಲಿ ವಿಷಯಾತ್ಮಕ ಮತ್ತು ಗುಣಾತ್ಮಕವಾಗಿ ಸಮ್ಮಿಲಿತವಾದ ಯಾವುದೇ ರೀತಿಯ ಶಕ್ತಿಯ ಉತ್ಪತ್ತಿಗೆ ಕಾರಣವಾಗುವ ಅಂಶ ಅಡಗಿದೆ. 

ಗಣೇಶ: ಇಷ್ಟೆಲ್ಲಾ ವಿವರಣೆ ಕೊಡುವ ಬದಲು ಯಾವುದು ಶಕ್ತಿಯನ್ನು ಕೊಡುತ್ತದೋ ಅದು ಆಹಾರ ಎಂದಷ್ಟೇ ಹೇಳಬಹುದಲ್ವಾ? 

ದೇವರು: ಹಾಗೆ ಅಂದುಕೊಳ್ಳಬಹುದು. ಜೀವಿಗಳ ಜೀವಿತಕ್ಕೆ ಪೂರಕವಾಗುವ ಯಾವುದೇ ಸಂಗತಿ ಅಥವ ವಸ್ತುವೂ ಆಹಾರವೇ! ವಿಶಾಲವಾಗಿ ಹೇಳಬೇಕೆಂದರೆ ನಿಮ್ಮ ಜೀವನಕ್ಕೆ ಅವಶ್ಯಕವಾಗಿರುವ, ಪೂರಕವಾಗಿರುವ ನೆಲ, ಜಲ, ವಾಯು, ಅಗ್ನಿ, ಆಕಾಶಗಳೂ ಆಹಾರವೇ ಆಗಿವೆ.

ಗಣೇಶ: ಇದೇನೋ ಅತಿ ಆಯಿತು ಅನ್ನಿಸುತ್ತದೆ. ಕಂಡ ಕಂಡದ್ದೆಲ್ಲಾ ಆಹಾರ ಅಂದುಬಿಟ್ಟರೆ ನಾವು ತಿನ್ನುವ ಆಹಾರಕ್ಕೆ ಅರ್ಥ ಎಲ್ಲಿ ಉಳಿಯುತ್ತದೆ? 

ದೇವರು: ಇಷ್ಟೇ ಅಲ್ಲ. ಇನ್ನೂ ಇದೆ. ಆಹಾರ ಅಂದರೆ ಕೇವಲ ತಿನ್ನುವುದು ಮಾತ್ರ ಅಲ್ಲ ಎಂಬುದನ್ನು ಮೊದಲು ನೆನಪಿನಲ್ಲಿಡಬೇಕು. ನೋಡುವುದು, ಕೇಳುವುದು, ಸ್ಪರ್ಷಿಸುವುದು, ಆಘ್ರಾಣಿಸುವುದು ಸಹ ಆಹಾರದ ವ್ಯಾಪ್ತಿಯಲ್ಲಿ ಬರುತ್ತದೆ. ಮೊದಲೇ ಹೇಳಿದಂತೆ ಬದುಕುವುದಕ್ಕೆ, ಅಭಿವೃದ್ಧಿ ಹೊಂದುವುದಕ್ಕೆ ಪೂರಕವಾಗುವ ಎಲ್ಲವೂ ಆಹಾರವೇ ಆಗಿದೆ. 

ಗಣೇಶ: ನನಗೆ ಈ ಆಹಾರ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಸ್ವಲ್ಪ ಅರ್ಥ ಆಗುವಂತೆ ಹೇಳಿದರೆ ಕೇಳಬಹುದು.

ದೇವರು: ಬೆಳವಣಿಗೆಗೆ ಅವಶ್ಯಕವಾದ, ಶಕ್ತಿಯನ್ನು ಕೊಡುವ ಎಲ್ಲವೂ ಆಹಾರ ಅನ್ನುವುದು ಸೂತ್ರ. ನೋಡು, ಗಾಳಿ ಇಲ್ಲದೆ ನಿನಗೆ ಉಸಿರಾಡಲು ಆಗುತ್ತದೆಯೇ? ಹಾಗೆಯೇ ಶ್ವಾಸಕೋಶಗಳಿಲ್ಲದಿದ್ದರೂ ನಿನಗೆ ಉಸಿರಾಡಲು ಆಗುವುದಿಲ್ಲ. ಸಾಮಾಜಿಕ ಜೀವನದಲ್ಲೂ ಸಹ ಈ ನಿಯಮ ಅನ್ವಯವಾಗುತ್ತದೆ. ನಾವು ಪರಸ್ಪರ ಹೊಂದಾಣಿಕೆ, ಸಹಕಾರ ಮತ್ತು ಅರ್ಥ ಮಾಡಿಕೊಳ್ಳುವಿಕೆಯಿಂದ ಬಾಳಬೇಕಾಗುತ್ತದೆ. ಹೀಗೆ ಬಾಳುವುದಕ್ಕೆ ಸಹಾಯ ಮಾಡುವುದು, ಸಹಾಯವಾಗುವುದೂ ಅನ್ನವೆಂದು ಕರೆಸಿಕೊಳ್ಳುತ್ತದೆ. ಪ್ರಕೃತಿಯ ಶಕ್ತಿಗಳು ಮತ್ತು ವ್ಯಕ್ತಿಗತ ಶಕ್ತಿಗಳ ಪರಸ್ಪರ ಸಂಬಂಧಗಳು ಪ್ರತಿಯೊಂದು ಕ್ರಿಯೆಗೆ ಕಾರಣವಾಗುತ್ತದೆ. ಇದೇ ಶಕ್ತಿಯ ಮೂಲ. ನಾವು ಪ್ರಕೃತಿಯೊಂದಿಗೆ ಹೊಂದಿಕೊಂಡಿದ್ದಾಗ ಮತ್ತು ಪ್ರಕೃತಿಯ ಶಕ್ತಿಗಳು ನಮ್ಮೊಡನೆ ಹೊಂದಿಕೊಂಡಾಗ ನಾವು ಶಕ್ತಿಶಾಲಿಗಳಾಗುತ್ತೇವೆ. 

ಗಣೇಶ: ಒಂದು ತರಲೆ ಪ್ರಶ್ನೆ. ಜಾಸ್ತಿ ತಿಂದವರಿಗೆ ಜಾಸ್ತಿ ಶಕ್ತಿ ಬರುತ್ತೆ ಅಲ್ವಾ?

ದೇವರು: ಇದು ತರಲೆ ಪ್ರಶ್ನೆ ಆದರೂ ಇದರಲ್ಲಿ ಸೂಕ್ಷ್ಮವೂ ಇದೆ. ಜಾಸ್ತಿ ಅನ್ನುವುದರಲ್ಲಿ ಅಗತ್ಯಕ್ಕಿಂತ ಹೆಚ್ಚು ಎಂಬ ಅರ್ಥ ಬರುತ್ತದೆ ಅಲ್ಲವೇ? ಇಲ್ಲಿ ಶಕ್ತಿ ಅಂದರೆ ಜೀವಿಯ ಧಾರ್ಢ್ಯತೆ, ಸ್ವಭಾವ, ಗುಣ, ಇತ್ಯಾದಿ ಅವನ ವ್ಯಕ್ತಿತ್ವವನ್ನು ಹೊರಸೂಸುವ ಅಂಶಗಳು ಅನ್ನಬಹುದು. ಕೆಲವರನ್ನು ಕೇವಲ ನೋಡಿದೊಡನೆಯೇ ಅವರ ಬಗ್ಗೆ ಗೌರವ ಭಾವನೆ ಬರಬಹುದು, ಕೆಲವರನ್ನು ಕಂಡೊಡನೆಯೇ ಅವರ ಬಗ್ಗೆ ತಿರಸ್ಕಾರ ಮೂಡಬಹುದು. ಇದು ಅವರುಗಳು ಗಳಿಸಿಕೊಂಡ ಶಕ್ತಿ ಅನ್ನಬಹುದು. ಏನು ಸೇವಿಸುತ್ತಾರೆ, ಎಷ್ಟು ಸೇವಿಸುತ್ತಾರ, ಹೇಗೆ ಸೇವಿಸುತ್ತಾರ ಎಂಬವು ಜೀವಿಗಳ ಗುಣ, ಸ್ವಭಾವ, ಶಕ್ತಿಗಳ ಮೇಲೆ ಪ್ರಭಾವ ಬೀರುತ್ತವೆ. ಒಳ್ಳೆಯದು ತಿಂದರೆ ಒಳ್ಳೆಯದಾಗುತ್ತದೆ. ಕೆಟ್ಟದ್ದು ತಿಂದರೆ ಕೆಟ್ಟದ್ದಾಗುತ್ತದೆ ಎಂಬ ಸರಳ ನಿಯಮ ನೆನಪಿಟ್ಟುಕೊಳ್ಳಬಹುದು.

ಗಣೇಶ: ನೀನು ಹೇಳುವ ಉತ್ತರವೇ ಹಲವು ಪ್ರಶ್ನೆಗಳನ್ನು ಕೇಳುವಂತೆ ಮಾಡುತ್ತಿದೆ. ಒಳ್ಳೆಯ ಅಹಾರ, ಕೆಟ್ಟ ಆಹಾರ ಎಂದು ಗುರುತಿಸುವುದು ಹೇಗೆ? ನಮಗೆ ಒಳ್ಳೆಯ ಆಹಾರ ಇನ್ನೊಬ್ಬರಿಗೆ ಕೆಟ್ಟದ್ದು ಅನ್ನಿಸಬಹುದು. ನಮಗೆ ಇಷ್ಟವಾದ ಆಹಾರ ಬೇರೆಯವರಿಗೆ ಇಷ್ಟವಾಗದಿರಬಹುದು. 

ದೇವರು: ಒಳ್ಳೆಯ ಪ್ರಶ್ನೆ. ಯಾವ ರೀತಿ ಆಹಾರ ಸೇವಿಸುತ್ತಾರೋ ಅದರ ಆಧಾರದ ಮೇಲೆ ಜನರ ಸ್ವಭಾವ ಹೊರಸೂಸುತ್ತದೆ. ಒಂದು ಉದಾಹರಣೆ ಕೊಟ್ಟರೆ ಅರ್ಥವಾಗಬಹುದು. ಟಿವಿಯಲ್ಲಿ ಒಂದು ಧಾರಾವಾಹಿ ನೋಡುತ್ತಿರುತ್ತೀರಿ ಅಂತಿಟ್ಟುಕೊಳ್ಳಿ. ಅದರಲ್ಲಿ ಯಾರೋ ಒಬ್ಬರು ಇನ್ನೊಬ್ಬರ ಸಂಸಾರ ಹಾಳುಗೆಡವಲು ಅಥವ ಯಾರನ್ನೋ ಕೊಲ್ಲಲು ಸಂಚು ಮಾಡುತ್ತಿರುವ ದೃಷ್ಯವಿದೆಯೆಂದಿಟ್ಟುಕೊಳ್ಳಿ. ಆಗ ನಿಮ್ಮಲ್ಲಿ ಮೂಡುವ ಭಾವನೆಗಳಾದರೂ ಎಂತಹದು? ಅಂತಹ ವಿಚಾರದ ಬಗ್ಗೆ ಅಸಹನೆ, ಆತಂಕ, ಜಿಗುಪ್ಸೆ, ನೋವು, ಇತ್ಯಾದಿ ಉಂಟಾಗುತ್ತದೆಯಲ್ಲವೆ? ಇಷ್ಟೇ ಅಲ್ಲ, ಇಂತಹ ಕೆಟ್ಟ ಗುಣವನ್ನು ಸ್ವತಃ ಅಳವಡಿಸಿಕೊಳ್ಳಲು ಪ್ರಚೋದನೆಯೂ ಸಿಗುತ್ತದೆ. ಅದೇ ಒಬ್ಬ ದೇಶಭಕ್ತನದೋ, ಸಮಾಜದ ಹಿತಕ್ಕಾಗಿ ಸ್ವಂತಹಿತ ಮರೆತು ಕೆಲಸ ಮಾಡಿದ ಸಜ್ಜನನದೋ ಕಥೆ ಬಿತ್ತರವಾಗುವಾಗ ಹೆಮ್ಮೆ, ಸಂತೋಷ, ಅಭಿಮಾನದ ಭಾವ ಮೂಡುತ್ತದೆ. ಇದೇ ರೀತಿ, ಹಸಿವಾದಾಗ ಸೇವಿಸುವ ಆಹಾರವೂ ಸಹ ನಮ್ಮ ಸ್ವಭಾವದ ಮೇಲೆ ಪ್ರಭಾವ ಬೀರುತ್ತದೆ. ಮಾಂಸಾಹಾರಿ ಪ್ರಾಣಿಯ ಸ್ವಭಾವಕ್ಕೂ, ಸಸ್ಯಾಹಾರಿ ಪ್ರಾಣಿಯ ಸ್ವಭಾವಕ್ಕೂ ವ್ಯತ್ಯಾಸ ಎದ್ದುಕಾಣುತ್ತದೆ, ಹೌದಾ? ಯಾವ ಆಹಾರ ಸೇವನೆಯಿಂದ ತನಗೆ ಮತ್ತು ಸುತ್ತಲಿನವರಿಗೆ ಹಿತವಾಗುತ್ತದೋ, ಒಳ್ಳೆಯದಾಗುತ್ತದೋ ಅಂತಹದು ಒಳ್ಳೆಯ ಆಹಾರವೆನ್ನಬಹುದು. 

ಗಣೇಶ: ನಮಗೆ ಇಷ್ಟವಾಗುವುದನ್ನು ನಾವು ತಿನ್ನುತ್ತೇವೆ. ಅದರಲ್ಲೂ ಒಳ್ಳೆಯದು, ಕೆಟ್ಟದ್ದು ಅಂತ ಭೇದ ಮಾಡಿ ತಲೆ ಕೆಡಿಸಿದರೆ ನಮ್ಮ ಹೊಟ್ಟೆ ಪಾಡೇನಾಗಬೇಕು?

ದೇವರು: ನೆನಪಿದೆಯಾ? ನಿನ್ನೆ ತಾನೇ ನೀನು ನಿನ್ನ ಅಧೀನದಲ್ಲಿ ಕೆಲಸ ಮಾಡುವವನನ್ನು ಅವನು ಪದೇ ಪದೇ ತಪ್ಪು ಮಾಡಿದಾಗ 'ಹೊಟ್ಟೆಗೆ ಏನು ತಿಂತೀಯ?' ಎಂದು ಗದರಿಸಿದ್ದೆ ಅಲ್ಲವೇ? ಸಹಜವಾಗಿ ಈ ಮಾತು ಎಲ್ಲರ ಬಾಯಲ್ಲಿ ಬರುತ್ತದೆ. ಇದರ ಅರ್ಥ ತಪ್ಪು ಮಾಡುವುದಕ್ಕೂ ತಿನ್ನುವ ಆಹಾರಕ್ಕೂ ಸಂಬಂಧವಿದೆ ಎಂದು! ಇದು ನಿಜವೂ ಆಗಿದೆ. ಮೂರು ರೀತಿಯ ಗುಣಗಳನ್ನು ಜನರಲ್ಲಿ ಗುರುತಿಸಬಹುದು - ಸಾತ್ವಿಕ, ರಾಜಸಿಕ ಮತ್ತು ತಾಮಸಿಕ. ಈ ಗುಣಗಳನ್ನು ಪೋಷಿಸುವ ಆಹಾರಗಳ ಸೇವನೆಯೇ ಇಂತಹ ಸ್ವಭಾವಗಳಿಗೆ ಕಾರಣ.

ಗಣೇಶ: ಹೊಟ್ಟೆಗೆ ತಿನ್ನಬೇಕಾದರೂ ತಲೆಗೆ ಕೆಲಸ ಕೊಡಬೇಕು ಅನ್ನುವ ನಿನ್ನ ನಿಯಮಕ್ಕೆ ಧಿಕ್ಕಾರವಿರಲಿ. ಹೊಟ್ಟೆಯ ಪಾಡಿಗೆ ಹೊಟ್ಟೆಯನ್ನು ಬಿಟ್ಟು, ತಲೆಯನ್ನು ತಲೆಯ ಪಾಡಿಗೆ ಬಿಟ್ಟಿದ್ದರೆ ನಿನ್ನ ಗಂಟೇನು ಹೋಗುತ್ತಿತ್ತು? ಹೋಗಲಿ, ಮೂರು ರೀತಿಯ ಗುಣ ಮತ್ತು ಆಹಾರಗಳ ಬಗ್ಗೆ ಹೇಳಿ ಮುಗಿಸಿಬಿಡು. 

ದೇವರು: ನಿನಗೆ ಇಷ್ಟವಿಲ್ಲದಿದ್ದರೆ ಈ ವಿಷಯ ಇಲ್ಲಿಗೇ ನಿಲ್ಲಿಸಿಬಿಡೋಣ. ಆಯಿತಾ?

ಗಣೇಶ: ಇಷ್ಟೆಲ್ಲಾ ಕೇಳಿದ ಮೇಲೆ ಇನ್ನೊಂದು ಸ್ವಲ್ಪ ಕೊಸರು ಏಕೆ ಉಳಿಸಬೇಕು? ಹೇಳಿಬಿಡು.

ದೇವರು: ನಿನಗೂ ವ್ಯವಧಾನವಿಲ್ಲ. ಸಂಕ್ಷಿಪ್ತವಾಗಿ ಹೇಳುತ್ತೇನೆ. ಸಾತ್ವಿಕ ಗುಣವೆಂದರೆ ರಚನಾತ್ಮಕ, ಸ್ಪಷ್ಟ ಮತ್ತು ಜೀವನವನ್ನು ಪೋಷಿಸುವುದಾಗಿದೆ. ಶಾಂತಿ, ನೆಮ್ಮದಿ, ಪ್ರೀತಿ, ಇತ್ಯಾದಿಗಳು ಸಾತ್ವಿಕರ ಲಕ್ಷಣಗಳು. ಸಾತ್ವಿಕರು ಸಾಮಾನ್ಯವಾಗಿ ಆಧ್ಯಾತ್ಮಿಕ ಒಲವುಳ್ಳವರು, ಸರಳರು, ಉದ್ವೇಗರಹಿತರು, ಸಂತುಷ್ಟರು, ಕೋಪನಿಗ್ರಹಿಗಳು ಆಗಿದ್ದು, ಅವರ ವಿಚಾರಗಳು ಸ್ಪಷ್ಟವಾಗಿರುತ್ತವೆ. ಅವರು ಇತರರಿಗೆ ಸಂತೋಷ ಕೊಡುವವರು, ಉತ್ಸಾಹಿತರು, ಕುತೂಹಲಿಗಳು ಮತ್ತು ಪ್ರೇರಕರಾಗಿರುತ್ತಾರೆ. ಸಾತ್ವಿಕ ಆಹಾರ ಸತ್ವಯುತವಾಗಿದ್ದು ಸುಲಭವಾಗಿ ಜೀರ್ಣವಾಗುವಂತಹದು ಮತ್ತು ಹಗುರವಾಗಿರುತ್ತವೆ. 

ಗಣೇಶ: ರಾಜಸಿಕರು ಅಂದರೆ?

ದೇವರು: ರಾಜಸಿಕತೆಯೆಂದರೆ ಮುನ್ನುಗ್ಗುವ ಮತ್ತು ಚಟುವಟಿಕೆಯಿಂದ ಒಡಗೂಡಿದ ಸ್ವಭಾವ. ಜೀವನದಲ್ಲಿ ಕೆಲಸಗಳಾಗಬೇಕಾದರೆ ಈ ಸ್ವಭಾವವೂ ಅಗತ್ಯವಾಗಿದೆ. ಆದರೆ ಅತಿಯಾದಲ್ಲಿ ಇದು ಅತಿ ಚಟುವಟಿಕೆ ಮತ್ತು ತಳಮಳಕ್ಕೂ ಕಾರಣವಾಗುತ್ತದೆ. ಮನಸ್ಸು ವಿಶ್ರಾಂತವಾಗುವುದಿಲ್ಲ, ಭಯ, ಕಾತುರ ಮತ್ತು ಉಗ್ರತೆಯಿಂದ ಚಡಪಡಿಸುತ್ತದೆ. ಮಿತಿಯಲ್ಲಿರುವ ರಾಜಸಿಕತೆ ಒಳ್ಳೆಯ ಫಲ ನೀಡುತ್ತದೆ, ಸಮಾಜಕ್ಕೆ ಉಪಕಾರಿಯಾಗಿರುತ್ತದೆ. ಅತಿಯಾದಲ್ಲಿ ಅದು ಗರ್ವ, ಸ್ಪರ್ಧೆ, ಅತಿಕ್ರಮಣಕಾರಿ ಮನೋಭಾವ ಮತ್ತು ಮತ್ಸರಕ್ಕೆ ರಹದಾರಿಯಾಗುತ್ತದೆ. ಭೌತಿಕವಾದಕ್ಕೆ ಹೆಚ್ಚು ಮಹತ್ವ ಕೊಡುವ ಇವರು ಅಧಿಕಾರ, ಹೆಸರು, ವ್ಯಾಪಾರ, ವ್ಯವಹಾರಗಳಲ್ಲಿ ಉನ್ನತಿಗಾಗಿ ಹಂಬಲಿಸುತ್ತಾರೆ. ತಕ್ಷಣದಲ್ಲಿ ಇವರು ಮಾಡುವ ಕ್ರಿಯೆಗಳಿಂದಾಗಿ ನಂತರದಲ್ಲಿ ಪಶ್ಚಾತ್ತಾಪ ಪಡಬೇಕಾಗಿ ಬರುತ್ತದೆ. ಅತಿಯಾದ ವ್ಯಾಯಾಮ, ಅತಿಯಾದ ಪ್ರಯಾಣ, ಅತಿಯಾದ ಮಾತುಗಳು, ಅತಿಯಾದ ಕೆಲಸಗಳು, ಅತಿಯಾದ ಮನರಂಜನೆಗಳೂ ಸಹ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಕರಿದ, ಹುರಿದ ಪದಾರ್ಥಗಳು, ಅತಿಯಾದ ಸಿಹಿ, ಉಪ್ಪು, ಖಾರದ ಪದಾರ್ಥಗಳು, ಮಸಾಲೆ ಪದಾರ್ಥಗಳು ಇತ್ಯಾದಿಗಳು ರಾಜಸಿಕ ಆಹಾರದ ಪಟ್ಟಿಯಲ್ಲಿ ಇವೆ. ಇವುಗಳನ್ನು ಹಿತ-ಮಿತವಾಗಿ ಬಳಸಿದರೆ ಒಳಿತು.

ಗಣೇಶ: ಸದ್ಯ, ಹುರಿದ, ಕರಿದ ಪದಾರ್ಥಗಳನ್ನು, ಮಸಾಲೆ ಪದಾರ್ಥಗಳನ್ನು ಹಿತ-ಮಿತವಾಗಿಯಾದರೂ ಬಳಸಬಹುದಲ್ಲಾ! ಬಚಾವಾದೆ!! ತಾಮಸಿಕರ ಬಗ್ಗೆ ಕೇಳುವ ಕುತೂಹಲವಿದೆ. ಹೇಳಿಬಿಡು, ದೇವರೇ.

ದೇವರು: ತಾಮಸಿಕತೆ ನಾಶ ಮಾಡುವ ಗುಣವಾಗಿದೆ. ಆಲಸ್ಯ, ಜಡತ್ವ, ನಿರಾಶೆ, ಖಿನ್ನತೆ, ಕ್ರೋಧ ಇದರ ಉತ್ಪನ್ನಗಳು. ನಿದ್ರೆ, ವಿಶ್ರಾಂತಿ, ಮುನ್ನುಗ್ಗದಿರುವಿಕೆ, ಇತ್ಯಾದಿಗಳು ಸಂದರ್ಭಗಳಲ್ಲಿ ಅವಶ್ಯವಾಗಿದ್ದು ತಾಮಸಿಕತೆಯೂ ಸಹ ಸ್ವಲ್ಪ ಮಟ್ಟಿಗೆ ಅಗತ್ಯವಾದುದೇ ಆಗಿದೆ. ಆದರೆ ತಮೋಗುಣ ಹೆಚ್ಚಾದರೆ ಅನರ್ಥಕಾರಿ ಎಂಬುದರಲ್ಲಿ ಅನುಮಾನವಿಲ್ಲ. ಕೀಳು ಅಭಿರುಚಿಯ ಚಿತ್ರಗಳು, ಕೀಳು ಮನೋಭಾವದ ಚಾನೆಲ್ಲುಗಳು, ಅಂತರ್ಜಾಲದ ಅಶ್ಲೀಲ ತಾಣಗಳು ತಾಮಸಿಕತೆಯ ಬೆಂಕಿಗೆ ತುಪ್ಪ ಸುರಿಯುವಂತಹವಾಗಿವೆ. ತಾಮಸಿಕರು ಸ್ವನಾಶಕ್ಕೆಡೆಮಾಡುವ ಜೀವನಶೈಲಿ ಮತ್ತು ಆಹಾರಸೇವನೆಯ ಅಭ್ಯಾಸದವರಾಗಿರುತ್ತಾರೆ. ಅತಿಯಾದ ಆಹಾರ ಸೇವನೆ, ಅತಿಯಾದ ಕಾಮ ಚಟುವಟಿಕೆ, ಮಾದಕ ದ್ರವ್ಯಗಳ ಸೇವನೆ ಮಾಡಲು ಹಂಬಲಿಸುತ್ತಾರೆ.  ಪರಿಣಾಮವಾಗಿ ನಿಸ್ತೇಜತೆ, ಭಾರವಾದ ಮನಸ್ಸಿನೊಂದಿಗೆ ಏನು ಮಾಡಬೇಕೆಂದು ತೋಚದ ಸ್ಥಿತಿಗೆ ತಲುಪುತ್ತಾರೆ. ತಮ್ಮ ಮತ್ತು ಇತರರ ಬಗ್ಗೆ ಲೆಕ್ಕಿಸದಂತೆ ಇರುತ್ತಾರೆ. ಕೊನೆಯಲ್ಲಿ ಯಾವ ಸ್ಥಿತಿಗೆ ತಲುಪುತ್ತಾರೆಂದರೆ ತಮಗೆ ತಾವು ಸಹಾಯ ಮಾಡಿಕೊಳ್ಳಲಾಗದಂತಾಗಿ ಇತರರನ್ನು ಆಶ್ರಯಿಸಬೇಕಾಗುತ್ತದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ನಿರ್ಧರಿಸಲಾರರು ಮತ್ತು ಅಸ್ಪಷ್ಟ ಮನಸ್ಸಿನಿಂದಾಗಿ ಒಳ್ಳೆಯ ನಿರ್ಧಾರ ತಳೆಯಲಾರರು. ತಾಮಸಿಕ ಆಹಾರ ಕಡಿಮೆ ಸತ್ವಯುತವಾಗಿದ್ದು, ಜೀವಕ್ಕೆ ಪೋಷಕವಾಗಿರುವುದಿಲ್ಲ. ಹಳೆಯದಾದ ಮತ್ತು ತಂಗಳು ಆಹಾರ, ಅತಿಯಾಗಿ ಕರಿದ ಮತ್ತು ಹುರಿದ ಪದಾರ್ಥಗಳು, ಸುಲಭವಾಗಿ ಜೀರ್ಣವಾಗದಂತಹ ಗಡಸು ಆಹಾರ, ಹೆಚ್ಚು ಅನ್ನಿಸುವಷ್ಟು ಮಾಂಸಾಹಾರ, ಇತ್ಯಾದಿಗಳು ತಾಮಸಿಕವೆನಿಸುವ ಆಹಾರಗಳ ಪಟ್ಟಿಯಲ್ಲಿ ಸೇರಿವೆ. ಮಾದಕ ದ್ರವ್ಯಗಳು, ಡ್ರಗ್ಸ್ ಮುಂತಾದವು ತಾಮಸ ಗುಣ ಪ್ರಚೋದಕಗಳು. ಇವು ರಾಜಸಿಕ ಪರಿಣಾಮಗಳನ್ನೂ ಬೀರುತ್ತವೆ. ಮೆದುಳಿನ ಮೇಲೆ ಪ್ರಭಾವ ಬೀರುವ, ಅದನ್ನು ಮಂಕುಗೊಳಿಸುವ ಪದಾರ್ಥಗಳೆಲ್ಲವೂ ತಾಮಸಿಕ ಆಹಾರವೆನಿಸುವುವು.

ಗಣೇಶ: ನಿನ್ನ ಮಾತು ಕೇಳಿ ನನಗೆ ಒಂದು ರೀತಿಯಲ್ಲಿ ಸಂತೋಷವಾಯಿತು. ನಾನು ತಾಮಸಿಕನಂತೂ ಅಲ್ಲ. ರಾಜಸಿಕ ಆಹಾರಪ್ರಿಯನಾದರೂ ನೀನು ಹೇಳಿದಂತೆ ಹಿತ-ಮಿತವಾಗಿ ಬಳಸುತ್ತಿರುವುದರಿಂದ ನನ್ನಂತಹವರಿಂದ ಸಮಾಜಕ್ಕೆ ಉಪಕಾರವೇ ಆಗುತ್ತದೆ ಎಂಬ ನಿನ್ನ ಮಾತು ನನಗೆ ಬಹಳ ಇಷ್ಟವಾಯಿತು. ತಾಮಸಿಕರೂ ಒಳ್ಳೆಯ ದಾರಿಯಲ್ಲಿ ನಡೆಯಲು ನಿನ್ನ ಸಲಹೆ ಇದ್ದರೆ ಕೊಡು ದೇವರೇ. ಅವರೂ ನಿನ್ನ ಮಕ್ಕಳೇ ಅಲ್ಲವೇ?

ದೇವರು: ಅಲ್ಲವೆಂದವರು ಯಾರು? ಮೆದುಳನ್ನು ಆವರಿಸಿರುವ ತಾಮಸಿಕ ಪೊರೆಯನ್ನು ಸರಿಸಲು ಶಾಂತ ಪರಿಸರ, ಸಾತ್ವಿಕ ಆಹಾರ ಸೇವನೆ ಮತ್ತು ಬದಲಾದ ಜೀವನಶೈಲಿಯಿಂದ ಸಾಧ್ಯವಿದೆ. ನಿಮಗೆ ಇಷ್ಟವಾಗದ ಒಂದು ಕೆಟ್ಟ ಸುದ್ದಿಯಿದೆ. ಅದೆಂದರೆ, ಮನುಷ್ಯನ ಸ್ವಭಾವಕ್ಕೂ ನಿಮ್ಮದೇ ಸೃಷ್ಟಿ ಯಾದ ಹುಟ್ಟಿನ ಜಾತಿಗೂ ಯಾವುದೇ ಸಂಬಂಧವಿಲ್ಲ. ಹಿಂದುಳಿದಿರುವಿಕೆ ಅಥವ ಮುಂದುವರೆದಿರುವಿಕೆಗೆ ಜಾತಿ ಕಾರಣ ಅಲ್ಲವೇ ಅಲ್ಲ. ಜಾತಿ ಆಧಾರಿತವಾಗಿ ಇದನ್ನು ನಿರ್ಧರಿಸುವುದು ಕೇವಲ ಅಧಿಕಾರದ, ಸ್ವಾರ್ಥದ ಅಥವ ರಾಜಕೀಯ ಲಾಭಗಳಿಕೆಯ ಉದ್ದೇಶದಿಂದ ಮಾತ್ರವೇ ಆಗಿದೆ. ಜಾತಿ ಸೃಷ್ಟಿಸಿರುವುದು ನಾನಲ್ಲ, ನೀವುಗಳೇ. ಒಂದು ಒಳ್ಳೆಯ ಸುದ್ದಿಯೂ ಇದೆ. ಅದೆಂದರೆ, ಸಾತ್ವಿಕರೇ ಬೇರೆ, ರಾಜಸಿಕರೇ ಬೇರೆ ಮತ್ತು ತಾಮಸಿಕರೇ ಬೇರೆ ಎಂದು ಪ್ರತ್ಯೇಕವಾಗಿ ಗುರುತಿಸಲ್ಪಡುವವರು ಇರುವದಿಲ್ಲ. ಪ್ರತಿಯೊಬ್ಬರೂ ಸಾತ್ವಿಕರೂ, ರಾಜಸಿಕರೂ ಮತ್ತು ತಾಮಸಿಕರೂ ಆಗಿರುತ್ತಾರೆ. ಅವರು ಈ ಮೂರೂ ಗುಣಗಳ ಮಿಶ್ರಣವಾಗಿರುತ್ತಾರೆ. ಕೆಲವರಲ್ಲಿ ಕೆಲವೊಂದು ಗುಣಗಳು ಪ್ರಧಾನವಾಗಿರುತ್ತವೆ. ಆ ಪ್ರಧಾನ ಗುಣಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ನಿಮಗೆ ಇದು ಒಳ್ಳೆಯ ಅವಕಾಶ! ನೀವು ಏನಾಗಬೇಕು, ಹೇಗಿರಬೇಕು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬಲ್ಲಿರಿ. ಸೂಕ್ತವಾಗಿ ಆರಿಸಿಕೊಳ್ಳುವ 'ಅನ್ನ'ದ ಮೂಲಕ ಮತ್ತು ಬದಲಾಯಿಸಿಕೊಳ್ಳುವ ಜೀವನಶೈಲಿಯಿಂದ ಅದನ್ನು ಪಡೆದುಕೊಳ್ಳಬಲ್ಲಿರಿ.

ಗಣೇಶ: ಇಷ್ಟೊಂದು ಸಮಯದವರೆಗೆ ತಾಳ್ಮೆಯಿಂದ ನಿನ್ನ ಮಾತುಗಳನ್ನು ಹೇಗೆ ಕೇಳಿದೆ ಎಂದು ನನಗೇ ಆಶ್ಚರ್ಯವಾಗುತ್ತಿದೆ. ನಿನ್ನ ಕೃಪೆ ಎಂದು ಹೇಳಲು ಇನ್ನೂ ನನಗೆ ಮನಸ್ಸು ಬರುತ್ತಿಲ್ಲ. ಹೋಗಿಬರುತ್ತೇನೆ. ಇಂದು ಎಂದಿಗಿಂತಲೂ ಹೆಚ್ಚು ಹಸಿವಾಗುತ್ತಿದೆ. ಹೋಗಿಬರಲೇ?

ದೇವರು: ತಥಾಸ್ತು. 

      ಮನೆಗೆ ಬಂದ ಗಣೇಶರಿಗಾಗಿ ಬಿಸಿ ಬಿಸಿಯಾದ ಗೋಬಿ ಮಂಚೂರಿ ಕಾಯುತ್ತಿತ್ತು. ಒಂದು ತಟ್ಟೆ ಖಾಲಿಯಾದಾಗ ಮತ್ತಷ್ಟು ಗೋಬಿ ಮಂಚೂರಿ ಹಾಕಲು ಅವರ ಮಡದಿ ಬಂದರು. ಬೇಡವೆನ್ನಲಾಗದೆ ಹಾಕಿಸಿಕೊಂಡ ಗಣೇಶರು ಸದ್ದಿಲ್ಲದೆ ಅದನ್ನೂ ಖಾಲಿ ಮಾಡಿಬಿಟ್ಟರು.

-ಕ.ವೆಂ.ನಾಗರಾಜ್.

Comments

Submitted by nageshamysore Sat, 09/12/2015 - 08:02

ಶಕ್ತಿದಾತ ಅನ್ನದ ಪ್ರವರ
ಆಚಾರ ವಿಚಾರ ಚರಾಚರ
ಅನ್ನಮಯವೆಲ್ಲ ಬಗೆ ಹಲವು
ತೀರೆ ಸಾಕು ಬೇಕಿದ್ದಷ್ಟೆ ಹಸಿವು ||